







ಬರಹ : ಸಿಶೇ ಕಜೆಮಾರ್


ಪುತ್ತೂರು: ಒಳಮೊಗ್ರು ಗ್ರಾಮದ ಪ್ರಮುಖ ವಾಣಿಜ್ಯ ನಗರಿ, ಬಂಟ್ವಾಳ-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಗಡಿಯಲ್ಲಿ ಸದಾಕಾಲ ಜನಸಂದಣಿಯಿಂದ, ವ್ಯವಹಾರಿಕ ಚಟುವಟಿಕೆಗಳಿಂದ ಕಂಗೊಳಿಸುವ ಕುಂಬ್ರ ಪೇಟೆಯಲ್ಲಿ ಆಗೊಮ್ಮೆ ಈಗೊಮ್ಮೆ ನಡೆಯುತ್ತಿರುವ ಸೈಬರ್ ಕಳ್ಳತನಗಳು ಚರ್ಚೆಗೆ ಗ್ರಾಸವಾಗಿದೆ. ಪುತ್ತೂರು ನಗರವನ್ನು ಹೊರತುಪಡಿಸಿ ಈ ಭಾಗದಲ್ಲಿ ದೊಡ್ಡ ಮಟ್ಟದಲ್ಲಿ ಬೆಳೆಯುತ್ತಿರುವ ಈ ಪಟ್ಟಣಕ್ಕೆ ಈಗೇನೋ ಸೈಬರ್ ವಂಚಕರ ಕ್ರೂರ ದೃಷ್ಟಿ ಬಿದ್ದಿದೆ ಎಂದರೆ ತಪ್ಪಾಗಲಾರದು. ಕಳೆದೆರಡು ತಿಂಗಳಿಂದ ಕುಂಬ್ರದಲ್ಲಿ ಒಂದರ ಹಿಂದೆ ಒಂದರಂತೆ ನಡೆಯುತ್ತಿರುವ ಸೈಬರ್ ಹಾಗೂ ಡಿಜಿಟಲ್ ವಂಚನೆ ಪ್ರಕರಣಗಳು ಕೇವಲ ಕೆಲವು ವ್ಯಕ್ತಿಗಳಿಗೆ ಆದ ನಷ್ಟವಷ್ಟೇ ಅಲ್ಲ, ಇಡೀ ಸಮಾಜವನ್ನೇ ಬೆಚ್ಚಿಬೀಳಿಸಿರುವ ದೊಡ್ಡ ಎಚ್ಚರಿಕೆಯ ಗಂಟೆಯಾಗಿದೆ. ಕಷ್ಟಪಟ್ಟು ಬೆವರು ಹರಿಸಿ ಸಂಪಾದಿಸಿದ ಹಣವನ್ನು ಕೆಲವೇ ನಿಮಿಷಗಳಲ್ಲಿ ಕಳೆದುಕೊಳ್ಳುವ ಜನರ ಅಳಲು ಇಂದು ಕುಂಬ್ರದ ಬೀದಿಗಳಲ್ಲಿ ಪ್ರತಿಧ್ವನಿಸುತ್ತಿದೆ.



