ಮಾಸ್ಟರ್ ಪ್ಲಾನರಿಯ ಎಸ್.ಕೆ. ಆನಂದ್‌ರಿಗೆ ಡಾ. ಶಿವರಾಮ ಕಾರಂತ ಬಾಲವನ ರಾಜ್ಯ ಪ್ರಶಸ್ತಿ

0

35 ಲಕ್ಷಕ್ಕೂ ಅಧಿಕ ವೃಕ್ಷಗಳ ಸಂರಕ್ಷಕ, ಕಾಂಕೂಡ್ ತಂತ್ರಜ್ಞಾನದ ಹರಿಕಾರ

ಪುತ್ತೂರು: ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಶಿವರಾಮ ಕಾರಂತರ ಕರ್ಮಭೂಮಿಯಾದ ಪುತ್ತೂರಿನ ಬಾಲವನದಲ್ಲಿ ನೀಡಲಾಗುವ ಪ್ರತಿಷ್ಠಿತ ಡಾ. ಶಿವರಾಮ ಕಾರಂತ ಬಾಲವನ ರಾಜ್ಯ ಪ್ರಶಸ್ತಿ-2026’ಗೆ ಸಿವಿಲ್ ಇಂಜಿನಿಯರಿಂಗ್ ಸಾಧಕ, ಕಾಂಕೂಡ್ ತಂತ್ರಜ್ಞಾನದ ಹರಿಕಾರ, 35 ಲಕ್ಷಕ್ಕೂ ಅಧಿಕ ವೃಕ್ಷಗಳ ಸಂರಕ್ಷಕರಾಗಿರುವ ಮಾಸ್ಟರ್ ಪ್ಲಾನರಿ ಮುಖ್ಯಸ್ಥ ಎಸ್.ಕೆ ಆನಂದ್ ಅವರಿಗೆ ಈ ಸಾಲಿನ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಪ್ರಶಸ್ತಿ ಆಯ್ಕೆ ಸಮಿತಿ ಅಧ್ಯಕ್ಷರು, ಶಾಸಕ ಅಶೋಕ್ ಕುಮಾರ್ ರೈ ಘೋಷಣೆ ಮಾಡಿದರು.

ಶಾಸಕರ ಕಚೇರಿಯಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಶಾಸಕರು ಘೋಷಣೆ ಮಾಡಿದದರು. ಡಾ. ಶಿವರಾಮ ಕಾರಂತರು ತಮ್ಮ ಜೀವಿತಾವಧಿಯಲ್ಲಿ ಪ್ರತಿಪಾದಿಸಿದ ವೈಜ್ಞಾನಿಕ ಮನೋಭಾವ, ಪ್ರಾಯೋಗಿಕ ಪರಿಸರ ಕಾಳಜಿ ಮತ್ತು ಸುಸ್ಥಿರ ಜೀವನ ಶೈಲಿಯನ್ನು ತಮ್ಮ ವೃತ್ತಿ ಬದುಕಿನಲ್ಲಿ ಸಾಕಾರಗೊಳಿಸಿದ ವಿಶಿಷ್ಟ ಸಾಧಕ ಎಸ್.ಕೆ. ಆನಂದ್. ಸಿಮೆಂಟ್ ಪ್ರೀಕಾಸ್ಟ್ ತಂತ್ರಜ್ಞಾನದ ಮೂಲಕ ಕಾಂಕೂಡ್’ ಎಂಬ ಪರ್ಯಾಯ ವಸ್ತುವನ್ನು ಆವಿಷ್ಕರಿಸಿರುವ ಜೊತೆಗೆ ದೇಶದಲ್ಲೇ ಬೃಹತ್ ವೃಕ್ಷ ರಕ್ಷಣಾ ಕ್ರಾಂತಿ ನಡೆಸಿದ ಅಪೂರ್ವ ಕೊಡುಗೆಗಾಗಿ ಈ ಸಾಲಿನ ಪ್ರಶಸ್ತಿ ನೀಡಲಾಗುವುದು ಎಂದು ಹೇಳಿದರು.

