ನ. 27 ರಂದು ಗುರುವಾಯನಕೆರೆಯಲ್ಲಿ ಲಯನ್ಸ್ ಪ್ರಾಂತ್ಯ ಸಮ್ಮೇಳನ: ಜಸ್ಟಿಸ್ ಸಂತೋಷ್ ಹೆಗ್ಡೆ ಅವರಿಂದ ದಿಕ್ಸೂಚಿ ಭಾಷಣ; ಸೇವಾ ಚಟುವಟಿಕೆಗಳ ಅನಾವರಣ, ಸಾಧಕರಿಗೆ ಸನ್ಮಾನ

0

ಬೆಳ್ತಂಗಡಿ: ಲಯನ್ಸ್ ಜಿಲ್ಲೆ 317 ಡಿ’ ಯ ಪ್ರಾಂತ್ಯ 5 ರ ಪ್ರಾಂತೀಯ ಸಮ್ಮೇಳನವು ನ. 27 ರಂದು ಗುರುವಾಯನಕೆರೆಯ ಬಂಟರ ಭವನದಲ್ಲಿ ಜರುಗಲಿದೆ. ಸಮ್ಮೇಳನದಲ್ಲಿ ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿಗಳಾದ ಜಸ್ಟಿಸ್ ಸಂತೋಷ್ ಹೆಗ್ಡೆ ಅವರು ದಿಕ್ಸೂಚಿ ಭಾಷಣ ಮಾಡಲಿದ್ದಾರೆ ಎಂದು ಪ್ರಾಂತ್ಯ ಸಮ್ಮೇಳನ‌ ಸಮಿತಿ ಅಧ್ಯಕ್ಷ ರಾಜು ಶೆಟ್ಟಿ ಬೆಂಗೆತ್ಯಾರು ಮತ್ತು ಪ್ರಾಂತ್ಯಾಧ್ಯಕ್ಷ ವಸಂತ ಶೆಟ್ಟಿ ಹೇಳಿದರು.

ಅವರು ನ.23ರಂದು ಪತ್ರಿಕಾ ಭವನದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಶ್ರದ್ಧಾ ಎಂಟರ್ ಪ್ರೈಸಸ್ ಮಾಲಿಕ ವಸಂತ ಶೆಟ್ಟಿ ಅವರು ಈ ವರ್ಷದ ಪ್ರಾಂತೀಯ ಅಧ್ಯಕ್ಷರು. ಬೆಳ್ತಂಗಡಿ ಲಯನ್ಸ್ ಕ್ಲಬ್ ಗೌರವ ಸದಸ್ಯ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ‌ ಹೆಗ್ಗಡೆ ಆಶೀರ್ವಾದಗಳೊಂದಿಗೆ ಪ್ರಾಂತೀಯ ಸಮ್ಮೇಳನ ಜರುಗಲಿದೆ. ಪ್ರಾಂತ್ಯದ ಪ್ರಥಮ ಮಹಿಳೆ ಶಾಲಿನಿ ವಸಂತ ಶೆಟ್ಟಿ ಸಮ್ಮೇಳನ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಶ್ರೀ ಧ.ಮ.ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿಗ ಡಾ. ಸತೀಶ್ಚಂದ್ರ ಎಸ್. ಉಪಸ್ಥಿತರಿರುವರು.

ಬೆಳ್ತಂಗಡಿ ಲಯನ್ಸ್ ಕ್ಲಬ್‌ ಆತಿಥ್ಯದಲ್ಲಿ ಜರಗುವ ಈ ಪ್ರಾಂತೀಯ ಸಮ್ಮೇಳನದಲ್ಲಿ ಪ್ರಾಂತ್ಯ 5ರ ವ್ಯಾಪ್ತಿಯ ಲಯನ್ಸ್ ಕ್ಲಬ್‌ಗಳಾದ ಲಯನ್ಸ್ ಕ್ಲಬ್ ಆಲಂಗಾರು, ಬಪ್ಪನಾಡು ಇನ್‌ಸ್ಪಯರ್, ಮುಚ್ಚೂರು ನೀರುಡೆ, ಗುರುಪುರ ಕೈಕಂಬ, ಮೂಡಬಿದ್ರೆ, ಸುಲ್ಕೇರಿ, ವೇಣೂರು ಇದರ ಸದಸ್ಯರು, ಆಹ್ವಾನಿತರು ಸೇರಿ 500 ಮಂದಿ ಪ್ರತಿನಿಧಿಗಳು ಪಾಲ್ಗೊಳ್ಳುವರು.

