







ನ್ಯಾಯಪೀಠದಿಂದ ಪೊಲೀಸರಿಗೆ 6 ಅಂಶಗಳ ಮಹತ್ವದ ಮಾರ್ಗಸೂಚಿ


ಬೆಂಗಳೂರು: ಸಾಮಾಜಿಕ ಜಾಲತಾಣದ ಪೋಸ್ಟ್ಗಳ ವಿರುದ್ಧ ಯಾವುದೇ ದೂರುಗಳು ಬಂದಾಗ ಅಪರಾಧಕ್ಕೆ ಅನ್ವಯಿಸಬಹುದಾದ ಅಗತ್ಯ ಅಂಶಗಳು ಇವೆಯೇ ಎಂಬುದನ್ನು ಕೂಲಂಕುಷವಾಗಿ ಪರಿಶೀಲಿಸಬೇಕು ಮತ್ತು ಪ್ರಕರಣ ದಾಖಲಾದ ಮಾತ್ರಕ್ಕೆ ಬಂಧನ ಅನಿವಾರ್ಯವಲ್ಲ ಎಂದು ಹೈಕೋರ್ಟ್ ಪ್ರಕರಣವೊಂದರಲ್ಲಿ ಸ್ಪಷ್ಟಪಡಿಸಿದೆ. ಒಂದೇ ಘಟನೆ ಅಥವಾ ಬಹುತೇಕ ಒಂದೇ ರೀತಿಯಲ್ಲಿ ಅಭಿವ್ಯಕ್ತಿಸಲಾದ,ಸಾಮಾಜಿಕ ಜಾಲತಾಣದ ಪೋಸ್ಟ್ಗಳಿಗೆ ಸರಣಿಯೋಪಾದಿ ಪ್ರಕರಣಗಳನ್ನು ದಾಖಲಿಸುವುದು ಹಾಗೂ ಕಾನೂನು ಮತ್ತು ಸಾಂವಿಧಾನಿಕ ರಕ್ಷಣೆಗಳನ್ನು ಪಾಲಿಸದೆ ಪೊಲೀಸ್ ಅಽಕಾರ ಬಳಸುವ ಬಗ್ಗೆ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ತೀವ್ರ ಕಳವಳ ವ್ಯಕ್ತಪಡಿಸಿದೆ.



ಈ ರೀತಿಯ ಪ್ರಕರಣಗಳಲ್ಲಿ ಪೊಲೀಸರು ಏನೆಲ್ಲಾ ಕ್ರಮಗಳನ್ನು ಅನುಸರಿಸಬೇಕು ಎಂಬ ಬಗ್ಗೆ ಆರು ಅಂಶಗಳ ಮಹತ್ವದ ಮಾರ್ಗಸೂಚಿಯೊಂದನ್ನು ನ್ಯಾಯಪೀಠ ಪ್ರಕಟಿಸಿದೆ.
ಆರು ಮಾರ್ಗಸೂಚಿಗಳು
ಅಪರಾಧದ ಮೂಲ ಅಂಶಗಳನ್ನು ಪರಿಶೀಲಿಸಬೇಕು: ಸಾಮಾಜಿಕ ಜಾಲತಾಣದ ಪೋಸ್ಟ್, ಹೇಳಿಕೆ ಅಥವಾ ಅಭಿವ್ಯಕ್ತಿ ಕುರಿತು ದೂರು ಬಂದಾಗ, ಅದರಲ್ಲಿನ ಆರೋಪಗಳನ್ನು ಇದ್ದಂತೆಯೇ ಸ್ವೀಕರಿಸಿದರೂ ಸಂಬಂಽತ ಅಪರಾಧದ ಅಗತ್ಯ ಅಂಶಗಳು ಕಂಡುಬರುತ್ತವೆಯೇ ಎಂಬುದನ್ನು ಪೊಲೀಸರು ಪರಿಶೀಲಿಸಬೇಕು.
