ಮೆಸ್ಕಾಂನಿಂದ ಮೂರು ದಿನಗಳ ‘ಸೇವಾ ಸೇತು ಅಭಿಯಾನ’ ಪ್ರಾರಂಭ

0

ಮನೆಗಳ ಚಾವಣಿಯಲ್ಲಿ ಸೋಲಾರ್ ಅಳವಡಿಕೆಗೆ ಮಾಹಿತಿ, ಅರ್ಜಿ ಸಲ್ಲಿಕೆಗೆ ಅವಕಾಶ

ಪುತ್ತೂರು: ಮನೆಗಳ ಚಾವಣಿಯಲ್ಲಿ ಸೌರ ವಿದ್ಯುತ್ ಘಟಕ ಅಳವಡಿಸಲು ಇಚ್ಛಿಸುವ ವಿದ್ಯುತ್ ಬಳಕೆದಾರರಿಗೆ ಮಾಹಿತಿ ಮತ್ತು ಮಾರ್ಗದರ್ಶನ ಒದಗಿಸುವ ಉದ್ದೇಶದಿಂದ ಮೆಸ್ಕಾಂ ಪುತ್ತೂರು ನಗರ ಮತ್ತು ಗ್ರಾಮಾಂತರ ಉಪ ವಿಭಾಗದ ವತಿಯಿಂದ ಪುತ್ತೂರು ಪುರಭವನದಲ್ಲಿ ಮೂರು ದಿನಗಳ ನಡೆಯಲಿರುವ ಸೇವಾ ಸೇತು ಅಭಿಯಾನ ಅ,14ರಂದು ಪ್ರಾರಂಭಗೊಂಡಿತು.


ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ನಡೆಯುವ ಈ ಅಭಿಯಾನದಲ್ಲಿ ಸೋಲಾರ್ ಅಳವಡಿಸುವ ಸಂಸ್ಥೆಗಳ ಪ್ರತಿನಿಧಿಗಳಿಂದ ಮಾಹಿತಿ ಹಾಗೂ ಮಾರ್ಗದರ್ಶನ ಪಡೆಯಲು ಅವಕಾಶವಿದೆ. ಸ್ಥಳದಲ್ಲಿಯೇ ಅರ್ಜಿ ಸಲ್ಲಿಸಲು ನೆರವು, ಸರಕಾರದ ಸಬ್ಸಿಡಿ ಸೌಲಭ್ಯಗಳ ಕುರಿತು ಮಾಹಿತಿ ಮತ್ತು ಸೋಲಾರ್ ಅಳವಡಿಕೆಗೆ ಬ್ಯಾಂಕ್‌ಗಳಿಂದ ದೊರೆಯುವ ಸಾಲ ಸೌಲಭ್ಯಗಳ ಬಗ್ಗೆ ವಿವರಗಳನ್ನು ಒದಗಿಸಲಾಗುತ್ತದೆ.


ಸೋಲಾರ್ ಅಳವಡಿಕೆಯ ಪ್ರಕ್ರಿಯೆ, ಅರ್ಜಿ ಸಲ್ಲಿಸುವ ವಿಧಾನ, ಸಬ್ಸಿಡಿ ಪಡೆಯುವ ಕ್ರಮ ಹಾಗೂ ಸಾಲ ಸೌಲಭ್ಯಗಳ ಬಗ್ಗೆ ಸಮಗ್ರ ಮಾಹಿತಿ ಪಡೆದು, ಆಸಕ್ತರು ತಮ್ಮ ಮನೆಗಳಿಗೆ ಸೌರ ವಿದ್ಯುತ್ ವ್ಯವಸ್ಥೆ ಅಳವಡಿಸಿಕೊಳ್ಳಲು ಈ ಅಭಿಯಾನ ಸಹಕಾರಿಯಾಗಲಿದೆ.


ಅಗತ್ಯ ದಾಖಲೆಗಳು:
ಅಭಿಯಾನಕ್ಕೆ ಆಗಮಿಸುವ ವಿದ್ಯುತ್ ಬಳಕೆದಾರರು ತಮ್ಮ ಇತ್ತೀಚಿನ ವಿದ್ಯುತ್ ಬಿಲ್, ಅರ್ಜಿದಾರರ ಪಾಸ್ ಪೋರ್ಟ್ ಅಳತೆಯ ಭಾವಚಿತ್ರ, ಆಧಾರ್ ಕಾರ್ಡ್ ಹಾಗೂ ಒಟಿಪಿ ಪಡೆಯಲು ಮೊಬೈಲ್ ಫೋನ್ ತರಬೇಕು. ಸೋಲಾರ್ ಅಳವಡಿಕೆಗೆ ಬ್ಯಾಂಕ್ ಸಾಲದ ಅಗತ್ಯವಿರುವವರು ಬ್ಯಾಂಕ್ ಪಾಸ್‌ಬುಕ್, ಎರಡು ಪಾಸ್‌ಪೋರ್ಟ್ ಅಳತೆಯ ಭಾವಚಿತ್ರಗಳು ಹಾಗೂ ಲಭ್ಯವಿದ್ದಲ್ಲಿ ಪಾನ್ ಕಾರ್ಡ್‌ನೊಂದಿಗೆ ಹಾಜರಾಗಬೇಕು.


ಅ.16ಕೊನೆ ದಿನ;
ಒಟ್ಟು ಮೂರು ದಿನಗಳ ಕಾಲ ನಡೆಯಲಿರುವ ಸೇವಾ ಸೇತು ಅಭಿಯಾನವು ನಾಳೆ ಕೊನೆಗೊಳ್ಳಲಿದೆ. ವಿದ್ಯುತ್ ಬಳಕೆದಾರರು ಆಗಮಿಸಿ, ಸೂಕ್ತ ಮಾಹಿತಿ ಪಡೆದುಕೊಳ್ಳುವ ಜೊತೆಗೆ ಅರ್ಜಿ ಸಲ್ಲಿಸಲು ಅವಕಾಶವಿದ್ದು ಅ.16ರಂದು ಕೊನೆಗೊಳ್ಳಲಿದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here