ಅಂಬಿಕಾ ವಿದ್ಯಾಲಯದಲ್ಲಿ ದಶಾಂಬಿಕೋತ್ಸವ ಸಮಾರೋಪ ಹಾಗೂ ಗುರುವಂದನಾ ಕಾರ್ಯಕ್ರಮ

0

ದೇಶ ಮತ್ತು ಧರ್ಮಕ್ಕಾಗಿ ಜೀವನ ಮುಡಿಪಾಗಿರಲಿ : ಶ್ರೀ ವಿಧುಶೇಖರ ಭಾರತೀ ಸನ್ನಿಧಾನಂಗಳವರು

ಪುತ್ತೂರು: ದೇಶ ಮತ್ತು ಧರ್ಮಕ್ಕಾಗಿ ನಾವು ನಮ್ಮ ಜೀವನ ನಡೆಸಬೇಕು. ದೇಶವನ್ನು ಬಿಟ್ಟು ಧರ್ಮವಾಗಲೀ, ಧರ್ಮವನ್ನು ಬಿಟ್ಟು ದೇಶವಾಗಲೀ ಇರುವುದಕ್ಕೆ ಸಾಧ್ಯವಿಲ್ಲ. ಅತ್ಯಂತ ಉತ್ಕೃಷ್ಟ ದೇಶ ಹಾಗೂ ಧರ್ಮದಲ್ಲಿ ನಾವು ಜನಿಸಿದ್ದೇವೆ ಎಂಬುದೇ ಹೆಮ್ಮೆ. ಹಾಗಾಗಿ ದೇಶ ಹಾಗೂ ಧರ್ಮ ಎರಡನ್ನೂ ಚೆನ್ನಾಗಿ ಇಟ್ಟುಕೊಂಡಾಗ ಮಾತ್ರ ನಮ್ಮ ಜನ್ಮ ಸಾರ್ಥಕಗೊಳ್ಳುತ್ತದೆ. ಮನುಷ್ಯ ಜನ್ಮ ಎನ್ನುವುದು ನಮಗೆ ದೊರಕುವ ಸುವರ್ಣಾವಕಾಶ. ಇದನ್ನು ವ್ಯರ್ಥ ಮಾಡಬಾರದು ಎಂದು ಶೃಂಗೇರಿಯ ಶ್ರೀ ಶಾರದಾ ಪೀಠಾಧೀಶ್ವರ ಶ್ರೀ ವಿಧುಶೇಖರ ಭಾರತಿ ಸನ್ನಿಧಾನಂಗಳವರು ಹೇಳಿದರು.

ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯ ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಸಂಸ್ಥೆಯ ಹತ್ತನೆಯ ವರ್ಷಾಚರಣೆ ದಶಾಂಬಿಕೋತ್ಸವದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಗುರುವಾರ ಆಶಿರ್ವಚನ ನೀಡಿದರು. ನಮ್ಮಲ್ಲಿನ ನ್ಯೂನತೆಗಳನ್ನು ಯಾರಾದರೂ ಗುರುತಿಸಿದಲ್ಲಿ ಖೇದಪಡಬಾರದು. ಬದಲಾಗಿ ನಮ್ಮ ಮಿತಿಗಳನ್ನು ಮೀರಿ ನಿಲ್ಲುವ ಬಗೆಗೆ ಯೋಚಿಸಬೇಕು. ನಮ್ಮಲ್ಲಿನ ಕೆಟ್ಟ ಗುಣಗಳನ್ನು ಒಪ್ಪಿಕೊಳ್ಳುವ, ಅದನ್ನು ತಿದ್ದಿಕೊಳ್ಳುವ ಮನಃಸ್ಥಿತಿ ನಮ್ಮದಾಗಬೇಕು. ಹಾಗಾಗಿ ಪ್ರತಿಯೊಬ್ಬನೂ, ಪ್ರತಿದಿನವೂ ಆತ್ಮಾವಲೋಕನ ಮಾಡಿಕೊಳ್ಳಬೇಕು. ಬದಲಾಗಿ ನಮ್ಮ ಕೊರತೆಗಳನ್ನು ಮತ್ತೊಬ್ಬರು ಹೇಳಿದಾಗ ಅವಮಾನವೆಂದೆಣಿಸಿ ಸಿಟ್ಟಿಗೊಳಗಾದರೆ ನಮ್ಮ ವ್ಯಕ್ತಿತ್ವ ಸೌಂದರ್ಯ ಪಡೆದುಕೊಳ್ಳುವುದಿಲ್ಲ ಎಂದರು.


