







ಪುತ್ತೂರು: ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಇಂಜಿನಿಯರಿಂಗ್ ಆಂಡ್ ಟೆಕ್ನಾಲಜಿ, IEEE ಬೆಂಗಳೂರು ವಿಭಾಗ ಮತ್ತು IEEE ಮಂಗಳೂರು ಉಪ ವಿಭಾಗದ ಸಯುಂಕ್ತ ಆಶ್ರಯದಲ್ಲಿ IEEEಅಂತಾರಾಷ್ಟ್ರೀಯ ಸಮ್ಮೇಳನ ಡಿಸ್ಕವರ್-2026 ಅ.9 ಮತ್ತು 10ರಂದು ನೆಹರು ನಗರದ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನಲ್ಲಿ ನಡೆಯಲಿದೆ ಎಂದು ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ರವಿಕೃಷ್ಣ ಕಲ್ಲಾಜೆ ಹೇಳಿದರು.
ಅ.7ರಂದು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಎರಡು ದಿನಗಳ ಕಾರ್ಯಕ್ರಮದಲ್ಲಿ ಅ.9ರಂದು ಸಮ್ಮೇಳನದ ಉದ್ಘಾಟನೆ ನಡೆಯಲಿದ್ದು ಬೆಂಗಳೂರು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಸೆಂಟರ್ ಆಫ್ ನ್ಯಾನೋ ಸೈನ್ಸಸ್ ಆಂಡ್ ಇಂಜಿನಿಯರಿಂಗ್ ವಿಭಾಗದ ಪ್ರೋಫೇಸರ್ ಡಾ|ನವಕಾಂತ ಭಟ್, ಗೌರವ ಅತಿಥಿಗಳಾಗಿ ಟಿಸಿಎಸ್ ಸಂಸ್ಥೆಯ ಹಿರಿಯ ವಿಜ್ಞಾನಿಗಳು,IEEE ಬೆಂಗಳೂರು ವಿಭಾಗದ ಮುಖ್ಯಸ್ಥ ಡಾ.ಪ್ರಶಾಂತ್ ಮಿಶ್ರ ಆಗಮಿಸಲಿದ್ದಾರೆ. ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ರವಿಕೃಷ್ಣ ಡಿ. ಕಲ್ಲಾಜೆ ಅಧ್ಯಕ್ಷತೆ ವಹಿಸಲಿದ್ದಾರೆ.
ನಂತರ ನಡೆಯುವ ಕಾರ್ಯಕ್ರಮದಲ್ಲಿ AI ಸಂವೇದಕಂಗಳು ಮತ್ತು ಅದರಾಚೆಗಿನ ಅನ್ವಯಗಳಿಗಾಗಿ ಸೆಮಿಕಂಡಕ್ಟರ್ VLSI ತಂತ್ರಜ್ಞಾನ ವಿಷಯದಲ್ಲಿ ಬೆಂಗಳೂರಿನ IISC ಸೆಂಟರ್ ಆಫ್ ನ್ಯಾನೋ ಸೈನ್ಸಸ್ ಆ್ಯಂಡ್ ಇಂಜಿನಿಯರಿಂಗ್ ವಿಭಾಗದ ಪ್ರೊಫೇಸರ್ ಡಾ|ನವಕಾಂತ ಭಟ್, ಸಂಯೋಜಿತ ಸಂವೇದನೆ ಮತ್ತು ಸಂವಹನದಿಂದ 6G ತನಕದ ಸಂಪರ್ಕದ ಮುಂದಿನ ಅಲೆಯ ರೂಪುರೇಷೆ ವಿಷಯದಲ್ಲಿ ಸ್ಮಾರ್ ಬೂಮ್ ರೆಸೋನೆಟಿಕ್ಸ್ ನ ರೀಸ್ಚ್ ಸೈಂಟಿಸ್ಟ್ ಎಂಡ್ ಫೌಂಡರ್ ಡಾ|ಶ್ವೇತಾ ಅಮಿತ್ ಮತ್ತು ವಿಕೇಂದ್ರಕೃತ ಬುದ್ದಿಮತ್ತೆ ದೊಡ್ಡಪ್ರಮಾಣದ ತಂತ್ರಜ್ಞಾನ ಉತ್ಪಾದನೆಯಲ್ಲಿ AI ವ್ಯವಸ್ಥೆಯ ಬಗ್ಗೆ ಬೆಂಗಳೂರಿನ ಬ್ಲೂಟ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್‌ನ ಸ್ಥಾಪಕ ಹಾಗೂ ಮುಖ್ಯ ತಂತ್ರಜ್ಞಾನ ಅಧಿಕಾರಿಯಾಗಿರುವ ಸುದರ್ಶನ್ ಶೆನಿ ವಿಚಾರ ವಿನಿಮಯ ಮಾಡಿಕೊಳ್ಳಲಿದ್ದಾರೆ. ಇದರ ಜೊತೆಗ ವಿಕಸನಗೊಳ್ಳುತ್ತಿರುವ ಸಂಶೋಧನಾ ಕ್ಷೇತ್ರದಲ್ಲಿ ಗುಣಮಟ್ಟ, ಪ್ರಮಾಣ ಮತ್ತು ನೈತಿಕ ಅಯಾಮಗಳು ಎಂಬ ವಿಷಯದ ಚರ್ಚೆ ನಡೆಯಲಿದೆ.
IEEE ಬೆಂಗಳೂರು ವಿಭಾಗದ ಮುಖ್ಯಸ್ಥ ಡಾ.ಪ್ರಶಾಂತ್ ಮಿಶ್ರ, ಐಐಎಸ್‌ಸಿ ಬೆಂಗಳೂರು ಸೆಂಟರ್ ಆಫ್ ನ್ಯಾನೋ ಸೈನ್ಸಸ್ ಆಂಡ್ ಇಂಜಿನಿಯರಿಂಗ್ ವಿಭಾಗದ ಪ್ರೊಫೇಸರ್ ಡಾ.ನವಕಾಂತ ಭಟ್, ಡೆಲ್ ಟೆಕ್ನಾಲಜಿಸ್‌ನ ಡಾಟಾ ಸೈನ್ಸ್ ವಿಭಾಗದ ನಿರ್ದೇಶಕ ಪಂಡಿತ್ ಕುಲದೀಪ್ ಡೋಂಗ್ರೆ ಮತ್ತು ಬೆಂಗಳೂರಿನ ಗೀತಮ್ ಸ್ಕೂಲ್ ಆಫ್ ಕೋರ್ ಇಂಜಿನಿಯರಿಂಗ್‌ನ E&ECE ವಿಭಾಗದ ಅಸೋಸಿಯೇಟ್ ಪ್ರೊಫೇಸರ್ ಡಾ.ಅಂಬರ್ ಬಾಜ್‌ಪಾಯ್ ಭಾಗವಹಿಸಲಿದ್ದಾರೆ. ವಿವೇಕಾನಂದ ಕಾಲೇಜ್ ಆಫ್ ಇಂಜಿನಿಯರಿಂಗ್ ಆಂಡ್ ಟೆಕ್ನಾಲಜಿಯ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಪ್ರೊಫೇಸರ್ ಡಾ.ಅಜಿತ್ ಹೆಬ್ಬಾರ್ ಹೊಸಮಠ ಸಮನ್ವಯಕಾರರಾಗಿರುತ್ತಾರೆ.
