ಕಬಕ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗಾಂಧೀ ಜಯಂತಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಆಚರಣೆ

0

ಕಬಕ: ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ 157ನೇ ಹಾಗೂ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ 122ನೇ ಜಯಂತಿಯನ್ನು ಆಚರಿಸಲಾಯಿತು.

ಶಾಲಾ ಮುಖ್ಯ ಗುರುಗಳಾದ ಜೆನೆಟ್ ಡೇಝಿ ಸಿಕ್ವೇರಾರವರು ಪ್ರಾಸ್ತಾವಿಕವಾಗಿ ಮಾತನಾಡುತ್ತಾ ಮಹಾತ್ಮ ಗಾಂಧೀಜಿಯವರ ಆದರ್ಶ ಜೀವನ ಸತ್ಯ ಶಾಂತಿ ಮತ್ತು ಅಹಿಂಸಾ ತತ್ವಗಳು ಇಂದಿನ ಸಮಾಜ ಹಾಗೂ ವಿದ್ಯಾರ್ಥಿಗಳಿಗೆ ಎಷ್ಟು ಪ್ರಸ್ತುತ ಎಂಬುದನ್ನು ಸವಿಸ್ತಾರವಾಗಿ ವಿವರಿಸಿದರು ಹಾಗೂ ಲಾಲ್ ಬಹುದ್ದೂರ್ ಶಾಸ್ತ್ರಿ ಅವರ ಜೈ ಜವಾನ್ ಜೈ ಕಿಸಾನ್ ಮಂತ್ರದ ಮಹತ್ವವನ್ನು ವಿದ್ಯಾರ್ಥಿಗಳಿಗೆ ಮನಮುಟ್ಟುವಂತೆ ತಿಳಿಸಿದರು.

ಶಾಲಾ S D M C ಅಧ್ಯಕ್ಷರು ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರೀಜಿ ಅವರ ಭಾವಚಿತ್ರಗಳಿಗೆ ಮಾಲಾರ್ಪಣೆ ಮಾಡಿ ಪುಷ್ಪ ನಮನ ಸಲ್ಲಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಶಾಲೆಯ ಶಿಕ್ಷಕ ವೃಂದದವರು ಭಾವಚಿತ್ರಗಳಿಗೆ ಪುಷ್ಪ ನಮನ ಸಲ್ಲಿಸಿದರು. ದಿನದ ಕಾರ್ಯಕ್ರಮದ ಸಂಪೂರ್ಣ ರೂಪುರೇಷೆ ಹಾಗೂ ಸಂಘಟನೆಯ ಜವಾಬ್ದಾರಿಯನ್ನು ಸಹ ಶಿಕ್ಷಕಿ ವಿಜಯಲಕ್ಷ್ಮಿ ರವರು ಅಚ್ಚುಕಟ್ಟಾಗಿ ನಿರ್ವಹಿಸಿದರು.

ಸರ್ವಧರ್ಮ ಪ್ರಾರ್ಥನೆ :
ಧಾರ್ಮಿಕ ಸಹಿಷ್ಣುತೆಯ ಪ್ರತೀಕ ಗಾಂಧೀಜಿಯವರ ಸರ್ವಧರ್ಮ ಸಮಭಾವದ ತತ್ವದಂತೆ ಸರ್ವಧರ್ಮ ಪ್ರಾರ್ಥನೆಯನ್ನು ಆಯೋಜಿಸಲಾಗಿತ್ತು. ಸಹ ಶಿಕ್ಷಕಿ ಗೋದಾವರಿ ಟಿ ಭಟ್ ರವರು ಭಗವದ್ಗೀತೆಯ ಶ್ಲೋಕಗಳನ್ನು ಪಠಿಸಿದರು ಸಹ ಶಿಕ್ಷಕಿ ಫ್ಲಾವಿಯಾ ಸಿಲ್ವಿನ್ ಮೊಂತೆರೊ ರವರು ಪವಿತ್ರ ಬೈಬಲ್ ವಾಕ್ಯಗಳನ್ನು ವಾಚಿಸಿದರು. 7ನೇ ತರಗತಿ ವಿದ್ಯಾರ್ಥಿನಿ ಕುಮಾರಿ ಶಮಾ ಫಾತಿಮಾ ಪವಿತ್ರ ಕುರಾನ್ ಪಠಿಸಿದರು.
ಶಾಲೆಯ ಮುದ್ದು ಮಕ್ಕಳು ಮಹಾಪುರುಷರ ಭಾವಚಿತ್ರಗಳಿಗೆ ಪುಷ್ಪ ನಮನ ಸಲ್ಲಿಸಿ ಸರ್ವಧರ್ಮ ಪ್ರಾರ್ಥನೆಯಲ್ಲಿ ಭಕ್ತಿಯಿಂದ ಪಾಲ್ಗೊಂಡರು.

ಕಾರ್ಯಕ್ರಮವನ್ನು ಸಹ ಶಿಕ್ಷಕಿ ಸೌಮ್ಯ ರವರು ನಿರೂಪಿಸಿದರು. ಈ ಸಂದರ್ಭದಲ್ಲಿ S D M C ಅಧ್ಯಕ್ಷರು ಹಾಗೂ ಸದಸ್ಯರು ಶಾಲಾ ಶಿಕ್ಷಕ ವೃಂದ ಅಡುಗೆ ಸಿಬ್ಬಂದಿ ವರ್ಗ ಮತ್ತು ಎಲ್ಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮದ ಕೊನೆಯಲ್ಲಿ ಎಲ್ಲಾ ಮಕ್ಕಳಿಗೆ ಸಿಹಿ ವಿತರಿಸಲಾಯಿತು. ಸಹ ಶಿಕ್ಷಕಿ ರಾಣಿ ಎ ಟಿ ರವರು ಎಲ್ಲರಿಗೂ ಧನ್ಯವಾದ ಸಮರ್ಪಿಸಿ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಿದರು.

LEAVE A REPLY

Please enter your comment!
Please enter your name here