







ವಿಟ್ಲ: ಮಾಣಿ ಗ್ರಾಮ ಪಂಚಾಯತ್ ಮೈದಾನದಲ್ಲಿ ನಡೆದ ಕ್ರಿಕೆಟ್ ಪಂದ್ಯಾಟದ ವೇಳೆ ಸ್ಕೋರ್ ವಿಚಾರಕ್ಕೆ ಗಲಾಟೆ ನಡೆದು ಅಂಪೈರ್ ಮೇಲೆ ಹಲ್ಲೆ ನಡೆದಿದೆ ಎಂದು ರಿಜ್ವಾನ್ ಎಂಬುವವರು ದೂರು ನೀಡಿದ ಘಟನೆ ನಡೆದಿದೆ.


ಮಾಣಿ ನಿವಾಸಿ ರಿಜ್ವಾನ್ (22) ಅವರು AKARS ಆಂಬುಲೆನ್ಸ್ ಚಾಲಕರಾಗಿದ್ದು, ಕ್ರಿಕೆಟ್ ಪಂದ್ಯಗಳಲ್ಲಿ ಅಂಪೈರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅ.11 ರಂದು ಮಾಣಿ ಗ್ರಾಮ ಪಂಚಾಯತ್ ಮೈದಾನದಲ್ಲಿ 18 ವರ್ಷದೊಳಗಿನ ಮಕ್ಕಳಿಗಾಗಿ 8 ತಂಡಗಳ ಕ್ರಿಕೆಟ್ ಪಂದ್ಯಾಟವನ್ನು ಆಯೋಜಿಸಲಾಗಿತ್ತು. ಮಧ್ಯಾಹ್ನ 3.30ಕ್ಕೆ ಕ್ವಾಲಿಟಿ ಮಾಣಿ ಮತ್ತು GFC ಗಡಿಯಾರ ತಂಡಗಳ ನಡುವೆ ಪಂದ್ಯ ನಡೆಯುವಾಗ ಸ್ಕೋರ್ ವಿಚಾರವಾಗಿ ಎರಡು ತಂಡಗಳ ನಡುವೆ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಗಡಿಯಾರ ತಂಡದ ಸಮ್ಮಾಸ್ ಎಂಬಾತ ನಶಾತ್ ಎಂಬವರಿಗೆ ಅವಾಚ್ಯ ಶಬ್ದಗಳಿಂದ ಬೈದಿದ್ದು, ರಿಜ್ವಾನ್ ಪ್ರಶ್ನಿಸಿದ್ದಾರೆ. ಆಗ ಸಮ್ಮಾಸ್ ಮತ್ತು ಆತನ ಇಬ್ಬರು ಸ್ನೇಹಿತರು ಸೇರಿ ರಿಜ್ವಾನ್ ಮೇಲೆ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.



ಗಾಯಾಳು ವಿಟ್ಲ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಈ ಬಗ್ಗೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.










