







ಪ್ರತಿ ವರ್ಷ ಅಕ್ಟೋಬರ್ 2ರಂದು ಪ್ರಪಂಚದಾದ್ಯಂತ “ಅಂತರರಾಷ್ಟ್ರೀಯ ಅಹಿಂಸಾ ದಿನ” ಆಚರಿಸಲಾಗುತ್ತದೆ. ಭಾರತದ ಮಹಾನ್ ನಾಯಕ, ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಜನ್ಮದಿನವನ್ನು ಗೌರವಿಸುವ ಸಲುವಾಗಿ ವಿಶ್ವಸಂಸ್ಥೆಯು 2007ರಲ್ಲಿ ಈ ದಿನವನ್ನು ಅಹಿಂಸಾ ದಿನವೆಂದು ಘೋಷಿಸಿತು. ಶಾಂತಿ, ಸಹನೆ ಮತ್ತು ಸತ್ಯದ ಹಾದಿಯಲ್ಲಿ ನಡೆದು ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಗಾಂಧೀಜಿಯವರ ತತ್ತ್ವಗಳು ಕೇವಲ ಭಾರತಕ್ಕಷ್ಟೇ ಅಲ್ಲ, ಇಡೀ ಜಗತ್ತಿಗೆ ಬೆಳಕಿನ ದಾರಿಯಾಗಿವೆ.


“ಅಹಿಂಸೆ ಎಂದರೆ ಕೇವಲ ಶಸ್ತ್ರತ್ಯಾಗವಲ್ಲ, ಅದು ಮನಸ್ಸಿನ ದುಷ್ಟತನ ಮತ್ತು ಕ್ರೋಧದ ತ್ಯಾಗ” ಎಂಬುದು ಗಾಂಧೀಜಿಯವರ ನಂಬಿಕೆಯಾಗಿತ್ತು.



ಬಲಶಾಲಿಯಾದವನು ಕ್ಷಮಿಸಬಲ್ಲ ಮತ್ತು ಶಾಂತಿಯಿಂದ ಹೋರಾಡಬಲ್ಲ ಎಂಬುದೇ ಅಹಿಂಸೆಯ ಅಸಲಿ ಶಕ್ತಿ. ಆಯುಧ ಹಿಡಿದು ಗೆಲ್ಲುವುದಕ್ಕಿಂತ, ಪ್ರೀತಿ ಮತ್ತು ಸತ್ಯದಿಂದ ಹೃದಯಗಳನ್ನು ಗೆಲ್ಲುವುದು ಶ್ರೇಷ್ಠವಾದುದು. ಇಂದಿನ ಆಧುನಿಕ ಯುಗದಲ್ಲಿ, ತಂತ್ರಜ್ಞಾನ ಎಷ್ಟೇ ಮುನ್ನಡೆದಿದ್ದರೂ, ಜಗತ್ತು ಯುದ್ಧ, ಸಂಘರ್ಷ, ಅಸಹಿಷ್ಣುತೆ ಮತ್ತು ದ್ವೇಷದ ಜ್ವಾಲೆಯಲ್ಲಿ ಬೇಯುತ್ತಿದೆ. ದೇಶಗಳ ನಡುವಿನ ಯುದ್ಧಗಳಿಂದ ಹಿಡಿದು ಸಾಲು ಸಾಲು ಸಣ್ಣ ವಿಷಯಗಳಿಗಾಗಿ ಮಾನವೀಯತೆಯನ್ನು ಮರೆಯುತ್ತಿರುವ ಈ ಸಮಯದಲ್ಲಿ, ಅಹಿಂಸೆಯ ಮೌಲ್ಯವನ್ನು ನೆನಪಿಸಿಕೊಳ್ಳುವುದು ಅತ್ಯಂತ ತುರ್ತು ಅಗತ್ಯವಾಗಿದೆ.
ಅಹಿಂಸೆ ಎಂದರೆ ಕೇವಲ ಯುದ್ಧಗಳನ್ನು ತಡೆಯುವುದಷ್ಟೇ ಅಲ್ಲ. ನಮ್ಮ ದೈನಂದಿನ ಜೀವನದಲ್ಲಿ, ಮಾತುಗಳಲ್ಲಿ ಮತ್ತು ಆಲೋಚನೆಗಳಲ್ಲಿ ಸಹನೆ ತರುವುದು. ಕುಟುಂಬ, ಸಮಾಜ ಮತ್ತು ಸಹೋದ್ಯೋಗಿಗಳ ನಡುವೆ ಪ್ರೀತಿಯನ್ನು ಬಿತ್ತುವುದು, ಪ್ರಕೃತಿ ಮತ್ತು ಜೀವರಾಶಿಗಳನ್ನು ಪ್ರೀತಿಸುವುದು ಸಹ ಅಹಿಂಸೆಯ ಭಾಗವೇ ಆಗಿದೆ.
ಈ ಶುಭ ದಿನದಂದು ನಾವು ಹಿಂಸೆ ಮತ್ತು ದ್ವೇಷದ ಮಾರ್ಗವನ್ನು ತೊರೆದು, ಸಂವಾದ ಮತ್ತು ಪ್ರೀತಿಯ ಮೂಲಕ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವ ಪ್ರತಿಜ್ಞೆ ಮಾಡೋಣ. ಗಾಂಧೀಜಿಯವರ “ನೀವು ಜಗತ್ತಿನಲ್ಲಿ ಯಾವ ಬದಲಾವಣೆಯನ್ನು ನೋಡಬಯಸುತ್ತೀರೋ, ಆ ಬದಲಾವಣೆ ಮೊದಲು ನಿಮ್ಮಿಂದಲೇ ಪ್ರಾರಂಭವಾಗಲಿ” ಎಂಬ ಮಾತನ್ನು ಜೀವನದಲ್ಲಿ ಅಳವಡಿಸಿಕೊಂಡು, ಶಾಂತಿಯುತ ಯುಗ ನಿರ್ಮಾಣಕ್ಕೆ ಹೆಜ್ಜೆ ಇಡೋಣ.










