ಕರಾವಳಿಯ ಯುವಜನತೆಯ ಉದ್ಯೋಗ ಸ್ವಪ್ನಕ್ಕೆ ‘ವಿದ್ಯಾಮಾತಾ’ ಆಸರೆ: ಬರಿ ಅಂಕಗಳಷ್ಟೇ ಅಲ್ಲ, ಬದುಕನ್ನು ಗೆಲ್ಲುವ ಕೌಶಲ್ಯವೇ ನಿಜವಾದ ಶಕ್ತಿ

0

ಪುತ್ತೂರು: ಶೈಕ್ಷಣಿಕವಾಗಿ ಮುಂಚೂಣಿಯಲ್ಲಿರುವ ಕರಾವಳಿ ಭಾಗದಲ್ಲಿ ಪದವೀಧರರ ಮಹಾಪೂರವಿದ್ದರೂ, ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಿವಿಲ್ ಸರ್ವೀಸಸ್ ಹಾಗೂ ರಕ್ಷಣಾ ಪಡೆಗಳ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಈ ಭಾಗದ ಯುವಕರ ಭಾಗವಹಿಸುವಿಕೆ ಹಿಂದಿನಿಂದಲೂ ಕಡಿಮೆಯಿತ್ತು. ಹೆಚ್ಚಿನ ವಿದ್ಯಾರ್ಥಿಗಳು ಕೇವಲ ಸಾಂಪ್ರದಾಯಿಕ ಉದ್ಯೋಗಗಳು ಅಥವಾ ಗಲ್ಫ್ ದೇಶಗಳ ವಲಸೆಗೆ ಸೀಮಿತರಾಗಿದ್ದರು. ಸ್ಪರ್ಧಾತ್ಮಕ ಜಾಗೃತಿಯಿಲ್ಲದ ಇಂತಹ ವಾತಾವರಣದಲ್ಲೂ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಗರದ ಎಪಿಎಂಸಿ ರಸ್ತೆಯಲ್ಲಿ ಕಾರ್ಯಾಚರಿಸುತ್ತಿರುವ ‘ವಿದ್ಯಾಮಾತಾ ಅಕಾಡೆಮಿ’ ನೂತನ ಪ್ರಯೋಗಗಳ ಮೂಲಕ ಯಶಸ್ಸು ಕಂಡು ಕರಾವಳಿಯಲ್ಲೇ ಪ್ರಥಮವೆನಿಸಿದೆ. ಇತ್ತೀಚೆಗೆ ಪ್ರಖ್ಯಾತ ‘Times of India’ ಇಂಗ್ಲಿಷ್ ದಿನಪತ್ರಿಕೆಯೂ ಸಹ ವಿದ್ಯಾಮಾತಾ ಅಕಾಡೆಮಿಯ ಈ ಶೈಕ್ಷಣಿಕ ಬದಲಾವಣೆಯ ಹಾದಿಯನ್ನು ವಿಶೇಷವಾಗಿ ಶ್ಲಾಘಿಸಿ ವರದಿ ಮಾಡಿದೆ.


ಸಾಮಾನ್ಯವಾಗಿ ದೊಡ್ಡ ಮಟ್ಟದ ಕೋಚಿಂಗ್ ಸಂಸ್ಥೆಗಳು ನೂರರಲ್ಲಿ ಒಬ್ಬರು IAS ಅಥವಾ KAS ಅಧಿಕಾರಿಯಾದರೆ ಆ ಯಶಸ್ಸನ್ನು ಮಾತ್ರ ದೊಡ್ಡದಾಗಿ ಬಿಂಬಿಸುತ್ತವೆ. ಆದರೆ, ಆ ಪ್ರಕ್ರಿಯೆಯಲ್ಲಿ ಸ್ಪರ್ಧೆಗಿಳಿದು ಸೋತ ಉಳಿದ 99 ವಿದ್ಯಾರ್ಥಿಗಳ ಭವಿಷ್ಯದ ಕಥೆಯೇನು ಎಂಬ ಆಳವಾದ ಸಾಮಾಜಿಕ ಪ್ರಶ್ನೆಯನ್ನು ವಿದ್ಯಾಮಾತಾ ಅಕಾಡೆಮಿಯ ಮ್ಯಾನೇಜಿಂಗ್ ಡೈರೆಕ್ಟರ್ ಭಾಗ್ಯೇಶ್ ರೈ ಮುಂದಿಟ್ಟಿದ್ದಾರೆ. ಒಬ್ಬ ವಿಜೇತನನ್ನು ರೂಪಿಸುವಷ್ಟೇ ಗಂಭೀರವಾಗಿ, ಅಲ್ಲಿ ಹಿನ್ನಡೆ ಅನುಭವಿಸುವ ಉಳಿದ 99 ವಿದ್ಯಾರ್ಥಿಗಳ ಬದುಕಿಗೂ ಭದ್ರತೆ ಮತ್ತು ಆತ್ಮವಿಶ್ವಾಸ ನೀಡುವುದು ನಮ್ಮ ಜವಾಬ್ದಾರಿ ಎಂಬುದು ಸಂಸ್ಥೆಯ ಮೂಲ ಮಂತ್ರವಾಗಿದೆ. ಇಂದಿನ ಶಿಕ್ಷಣ ಪದ್ಧತಿಯಲ್ಲಿ ಕೇವಲ ಅಂಕಗಳ ಬೆನ್ನೇರುವ ಯುವಜನತೆಗೆ ಪ್ರಾಯೋಗಿಕ ಕೌಶಲ್ಯ, ಸಂವಹನ ಕಲೆ ಹಾಗೂ ವಾಸ್ತವ ಜಗತ್ತಿನ ಸವಾಲುಗಳನ್ನು ಎದುರಿಸುವ ತಾಕತ್ತು ಕೊರತೆಯಿದೆ. ಸ್ನಾತಕೋತ್ತರ ಪದವಿ ಪಡೆದರೂ ಕನಿಷ್ಠ ಸ್ವ-ಪರಿಚಯ ಮಾಡಿಕೊಳ್ಳಲು ಅಥವಾ ಕಂಪ್ಯೂಟರ್ ನಿರ್ವಹಿಸಲು ಬಾರದ ಇಂದಿನ ಸ್ಥಿತಿಯನ್ನು ಬದಲಾಯಿಸಿ, ಪ್ರತಿಯೊಬ್ಬ ವಿದ್ಯಾರ್ಥಿಯಲ್ಲೂ ಸ್ವಾವಲಂಬನೆಯನ್ನು ತುಂಬುವ ಕೆಲಸ ಇಲ್ಲಿ ನಡೆಯುತ್ತಿದೆ.
ವಿದ್ಯಾರ್ಥಿಗಳು ತಮ್ಮ ಶಿಕ್ಷಣದ ನಿರ್ಣಾಯಕ ಹಂತದಲ್ಲಿ ಸಮಯವನ್ನು ವ್ಯರ್ಥ ಮಾಡದಂತೆ ಸಂಸ್ಥೆಯು ‘ಕಲಿಕೆಯೊಂದಿಗೆ ಗಳಿಕೆ’ ಎನ್ನುವ ವಿನೂತನ ಯೋಜನೆಯನ್ನು ಜಾರಿಗೆ ತಂದಿದೆ. ಪಿಯುಸಿ (PUC) ಮುಗಿದ ಕೂಡಲೇ ದೂರಶಿಕ್ಷಣದ ಮೂಲಕ ಡಿಗ್ರಿ (ಬಿ.ಎ, ಬಿ.ಕಾಮ್, ಬಿ.ಬಿ.ಎ) ವ್ಯಾಸಂಗಕ್ಕೆ ದಾಖಲಾಗಿ, ಅದೇ ಮೂರು ವರ್ಷಗಳ ಅವಧಿಯಲ್ಲಿ ಐಎಎಸ್, ಕೆಎಎಸ್, ಬ್ಯಾಂಕಿಂಗ್, ಪೊಲೀಸ್ ಹಾಗೂ ರರಣಾ ಪಡೆಗಳ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಮಾನಾಂತರ ತರಬೇತಿ ಪಡೆಯಲು ಇಲ್ಲಿ ಅವಕಾಶ ಕಲ್ಪಿಸಲಾಗಿದೆ. ಇದರಿಂದ ವಿದ್ಯಾರ್ಥಿಯು ಪದವಿ ಮುಗಿಸುವ ವೇಳೆಗೆ ಸರ್ಕಾರದ ಉದ್ಯೋಗ ಅಥವಾ ಉನ್ನತ ಖಾಸಗಿ ವಲಯದಲ್ಲಿ ನೆಲೆಗೊಳ್ಳಲು ಸಂಪೂರ್ಣ ಸಿದ್ಧನಾಗಿರುತ್ತಾನೆ.