ಶಾಸಕ ಅಶೋಕ್ ಕುಮಾರ್ ರೈ ಅಧ್ಯಕ್ಷತೆಯಲ್ಲಿ ಸಹಾಯಕ ಆಯುಕ್ತೆ ಸ್ಟೆಲ್ಲಾ ವರ್ಗಿಸ್ ಕಾರ್ಯದರ್ಶಿಯಾಗಿ ಹಾಗೂ ಸದಸ್ಯರಾದ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್, ಹಿರಿಯ ಸಾಹಿತಿಗಳಾದ ವಿ.ಬಿ. ಆರ್ತಿಕಜೆ ಹಾಗೂ ರೆ. ವಿಜಯ್ ಹಾರ್ವಿನ್ ಅವರನ್ನೊಳಗೊಂಡ ಪ್ರಶಸ್ತಿ ಆಯ್ಕೆ ಸಮಿತಿಯು ಈ ಸಾಧಕನನ್ನು ಆಯ್ಕೆ ಮಾಡಿರುತ್ತದೆ.

ಮಂಗಳೂರಿನ ಪ್ರತಿಷ್ಠಿತ ಕೆ.ಆರ್.ಇ.ಸಿ (ಪ್ರಸ್ತುತ NITK, ಸುರತ್ಕಲ್) ಸಂಸ್ಥೆಯಿಂದ ಸಿವಿಲ್ ಇಂಜಿನಿಯರಿಂಗ್‌ನಲ್ಲಿ ಪದವಿ ಹಾಗೂ ಸ್ನಾತಕೋತ್ತರ ಎಂಟೆಕ್ (M.Tech) ಪದವಿಯನ್ನು ಉನ್ನತ ಶ್ರೇಣಿಯಲ್ಲಿ ಪಡೆದ ಬಳಿಕ ಅವರು ಪುತ್ತೂರಿನಲ್ಲಿ ತನ್ನ ತಂದೆಯವರು ಸ್ಥಾಪಿಸಿದ್ದ ಮಾಸ್ಟರ್ ಪ್ಲಾನರಿ’ ಸಂಸ್ಥೆಯ ಜವಾಬ್ದಾರಿಯನ್ನು 1975ರಲ್ಲಿ ವಹಿಸಿಕೊಂಡು ಮುನ್ನಡೆಸುತ್ತಿದ್ದಾರೆ. ಕರಾವಳಿ ಮತ್ತು ಮಲೆನಾಡಿನ ಪ್ರದೇಶಗಳಲ್ಲಿ ಮನೆ, ಕಚೇರಿ, ಶಾಲಾ-ಕಾಲೇಜು ಕಟ್ಟಡಗಳ ನಿರ್ಮಾಣದಲ್ಲಿ ಮರದ ಉತ್ಪನ್ನಗಳಿಗೆ ಬದಲಾಗಿ ಶಾಶ್ವತ ಹಾಗೂ ಪರಿಸರಸ್ನೇಹಿ ಪರಿಹಾರ ಕಂಡುಕೊಳ್ಳಲು ಆನಂದ್ ಅವರು ಸಿಮೆಂಟ್ ಪ್ರೀಕಾಸ್ಟ್ ತಂತ್ರಜ್ಞಾನದ ಮೇಲೆ ಸುದೀರ್ಘ ಸಂಶೋಧನೆ ನಡೆಸಿ, ಮರದಿಂದಲ್ಲೇ ರೂಪುಗೊಳ್ಳುವ ಕಾಂಕ್ರೀಟ್ ಉತ್ಪನ್ನಗಳನ್ನು ಪರಿಚಯಿಸಿದದ ಕಾಂಕೋಡ್ ಉತ್ಪನ್ನಗಳು ಮರಕ್ಕೆ ಪರ್ಯಾಯವಾದ ಇಂತಹ ಕಾಂಪೋಸಿಟ್ ಕಲ್ಪನೆಯು ಭಾರತದಲ್ಲೇ ಪ್ರಥಮ ಬಾರಿಗೆ ಎಸ್.ಕೆ ಆನಂದ್ ಅವರ ಸಂಸ್ಥೆಯಿಂದಲೇ ಆರಂಭವಾಯಿತು.

