







ಹಿಂದೂ ಸಮಾಜದ ಒಳಿತು, ರಾಷ್ಟ್ರೋನ್ನತಿಗಾಗಿ ಯಾಗ: ನಳಿನ್ ಕುಮಾರ್ ಕಟೀಲ್
ಹಿಂದೂ ಸಮಾಜದ ಏಕತೆಗೆ ವೇದಿಕೆಯಾಗಲಿ: ಡಾ. ಸುರೇಶ್ ಪುತ್ತೂರಾಯ
ಸಮಾಜವನ್ನು ಒಗ್ಗೂಡಿಸುವ ಕಾರ್ಯಕ್ರಮ: ಮಹೇಶ್ ಕಜೆ
ಮನೆಯ ಕಾರ್ಯಕ್ರಮವೆಂದು ಭಾಗವಹಿಸಿ: ಮುರಳೀಕೃಷ್ಣ ಹಸಂತಡ್ಕ


ಪುತ್ತೂರು: ಲೋಕಕಲ್ಯಾಣ ಹಾಗೂ ಹಿಂದೂ ಸಮಾಜದ ಏಕತೆಯ ಸಂಕಲ್ಪದೊಂದಿಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಪುತ್ತೂರು ತಾಲೂಕಿನ ನೆಲಪ್ಪಾಲು ವೀರಾಂಜನೇಯ ಕ್ಷೇತ್ರದಲ್ಲಿ ನ.26ರಿಂದ 29ರವರೆಗೆ ನಡೆಯಲಿರುವ ಪಂಚಮುಖಿ ಆಂಜನೇಯ ಹವನದ ಆಮಂತ್ರಣ ಪತ್ರಿಕೆಯನ್ನು ಅ.19ರಂದು ಬಿಡುಗಡೆಗೊಳಿಸಲಾಯಿತು.



ಬೆಳಿಗ್ಗೆ ವೀರಾಂಜನೇಯನ ಸನ್ನಿಧಿಯಲ್ಲಿ ಆಮಂತ್ರಣ ಪತ್ರಿಕೆಯನ್ನು ಸಮರ್ಪಿಸಿ ಅರ್ಚಕ ಶಿವಪ್ರಸಾದ್ ಅವರು ಕಾರ್ಯಕ್ರಮದ ಯಶಸ್ಸಿಗಾಗಿ ಪ್ರಾರ್ಥಿಸಿದರು. ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಗಣ್ಯರು ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿದರು.
ಹಿಂದೂ ಸಮಾಜದ ಒಳಿತು, ರಾಷ್ಟ್ರೋನ್ನತಿಗಾಗಿ ಯಾಗ:
ಪಂಚಮುಖಿ ಆಂಜನೇಯ ಯಾಗ ಸಮಿತಿ ಅಧ್ಯಕ್ಷ, ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಮಾತನಾಡಿ, ಯಾಗ ಸಮಿತಿ ರಚನೆಯಾಗಿದ್ದು, ಪದಾಧಿಕಾರಿಗಳಿಗೆ ಜವಾಬ್ದಾರಿಗಳನ್ನು ಹಂಚಲಾಗಿದೆ. ಎಲ್ಲರೂ ತಮ್ಮ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸಿದರೆ ಯಾಗ ಯಶಸ್ವಿಯಾಗಲಿದೆ ಎಂಬ ವಿಶ್ವಾಸವಿದೆ. ಈ ಹಿಂದೆ ತಾವು ತೊಡಗಿಸಿಕೊಂಡ ಬ್ರಹ್ಮಕಲಶೋತ್ಸವಗಳು ಹಾಗೂ ಯಾಗಗಳು ಯಶಸ್ವಿಯಾಗಿವೆ. ವೀರಾಂಜನೇಯ ಕ್ಷೇತ್ರಕ್ಕೆ ಪ್ರವೇಶಿಸುವ ಸಂದರ್ಭದಲ್ಲಿ ಆಂಜನೇಯನಿಂದ ಹೂವು ಜಾರಿದ ಮೂಲಕ ಆಶೀರ್ವಾದ ದೊರೆತ ಅನುಭವವಾಗಿದೆ ಎಂದರು. ಈ ಯಾಗ ಯಾವುದೇ ವ್ಯಕ್ತಿಯ ಹಿತಕ್ಕಾಗಿ ಅಥವಾ ಯಾರನ್ನಾದರೂ ಸಂಸದ, ಶಾಸಕರನ್ನಾಗಿ ಮಾಡುವ ಉದ್ದೇಶದಿಂದ ನಡೆಯುತ್ತಿಲ್ಲ. ಇದು ಶಕ್ತಿ ಪ್ರದರ್ಶನವೂ ಅಲ್ಲ. ಹಿಂದೂ ಸಮಾಜದ ಒಳಿತು ಹಾಗೂ ರಾಷ್ಟ್ರೋನ್ನತಿಯ ಸಂಕಲ್ಪದೊಂದಿಗೆ ನಡೆಯುವ ಧಾರ್ಮಿಕ ಕಾರ್ಯವಾಗಿದೆ. ಎಲ್ಲರೂ ಒಗ್ಗಟ್ಟಿನಿಂದ ಸಹಕರಿಸಿ ಯಾಗವನ್ನು ಯಶಸ್ವಿಗೊಳಿಸಬೇಕು ಎಂದು ಕರೆ ನೀಡಿದರು.
ಹಿಂದೂ ಸಮಾಜದ ಏಕತೆಗೆ ವೇದಿಕೆಯಾಗಲಿ:
ಯಾಗ ಸಮಿತಿ ಉಪಾಧ್ಯಕ್ಷ ಡಾ. ಸುರೇಶ್ ಪುತ್ತೂರಾಯ ಅವರು ಮಾತನಾಡಿ, ಪ್ರಸ್ತುತ ಹಿಂದೂ ಸಮಾಜದ ಏಕತೆ ಅತ್ಯಂತ ಅಗತ್ಯವಾಗಿದೆ. ಎಲ್ಲರೂ ಮುಕ್ತ ಮನಸ್ಸಿನಿಂದ ಒಂದಾಗಿ ಸಮಾಜದ ಒಗ್ಗಟ್ಟನ್ನು ಪ್ರದರ್ಶಿಸಬೇಕಿದೆ. ವೀರಾಂಜನೇಯ ಕ್ಷೇತ್ರದಲ್ಲಿ ನಡೆಯಲಿರುವ ಹವನ ಯಶಸ್ವಿಯಾಗಿ ನೆರವೇರಲಿ. ಅದರ ಮೂಲಕ ಪುತ್ತೂರಿನಲ್ಲಿ ಹಿಂದೂ ಸಮಾಜದ ಏಕತೆ ಮತ್ತಷ್ಟು ಬಲಗೊಳ್ಳಲಿ. ಕಾರ್ಯಕ್ರಮದ ಸಂಘಟನೆಯಲ್ಲಿ ತೊಡಗಿಸಿಕೊಂಡ ಎಲ್ಲರಿಗೂ ದೇವರ ಆಶೀರ್ವಾದ ಇರಲಿ. ಯಾಗದ ಯಶಸ್ಸಿಗಾಗಿ ಪ್ರತಿಯೊಬ್ಬರೂ ಶಕ್ತಿ ಮೀರಿ ಶ್ರಮಿಸಬೇಕು ಎಂದರು.
