







ಮೃತನ ವಾರಸುದಾರರ ಪತ್ತೆಗೆ ಪುತ್ತೂರು ಗ್ರಾಮಾಂತರ ಪೊಲೀಸರ ಮನವಿ


ಪುತ್ತೂರು: ತಾಲೂಕಿನ ಒಳಮೊಗರು ಗ್ರಾಮದ ಮಸೀದಿ ಬಳಿ ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿ 275ರಲ್ಲಿ ಅ.19ರಂದು ರಾತ್ರಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಸುಮಾರು 65ರಿಂದ 70 ವರ್ಷ ಪ್ರಾಯದ ಅಪರಿಚಿತ ವೃದ್ಧರೊಬ್ಬರು ಮೃತಪಟ್ಟಿದ್ದು, ಮೃತರ ಗುರುತು ಪತ್ತೆಹಚ್ಚಲು ಪುತ್ತೂರು ಗ್ರಾಮಾಂತರ ಪೊಲೀಸರು ಸಾರ್ವಜನಿಕರ ಸಹಕಾರ ಕೋರಿದ್ದಾರೆ.
ಅ.19ರಂದು ರಾತ್ರಿ ಸುಮಾರು 8.30ಕ್ಕೆ ವೃದ್ಧರೊಬ್ಬರು ರಸ್ತೆ ದಾಟುತ್ತಿದ್ದ ವೇಳೆ ಕುಂಬ್ರ ಕಡೆಯಿಂದ ಪುತ್ತೂರು ಕಡೆಗೆ ಬರುತ್ತಿದ್ದ ಕಾರು (ನೋಂದಣಿ ಸಂಖ್ಯೆ: ಏಂ-53-Z-9054) ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ವೃದ್ಧರ ಹಣೆಯ ಎಡಭಾಗಕ್ಕೆ ತೀವ್ರ ಗಾಯವಾಗಿದ್ದು, ತಕ್ಷಣ ಅವರನ್ನು ಪುತ್ತೂರು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಪರೀಕ್ಷಿಸಿದ ವೈದ್ಯರು ಅವರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಘಟನೆಗೆ ಸಂಬಂಧಿಸಿ ಅರಿಯಡ್ಕ ಗ್ರಾಮದ ಮಹಮ್ಮದ್ ಆಶಿಫ್ ಎಂಬವರು ನೀಡಿದ ದೂರಿನ ಮೇರೆಗೆ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೃತರ ಚಹರೆ ಮತ್ತು ಉಡುಪಿನ ವಿವರ:
ಮೃತರು ಸುಮಾರು 65ರಿಂದ 70 ವರ್ಷ ವಯಸ್ಸಿನ ಗಂಡಸಾಗಿದ್ದು, ಗೋಧಿ ಮೈಬಣ್ಣ ಹೊಂದಿದ್ದಾರೆ. ಮುಖದಲ್ಲಿ ಬಿಳಿ ಮತ್ತು ಕಪ್ಪು ಮಿಶ್ರಿತ ಉದ್ದನೆಯ ದಟ್ಟ ಗಡ್ಡ ಹಾಗೂ ಮೀಸೆ ಇದೆ. ತಲೆಯ ಮುಂಭಾಗ ಮತ್ತು ಮಧ್ಯಭಾಗದಲ್ಲಿ ಕೂದಲು ಉದುರಿದ್ದು, ಎರಡೂ ಬದಿಗಳಲ್ಲಿ ಹಾಗೂ ಹಿಂಭಾಗದಲ್ಲಿ ಕಪ್ಪು-ಬಿಳಿ ಮಿಶ್ರಿತ ಕೂದಲಿದೆ. ಪ್ರಸ್ತುತ ಮೃತದೇಹವನ್ನು ಪುತ್ತೂರು ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ. ಮೃತರ ಗುರುತು ತಿಳಿದವರು ಅಥವಾ ಅವರ ಕುಟುಂಬದವರು ಹಾಗೂ ವಾರಸುದಾರರ ಬಗ್ಗೆ ಮಾಹಿತಿ ಹೊಂದಿರುವವರು ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯನ್ನು 8251232102 / 9480805363 ಅಥವಾ ಪೊಲೀಸ್ ಕಂಟ್ರೋಲ್ ರೂಂ 112 / 0824-2220500 ಮೂಲಕ ಸಂಪರ್ಕಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.