ಕುಂಬ್ರದಲ್ಲಿ ನಡೆದಿರುವ ಆತಂಕಕಾರಿ ವಂಚನೆಯ ಕಥಾನಕಗಳು
ಕುಂಬ್ರ ಪೇಟೆಯಲ್ಲಿ ಕಳೆದೆರಡು ತಿಂಗಳಲ್ಲಿ ನಡೆದ ಈ ಮೂರು ಘಟನೆಗಳು ಡಿಜಿಟಲ್ ಯುಗದ ಕರಾಳ ಮುಖವನ್ನು ನಮ್ಮ ಕಣ್ಣಮುಂದೆ ತೆರೆದಿಡುತ್ತವೆ. ಆಯಿಲ್ ಮಿಲ್ನಲ್ಲಿ ನಡೆದ ನಕಲಿ ಡಿಜಿಟಲ್ ಪೇಮೆಂಟ್ ಮೋಸ. ಕುಂಬ್ರದ ಸ್ಥಳೀಯ ಆಯಿಲ್ ಮಿಲ್ಗೆ ವ್ಯಾಪಾರಕ್ಕೆಂದು ಬಂದ ವ್ಯಕ್ತಿಯೊಬ್ಬ, ವಸ್ತುಗಳನ್ನು ಪಡೆದು ಹಣ ಪಾವತಿಸುವಾಗ ತಾನು “ಗೂಗಲ್ ಪೇ” ಮಾಡಿದ್ದೇನೆ ಎಂದು ನಕಲಿ ಸ್ಕ್ರೀನ್ಶಾಟ್ ತೋರಿಸಿ ಅಥವಾ ತಾಂತ್ರಿಕವಾಗಿ ಮಾಲೀಕರನ್ನು ದಿಕ್ಕು ತಪ್ಪಿಸಿ ಹಣ ನೀಡದೆ ಪರಾರಿಯಾಗಿದ್ದ. ಕ್ಷಣಿಕ ನಂಬಿಕೆಯನ್ನು ಬಂಡವಾಳ ಮಾಡಿಕೊಂಡ ಈ ವಂಚನೆ ಸಣ್ಣ ವ್ಯಾಪಾರಿಗಳಿಗೆ ನಡುಕ ಹುಟ್ಟಿಸಿದೆ. ಜ್ಯೂಸ್ ಸೆಂಟರ್ನಲ್ಲಿ ’ಖಾಕಿ’ ಹಾಗೂ ’ಐಫೋನ್’ ನಾಟಕ. ಇನ್ನೊಂದು ಪ್ರಕರಣದಲ್ಲಿ, ಜ್ಯೂಸ್ ಸೆಂಟರ್ಗೆ ಬಂದ ವಂಚಕ ಅಲ್ಲಿನ ಯುವತಿಯೊಂದಿಗೆ ತಾನೊಬ್ಬ ಪೊಲೀಸ್ ಅಧಿಕಾರಿ ಎಂದು ಬಿಂಬಿಸಿಕೊಂಡಿದ್ದಾನೆ. ತಾವು ಗಾಂಜ ಆರೋಪಿಗಳನ್ನು ಹಿಡಿಯಲು ಬಂದಿದ್ದೇವೆ ನಮ್ಮ ಬಳಿ ದುಬಾರಿ ’ಐಫೋನ್’ ಇದೆ. ನಿಮಗೆ ಬೇಕಾ ಎಂದು ಹೇಳಿದ್ದು ಅಲ್ಲದೆ ಆ ಯುವತಿಯ ಕಡೆಯವರು ತನಗೆ ಪರಿಚಯವಿದೆಯೆಂದು ನಂಬಿಸಿ, ಅಂಗಡಿಯಲ್ಲಿದ್ದ ಮುಗ್ಧ ಯುವತಿಯನ್ನು ನಂಬಿಸಿ ಸಾವಿರಾರು ರೂಪಾಯಿಗಳನ್ನು ದೋಚಿಕೊಂಡು ಪರಾರಿಯಾಗಿದ್ದಾನೆ. ರೂ. 