







ರಾಮಕುಂಜ: ಬಾವಿಯಿಂದ ನೀರು ಸೇದುವ ವೇಳೆ ಕಾಲು ಜಾರಿ ಆಕಸ್ಮಿಕವಾಗಿ ಬಾವಿಯೊಳಗೆ ಬಿದ್ದು ವ್ಯಕ್ತಿಯೋರ್ವರು ಮೃತಪಟ್ಟ ದಾರುಣ ಘಟನೆ ಕಡಬ ತಾಲೂಕು ಕೊೖಲ ಗ್ರಾಮದ ಆನೆಗುಂಡಿ ಎಂಬಲ್ಲಿ ಅ.17ರಂದು ಅಪರಾಹ್ನ ನಡೆದಿದೆ.


ಕೊೖಲ ಗ್ರಾಮದ ಆನೆಗುಂಡಿ ನಿವಾಸಿ ಡೊಂಬಯ್ಯ ಮುಗೇರ (50ವ.) ಮೃತಪಟ್ಟ ದುರ್ದೈವಿಯಾಗಿದ್ದಾರೆ. ಇವರು ಬೆಳಗ್ಗೆ 10.30ರ ವೇಳೆಗೆ ಮನೆಯ ಪಕ್ಕದಲ್ಲಿರುವ ಬಾವಿಯಿಂದ ನೀರು ಸೇದುವ ಸಮಯ ಆಕಸ್ಮಿಕವಾಗಿ ಕಾಲು ಜಾರಿ ಬಾವಿಯ ಒಳಗೆ ಬಿದ್ದಿದ್ದರು. ಮನೆಯವರು ಕೂಡಲೇ ಅಗ್ನಿ ಶಾಮಕ ದಳದವರಿಗೆ ಕರೆ ಮಾಡಿದ್ದು, ಅಗ್ನಿಶಾಮಕ ದಳದವರು ಹಾಗೂ ಊರಿನವರ ಸಹಕಾರದಿಂದ 11.45ರ ವೇಳೆಗೆ ಡೊಂಬಯ್ಯರನ್ನು ಬಾವಿಯಿಂದ ಮೇಲಕ್ಕೆ ಎತ್ತಲಾದರೂ ಆ ವೇಳೆಗೆ ಅವರು ಮೃತಪಟ್ಟಿದ್ದರು ಎಂದು ವರದಿಯಾಗಿದೆ. ಘಟನೆ ಕುರಿತಂತೆ ಮೃತರ ಪುತ್ರ ಸುಜಿತ್ಕುಮಾರ್ ನೀಡಿದ ದೂರಿನಂತೆ ಕಡಬ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.