ದೂರುದಾರ ಬದಲಾಗಿದ್ದಾರೆಂದೇ ಹೊಸ ಪ್ರಕರಣ ಬೇಡ: ಅದೇ ಘಟನೆ, ವ್ಯವಹಾರ ಅಥವಾ ಬಹುತೇಕ ಒಂದೇ ಸಾಮಾಜಿಕ ಜಾಲತಾಣದ ಅಭಿವ್ಯಕ್ತಿಗೆ ಸಂಬಂಽಸಿ ಈಗಾಗಲೇ ಪ್ರಕರಣ ದಾಖಲಾಗಿದೆಯೇ ಎಂಬುದನ್ನು ಖಾತ್ರಿ ಪಡಿಸಿಕೊಳ್ಳಬೇಕು. ದೂರುದಾರರು ಬೇರೆ ಎಂಬ ಏಕಮಾತ್ರ ಕಾರಣದಿಂದ ಮಾತ್ರ ಹೊಸ ಎಫ್.ಐ.ಆರ್ ದಾಖಲಿಸಬಾರದು.
ಪ್ರಾಥಮಿಕ ವಿಚಾರಣೆ: ಬಿಎನ್ಎಸ್ಎಸ್ ಕಲಂ 173(3) ಮತ್ತು ಸುಪ್ರೀಂ ಕೋರ್ಟ್ ತೀರ್ಪುಗಳ ಪ್ರಕಾರ ಪ್ರಾಥಮಿಕ ವಿಚಾರಣೆ ನಡೆಸಲು ಅವಕಾಶವಿರುವ ಪ್ರಕರಣಗಳಲ್ಲಿ ಅದರ ಅಗತ್ಯತೆಯನ್ನು ಪರಿಗಣಿಸಬೇಕು. ವಿಚಾರಣೆ ಅಗತ್ಯತೆ, ಅನುಮತಿ, ಕಾನೂನಿನ ಷರತ್ತು ಮತ್ತು ಕಾಲಮಿತಿಗೆ ಅನುಗುಣವಾಗಿ ನಡೆಸಬೇಕು.
ಕಲಂ ೩೫೩(೨) ಅನ್ವಯಿಸುವ ಮೊದಲು ನಿರ್ದಿಷ್ಟ ಪರಿಶೀಲನೆ: ಆಕ್ಷೇಪಿತ ಹೇಳಿಕೆ, ವದಂತಿ ಅಥವಾ ವರದಿಯಲ್ಲಿ ಈ ಕಲಂಗೆ ಅಗತ್ಯ ಉದ್ದೇಶ ಹಾಗೂ ಸಂಬಂಽತ ವರ್ಗ-ಸಮುದಾಯಗಳಿಗೆ ಸಂಬಂಽಸಿದ ಅಂಶಗಳಿವೆಯೇ ಎಂಬುದನ್ನು ಪರಿಶೀಲಿಸಬೇಕು.
ಪ್ರಕರಣ ದಾಖಲಾದ ಮಾತ್ರಕ್ಕೆ ಬಂಧನ ಸಲ್ಲ: ಎಫ್.ಐ.ಆರ್ ದಾಖಲಿಸುವುದು ಮತ್ತು ಬಂಧಿಸುವುದು ಎರಡೂ ಪ್ರತ್ಯೇಕ ನಿರ್ಧಾರಗಳು. ಬಂಧನಕ್ಕೆ ಬಿಎನ್ಎಸ್ಎಸ್ ಕಲಂ 35ರ ಷರತ್ತುಗಳು ಹಾಗೂ ಸುಪ್ರೀಂ ಕೋರ್ಟ್ನ ತತ್ವಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು.ಬಂಧನಕ್ಕೆ ಅಗತ್ಯವಾದ ಕಾನೂನು ಷರತ್ತುಗಳು ಈಡೇರದೇ ಹೋದಾಗ ಕಲಂ 35(3)ರ ಅಡಿಯಲ್ಲಿ ನೋಟಿಸ್ ಜಾರಿ ಪ್ರಕ್ರಿಯೆ ಅನುಸರಿಸಬೇಕು.
ನಿರ್ದೇಶನ ತಲುಪಿಸುವ ಹೊಣೆ: ಪ್ರಕರಣ ದಾಖಲಿಸುವಿಕೆ, ಅಭಿವ್ಯಕ್ತಿ ಸ್ವಾತಂತ್ರ್ಯದ ರಕ್ಷಣೆ ಮತ್ತು ಅನಗತ್ಯ ಬಂಧನ ತಡೆಯುವ ನಿಯಮಗಳನ್ನು ಸೂಕ್ತ ಆಡಳಿತಾತ್ಮಕ ಸೂಚನೆಗಳ ಮೂಲಕ ಎಲ್ಲಾ ಸಂಬಂಽತ ಪೊಲೀಸ್ ಅಽಕಾರಿಗಳ ಗಮನಕ್ಕೆ ತರುವುದನ್ನು ರಾಜ್ಯ ಪೊಲೀಸ್ ಮಹಾನಿರ್ದೇಶಕರು ಖಾತ್ರಿ ಪಡಿಸಬೇಕು ಎಂದು ನ್ಯಾಯಪೀಠ ನಿರ್ದೇಶನ ನೀಡಿದೆ.
