ಪುತ್ತೂರು: ಉಪ್ಪಿನಂಗಡಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಹಿರಿಯ ಆರೋಗ್ಯ ಸಹಾಯಕಿಯಾಗಿ ಕರ್ತವ್ಯ ನಿರ್ವಹಿಸಿ ಇತ್ತೀಚೆಗೆ ವಯೋ ನಿವೃತ್ತರಾಗಿರುವ ಸರಸ್ವತಿ ಕೆ.ಬಿರವರಿಗೆ ಬೀಳ್ಕೊಡುವ ಸಮಾರಂಭ ನಡೆಯಿತು. ಸಭಾಧ್ಯಕ್ಷತೆ ವಹಿಸಿದ್ದ ಉಪ್ಪಿನಂಗಡಿ ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಮುಷಾಕಿರ್ ಹುಸೇನ್ರವರು ಮಾತನಾಡಿ, ಸರಸ್ವತಿಯವರು ಕಳೆದ 37 ವರ್ಷಗಳಲ್ಲಿ ಎಲ್ಲರೊಂದಿಗೆ ಸಾಮರಸ್ಯದಿಂದ ಬೆರೆತು ಕಳಂಕರಹಿತವಾಗಿ ಸೇವೆ ಸಲ್ಲಿಸಿ ವಯೋ ನಿವೃತ್ತಿ ಹೊಂದಿದ್ದು, ಮುಂದಿನ ಅವರ ನಿವೃತ ಜೀವನವು ಸುಖಕರವಾಗಿರಲೆಂದು ಹೇಳಿ ಶುಭಹಾರೈಸಿದರು.
ಮುಖ್ಯ ಅತಿಥಿ ತಾಲೂಕು ಆರೋಗ್ಯಾಧಿಕಾರಿ ಡಾ.ಅಶೋಕ್ ಕುಮಾರ್ ರೈಯವರು ಮಾತನಾಡಿ, ಸರಸ್ವತಿಯವರಲ್ಲಿದ್ದ ವಿಶೇಷ ಗುಣಗಳನ್ನು ಎಲ್ಲರೂ ಅಳವಡಿಸಿಕೊಂಡು ಸರಕಾರಿ ಸೇವೆಯ ಘನತೆಯನ್ನು ಎತ್ತಿ ಹಿಡಿದು ಮಾದರಿಯಾಗಬೇಕು ಎಂದು ಹೇಳಿದರು. ಮತ್ತೋರ್ವ ಮುಖ್ಯ ಅತಿಥಿ, ಡಾ.ಶಶಕಿಲಾ, ಕಿರಿಯ ಆರೋಗ್ಯ ಸಹಾಯಕಿ ಸವಿತ, ಕಿರಿಯ ಆರೋಗ್ಯ ಸಹಾಯಕಿಯರ ಸಂಘದ ತಾಲೂಕು ಅಧ್ಯಕ್ಷೆ ಗಾಯತ್ರಿ, ತಾಲೂಕು ಸರಕಾರಿ ನೌಕರರ ಸಂಘದ ಅಧ್ಯಕ್ಷ ಮೌರಿಸ್ ಮಸ್ಕರೇನ್ಹಸ್ರವರು ಸಂದರ್ಭೋಚಿತವಾಗಿ ಮಾತನಾಡಿದರು. ತಾಲೂಕು ಹಿರಿಯ ಆರೋಗ್ಯ ನಿರೀಕ್ಷಕಿ ಧರಣಿ, ನಿವೃತ್ತ ಕಿರಿಯ ಆರೋಗ್ಯ ಸಹಾಯಕಿ ಸರೋಜಿನಿ, ಆರ್ಎನ್ಟಿಇಪಿ ಮೇಲ್ವಿಚಾರಕ ರಮೇಶ್, ಬಿಪಿಎಂಒ ಉಲ್ಲಾಸ್, ಟೆಕ್ನಿಶಿಯನ್ ಯಶ್ರಾಜ್ ಕೊಲ, ಲೆಕ್ಕ ಸಂಯೋಜಕ ಉದಯರವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಗಾಯತ್ರಿ ಕಾರ್ಯಕ್ರಮ ನಿರೂಪಿಸಿ, ಭರತೇಶ್ ವಂದಿಸಿದರು.
ವಯೋ ನಿವೃತ್ತಿ ಹೊಂದಿದ ಸರಸ್ವತಿ ಹಾಗೂ ಅವರ ಪತಿ ವಸಂತ ಅಭಿಕಾರರಿಗೆ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಹಾಗೂ ಸಿಬ್ಬಂದಿ ವರ್ಗದವರು ಶಾಲು ಹೊದಿಸಿ, ಚಿನ್ನದ ಉಂಗುರವನ್ನು ನೀಡಿ ಸನ್ಮಾನಿಸಲಾಯಿತು.