ಪ್ರಾಂತ್ಯ 5 ಎರಡು ವಲಯಗಳನ್ನು ಒಳಗೊಂಡಿದೆ. ಪ್ರಾಂತೀಯ ಸಮ್ಮೇಳನದ ಸವಿನೆನಪಿಗಾಗಿ 6.50 ಲಕ್ಷ ರೂ. ವೆಚ್ಚದಲ್ಲಿ ಈಗಾಗಲೇ ಸರಕಾರಿ ಪ್ರೌಢಶಾಲೆ ಬಂಗಾಡಿಗೆ ಅತ್ಯಾಧುನಿಕ ಸ್ಮಾರ್ಟ್ ಕ್ಲಾಸ್ ಹಾಗೂ ಸರಕಾರಿ ಹಿರಿಯ ಪಾಥಮಿಕ ಶಾಲೆ ನಡ ಇಲ್ಲಿಗೆ ಕಂಪ್ಯೂಟರ್ ಲ್ಯಾಬ್ ಅನ್ನು ಕೊಡುಗೆಯಾಗಿ ನೀಡಲಾಗಿದ್ದು‌ ಅದನ್ನು ನ.14 ರಂದು ಲಯನ್ಸ್ ರಾಜ್ಯಪಾಲ ಸಂಜೀತ್ ಶೆಟ್ಟಿ ಅವರು ಉದ್ಘಾಟಿಸಿದ್ದಾರೆ ಎಂದರು.

ಪ್ರಾಂತೀಯ ಸಮ್ಮೇಳನದ ಆಯೋಜನೆಗಾಗಿ ಸಮ್ಮೇಳನ ಸಮಿತಿ ರಚಿಸಿ, ಒಟ್ಟು 20 ಉಪಸಮಿತಿಗಳನ್ನು ರಚಿಸಲಾಗಿದೆ. “ಪ್ರಾಪ್ತಿ ಸೇವೆಯಿಂದ ಸಂತೃಪ್ತಿ” ಎಂಬ ಶಿರೋನಾಮೆಯೊಂದಿಗೆ ಜರಗುವ ಸಮ್ಮೇಳನದಂದು ಪ್ರಾಂತ್ಯದ ಸೇವಾಚಟುವಟಿಕೆಗಳ ಸಚಿತ್ರ ವಿವರಗಳೊಳಗೊಂಡ “ಪ್ರತೀಕ” ಸ್ಮರಣ ಸಂಚಿಕೆಯು ಬಿಡುಗಡೆಗೊಳ್ಳಲಿದೆ. ಸಮ್ಮೇಳನದಂದು ಪ್ರಾಂತ್ಯದ 8ಕ್ಲಬ್ ಗಳಿಂದ ಸೇವಾ ಚಟುವಟಿಕೆಗಳು ನಡೆಯಲಿದೆ.

ಅಪರಾಹ್ನ ಗಂಟೆ 4ಕ್ಕೆ ನೋಂದಣಿ, ಅಪರಾಹ್ನ 4.30ರಿಂದ ಪ್ರಾಂತ್ಯದ ಎಲ್ಲಾ ಕ್ಲಬ್‌ಗಳ ಬ್ಯಾನರ್ ಪ್ರೆಸೆಂಟೇಶನ್, ಕಾರ್ಯಕಲಾಪಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದು ಸಂಜೆ 6ಕ್ಕೆ ಸಭಾ ಕಾರ್ಯಕ್ರಮ ಬಳಿಕೆ ರಾತ್ರಿ 8.30ಕ್ಕೆ ಊಟೋಪಚಾರ ಏರ್ಪಡಿಸಲಾಗಿದೆ. ಸಭಾ ಕಾರ್ಯಕ್ರಮದಲ್ಲಿ ಪ್ರಾಂತ್ಯ ವ್ಯಾಪ್ತಿಯ ಆಯ್ದ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಏರ್ಪಡಿಸಲಾಗಿದೆ.

ಪತ್ರಿಕಾಗೋಷ್ಠಿಯಲ್ಲಿ ಪ್ರಾಂತೀಯ ಸಮ್ಮೇಳನ ಸಮಿತಿಯ ಕಾರ್ಯಾಧ್ಯಕ್ಷರಾಗಿ ಹೇಮಂತ ರಾವ್ ಯೆರ್ಡೂರು, ಪ್ರಧಾನ ಕಾರ್ಯದರ್ಶಿಯಾಗಿ ಸುರೇಶ ಶೆಟ್ಟಿ ಲಾಯಿಲ, ಅತಿಥೇಯ ಕ್ಲಬ್‌ ಅಧ್ಯಕ್ಷ ಡಾ.ದೇವಿಪ್ರಸಾದ್‌ ಬೊಲ್ಮ, ಸಮ್ಮೇಳನ ಸಮಿತಿ ಮಾದ್ಯಮ ಸಂಚಾಲಕ ಅಶ್ರಫ್ ಆಲಿಕುಂಞಿ ಮುಂಡಾಜೆ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here