ಈ ವಿನೂತನ ಸಂಶೋಧನೆ ‘ಕಾಂಕೊಡ್’ ಪದಕ್ಕೆ 2007ರಲ್ಲೇ ಭಾರತ ಸರ್ಕಾರದಿಂದ ಅಧಿಕೃತ ಟ್ರೇಡ್‌ಮಾರ್ಕ್ ನೋಂದಣಿಯನ್ನೂ ಪಡೆದಿದ್ದಾರೆ. ಮಾಸ್ಟರ್ ಪ್ಲಾನರಿ’ ಸಂಸ್ಥೆಯಲ್ಲಿ ಪ್ರತಿದಿನ ಸರಾಸರಿ ಸುಮಾರು 200 ಸಿಎಫ್‌ಟಿಗೂ ಅಧಿಕ ಕಾಂಕ್ರೀಟ್ ಪರಿಕರಗಳು ಉತ್ಪಾದನೆಯಾಗುತ್ತಿದ್ದು ಪ್ರತಿದಿನ ಸುಮಾರು 20 ಬೆಳೆದ ದೊಡ್ಡ ಮರಗಳು ಕಡಿಯುವುದು ತಪ್ಪುತ್ತದೆ. ಈ ಕಾರ್ಯವನ್ನು ಕಳೆದ 50 ವರ್ಷಗಳಿಂದ ನಿರಂತರವಾಗಿ ನಡೆಸಿಕೊಂಡು ಬಂದಿರುವ ಆನಂದ್ ಅವರ ಸಂಸ್ಥೆಯು, ಈವರೆಗೆ ಸುಮಾರು 36,50,000ಕ್ಕೂ ಅಧಿಕ ಬೃಹತ್ ಮರಗಳನ್ನು ಕೊಡಲಿಗೆ ಬಲಿಯಾಗುವುದನ್ನು ತಡೆದು ಬೃಹತ್ ಅರಣ್ಯವನ್ನೇ ರಕ್ಷಿಸಿದ ಐತಿಹಾಸಿಕ ಸಾಧನೆ ಮಾಡಿದ್ದಾರೆ. ರಾಜ್ಯದ ಹಲವಾರು ಪ್ರತಿಷ್ಠಿತ ಶಾಲಾ-ಕಾಲೇಜುಗಳು ಮರದ ಬೆಂಚ್ ಬದಲು ಇವರ ಕಾಂಕೂಡ್’ ಬೆಂಚ್‌ಗಳನ್ನು ಅಳವಡಿಸಿಕೊಂಡಿವೆ. ‘ಪದ್ಮಶ್ರೀ’ ಗಿರೀಶ್ ಭಾರದ್ವಾಜ್ ಅವರು ದೇಶಾದ್ಯಂತ ನಿರ್ಮಿಸಿದ 30ಕ್ಕೂ ಹೆಚ್ಚು ತೂಗು ಸೇತುವೆಗಳಿಗೆ ಮರದ ಹಲಗೆಗಳ ಬದಲಿಗೆ ಆನಂದ್ ಅವರ ಕಾಂಕೂಡ್’ ಪರಿಕರಗಳನ್ನೇ ಬಳಸಲಾಗಿದೆ. ಬೆಂಗಳೂರು ಮಹಾನಗರ ಪಾಲಿಕೆ,ಕರ್ನಾಟಕ ಅರಣ್ಯ ಇಲಾಖೆ ಹಾಗೂ ನೆರೆ ರಾಜ್ಯಗಳಾದ ಕೇರಳ, ತಮಿಳುನಾಡು, ಆಂಧ್ರಪ್ರದೇಶಗಳಿಗೂ ಈ ತಂತ್ರಜ್ಞಾನ ವಿಸ್ತರಿಸಿದ್ದು, ಪ್ರಸ್ತುತ ಇವರ ಬಳಿ 250ಕ್ಕೂ ಅಧಿಕ ಕಾಂಕ್ರೀಟ್ ಪರಿಕರಗಳು ಲಭ್ಯವಿದೆ.