ಮನುಷ್ಯ ಜೀವನದಲ್ಲಿ ಅತ್ಯಂತ ಮುಖ್ಯವಾದದ್ದು ಜ್ಞಾನ ಸಂಪಾದನೆ. ಜ್ಞಾನಪೂರ್ವಕವಾಗಿ ಮಾಡುವ ಕಾರ್ಯಗಳೆಲ್ಲವೂ ಸಫಲವಾಗುತ್ತವೆ. ಮನುಷ್ಯನಿಗೆ ಬುದ್ಧಿ ಇದೆ ಎಂಬುದು ಹೌದಾದರೂ ಆ ಬುದ್ಧಿಗಳಲ್ಲಿ ವೈವಿಧ್ಯ ಕಾಣಬಹುದು. ಬುದ್ಧಿ, ಮತಿ, ಸ್ಮೃತಿ, ಪ್ರಜ್ಞಾ ಎಂಬುದು ಬುದ್ಧಿಯ ನಾನಾಮುಖಗಳು. ಇವೆಲ್ಲದರ ಆರ್ಜನೆಗೆ ವಿದ್ಯೆ ಅಗತ್ಯ. ದೇಹ, ಮನಸ್ಸಿನ ಆರೋಗ್ಯವಷ್ಟೇ ಅಲ್ಲ, ಮಾತಿನ ಆರೋಗ್ಯವೂ ಮನುಷ್ಯನಿಗೆ ಅತ್ಯಂತ ಅನಿವಾರ್ಯ. ನಮ್ಮಲ್ಲಿನ ಒಳ್ಳೆಯ ಗುಣಗಳನ್ನು ಉಳಿಸಿಕೊಂಡು ದುರ್ಗುಣಗಳನ್ನು ದೂರೀಕರಿಸಬೇಕು ಎಂದರು. ಬುದ್ಧಿ ಹಾಗೂ ಮನಸ್ಸು ಸರಿಯಾಗಿದ್ದರೆ ವ್ಯಕ್ತಿಯೊಬ್ಬ ಒಳ್ಳೆಯದನ್ನೇ ಗುರುತಿಸುತ್ತಾನೆ. ಕೆಟ್ಟದ್ದರೆಡೆಗೆ ಗಮನ ಹರಿಸುವುದೇ ಇಲ್ಲ. ಆದರೆ ಎಲ್ಲೆಡೆಯಲ್ಲೂ ಒಳ್ಳೆಯದನ್ನು ಮಾತ್ರ ಗುರುತಿಸಿ ಕೆಟ್ಟದ್ದರೆಡೆಗೆ ಬುದ್ಧಿಪೂರ್ವಕವಾಗಿ ನಿರ್ಲಕ್ಷ್ಯ ವಹಿಸಬೇಕಾದರೆ ಅತ್ಯುತ್ತಮ ಮನಸ್ಸು ವ್ಯಕ್ತಿಯದ್ದಾಗಿರಬೇಕು. ಆದ್ದರಿಂದ ಎಲ್ಲದಕ್ಕೂ ಮೂಲ ನಮ್ಮ ಮನಸ್ಸೇ ಆಗಿದೆ. ಅಂತೆಯೇ ಶರೀರವೆಂಬ ರಥಕ್ಕೆ ಬುದ್ಧಿಯೇ ಸಾರಥಿ. ಹಾಗಾಗಿ ಬುದ್ಧಿ ನಮ್ಮ ಹತೋಟಿಯಲ್ಲಿರಬೇಕು, ಆ ಬುದ್ಧಿಗೆ ಸರಿಯಾದ ಸಂಸ್ಕಾರ ಬೇಕು. ಈ ವಿಚಾರಗಳನ್ನು ಉಪನಿಷತ್ ನಮಗೆ ಬೋಧಿಸುತ್ತದೆ ಎಂದರು.