1.31 ಕೋಟಿ ’ಡಿಜಿಟಲ್ ಅರೆಸ್ಟ್’ ಮಹಾಮೋಸ. ಇದೆಲ್ಲದಕ್ಕಿಂತ ಮಿಗಿಲಾಗಿ, ಕುಂಬ್ರದ ಪ್ರಮುಖ ದೊಡ್ಡ ಬಿಲ್ಡಿಂಗ್ ಮಾಲೀಕರೊಬ್ಬರನ್ನು ಟಾರ್ಗೆಟ್ ಮಾಡಿ ನಡೆಸಿದ ವಂಚನೆಯು ಇಡೀ ಜಿಲ್ಲೆಯನ್ನೇ ಬೆಚ್ಚಿಬೀಳಿಸಿದೆ. ನಾವು ಮುಂಬೈ ಪೊಲೀಸ್ ಮತ್ತು ಭಯೋತ್ಪಾದನಾ ನಿಗ್ರಹ ದಳ(ಐಟಿಎಸ್)ದ ಅಧಿಕಾರಿಗಳೆಂದು ವಾಟ್ಸಫ್ ಕಾಲ್ ಮಾಡಿ “ನೀವು ಪಹಲ್ಗಾಮ್ ಉಗ್ರರಿಗೆ ಅಥವಾ ಅಪರಾಧಿಗಳಿಗೆ ಹಣ ಕಳುಹಿಸಿದ್ದೀರಿ, ನಿಮ್ಮ ಮೇಲೆ ಕೇಸ್ ದಾಖಲಾಗಿದೆ” ಎಂದು ನಕಲಿ ಸಿಬಿಐ/ಪೊಲೀಸ್ ಅಧಿಕಾರಿಗಳೆಂದು ಬೆದರಿಸಿದ್ದಾರೆ. ಸತತವಾಗಿ ಸ್ಕೈಪ್ ಅಥವಾ ವೀಡಿಯೊ ಕಾಲ್ ಮೂಲಕ “ಡಿಜಿಟಲ್ ಅರೆಸ್ಟ್” ಹೆಸರಿನಲ್ಲಿ ಭಯದ ವಾತಾವರಣ ಸೃಷ್ಟಿಸಿ, ಹಂತ ಹಂತವಾಗಿ ಬರೊಬ್ಬರಿ 1 ಕೋಟಿ 31 ಲಕ್ಷ ರೂಪಾಯಿಯನ್ನು ದೋಚಿಕೊಂಡಿದ್ದಾರೆ.
ವಂಚಕರು ಬಳಸುವ ಹೊಸ ತಂತ್ರಗಳು ಯಾವುವು?
ಭಯ ಹುಟ್ಟಿಸುವಿಕೆ: ನಿಮ್ಮ ಬ್ಯಾಂಕ್ ಖಾತೆ ಹ್ಯಾಕ್ ಆಗಿದೆ, ನಿಮ್ಮ ಆಧಾರ್ ಕಾರ್ಡ್ ಬಳಸಿ ಅಕ್ರಮ ನಡೆದಿದೆ ಅಥವಾ ನೀವು ವಿದೇಶಿ ಭಯೋತ್ಪಾದಕರಿಗೆ ಹಣ ಕಳುಹಿಸಿದ್ದೀರಿ ಎಂದು ಬೆದರಿಸಿ ಯೋಚಿಸಲು ಸಮಯವೇ ನೀಡದೆ ಆತಂಕಕ್ಕೀಡು ಮಾಡುವುದು.
ಅಧಿಕಾರದ ಪ್ರಭಾವ: ತಾವೇ ದೊಡ್ಡ ಐಪಿಎಸ್ ಅಧಿಕಾರಿಗಳು, ಸಿಬಿಐ ಅಥವಾ ಇಡಿ ಅಧಿಕಾರಿಗಳೆಂದು ನಕಲಿ ಐಡಿ ಕಾರ್ಡ್ಗಳು ಮತ್ತು ವೀಡಿಯೊ ಸೆಟಪ್ಗಳನ್ನು ತೋರಿಸಿ ಬೆದರಿಸುವುದು.
ತಾಂತ್ರಿಕ ವಂಚನೆ: ಅಂಗಡಿಗಳಲ್ಲಿ ಹಣ ಜಮಾ ಆಗದಿದ್ದರೂ, ಜಮಾ ಆಗಿರುವಂತೆ ನಕಲಿ ಮೆಸೇಜ್ ಸೃಷ್ಟಿಸಿ ವ್ಯಾಪಾರಿಗಳನ್ನು ಮೋಸ ಮಾಡುವುದು.