ಸಮಾಜವನ್ನು ಒಗ್ಗೂಡಿಸುವ ಕಾರ್ಯಕ್ರಮ:
ಸ್ವಾಗತ ಸಮಿತಿ ಸಹಸಂಚಾಲಕ, ಖ್ಯಾತ ವಕೀಲ ಮಹೇಶ್ ಕಜೆ ಅವರು ಮಾತನಾಡಿ, ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮಕ್ಕೆ ಸೇರಿರುವ ಜನಸಮೂಹವನ್ನು ಗಮನಿಸಿದಾಗಲೇ ಇಲ್ಲಿ ಸಣ್ಣ ಮಟ್ಟಿನ ಹಿಂದೂ ಸಂಗಮ ನಡೆದಿರುವುದು ಗೋಚರಿಸುತ್ತದೆ. ಎಲ್ಲರನ್ನು ಒಗ್ಗೂಡಿಸುವ ಶಕ್ತಿ ಆಂಜನೇಯನಿಗಿದೆ. ಪಂಚಮುಖಿ ಹವನಕ್ಕೆ ಪಂಚಭೂತಗಳೂ ಪೂರಕವಾಗಿ ಸಹಕರಿಸಿ ಕಾರ್ಯಕ್ರಮ ಯಶಸ್ವಿಯಾಗಲಿದೆ ಎಂಬ ವಿಶ್ವಾಸವಿದೆ ಎಂದರು. ದೊಡ್ಡ ಶಕ್ತಿಗಳು ಸಣ್ಣ ಕಾರ್ಯಗಳಿಂದಲೇ ರೂಪುಗೊಳ್ಳುತ್ತವೆ. ಅದಕ್ಕೆ ವೀರಾಂಜನೇಯ ಕ್ಷೇತ್ರದ ಬೆಳವಣಿಗೆಯೇ ಸಾಕ್ಷಿ. ಈ ಹವನದ ಉದ್ದೇಶದ ಬಗ್ಗೆ ಯಾರಾದರೂ ಪ್ರಶ್ನಿಸಿದರೆ, ಇದು ಸಮಾಜವನ್ನು ಒಗ್ಗೂಡಿಸುವ ಕಾರ್ಯಕ್ರಮ ಎಂದು ಹೆಮ್ಮೆಯಿಂದ ಹೇಳಬಹುದು ಎಂದು ತಿಳಿಸಿದರು.

ಮನೆಯ ಕಾರ್ಯಕ್ರಮವೆಂದು ಭಾಗವಹಿಸಿ:
ಹವನ ಸಮಿತಿ ಪ್ರಧಾನ ಕಾರ್ಯದರ್ಶಿ ಮುರಳೀಕೃಷ್ಣ ಹಸಂತಡ್ಕ ಪ್ರಾಸ್ತಾವಿಕವಾಗಿ ಮಾತನಾಡಿ, ಹಿಂದೂ ಸಮಾಜದ ಏಕತೆಯ ಆಶಯದೊಂದಿಗೆ ಪಂಚಮುಖಿ ಆಂಜನೇಯ ಹವನ ಆಯೋಜಿಸಲಾಗಿದೆ. ನ.26ರಂದು ತಾಲೂಕಿನ ವಿವಿಧ ಧಾರ್ಮಿಕ ಕೇಂದ್ರಗಳಿಂದ ಪವಿತ್ರ ತೀರ್ಥ ಸಂಗ್ರಹಿಸಿ, ಮೆರವಣಿಗೆಯ ಮೂಲಕ ತಂದು ತೀರ್ಥಕಲಶದ ರೂಪದಲ್ಲಿ ಸಮರ್ಪಿಸಲಾಗುವುದು ಎಂದರು. ನ.27ರಂದು ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿ ಹಾಗೂ ಬ್ರಹ್ಮಶ್ರೀ ಲಕ್ಷ್ಮೀಶ ತಂತ್ರಿ ಕೆಮ್ಮಿಂಜೆ ಅವರ ನೇತೃತ್ವದಲ್ಲಿ ಪಂಚಮುಖಿ ಆಂಜನೇಯ ಹವನದ ಅಂಗವಾಗಿ ವಾಸ್ತು ವೈದಿಕ ಕಾರ್ಯಕ್ರಮಗಳು ಆರಂಭಗೊಳ್ಳಲಿವೆ. ನ.28ರಂದು ವೈದಿಕರಿಗೆ ಪೂರ್ಣಕುಂಭ ಸ್ವಾಗತ, ಧ್ವಜಾರೋಹಣ ಹಾಗೂ ಅಷ್ಟಾವಧಾನ ಸೇವೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಇದೇ ಸಂದರ್ಭದಲ್ಲಿ ಡಾ. ಪಾವಗಡ ಪ್ರಕಾಶ್ ರಾವ್ ಅವರಿಂದ ರಾಮಾಯಣದ ಸುಂದರಕಾಂಡ ಪಾರಾಯಣ ನಡೆಯಲಿದೆ. ಯುವಶಕ್ತಿಯನ್ನು ಧಾರ್ಮಿಕ ಚಟುವಟಿಕೆಗಳೊಂದಿಗೆ ಬೆಸೆಯುವ ಉದ್ದೇಶದಿಂದ ನ.29ರಂದು ಭಜನಾ ಸಂಕೀರ್ತನೆ ಆಯೋಜಿಸಲಾಗಿದೆ. ನ.28ರ ಸಂಜೆ ಸಂತರ ಮಾರ್ಗದರ್ಶನದಲ್ಲಿ ಧರ್ಮಸಭೆ ಹಾಗೂ ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಯಾವುದೇ ಸ್ವಾರ್ಥದ ಉದ್ದೇಶವಿಲ್ಲದೆ ಹಿಂದೂ ಸಮಾಜದ ಏಕತೆಯನ್ನು ಬಲಪಡಿಸುವ ಆಶಯದಿಂದ ಈ ಯಾಗ ನಡೆಯುತ್ತಿದ್ದು, ಎಲ್ಲರೂ ತಮ್ಮ ಮನೆಯ ಕಾರ್ಯಕ್ರಮವೆಂಬಂತೆ ಭಾಗವಹಿಸಿ ಸಹಕರಿಸಬೇಕು ಎಂದು ಮನವಿ ಮಾಡಿದರು.
ಸಭೆಯಲ್ಲಿ ಯಾಗ ಸಮಿತಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಸಮಿತಿಯ ಪದಾಧಿಕಾರಿಗಳಿಗೆ ವಿವಿಧ ಜವಾಬ್ದಾರಿಗಳ ಪತ್ರಗಳನ್ನು ವಿತರಿಸಿದರು. ಪಂಚಮುಖಿ ಆಂಜನೇಯ ಹವನ ಸಮಿತಿ ಗೌರವಾಧ್ಯಕ್ಷ, ವಿಶ್ವ ಹಿಂದೂ ಪರಿಷತ್ ದಕ್ಷಿಣ ಪ್ರಾಂತ ಉಪಾಧ್ಯಕ್ಷ ಯು. ಪೂವಪ್ಪ, ಸಮಿತಿ ಸಂಚಾಲಕ ಕೆ. ಜೀವಂಧರ್ ಜೈನ್, ಪ್ರಧಾನ ಕಾರ್ಯದರ್ಶಿ ಪುನೀತ್ ಅತ್ತಾವರ, ಯಾಗ ಸಮಿತಿ ಉಪಾಧ್ಯಕ್ಷ ಹಾಗೂ ವಿಶ್ವ ಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಡಾ. ಕೃಷ್ಣಪ್ರಸನ್ನ, ಸಂಜೀವ ನಾಯಕ್ ಕಲ್ಲೇಗ, ಸಹಕೋಶಾಧಿಕಾರಿ ಮಾಧವ ಪೂಜಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ರೇಖಾ ಮತ್ತು ಸುಕೀರ್ತಿ ಬಳಗದವರು ಪ್ರಾರ್ಥಿಸಿದರು. ವಿಶ್ವ ಹಿಂದೂ ಪರಿಷತ್ ಪುತ್ತೂರು ನಗರ ಪ್ರಖಂಡ ಅಧ್ಯಕ್ಷ ದಾಮೋದರ್ ಪಾಟಳಿ ಸ್ವಾಗತಿಸಿದರು. ಕಲಶ ತೀರ್ಥ ಸಮಿತಿ ಸಂಚಾಲಕ ಹಾಗೂ ವಿಹಿಂಪ ಗ್ರಾಮಾಂತರ ಪ್ರಖಂಡ ಅಧ್ಯಕ್ಷ ಜಯಂತ್ ಶೆಟ್ಟಿ ಕಂಬಳದಡ್ಡ ವಂದಿಸಿದರು. ವಿಹಿಂಪ ಗ್ರಾಮಾಂತರ ಪ್ರಖಂಡ ಕಾರ್ಯದರ್ಶಿ ಸಹದೇವ್ ಮುಕ್ರಂಪಾಡಿ ಕಾರ್ಯಕ್ರಮ ನಿರೂಪಿಸಿದರು.










