ಬೆಟ್ಟಂಪಾಡಿ: 14 ನೇ ವರ್ಷದ ಸಾಮೂಹಿಕ ದುರ್ಗಾಪೂಜೆ

0

ದುರ್ಗಾ ಪ್ರಜ್ಞೆ ಜಾಗೃತಗೊಳ್ಳುವುದೇ ನಮ್ಮ ಶಕ್ತಿ – ವಾದಿರಾಜ ಕಲ್ಲೂರಾಯ

ಬೆಟ್ಟಂಪಾಡಿ: ವಿಶ್ವ ಹಿಂದೂ ಪರಿಷದ್, ಬಜರಂಗದಳ, ಮಾತೃಶಕ್ತಿ, ದುರ್ಗಾವಾಹಿನಿ – ಪೂಜಾ ಸಮಿತಿ ಶ್ರೀ ಕ್ಷೇತ್ರ ಬೆಟ್ಟಂಪಾಡಿ ಇದರ ವತಿಯಿಂದ 14 ನೇ ವರ್ಷದ ಸಾಮೂಹಿಕ ದುರ್ಗಾಪೂಜೆಯು ಕಶೆಕೋಡಿ ಸೂರ್ಯನಾರಾಯಣ ಭಟ್ ರವರ ನೇತೃತ್ವದಲ್ಲಿ ಅ. 13 ರಂದು ಶ್ರೀ ಕ್ಷೇತ್ರ ಬೆಟ್ಟಂಪಾಡಿ ಯಲ್ಲಿ ನೆರವೇರಿತು.ಸಂಜೆ ಭಜನಾ ಕಾರ್ಯಕ್ರಮ, ದುರ್ಗಾಪೂಜೆ ಆರಂಭಗೊಂಡು ರಾತ್ರಿ  ಮಹಾಮಂಗಳಾರತಿ, ಪ್ರಸಾದ ವಿತರಣೆ, ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು. 

ಧಾರ್ಮಿಕ ಸಭೆ ಧಾರ್ಮಿಕ ಸಭೆಯ ಅಧ್ಯಕ್ಷತೆಯನ್ನು ಸಾಮೂಹಿಕ ದುರ್ಗಾಪೂಜಾ ಸಮಿತಿಯ ಅಧ್ಯಕ್ಷ ಕಿರಣ್‌ರಾಜ್ ಕಕ್ಕೂರು ವಹಿಸಿ ಮಾತನಾಡಿ ಪೂಜಾ ಕಾರ್ಯಕ್ರಮದ ಅಧ್ಯಕ್ಷತೆ ನೀಡಿ ದೇವರ ಸೇವೆ ಮಾಡುವ ಅವಕಾಶ ಕಲ್ಪಿಸಿದ ವಿಎಚ್‌ಪಿ, ಬಜರಂಗದಳದ ಪ್ರಮುಖರಿಗೆ ಕೃತಜ್ಞತೆ ಸಲ್ಲಿಸಿದರು. 