ಈ ಸಂದರ್ಭದಲ್ಲಿ ಗುರುವಂದನಾ ಸಮಿತಿ ಹಾಗೂ ದಶಾಂಬಿಕೋತ್ಸವ ಸಮಿತಿಯ ವತಿಯಿಂದ ಪ್ರತ್ಯೇಕವಾಗಿ ಶ್ರೀ ವಿಧುಶೇಖರ ಭಾರತಿ ಸನ್ನಿಧಾನಂಗಳವರಿಗೆ ಫಲಸಮರ್ಪಣೆ, ಸ್ಮರಣಿಕೆ ಹಾಗು ಬಿನ್ನವತ್ತಳೆ ಸಮರ್ಪಿಸಿ, ಅಭಿವಂದಿಸಲಾಯಿತು. ದಶಾಂಬಿಕೋತ್ಸವ ಪ್ರಯುಕ್ತ ರೂಪುಗೊಳಿಸಲಾದ ಸ್ಮರಣ ಸಂಚಿಕೆ ‘ಭೂಮಿಕಾ’ವನ್ನು ಜಗದ್ಗುರುಗಳು ಅನಾವರಣಗೊಳಿಸಿ ಹರಸಿದರು. ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಸಂಸ್ಥೆಯ ಆರಂಭದಿಂದಲೂ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿರುವ ಮಾಲತಿ ಶೆಟ್ಟಿ, ಅಂಬಿಕಾ ಪದವಿಪೂರ್ವ ವಿದ್ಯಾಲಯದ ಆರಂಭದಿಂದಲೂ ಉಪನ್ಯಾಸಕರಾಗಿರುವ ಪ್ರದೀಪ್ ಕೆ.ವೈ, ದಿನೇಶ್ ಕುಮಾರ್, ಶೈನಿ, ಪುಷ್ಪಲತಾ, ಜಯಂತಿ ಹಾಗೂ ಸಂಸ್ಥೆಯ ಉದ್ಯೋಗಿ ರವಿಚಂದ್ರ ಅವರನ್ನು ಆಡಳಿತ ಮಂಡಳಿ ವತಿಯಿಂದ ಗುರುಗಳ ಸಮ್ಮುಖದಲ್ಲಿ ಸನ್ಮಾನಿಸಿ ಅಭಿನಂದಿಸಲಾಯಿತು. ದಶಾಂಬಿಕೋತ್ಸವ ಸಮಿತಿಯ ಅಧ್ಯಕ್ಷ ಮಹೇಶ್ ಕಜೆ ಹತ್ತನೆಯ ವರ್ಷದ ನೆಲೆಯಲ್ಲಿ ಸಂಸ್ಥೆಯಲ್ಲಿ ಹಮ್ಮಿಕೊಳ್ಳಲಾದ ವಿವಿಧ ಕಾರ್ಯಕ್ರಮಗಳ ಬಗೆಗೆ ಬೆಳಕು ಚೆಲ್ಲಿದರು. ದಶಾಂಬಿಕೋತ್ಸವದ ನೆಲೆಯಲ್ಲಿ ಹೆತ್ತವರೆಲ್ಲರೂ ಸೇರಿ ಸಂಸ್ಥೆಗಾಗಿ ಒಟ್ಟುಸೇರಿಸಿದ ದತ್ತಿನಿಧಿಯನ್ನು ಸಂಸ್ಥೆಯ ಸಂಚಾಲಕ ಸುಬ್ರಹ್ಮಣ್ಯ ನಟ್ಟೋಜ ಅವರಿಗೆ ಹಸ್ತಾಂತರಿಸಲಾಯಿತು.


ಅಂಬಿಕಾ ವಿದ್ಯಾಲಯ ಬೆಳೆದು ಬಂದ ಹಾದಿ, ಶೃಂಗೇರಿ ಜಗದ್ಗುರುಗಳ ಕೃಪಾಶೀರ್ವಾದಗಳ ಬಗೆಗೆ ಅಂಬಿಕಾ ವಿದ್ಯಾಲಯದ ಸಂಚಾಲಕ ಸುಬ್ರಹ್ಮಣ್ಯ ನಟ್ಟೋಜ ವಿಸ್ತರಿಸಿ ಹೇಳಿದರು. ಅಂತೆಯೇ ಸಂಸ್ಥೆಯ ಕುರಿತಾಗಿ ಸಿದ್ಧಪಡಿಸಲಾದ ವೀಡಿಯೋ ಚಿತ್ರಿಕೆಯನ್ನು ಪ್ರದರ್ಶಿಸಲಾಯಿತು. ಅಂಬಿಕಾ ಮಹಾವಿದ್ಯಾಲಯದ ತತ್ತ್ವಶಾಸ್ತ್ರ ವಿಭಾಗದ ಮುಖ್ಯಸ್ಥ ವಿದ್ವಾನ್ ತೇಜಶಂಕರ ಸೋಮಯಾಜಿ ಅಭಿವಂದನಾ ನುಡಿಗಳನ್ನಾಡಿ, ಬಿನ್ನವತ್ತಳೆ ವಾಚಿಸಿದರು. ಗುರುವಂದನಾ ಸಮಿತಿ ಅಧ್ಯಕ್ಷ ಶಶಾಂಕ್ ಕೊಟೇಚಾ ಸ್ವಾಗತಿಸಿದರು. ಕಾರ್ಯದರ್ಶಿ ಬಿ. ಐತ್ತಪ್ಪ ನಾಯ್ಕ್ ವಂದಿಸಿದರು. ಉಪನ್ಯಾಸಕ ಆದರ್ಶ ಗೋಖಲೆ ಕಾರ್ಯಕ್ರಮ ನಿರ್ವಹಿಸಿದರು. ವಿದ್ಯಾರ್ಥಿ ಶ್ರೀಕೃಷ್ಣ ನಟ್ಟೋಜ ಶಂಖನಾದಗೈದರು. ಅಂಬಿಕಾ ವಿದ್ಯಾಲಯದ ವಿದ್ಯಾರ್ಥಿಗಳು ಶಂಕರಾಚಾರ್ಯ ವಿರಚಿತ ಪ್ರಾತಃಸ್ಮರಾಮಿ ಶ್ಲೋಕವನ್ನು ಪ್ರಸ್ತುತಪಡಿಸಿದರು. ಬಪ್ಪಳಿಗೆ ಅಂಬಿಕಾ ಪದವಿಪೂರ್ವ ವಿದ್ಯಾಲಯದ ವಿದ್ಯಾರ್ಥಿಗಳಿಂದ ವೇದಘೋಷ ನಡೆಯಿತು. ನೆಲ್ಲಿಕಟ್ಟೆ ಅಂಬಿಕಾ ಪದವಿಪೂರ್ವ ವಿದ್ಯಾರ್ಥಿಗಳು ಪ್ರಾರ್ಥಿಸಿದರು.
ಸಭಾಕಾರ್ಯಕ್ರಮದ ಬಳಿಕ ಬಪ್ಪಳಿಗೆ ಹಾಗೂ ನೆಲ್ಲಿಕಟ್ಟೆ ಅಂಬಿಕಾ ಪದವಿಪೂರ್ವ ವಿದ್ಯಾಲಯಗಳು ಹಾಗೂ ಅಂಬಿಕಾ ಮಹಾವಿದ್ಯಾಲಯದ ವತಿಯಿಂದ ಜಗದ್ಗುರುಗಳಿಗೆ ಫಲಸಮರ್ಪಣೆ ನಡೆಯಿತು. ಬಳಿಕ ಸಮಾಜದ ವಿವಿಧ ಸಮುದಾಯಗಳ ವತಿಯಿಂದ ಫಲಸಮರ್ಪಣೆ ವಸ್ತ್ರ ಸಮರ್ಪಣೆ ನಡೆಯಿತು. ಸಭಾಕಾರ್ಯಕ್ರಮದ ಪೂರ್ವದಲ್ಲಿ ಜಗದ್ಗುರುಗಳಿಗೆ ಪೂರ್ಣಕುಂಭ ಸ್ವಾಗತ ಕೋರಲಾಯಿತು.