ಸೈಬರ್ ಬಲೆಗೆ ಬೀಳದಿರಲು ಪಾಲಿಸಬೇಕಾದ ಪ್ರಮುಖ ಎಚ್ಚರಿಕೆಗಳು
‘ಡಿಜಿಟಲ್ ಅರೆಸ್ಟ್’ ಸುಳ್ಳು: ಭಾರತೀಯ ಕಾನೂನಿನಲ್ಲಿ ಅಥವಾ ಪೊಲೀಸ್ ಇಲಾಖೆಯಲ್ಲಿ “ಡಿಜಿಟಲ್ ಅರೆಸ್ಟ್” ಎಂಬ ಯಾವುದೇ ವ್ಯವಸ್ಥೆ ಇಲ್ಲ. ವೀಡಿಯೊ ಕಾಲ್ ಮಾಡಿ ಯಾರೂ ನಿಮ್ಮನ್ನು ಬಂಧಿಸುವುದಿಲ್ಲ. ಇಂತಹ ಕರೆಗಳು ಬಂದರೆ ತಕ್ಷಣ ಫೋನ್ ಕಟ್ ಮಾಡಿ.
ಯುಪಿಐ ಸ್ವೀಕೃತಿ ಕಡ್ಡಾಯ: ಅಂಗಡಿಗಳಲ್ಲಿ ಗೂಗಲ್ ಪೇ ಅಥವಾ ಫೋನ್ ಪೇ ಮೂಲಕ ಹಣ ಸ್ವೀಕರಿಸುವಾಗ, ಕೇವಲ ಗ್ರಾಹಕರ ಮೊಬೈಲ್ ಸ್ಕ್ರೀನ್ ನೋಡಬೇಡಿ. ನಿಮ್ಮದೇ ಖಾತೆಯ ಬ್ಯಾಂಕ್ ಅಪ್ಲಿಕೇಶನ್ ಅಥವಾ ಸೌಂಡ್ಬಾಕ್ಸ್ನಲ್ಲಿ ಹಣ ಜಮಾ ಆಗಿರುವ ಕುರಿತು ಅಧಿಕೃತ ಧ್ವನಿ ಅಥವಾ ಸಂದೇಶ ಬಂದಿದೆಯೆಂಬುದನ್ನು ಖಚಿತಪಡಿಸಿಕೊಳ್ಳಿ. ಹಣ ಬರುವಾಗ ಯಾವುದೇ ಪಿನ್ ನಮೂದಿಸುವ ಅಗತ್ಯವಿರುವುದಿಲ್ಲ ಎಂಬುದನ್ನು ಮರೆಯದಿರಿ.
ಅಪರಿಚಿತರ ಅತಿಪರಿಚಯ ಬೇಡ: ಯಾರೋ ಬಂದು ತಾವು ಪೊಲೀಸ್, ರಾಜಕಾರಣಿ ಅಥವಾ ದೊಡ್ಡ ಅಧಿಕಾರಿ ಎಂದು ಹೇಳಿದಾಕ್ಷಣ ಅವರನ್ನು ಕಣ್ಣಮುಚ್ಚಿ ನಂಬಬೇಡಿ. ಅವರ ಅಧಿಕೃತ ಗುರುತಿನ ಚೀಟಿ ಕೇಳಿ ಮತ್ತು ಅನುಮಾನ ಬಂದರೆ ಸ್ಥಳೀಯ ಠಾಣೆಗೆ ಮಾಹಿತಿ ನೀಡಿ.
ವೈಯಕ್ತಿಕ ಮಾಹಿತಿ ಹಂಚಿಕೊಳ್ಳಬೇಡಿ: ಆಧಾರ್ ಕಾರ್ಡ್ ಸಂಖ್ಯೆ, ಒಟಿಪಿ, ಪಾಸ್ವರ್ಡ್ ಅಥವಾ ಬ್ಯಾಂಕ್ ಖಾತೆ ವಿವರಗಳನ್ನು ಯಾವುದೇ ಕಾರಣಕ್ಕೂ ಯಾರೊಂದಿಗೂ ಫೋನ್ ಮೂಲಕ ಹಂಚಿಕೊಳ್ಳಬೇಡಿ.