ಧಾರ್ಮಿಕ ಭಾಷಣ ಮಾಡಿದ ಮೂಡಬಿದ್ರೆ ಎಕ್ಸಲೆಂಟ್ ಪದವಿಪೂರ್ವ ಕಾಲೇಜಿನ ಭಾಷಾ ವಿಭಾಗದ ಮುಖ್ಯಸ್ಥ ವಾದಿರಾಜ ಕಲ್ಲೂರಾಯ ರವರು ಮಾತನಾಡಿ ‘ಮಕ್ಕಳಿಗೆ ನಾವು ಸಂಸ್ಕಾರ, ಸಂಸ್ಕೃತಿಯ ಪಾಠವನ್ನು ಹೇಳಿಕೊಟ್ಟರೆ ಬರುವುದಿಲ್ಲ. ನಾವು ಅನುಸರಿಸಿದಾಗ ಮಾತ್ರ ನಮ್ಮನ್ನು ಮುಂದಿನ ಜನಾಂಗ ಅನುಸರಿಸುತ್ತಾರೆ.  ಅಂತರಂಗದ ಅಹಂಕಾರಗಳೇ ನಮ್ಮೊಳಗಿನ ಮಹಿಷ ರಾಕ್ಷಸ. ಆ ಮನೋವೃತ್ತಿ ಬದಲಾಗಬೇಕಾದರೆ ನಮ್ಮೊಳಗೆ ದುರ್ಗಾ ಪ್ರಜ್ಞೆ ಜಾಗೃತವಾಗಬೇಕು. ನಮ್ಮ ಶಕ್ತಿಯನ್ನು ಹೇಗೆ ಉಪಯೋಗಿಸಿಕೊಳ್ಳಬೇಕೆಂಬ ಎನ್ನುವುದನ್ನು ಯೋಚಿಸುವಂತಹ ಧರ್ಮ ನಮ್ಮೊಳಗೆ ಇರಬೇಕು. ವಿವೇಕವಿಲ್ಲದ ಧೈರ್ಯ ಉನ್ಮಾದವಾಗುತ್ತದೆ. ಕರುಣೆಯೇ ಇಲ್ಲದ ಶಕ್ತಿ ಕ್ರೌರ್ಯವಾಗುತ್ತದೆ. ನಿಗ್ರಹವಿಲ್ಲದ ಜ್ಞಾನ ಅಹಂಕಾರವಾಗುತ್ತದೆ. ಧರ್ಮವಿಲ್ಲದ ಅಧಿಕಾರ ದೌರ್ಜನ್ಯವಾಗುತ್ತದೆ’ ಎಂದರು.

ಮಾಜಿ ಯೋಧನಿಗೆ ಸನ್ಮಾನ ಬಿಎಸ್‌ಎಫ್ ಯೋಧರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ನವೀನ್ ರೈ ಬಿಜಲ ರವರನ್ನು ಸನ್ಮಾನಿಸಿ ಗೌರವಿಸಲಾಯಿತು. ಸನ್ಮಾನ ಸ್ವೀಕರಿಸಿದ ನವೀನ್ ರೈಯವರು ಕೃತಜ್ಞತೆ ಸಲ್ಲಿಸಿ, ನನ್ನ ಬಾಲ್ಯ ಜೀವನ ಕಳೆದಿರುವ ಈ ಬೆಟ್ಟಂಪಾಡಿ ಪರಿಸರದಲ್ಲಿಯೇ ನನಗೆ ಸನ್ಮಾನ ನಡೆದಿರುವುದು ನನಗೆ ಖುಷಿ ನೀಡಿದೆ. ಯುವಕರಿಗೆ ಒಂದಷ್ಟು ದೇಶ ಸೇವೆ ಮಾಡುವಲ್ಲಿ ಇದು ಪ್ರೇರಣೆಯಾಗಲಿ’ ಎಂದರು. 

ಮುಖ್ಯ ಅತಿಥಿಗಳಾಗಿದ್ದ ಪುತ್ತೂರು ಗ್ರಾಮಾಂತರ ಪ್ರಖಂಡ ವಿಎಚ್‌ಪಿ ಅಧ್ಯಕ್ಷ ಜಯಂತ ಶೆಟ್ಟಿ ಕಂಬಳತ್ತಡ್ಡ ರವರು ಮಾತನಾಡಿ ‘ಸಂಘಟನೆಯೇ ನಮ್ಮ ಶಕ್ತಿ. ಹಳ್ಳಿ ಹಳ್ಳಿಗಳಲ್ಲಿ, ಗ್ರಾಮ ಗ್ರಾಮಗಳಲ್ಲಿ ಪ್ರತಿಯೊಂದು ಮನೆಯವರೂ ಸಂಘಟನೆಯಲ್ಲಿ ತೊಡಗಿಸಿಕೊಂಡಾಗ ನಮಗೆ ಅದಕ್ಕಿಂತ ದೊಡ್ಡ ಶಕ್ತಿ ಇನ್ನೊಂದಿಲ್ಲ’ ಎಂದರು.

ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ದೈವಸ್ಥಾನದ ನಿಕಟಪೂರ್ವ ಅಧ್ಯಕ್ಷ ಮಾಧವ ಗೌಡ ಕಾಂತಿಲ ರವರು ಮಾತನಾಡಿ ‘ಇಚ್ಛಾ ಮನಸ್ಸಿನಿಂದ ಮಾಡುವ ದೇವರ ಕೆಲಸ ಫಲ ನೀಡಿಯೇ ನೀಡುತ್ತದೆ’ ಎಂದು ಹೇಳಿ ತಮ್ಮ‌ ಜೀವನದಲ್ಲಿ ನಡೆದಿರುವ ಘಟನೆಯನ್ನು ಹೇಳಿ ದೇವರ ದಯೆ ಹೇಗಿರುತ್ತದೆ ಎಂಬುದನ್ನು ಸಭೆಯ ಮುಂದಿಟ್ಟರು.

