ಎವಿಜಿ ಶಾಲೆಯಲ್ಲಿ ಗಾಂಧೀಜಿ, ಲಾಲ್ ಬಹದ್ದೂರ್ ಶಾಸ್ತ್ರೀ ಜಯಂತಿ ಆಚರಣೆ : ಸ್ವಚ್ಛತಾ ಕಾರ್ಯ, ಸರ್ವಧರ್ಮ ಪ್ರಾರ್ಥನೆ, ದೇಶಭಕ್ತಿಗೀತೆ

0

ಪುತ್ತೂರು: ಸತ್ಯ, ಸರಳತೆ, ಅಹಿಂಸೆ ಹಾಗೂ ದೇಶಪ್ರೇಮದಂತಹ ಮೌಲ್ಯಗಳನ್ನು ವಿದ್ಯಾರ್ಥಿಗಳಲ್ಲಿ ಬೆಳೆಸುವ ನಿಟ್ಟಿನಲ್ಲಿ ಪುತ್ತೂರಿನ ಎವಿಜಿ ಇಂಗ್ಲಿಷ್ ಮೀಡಿಯಂ ಶಾಲೆಯಲ್ಲಿ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರೀಜಿ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.


ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ರೋಟರಿ ಕ್ಲಬ್ ಪುತ್ತೂರು ಯುವ ಇದರ ಅಧ್ಯಕ್ಷೆ ವಚನ ಜಯರಾಮ ಮಾತನಾಡಿ, ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಸತ್ಯ, ಸರಳತೆ ಮತ್ತು ಅಹಿಂಸೆಯ ಬದುಕು ಅವರನ್ನು ಮಹಾನ್ ವ್ಯಕ್ತಿತ್ವವಾಗಿ ರೂಪಿಸಿತು. ಅವರ ನಿರಂತರ ಹೋರಾಟದಿಂದ ಗಳಿಸಿದ ಸ್ವಾತಂತ್ರ್ಯವನ್ನು ಸಂರಕ್ಷಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ. ಗಾಂಧೀಜಿ ಪ್ರತಿಪಾದಿಸಿದ ಸರಳತೆ, ಸ್ವಚ್ಛತೆ ಹಾಗೂ ಮಾನವೀಯ ಮೌಲ್ಯಗಳನ್ನು ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ವೆಂಕಟರಮಣ ಗೌಡ ಕಳುವಾಜೆ ಅವರು ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರೀಜಿ ಅವರ ಸರಳ ಮತ್ತು ಆದರ್ಶಮಯ ಬದುಕನ್ನು ಸ್ಮರಿಸಿ, ಅವರ ಆದರ್ಶಗಳನ್ನು ಜೀವನದಲ್ಲಿ ಅನುಸರಿಸುವುದೇ ಮಹಾನ್ ನಾಯಕರಿಗೆ ಸಲ್ಲಿಸುವ ನಿಜವಾದ ಗೌರವವಾಗಿದೆ ಎಂದರು.

ಸಭಾ ಕಾರ್ಯಕ್ರಮಕ್ಕೂ ಮುನ್ನ ಸರ್ವಧರ್ಮ ಪ್ರಾರ್ಥನೆ ನಡೆಯಿತು. ಬಳಿಕ ಶಾಲಾ ಆವರಣದಲ್ಲಿ ಸ್ವಚ್ಛತಾ ಕಾರ್ಯವನ್ನು ಹಮ್ಮಿಕೊಳ್ಳುವ ಮೂಲಕ ಗಾಂಧೀಜಿಯವರ ಸ್ವಚ್ಛತೆಯ ಸಂದೇಶವನ್ನು ಕಾರ್ಯರೂಪಕ್ಕೆ ತರಲಾಯಿತು. ವಿದ್ಯಾರ್ಥಿಗಳು ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರೀಜಿ ಅವರ ವೇಷಭೂಷಣ ಧರಿಸಿ ಗಮನ ಸೆಳೆದರು. ಭಾಷಣ, ದೇಶಭಕ್ತಿಗೀತೆ ಸೇರಿದಂತೆ ವಿವಿಧ ಕಾರ್ಯಕ್ರಮಗಳ ಮೂಲಕ ಇಬ್ಬರು ರಾಷ್ಟ್ರ ನಾಯಕರಿಗೆ ಗೌರವ ಸಲ್ಲಿಸಿದರು. ಇತ್ತೀಚೆಗೆ ಅಗಲಿದ ಅಂತರರಾಷ್ಟ್ರೀಯ ಯೋಗಪಟು ಪ್ರಸಾದ್ ಪಾಣಾಜೆ ಅವರ ಸ್ಮರಣಾರ್ಥ ಮೌನ ಪ್ರಾರ್ಥನೆ ಸಲ್ಲಿಸಲಾಯಿತು.

ವೇದಿಕೆಯಲ್ಲಿ ಶಾಲಾ ಸಂಚಾಲಕ ಎ.ವಿ. ನಾರಾಯಣ, ನಿರ್ದೇಶಕರಾದ ಪುಷ್ಪಾವತಿ ಕಳುವಾಜೆ, ಪ್ರಧಾನ ಕಾರ್ಯದರ್ಶಿ ಹಾಗೂ ಆಡಳಿತಾಧಿಕಾರಿ ಗುಡ್ಡಪ್ಪ ಗೌಡ ಬಲ್ಯ, ಉಪಾಧ್ಯಕ್ಷ ಉಮೇಶ್ ಮಲುವೇಳು, ಮುಖ್ಯೋಪಾಧ್ಯಾಯ ಅಮರನಾಥ ಪಟ್ಟೆ ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರಾದ ಅನಿಕಾ ಮತ್ತು ಶ್ರೀವಿಕಾ ಪ್ರಾರ್ಥನೆ ನೆರವೇರಿಸಿದರು. ಶಿಕ್ಷಕಿ ನಿಶ್ಮಿತಾ ಸ್ವಾಗತಿಸಿದರು. ಮುಖ್ಯೋಪಾಧ್ಯಾಯ ಅಮರನಾಥ ಪಟ್ಟೆ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಶಿಕ್ಷಕಿ ಗಾಯತ್ರಿ ಅತಿಥಿಗಳ ಪರಿಚಯ ಮಾಡಿದರು. ಶಿಕ್ಷಕಿ ರೀಮಾ ವಂದಿಸಿದರು. ಶಿಕ್ಷಕಿ ಸುಚಿತಾ ಕಾರ್ಯಕ್ರಮ ನಿರೂಪಿಸಿದರು. ನಿರ್ದೇಶಕರಾದ ಗೌರಿಬನ್ನೂರು, ಪ್ರತಿಭಾದೇವಿ, ಶಾಲೆಯ ಬೋಧಕ-ಬೋಧಕೇತರ ಸಿಬ್ಬಂದಿ, ಪೋಷಕರು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here