ಕುಂಬ್ರ ಪೇಟೆಯೆಂದರೆ ಕೇವಲ ವ್ಯಾಪಾರ-ವ್ಯವಹಾರದ ಕೇಂದ್ರವಲ್ಲ, ಅದು ನಂಬಿಕೆ ಮತ್ತು ಸಾಮರಸ್ಯ ಬದುಕಿನ ಪ್ರತೀಕ. ಇಂತಹ ಊರಿಗೆ ಅಂಟಿರುವ ಈ ಡಿಜಿಟಲ್ ಶಾಪವನ್ನು ಮೆಟ್ಟಿನಿಲ್ಲಲು ನಮ್ಮ ಎಚ್ಚರಿಕೆಯೇ ಮದ್ದು. ಕುಂಬ್ರದ ಪ್ರತಿಯೊಬ್ಬ ವ್ಯಾಪಾರಿಗಳು, ಯುವಕರು, ಹಿರಿಯರು ಜಾಗೃತಗಬೇಕಾಗಿದೆ. ಕುಂಬ್ರವನ್ನು ಸೈಬರ್ ವಂಚನೆಮುಕ್ತ ಪೇಟೆಯನ್ನಾಗಿ ರೂಪಿಸೋಣ. ಎಚ್ಚರವಿರಲಿ, ಸುರಕ್ಷಿತವಾಗಿರಿ!
ಮೋಸ ಹೋದರೆ ತಕ್ಷಣ ಏನು ಮಾಡಬೇಕು?
ಒಂದು ವೇಳೆ ನೀವು ಅಥವಾ ನಿಮ್ಮ ಪರಿಚಯದವರು ಸೈಬರ್ ವಂಚನೆಗೆ ಒಳಗಾದರೆ, ಹಿಂಜರಿಯದೆ ಅಥವಾ ಸಮಯ ವ್ಯರ್ಥ ಮಾಡದೆ ಈ ಕ್ರಮ ಕೈಗೊಳ್ಳಿ. ತಕ್ಷಣವೇ ಸೈಬರ್ ಹೆಲ್ಪ್ಲೈನ್ ಸಂಖ್ಯೆ 1930 ಗೆ ಕರೆ ಮಾಡಿ ದೂರು ದಾಖಲಿಸಿ.ಕೂಡಲೇ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ಆನ್ಲೈನ್ ದೂರು ದಾಖಲಿಸಿ.ಹಣ ಕಳೆದುಕೊಂಡ ಮೊದಲ 1 ಗಂಟೆಯೊಳಗೆ ದೂರು ನೀಡಿದರೆ, ವಂಚಕರ ಬ್ಯಾಂಕ್ ಖಾತೆಯಿಂದ ಹಣವನ್ನು ತಡೆಹಿಡಿಯಲು ಮತ್ತು ನಿಮ್ಮ ಹಣ ವಾಪಸ್ ಸಿಗಲು ಹೆಚ್ಚಿನ ಅವಕಾಶವಿರುತ್ತದೆ.
‘ಡಿಜಿಟಲ್ ಅರೆಸ್ಟ್’ ಸುಳ್ಳು…!