ಆರು ವಿಭಾಗಗಳಲ್ಲಿ ಸಮ್ಮೇಳ:
IEEEಅಂತಾರಾಷ್ಟ್ರೀಯ ಸಮ್ಮೇಳನವು ಒಟ್ಟು ಆರು ವಿಭಾಗಳಲ್ಲಿ ನಡೆಯಲಿದೆ. ಡಿಸ್ಟ್ರಿಬ್ಯೂಟೆಡ್ ಕಂಪ್ಯೂಟಿಂಗ್, ಕಮ್ಯುನಿಕೇಶನ್, VLSI, ಇಲೆಕ್ಟ್ರಿಕ್ ಸರ್ಕ್ಯೂಟ್ಸ್, ರೊಬೋಟಿಕ್ಸ್ ಮತ್ತು ಹೆಲ್ತ್ ಕೇರ್ ಎಂಬ ವಿಭಾಗಗಳಲ್ಲಿ ಸಮ್ಮೇಳನ ನಡೆಯಲಿದೆ. ದೇಶ ವಿದೇಶಗಳಿಂದ ಒಟ್ಟು 1071 ಪ್ರಬಂಧಗಳು ಬಂದಿದ್ದು ಇದರಲ್ಲಿ 94 ಪ್ರಬಂಧಗಳನ್ನು ಸಮ್ಮೇಳನದಲ್ಲಿ ಮಂಡನೆಗಾಗಿ ಆಯ್ಕೆ ಮಾಡಲಾಗಿದೆ ಎಂದು ಅವರು ಹೇಳಿದರು.
ಏನಿದು IEEE…!
ವಿಶ್ವದ ಅತೀ ದೊಡ್ಡ ವೃತ್ತಿಪರ ಸಂಘಟನೆಯಾಗಿರುವ IEEE( ಇನ್ಸ್ಟಿಟ್ಯೂಟ್ ಆಫ್ ಇಲೆಕ್ಟ್ರಿಕಲ್ ಆ್ಯಂಡ್ ಇಲೆಕ್ಟ್ರಾನಿಕ್ಸ್ ಇಂಜಿನಿಯರ‍್ಸ್) ನೂತನ ತಂತ್ರಜ್ಞಾನಗಳ ಶ್ರೇಷ್ಠತೆಯನ್ನು ಗುರುತಿಸಿ ಅದನ್ನು ಮನುಕುಲದ ಏಳಿಗೆಗಾಗಿ ಬಳಸುವ ಸಾರ್ವಜನಿಕ ದತ್ತಿ ಸಂಸ್ಥೆಯಾಗಿದೆ. ಇದರ ಸದಸ್ಯರು ವ್ಯಾಪಕವಾಗಿ ಉಲ್ಲೇಖಿಸಲ್ಪಡುವ ಪ್ರಕಟಣೆಗಳು, ಸಮ್ಮೇಳನಗಳು, ತಾಂತ್ರಿಕ ಮಾನದಂಡಗಳು ಮತ್ತು ವೃತ್ತಿಪರ ಶೈಕ್ಷಣಿಕ ಚಟುವಟಿಕೆಗಳ ಮೂಲಕ ಜಾಗತಿಕ ಸಮುದಾಯಕ್ಕೆ ಸ್ಪೂರ್ತಿ ನೀಡುತ್ತಾರೆ. ಇಂಜಿನಿಯರಿಂಗ್, ಕಂಪ್ಯೂಟಿಂಗ್ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಮಾಹಿತಿ ವಿಷಯದಲ್ಲಿ ಜಾಗತಿಕ ಮಟ್ಟದಲ್ಲಿ ವಿಶ್ವಾಸಾರ್ಹ ಸಂಸ್ಥೆಯಾಗಿದೆ. ಇದರ ಸದಸ್ಯತ್ವ ಪಡೆಯುವ ಮೂಲಕ ವಿದ್ಯಾರ್ಥಿಗಳಿಗೆ ವಿಶ್ವದಾದ್ಯಂತ ಇರುವ ತಂತಜ್ಞಾನ ಕ್ಷೇತ್ರದ ಪರಿಣಿತರೊಂದಿಗೆ ಸಂಪರ್ಕ ಬೆಳೆಸಲು, ಅಗತ್ಯವಾದ ತಾಂತ್ರಿಕ ಮಾಹಿತಿಯನ್ನು ಪಡೆಯಲು, ವೃತ್ತಿ ಜೀವನವನ್ನು ಉತ್ತಮವಾಗಿ ರೂಪಿಸಿಕೊಳ್ಳಲು ಹಾಗೂ ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನ ವಿಭಾಗದಲ್ಲಿ ವಿದ್ಯಾರ್ಥಿಗಳಿಗೆ ದೊರೆಯುವ ಸವಲತ್ತುಗಳನ್ನು ಪಡೆದುಕೊಳ್ಳಲು IEEE ಸಹಕಾರಿಯಾಗಲಿದೆ.