50 ಎಕರೆಗೂ ಅಧಿಕ ಹಸಿರು ಕಾಡು ನಿರ್ಮಾಣ:
ಎಸ್.ಕೆ ಆನಂದ್ ಅವರು ಮರಗಳನ್ನು ರಕ್ಷಿಸುವುದಷ್ಟೇ ಅಲ್ಲದೆ, ವೈಯಕ್ತಿಕವಾಗಿ ಸೊರಕೆಯಲ್ಲಿ ಹಾಗೂ ಕುಡಿಪಾಡಿಯ ಕುಡಿಕಾಡು ಎಂಬ ಹೆಸರಿನಲ್ಲಿ 50 ಎಕರೆಗೂ ಹೆಚ್ಚು ವಿಸ್ತೀರ್ಣದ ಸ್ಥಳದಲ್ಲಿ ಸಾವಿರಾರು ಅತ್ಯಮೂಲ್ಯ ಗಿಡ-ಮರಗಳನ್ನು ಬೆಳೆಸಿ ಕಣ್ಣು ತಣ್ಣಗಾಗಿಸುವ ಹಸಿರು ಕಾಡನ್ನು ಬೆಳೆಸಿದ್ದಾರೆ. ಮಾಸ್ಟರ್ ಪ್ಲಾನರಿ’ ಸಂಸ್ಥೆಯಡಿ 9 ಕೇಂದ್ರಗಳಲ್ಲಿ 24 ಸಂಸ್ಥೆಗಳ ಮೂಲಕ 800ಕ್ಕೂ ಅಧಿಕ ಸ್ಥಳೀಯರಿಗೆ ನೇರವಾಗಿ ಉದ್ಯೋಗ ನೀಡಿದರೆ ಪರೋಕ್ಷವಾಗಿ 3000ಕ್ಕೂ ಅಧಿಕ ಉದ್ಯೋಗ ಸೃಷ್ಟಿಸಿದ್ದಾರೆ. ಇವರ ವಿಶೇಷತೆಯೆಂದರೆ, ತಮ್ಮ ಸಂಸ್ಥೆಯ ಆವರಣದಲ್ಲೇ ಕೆಲಸ ಮಾಡುವ ಸಿಬ್ಬಂದಿಗಳ ಮಕ್ಕಳ ಪಾಲನೆಗಾಗಿ ‘ಅಂಗನವಾಡಿ’ ಮಾದರಿಯ ವಿಶಿಷ್ಟ ಪ್ಲೇ ಸ್ಕೂಲ್ ಪ್ರಾರಂಭಿಸಿ, ಕಾರ್ಮಿಕರ ಮಕ್ಕಳ ಆರೈಕೆ ಹಾಗೂ ಉಚಿತ ಶಿಕ್ಷಣಕ್ಕೆ ನೀಡುತ್ತಿರುವುದು ಸಾಮಾಜಿಕ ಕಾಳಜಿಗೆ ಸಾಕ್ಷಿಯಾಗಿದೆ. ಚಾಮರಾಜನಗರ, ನಾಗರಹೊಳೆ ಭಾಗದ ಅರಣ್ಯವಾಸಿ ಗಿರಿಜನರಿಗೆ 8,000ಕ್ಕೂ ಅಧಿಕ ಮನೆಗಳನ್ನು ನಿರ್ಮಿಸಿಕೊಟ್ಟಿರುವುದಲ್ಲದೆ, ಸುಳ್ಯದಲ್ಲಿ ಕಳೆದ 20 ವರ್ಷಗಳಿಂದ ಸ್ನೇಹ ಶಿಕ್ಷಣ ಸಂಸ್ಥೆ ಸ್ಥಾಪಿಸಿ ಗ್ರಾಮೀಣ ಮಕ್ಕಳಿಗೆ ಶಿಕ್ಷಣ ನೀಡುತ್ತಿದ್ದಾರೆ. ಸ್ವತಹ ಓರ್ವ ಸಾಹಿತಿಯಾಗಿರುವ ಎಸ್.ಕೆ ಆನಂದ್ ಭಾವಲೋಕ’ ಎಂಬ ಕವನ ಸಂಕಲನ, ಹಲವಾರು ಭಾವಗೀತೆಯನ್ನು ರಚಿಸಿ ಪ್ರಕಟಿಸಿದ್ದಾರೆ. ಇವರ ಸೇವೆಯನ್ನು ಗುರುತಿಸಿ 2002ರಲ್ಲಿ ಪರಿಸರಪ್ರೇಮಿ’, 2008ರಲ್ಲಿ ಕರ್ನಾಟಕದ ಅತ್ಯುತ್ತಮ ಕಾಂಕ್ರೀಟ್ ಇಂಜಿನಿಯರ್ ಪ್ರಶಸ್ತಿ, ರಾಷ್ಟ್ರೀಯ ಜೆಸಿಐ ‘TOBIP’ ಹಾಗೂACCE-UltraTech ಪ್ರಶಸ್ತಿಗಳು ಲಭಿಸಿವೆ.

ದಿ.ಎಸ್. ಕೆ. ಈಶ್ವರ ಭಟ್ ಮತ್ತು ಶಾರದಾ ಭಟ್ ದಂಪತಿಯ ಪುತ್ರನಾಗಿರುವ ಎಸ್.ಕೆ ಆನಂದ್ ಅವರು ಪತ್ನಿ ರೇಖಾ ಆನಂದ್, ಇಂಜಿಯನಿಯರ್ ಆಗಿರುವ ಪುತ್ರರಾದ ಅಕ್ಷಯ್, ಅರ್ಜುನ್, ಆಕಾಶ್ ಹಾಗೂ ಪುತ್ರಿ ಆರತಿ ಅವರೊಂದಿಗೆ ವಾಸ್ತವ್ಯವಿದ್ದಾರೆ.

LEAVE A REPLY

Please enter your comment!
Please enter your name here