ಭಾರತೀಯ ಕಾನೂನಿನಲ್ಲಿ ಅಥವಾ ಪೊಲೀಸ್ ಇಲಾಖೆಯಲ್ಲಿ “ಡಿಜಿಟಲ್ ಅರೆಸ್ಟ್” ಎಂಬ ಯಾವುದೇ ವ್ಯವಸ್ಥೆ ಇಲ್ಲ. ವೀಡಿಯೊ ಕಾಲ್ ಮಾಡಿ ಯಾರೂ ನಿಮ್ಮನ್ನು ಬಂಧಿಸುವುದಿಲ್ಲ. ಇಂತಹ ಕರೆಗಳು ಬಂದರೆ ತಕ್ಷಣ ಫೋನ್ ಕಟ್ ಮಾಡಿ. ಈ ರೀತಿ ಮಾಡಿ ಹಣ ಕೇಳಿದರೆ ಮನೆಯವರಲ್ಲಿ ತಿಳಿಸಿ ಅಥವಾ ನಿಮ್ಮ ಸ್ನೇಹಿತರ ಬಳಿ ಹೇಳಿ ಇಲ್ಲವೇ ತಕ್ಷಣವೇ ಹತ್ತಿರದ ಪೊಲೀಸ್ ಠಾಣೆಗೆ ದೂರು ಕೊಡಿ. ನಾವು ಏನೂ ತಪ್ಪು ಮಾಡದೇ ಇರುವಾಗ ನಮಗೆ ಯಾರ ಭಯವೇಕೆ? ಯಾರೇ ಕಾಲ್ ಮಾಡಿ, ವಿಡಿಯೋ ಕರೆ ಮಾಡಿ ನಿಮ್ಮನ್ನು ಬೆದರಿಸಿದರೂ ನೀವು ಬೆದರುವ ಅಗತ್ಯವೇ ಇಲ್ಲ.
ಡಿಜಿಟಲ್ ಅರೆಸ್ಟ್ನಂತಹ ಬೇರೆ ಬೇರೆ ಹೆಸರಿನಲ್ಲಿ ದಿನದಿಂದ ದಿನಕ್ಕೆ ಸೈಬರ್ ವಂಚನೆಗಳು ಜಾಸ್ತಿಯಾಗುತ್ತಿದ್ದು ಗ್ರಾಹಕರಿಂದ ಹಿಡಿದು ವರ್ತಕರು ಅದರಲ್ಲೂ ವಿದ್ಯಾವಂತರೂ ಕೂಡ ಇಂತಹ ಜಾಲಕ್ಕೆ ಬೀಳುತ್ತಿರುವುದು ದುರಂತ. ಕುಂಬ್ರದಲ್ಲಿ ಕಳೆದ 2 ತಿಂಗಳಲ್ಲಿ ಬೇರೆ ಬೇರೆ ರೀತಿಯ ಸೈಬರ್ ವಂಚನೆಗಳು ಕಂಡು ಬಂದಿವೆ. ಅದರಲ್ಲೂ 1 ಕೋಟಿ 31 ಲಕ್ಷ ರೂ.ವಂಚನೆ ಸಾರ್ವಜನಿಕರನ್ನು ಬೆಚ್ಚಿ ಬೀಳಿಸಿದೆ. ಆದ್ದರಿಂದ ಪೊಲೀಸ್ ಇಲಾಖೆ ಅದರಲ್ಲೂ ಸೈಬರ್ ಪೊಲೀಸ್ ಇಲಾಖೆ ಈ ಬಗ್ಗೆ ಗಂಭೀರವಾಗಿ ಪರಿಗಣಿಸಿ ಆರೋಪಿಗಳನ್ನು ಬಂದಿಸುವ ಮೂಲಕ ಸೈಬರ್ ಕಳ್ಳರ ಹೆಡೆಮುರಿ ಕಟ್ಟಬೇಕಾಗಿದೆ. ಈ ಬಗ್ಗೆ ಕುಂಬ್ರ ವರ್ತಕರ ಸಂಘವು ಕೂಡ ಆಗ್ರಹ ವ್ಯಕ್ತಪಡಿಸುತ್ತದೆ.
ಪಿ.ಕೆ ಮಹಮ್ಮದ್ ಕೂಡುರಸ್ತೆ, ಅಧ್ಯಕ್ಷರು ವರ್ತಕರ ಸಂಘ ಕುಂಬ್ರ