 ಬೆಟ್ಟಂಪಾಡಿ ಮಾತೃಮಂಡಳಿ ಮಾಜಿ ಅಧ್ಯಕ್ಷೆ ಪ್ರಭಾವತಿ ಆರ್.ಸಿ. ರೈ ಮದಕ ರವರು ಮಾತನಾಡಿ ‘ಸಂಸ್ಕೃತಿ, ಆಚಾರ ವಿಚಾರಗಳು ನಮ್ಮ ಮನೆಯಿಂದಲೇ ಆರಂಭವಾಗಬೇಕು. ದುರ್ಗಾಮಾತೆಯು ನಮಗೆಲ್ಲಾ  ಶಕ್ತಿ, ಸಮೃದ್ಧಿಯನ್ನು ಕರುಣಿಸಲಿ’ ಎಂದರು.

ಇರ್ದೆ ಬೆಟ್ಟಂಪಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕ ದಿವಾಕರ ಬಲ್ಲಾಳ್ ಬೆಟ್ಟಂಪಾಡಿ ಬೀಡು, ಕಮಲ್ ಕನ್‌ಸ್ಟ್ರಕ್ಷನ್ ಮ್ಹಾಲಕ ಕಮಲ್ ಕುಲಾಲ್,  ಪುತ್ತೂರಿನ ಹೆವಿ‌ ವೆಹಿಕಲ್ ಮೆಕ್ಯಾನಿಕ್ ರೂಪೇಶ್ ಪೂಜಾರಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.ವೇದಿಕೆಯಲ್ಲಿ ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ವಿನೋದ್ ಕುಮಾರ್ ಬಲ್ಲಾಳ್, ಮೊಕ್ತೇಸರ ವಿನೋದ್ ಕುಮಾರ್ ರೈ ಗುತ್ತು, ಪೂಜಾ ಸಮಿತಿ ಸಂಚಾಲಕ ಕರುಣಾಕರ ಶೆಟ್ಟಿ ಕೊಮ್ಮಂಡ, ಪ್ರಧಾನ ಕಾರ್ಯದರ್ಶಿ ವಿನ್ಯಾಸ್ ಚೂರಿಪದವು, ಕೋಶಾಧಿಕಾರಿ ಸುಭಾಷ್ ಉಡ್ಡಂಗಳ ಉಪಸ್ಥಿತರಿದ್ದರು.

ವೃದ್ಧಿ ಸಿ., ಪ್ರಾರ್ಥಿಸಿದರು. ಸಮಿತಿ ಉಪಾಧ್ಯಕ್ಷ ಶೇಖರ ಗೌಡ ಮಿತ್ತಡ್ಕ ಸ್ವಾಗತಿಸಿ, ಪ್ರಸ್ತಾವನೆಗೈದರು. ಸನತ್ ಕುಮಾರ್ ರೈ ಕುಂಜಾಡಿ ಸನ್ಮಾನಿತರ ಪತ್ರ ವಾಚಿಸಿದರು. ಪ್ರಿಯದರ್ಶಿನಿ ವಿದ್ಯಾಸಂಸ್ಥೆಯ ಶಿಕ್ಷಕಿ ಶ್ರೀಮತಿ ಕೀರ್ತಿ ಪ್ರಾರ್ಥಿಸಿದರು. ಪೂಜಾ ಸಮಿತಿ ಪದಾಧಿಕಾರಿಗಳು, ವಿಎಚ್‌ಪಿ, ಬಜರಂಗದಳ ಕಾರ್ಯಕರ್ತರು ವಿವಿಧ ರೀತಿಯಲ್ಲಿ ಸಹಕರಿಸಿದರು.

ಸಭಾ ಕಾರ್ಯಕ್ರಮದ ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.

LEAVE A REPLY

Please enter your comment!
Please enter your name here