ಪುರುಷರಕಟ್ಟೆ ಘಟನೆ ಸಂಬಂಧ ಸುಳ್ಳು ಮಾಹಿತಿ ಹರಡಿದ ಆರೋಪ:
ಪುರುಷರಕಟ್ಟೆಯಲ್ಲಿ ಕಳೆದ ಜುಲೈ 8ರಂದು ಕೆಲಸಕ್ಕೆ ತೆರಳುತ್ತಿದ್ದ ಯುವತಿಯನ್ನು ಯುವಕರ ಗುಂಪು ಹಿಂಬಾಲಿಸಿ, ಚಾಕು ತೋರಿಸಿ ಬೆದರಿಸಿದೆ ಎಂಬ ಕುರಿತು ಪ್ರಕಟವಾದ ಸುದ್ದಿಯನ್ನು ‘ಕರ್ನಾಟಕ ಪೋರ್ಟ್ -ಲಿಯೊ’ ಎಕ್ಸ್ ಖಾತೆಯ ನಿರ್ವಾಹಕ ಸಂದೀಪ್ ಕುಮಾರ್ ತಮ್ಮ ಎಕ್ಸ್ ಖಾತೆಯಲ್ಲಿ ಮರು ಹಂಚಿಕೊಳ್ಳುವ ಮೂಲಕ, ಕಾನೂನು- ಸುವ್ಯವಸ್ಥೆ ಬಗ್ಗೆ ಆತಂಕ ವ್ಯಕ್ತಪಡಿಸಿದ್ದರು. ಇದನ್ನು ನರಿಮೊಗ್ರು ಗ್ರಾಮದ ಮೊಹಮ್ಮದ್ ಶಹನವಾಜ್ ಎಂಬವರು ಆಕ್ಷೇಪಿಸಿ, ಈ ಪೋಸ್ಟ್ ನನ್ನನ್ನು ಮತ್ತು ನನ್ನ ಸ್ನೇಹಿತರ ಗೌರವ ಹಾಗೂ ಪ್ರತಿಷ್ಠೆಯನ್ನು ಗುರಿಯಾಗಿಸಿ ಹಂಚಿಕೊಳ್ಳಲಾಗಿದೆ. ಸುಳ್ಳು ಮಾಹಿತಿ ಹರಡಲಾಗುತ್ತಿದೆ ಎಂದು ಆರೋಪಿಸಿ ಜುಲೈ 9ರಂದು ಪುತ್ತೂರು ನಗರ ಠಾಣೆ ಪೊಲೀಸರಿಗೆ ದೂರು ನೀಡಿದ್ದರು.
ಪೊಲೀಸರು ಭಾರತೀಯ ನ್ಯಾಯ ಸಂಹಿತಾ-2023ರ ಕಲಂ 353(2)ರ ಅಡಿಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಿಕೊಂಡು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ-2023ರ ಕಲಂ 35(3)ರ ಅಡಿಯಲ್ಲಿ ಸಂದೀಪ್ ಕುಮಾರ್ಗೆ ನೋಟಿಸ್ ನೀಡಿದ್ದರು. ಇದನ್ನು ಪ್ರಶ್ನಿಸಿ ಸಂದೀಪ್ ಕುಮಾರ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಸಂದೀಪ್ ಅವರ ಅರ್ಜಿಯನ್ನು ಪುರಸ್ಕರಿಸಿರುವ ನ್ಯಾಯಪೀಠ ಅವರ ವಿರುದ್ಧದ ಎಫ್.ಐ.ಆರ್ ರದ್ದುಪಡಿಸಿ ಆದೇಶಿಸಿದೆ. ಟೀಕೆ ಅಥವಾ ಭಿನ್ನಾಭಿಪ್ರಾಯವನ್ನು ಯಾಂತ್ರಿಕವಾಗಿ ಕೋಮು ದ್ವೇಷ ಪ್ರಚೋದನೆಯ ಅಪರಾಧದ ವ್ಯಾಪ್ತಿಗೆ ತರಬಾರದು ಎಂದು ನ್ಯಾ.ಎಂ.ನಾಗಪ್ರಸನ್ನ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.










