







ಪುತ್ತೂರು: ಭಾರತೀಯ ಪರಂಪರೆಯು ಜಗತ್ತಿಗೆ ನೀಡಿದಷ್ಟು ಕೊಡುಗೆ ಬೇರೆ ಯಾವುದೇ ಪರಂಪರೆ ನೀಡಿಲ್ಲ. ನಮ್ಮ ಉಪನಿಷತ್ತುಗಳು,ಭಾಷೆ, ಎಲ್ಲವೂ ಮಹತ್ವವಾದದ್ದು. ಪ್ರತಿಯೊಬ್ಬ ಭಾರತೀಯನೂ ಇದನ್ನು ತಿಳಿದಾಗ ಮಾತ್ರ ಶ್ರೇಷ್ಠನಾಗುತ್ತಾನೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತೀಯ ಪ್ರತಿನಿಧಿ ಸಭಾ ಆಮಂತ್ರಿತ ಸದಸ್ಯರು ಹಾಗೂ ನಿವೃತ್ತ ಶಿಕ್ಷಕರಾದ ಕಜಂಪಾಡಿ ಸುಬ್ರಹ್ಮಣ್ಯ ಭಟ್ ಅಭಿಪ್ರಾಯಪಟ್ಟರು.


ತೆಂಕಿಲದ ವಿವೇಕಾನಂದ ಶಿಕ್ಷಣ ಮಹಾವಿದ್ಯಾಲಯದಲ್ಲಿ ಅ. 14 ರಂದು ನಡೆದ ಭಾರತೀಯ ಜ್ಞಾನ ಪರಂಪರೆ ಮತ್ತು ಸಮಗ್ರ ವಿಕಾಸ ಕಾರ್ಯಾಗಾರದ ಮೊದಲ ಅವಧಿಯಲ್ಲಿ “ಭಾರತೀಯ ಜ್ಞಾನ ಪರಂಪರೆ ಶಿಕ್ಷಕರಿಂದ ಪೀಳಿಗೆಗೆ” ಎಂಬ ವಿಷಯದ ಕುರಿತು ಮಾತನಾಡಿದ ಅವರು ಭಾರತೀಯ ಜ್ಞಾನ ಪರಂಪರೆ ಎನ್ನುವುದು ಹಳೆಯ ಬೇರು. ಅದರ ಆದಿ ತಿಳಿದಿಲ್ಲ, ಹಾಗಾಗಿ ಅಂತ್ಯವೂ ಇಲ್ಲ ಎಂದರು. ಇಂದಿನ ತಲೆಮಾರಿನ ವಿದ್ಯಾರ್ಥಿಗಳು ಮೊಬೈಲನ್ನು ಹೆಚ್ಚಾಗಿ ಅವಲಂಬಿಸಿದ್ದಾರೆ ಅಂತಹ ವಿದ್ಯಾರ್ಥಿಗಳಿಗೆ ನಮ್ಮ ಪರಂಪರೆಯ ಗಣಿತ, ವಿಜ್ಞಾನ ಕಾಲಗಣನೆಯ ಪರಿಚಯವನ್ನು ನೀಡಬೇಕು ಎಂದರು.




ಎರಡನೇ ಅವಧಿಯಲ್ಲಿ ಶ್ರೀರಾಮ ಹಿರಿಯ ಪ್ರಾಥಮಿಕ ಕನ್ನಡ ಮಾಧ್ಯಮ ಶಾಲೆ, ಕಲ್ಲಡ್ಕ ಇಲ್ಲಿನ ಶಿಕ್ಷಕಿ ರಾಜೇಶ್ವರಿ ಸುವರ್ಣ “ಪಂಚಕೋಶದಿಂದ ಪಂಚಪದಿ ಎಡೆಗೆ” ಎಂಬ ವಿಷಯದ ಕುರಿತು ಮಾತನಾಡಿ, ಪಂಚಪದಿಯ ಮೂಲಕ ಶಿಕ್ಷಕರ ಪಾತ್ರ ಮತ್ತು ಭಾರತೀಯ ಜ್ಞಾನ ಪರಂಪರೆಯ ಮೂಲಕ ಬೋಧನೆಯ ಹಂತಗಳನ್ನು ತಿಳಿಸುವುದರೊಂದಿಗೆ ವಿದ್ಯಾರ್ಥಿಗಳ ಮೌಲ್ಯಮಾಪನದ ಜೊತೆಗೆ ಶಿಕ್ಷಕರೂ ತಮ್ಮನ್ನು ತಾವು ಮೌಲ್ಯಮಾಪನ ಮಾಡಬೇಕು ಎಂದರು..
ವೇದಿಕೆಯಲ್ಲಿ ಕಾಲೇಜಿನ ಆಡಳಿತ ಮಂಡಳಿ ಸಂಚಾಲಕರಾದ ಗಂಗಮ್ಮ ಹೆಚ್ ಶಾಸ್ತ್ರಿ ಉಪಸ್ಥಿತರಿದ್ದರು.

ಪ್ರಾಂಶುಪಾಲೆ ಡಾ. ಶೋಭಿತಾ ಸತೀಶ್ ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕ ಮಾತಿನೊಂದಿಗೆ ಸ್ವಾಗತಿಸಿದರು. ಸಹಾಯಕ ಪ್ರಾಧ್ಯಾಪಕಿ ಶ್ರೀಮತಿ ಅಕ್ಷತಾ ಎಂ ವಂದಿಸಿದರು. ಪ್ರಶಿಕ್ಷಣಾರ್ಥಿಗಳಾದ ತೇಜಸ್ವಿನಿ ಪ್ರಾರ್ಥಿಸಿ ವರೇಣ್ಯಾ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕರು ಹಾಗೂ ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು.