ವಿಶೇಷವಾಗಿ ಭಾರತೀಯ ಭೂಸೇನೆ (Agniveer), ವಾಯುಸೇನೆ, ನೌಕಾಸೇನೆ, ಅರೆಮಿಲಿಟರಿ ಪಡೆಗಳು, ಕರ್ನಾಟಕ ಪೊಲೀಸ್ ಹಾಗೂ ಅರಣ್ಯ ಇಲಾಖೆಗಳ ನೇಮಕಾತಿಗಾಗಿ ಯುವಕರಿಗೆ 17ನೇ ವಯಸ್ಸಿನಿಂದಲೇ ಸುವರ್ಣ ಅವಕಾಶಗಳಿವೆ. ಈ ಹಂತದಲ್ಲಿ ವಿದ್ಯಾರ್ಥಿಗಳಿಗೆ ಕೇವಲ ಲಿಖಿತ ಪರೀಕ್ಷೆಯಷ್ಟೇ ಅಲ್ಲದೆ, ನುರಿತ ತರಬೇತುದಾರರಿಂದ ಮೈದಾನದಲ್ಲಿ ದೈಹಿಕ ಕ್ಷಮತೆ ಮತ್ತು ಕಠಿಣ ತರಬೇತಿಯನ್ನು ನೀಡಲಾಗುತ್ತಿದೆ. ಇದರೊಂದಿಗೆ ನವೋದಯ, ಮೊರಾರ್ಜಿ ದೇಸಾಯಿ ಪ್ರವೇಶ ಪರೀಕ್ಷೆಗಳು, KAR-TET, KSET, NET, HSTR, PSTR, GPSTR ನಂತಹ ಶೈಕ್ಷಣಿಕ ಹಾಗೂ ಬೋಧನಾ ಅರ್ಹತಾ ಪರೀಕ್ಷೆಗಳಿಗೂ ಇಲ್ಲಿ ಅತ್ಯುತ್ತಮ ತರಬೇತಿ ಲಭ್ಯವಿದೆ.


ನಿರ್ದೇಶಕಿ ರಮ್ಯಾ ಭಾಗ್ಯೇಶ್ ರೈ ಅವರ ನೇತೃತ್ವದಲ್ಲಿ ಸಂಸ್ಥೆಯು ಅತ್ಯಾಧುನಿಕ ಮೂಲಸೌಕರ್ಯಗಳನ್ನು ಒಳಗೊಂಡಿದೆ. ವಿದ್ಯಾರ್ಥಿಗಳು ದಿನದ 24 ಗಂಟೆಯೂ ನಿರಾಳವಾಗಿ ಓದಲು ‘ದೇವಿದ್ಯಾ’ 24×7 ಸದಾಶಿವ ಅಧ್ಯಯನ ಗ್ರಂಥಾಲಯ ಹಾಗೂ AI ಚಾಲಿತ ಡಿಜಿಟಲ್ ಇಂಟರಾಕ್ಟಿವ್ ಪ್ಯಾನಲ್‌ಗಳನ್ನು ಹೊಂದಿರುವ ‘ಸ್ತುತ್ಯ’ ಸ್ಮಾರ್ಟ್ ಕ್ಲಾಸ್‌ರೂಮ್‌ಗಳು ಇಲ್ಲಿ ಕಾರ್ಯನಿರ್ವಹಿಸುತ್ತಿವೆ. ಇದರೊಂದಿಗೆ ಟ್ಯಾಲಿ ಪ್ರೈಮ್, ಪ್ರಾಯೋಗಿಕ ಅಕೌಂಟಿಂಗ್, ಗಲ್ಫ್ ವ್ಯಾಟ್ (Gulf VAT), ಡೇಟಾ ಅನಾಲಿಟಿಕ್ಸ್, ಕೋಡ್-ಆರ್ಕಿಟೆಕ್ಟ್ ಪ್ರೋಗ್ರಾಮಿಂಗ್ ಮತ್ತು ಸ್ಪೋಕನ್ ಇಂಗ್ಲಿಷ್ ತರಬೇತಿಗಳನ್ನು ನೀಡುವುದರ ಮೂಲಕ ಕರಾವಳಿಯ ಯುವಜನತೆಯನ್ನು ಜಾಗತಿಕ ಮಟ್ಟದ ಉದ್ಯೋಗಗಳಿಗೆ ಸಜ್ಜುಗೊಳಿಸಲಾಗುತ್ತಿದೆ. ಬರಿ ಅಂಕಗಳ ಕಾರ್ಖಾನೆಯಾಗದೆ, ಬದುಕಿನ ಪ್ರತಿ ಹಂತದಲ್ಲೂ ವಿದ್ಯಾರ್ಥಿಗೆ ಭರವಸೆಯ ದಾರಿದೀಪವಾಗುವ ಮೂಲಕ ವಿದ್ಯಾಮಾತಾ ಅಕಾಡೆಮಿಯು ಕರಾವಳಿಯ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾಗಿ ಹೊರಹೊಮ್ಮಿದೆ.

LEAVE A REPLY

Please enter your comment!
Please enter your name here