ಕಣಿಯೂರು ಕ್ಷೇತ್ರದಲ್ಲಿ ನವರಾತ್ರಿ ಮಹೋತ್ಸವ

0

ಮಕ್ಕಳಿಗೆ ಸಂಪ್ರದಾಯ, ಆಚರಣೆ, ಸಂಸ್ಕಾರ ಕಲಿಸುವ ಅಗತ್ಯವಿದೆ – ಕಣಿಯೂರು ಶ್ರೀ

ಯುವ ಜನಾಂಗದ ಮನೋಸ್ಥೈರ್ಯ ಕುಸಿಯುತ್ತಿದೆ: ಕೈಯ್ಯೂರು ನಾರಾಯಣ ಭಟ್

ವಿಟ್ಲ : ಮಕ್ಕಳಿಗೆ ಸಂಪ್ರದಾಯ, ಆಚರಣೆ, ಸಂಸ್ಕಾರ ಕಲಿಸುವ ಅಗತ್ಯವಿದೆ. ಮಕ್ಕಳು ತಪ್ಪು ಮಾಡಿದಾಗ ಅವರನ್ನು ತಿದ್ದುವ ಕೆಲಸವಾಗಬೇಕು. ಜ್ಞಾನ, ಅರಿವು, ನಂಬಿಕೆ, ವಿಶ್ವಾಸ ಇದ್ದಲ್ಲಿ ದೇವರು ಇರುತ್ತಾರೆ ಎಂದು ಕಣಿಯೂರು‌ ಶ್ರೀ‌ಚಾಮುಂಡೇಶ್ವರೀ ದೇವಿ ಕ್ಷೇತ್ರದ ಶ್ರೀ ಮಹಾಬಲೇಶ್ವರ ಸರಸ್ವತಿ ಸ್ವಾಮೀಜಿ ಹೇಳಿದರು.

ಅವರು ಕನ್ಯಾನ ಗ್ರಾಮದ ಕಣಿಯೂರು ಶ್ರೀ ಚಾಮುಂಡೇಶ್ವರಿ ದೇವೀ ಕ್ಷೇತ್ರದಲ್ಲಿ ನವರಾತ್ರಿ ಮಹೋತ್ಸವದ ಅಂಗವಾಗಿ ನಡೆದ ಧರ್ಮಸಭೆಯಲ್ಲಿ ಆಶೀರ್ವಚನ ನೀಡಿದರು.

ಮಂಚಿ ಗೋಪಾಲಕೃಷ್ಣ ದೇವಸ್ಥಾನದ ಅಧ್ಯಕ್ಷ ಕೈಯ್ಯೂರು ನಾರಾಯಣ ಭಟ್ ಅಧ್ಯಕ್ಷತೆ ವಹಿಸಿ, ಮಾತನಾಡಿ, ಶ್ರೀ ಚಾಮುಂಡೇಶ್ವರಿ ದೇವೀ ಕ್ಷೇತ್ರದಲ್ಲಿ ಅತ್ಯುತ್ತಮ ಸೇವೆ ನಡೆಯುತ್ತದೆ.‌ ಜಗತ್ತು ಎಐ ತಾಂತ್ರಿಕತೆಯ ವರೆಗೆ ಮುಂದುವರಿದರೂ, ವ್ಯಕ್ತಿತ್ವ ಅಧಃಪತನಗೊಳ್ಳುತ್ತಿರುವುದು ಖೇದಕರ. ಯುವ ಜನಾಂಗದ ಮನೋಸ್ಥೈರ್ಯ ಕುಸಿಯುತ್ತಿದೆ. ಅದರಿಂದ ಹೊರಬಂದು ದೃಢ ಚಿತ್ತದಿಂದ ಮುನ್ನಡೆಯಬೇಕು ಎಂದರು.


ಮುಖ್ಯ ಅತಿಥಿಯಾಗಿ ಕಾಸರಗೋಡು ಜಿಲ್ಲಾ ಪಂಚಾಯತ್ ಸದಸ್ಯ ಸೋಮಶೇಖರ ಜೆ.ಎಸ್., ಉದ್ಯಮಿ ಸೂರ್ಯನಾಥ ಆಳ್ವ ಮಿತ್ತಳಿಕೆ, ಪಿಂಗಾರ ತೋಟಗಾರಿಕಾ ಸಂಸ್ಥೆಯ ನಿರ್ದೇಶಕಿ ಸಾಯಿಗೀತಾ ವಿ.ಹೆಗ್ಡೆ, ವಿಟ್ಲ ಬಿಲ್ಲವ ಸಂಘದ ಮಹಿಳಾ ಘಟಕದ ಅಧ್ಯಕ್ಷೆ ವನಿತಾ ಚಂದ್ರಹಾಸ ಸುವರ್ಣ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಹಿನ್ನೆಲೆ ಗಾಯಕ ಟಿ.ಕೆ.ಭಟ್ ಅವರನ್ನು ಸಮ್ಮಾನಿಸಲಾಯಿತು.


ಶ್ರೀ ಚಾಮುಂಡೇಶ್ವರಿ ದೇವಿ ಟ್ರಸ್ಟ್ ಅಧ್ಯಕ್ಷ ಪದ್ಮನಾಭ ಪೂಜಾರಿ ಅಳಿಕೆ ಸ್ವಾಗತಿಸಿದರು.ಚಂದ್ರಶೇಖರ ಕಣಿಯೂರು ವಂದಿಸಿದರು. ರೇಣುಕಾ ಕಣಿಯೂರು ಕಾರ್ಯಕ್ರಮ ನಿರೂಪಿಸಿದರು.
ವೇ.ಮೂ.ನಡಿಬೈಲು ಶಂಕರನಾರಾಯಣ ಭಟ್ ನೇತೃತ್ವದಲ್ಲಿ ಚಂಡಿಕಾ ಹೋಮ, ಪೂರ್ಣಾಹುತಿ, ಮಹಾಪೂಜೆ, ಪ್ರಸಾದ ವಿತರಣೆ ನಡೆಯಿತು.

LEAVE A REPLY

Please enter your comment!
Please enter your name here