ಅಂತಾರಾಷ್ಟ್ರೀಯ ಸಮ್ಮೇಳನದ ಎರಡನೇ ದಿನವಾದ ಅ.10ರಂದು ಅಪರಾಹ್ನ ಸಮ್ಮೇಳನದ ಸಮಾರೋಪ ಸಮಾರಂಭ ನಡೆಯಲಿದ್ದು ಬೆಂಗಳೂರಿನ ಬ್ಲೂಟ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್‌ನ ಸ್ಥಾಪಕರು, ಮುಖ್ಯ ತಂತ್ರಜ್ಞಾನ ಅಧಿಕಾರಿಯಾಗಿರುವ ಸುದರ್ಶನ್ ಶೆನ್ವಿ, IEEE ಬೆಂಗಳೂರು ವಿಭಾಗದ ತಾಂತ್ರಿಕ ಮತ್ತು ಸಮ್ಮೇಳನದ ಪ್ರಾಯೋಜಕತ್ವ ಸಮಿತಿಯ ಉಪಾಧ್ಯಕ್ಷ ಡಾ|ವಾಸುದೇವ ಅತಿಥಿಗಳಾಗಿ ಆಗಮಿಸಲಿದ್ದಾರೆ. ಕಾಲೇಜಿನ ಆಡಳಿತ ಮಂಡಳಿ ಸಂಚಾಲಕ ಪ್ರಸನ್ನ ದರ್ಬೆ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಹೇಳಿದರು.
ಬೆಳ್ಳಿ ಹಬ್ಬದ ಸಂಭ್ರಮದಲ್ಲಿ ಅಂತಾರಾಷ್ಟ್ರೀಯ ಕಾರ್ಯಕ್ರಮ:
ವಿವೇಕಾನಂದ ಇಂಜಿನಿಯರಿಂಗ್ ಕಾಲೇಜು 25 ವರ್ಷಗಳನ್ನು ಪೂರೈಸಿದೆ. ಬೆಳ್ಳಿ ಹಬ್ಬದ ಸಂಭ್ರಮದಲ್ಲಿರುವ ಕಾಲೇಜಿನಲ್ಲಿ ಅತೀ ದೊಡ್ಡ ಕಾರ್ಯಕ್ರಮವಾಗಿ ಐಇಇಇ ಅಂತಾರಾಷ್ಟ್ರೀಯ ಸಮ್ಮೇಳವು ಪ್ರಥಮ ಬಾರಿಗೆ ನಡೆಯುತ್ತಿದೆ ಎಂದು ಕಾಲೇಜಿನ ಪ್ರಾಂಶುಪಾಲ ಡಾ|ಮಹೇಶ್ ಪ್ರಸನ್ನ ಕೆ ಹೇಳಿದರು.
ಕಾಲೇಜಿನ ಸಂಚಾಲಕ ಪ್ರಸನ್ನ ದರ್ಬೆ,IEEE ಕಾರ್ಯಕ್ರಮ ಸಂಯೋಜಕಿಯರಾದ ಡಾ.ಜೀವಿತಾ ಬಿ.ಕೆ., ಡಾ. ರಜನಿ ಬಿ ಮತ್ತು ಮಾಧ್ಯಮ ವಿಭಾಗದ ಸಂಯೋಜಕ ಡಾ.ಆಶ್ಲೆ ಡಿ ಸೋಜ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.