ಸರಸ್ವತೀ ಹೋಮ: ಗುರುವಾರ ಬೆಳಗ್ಗೆ ೬ ಗಂಟೆಯಿಂದ ಬಪ್ಪಳಿಗೆಯ ಅಂಬಿಕಾ ಮಹಾವಿದ್ಯಾಲಯದಲ್ಲಿ ಸರಸ್ವತೀ ಹೋಮವನ್ನು ವೇ.ಮೂ.ಪರಕ್ಕಜೆ ಅನಂತನಾರಾಯಣ ಭಟ್ಟರ ನೇತೃತ್ವದಲ್ಲಿ ನಡೆಸಲಾಯಿತು. ಪೂರ್ಣಾಹುತಿಯ ಸಂದರ್ಭದಲ್ಲಿ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸನ್ನಿಧಾನಂಗಳವರು ದಿವ್ಯಸಾನ್ನಿಧ್ಯವನ್ನೊದಗಿಸಿ ಹರಸಿದರು.

ಜಗದ್ಗುರುಗಳ ಆಗಮನ ಹಾಗೂ ಶ್ರೀ ಚಂದ್ರಮೌಳೀಶ್ವರ ಪೂಜೆ: ಬುಧವಾರ ಇಳಿಸಂಜೆ ಸುಮಾರು ೭.೧೫ರ ಹೊತ್ತಿಗೆ ಪೋಳ್ಯದ ಬಳಿ ಜಗದ್ಗುರುಗಳಿಗೆ ಶ್ರೀಕೃಷ್ಣ ನಟ್ಟೋಜ ಅವರು ಫಲಸಮರ್ಪಿಸಿ ಬರಮಾಡಿಕೊಂಡರು. ಬಪ್ಪಳಿಗೆಯ ಅಂಬಿಕಾ ವಿದ್ಯಾಲಯದ ಬಳಿ ಪೂರ್ಣಕುಂಭ ಸ್ವಾಗತ ಹಾಗೂ ಫಲಸಮರ್ಪಣೆ ನಡೆಯಿತು. ತದನಂತರ ಜಗದ್ಗುರುಗಳಿಂದ ಶ್ರೀ ಚಂದ್ರಮೌಳೀಶ್ವರ ಪೂಜೆ ನೆರವೇರಿತು. ಈ ಎಲ್ಲಾ ಸಂದರ್ಭಗಳಲ್ಲೂ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ, ಕೋಶಾಧಿಕಾರಿ ರಾಜಶ್ರೀ ಎಸ್ ನಟ್ಟೋಜ, ಆಡಳಿತ ಮಂಡಳಿ ಸದಸ್ಯರು, ವಿವಿಧ ಅಂಬಿಕಾ ವಿದ್ಯಾಸಂಸ್ಥೆಗಳ ಪ್ರಾಚಾರ್ಯರು, ಬೋಧಕ-ಬೋಧಕೇತರ ವೃಂದ ಹಾಗೂ ವಿದ್ಯಾರ್ಥಿಗಳು, ಗುರುವಂದನಾ ಸಮಿತಿ ಸಲಹೆಗಾರರಾದ ಎನ್.ಕೆ.ಜಗನ್ನಿವಾಸ ರಾವ್, ಮುಳಿಯ ಕೇಶವ ಪ್ರಸಾದ್, ಅಧ್ಯಕ್ಷ ಶಶಾಂಕ್ ಕೊಟೇಚಾ, ಪ್ರಧಾನ ಕಾರ್ಯದರ್ಶಿ ಐತ್ತಪ್ಪ ನಾಯ್ಕ್, ಖಜಾಂಜಿ ಸತೀಶ್ ರಾವ್, ಸಂಘಟನಾ ಕಾರ್ಯದರ್ಶಿ ಬಾಲಕೃಷ್ಣ ಬೋರ್ಕರ್ ದಶಾಂಬಿಕೋತ್ಸವ ಸಮಿತಿ ಅಧ್ಯಕ್ಷ ಮಹೇಶ್ ಕಜೆ, ಎರಡೂ ಸಮಿತಿಗಳ ಪದಾಧಿಕಾರಿಗಳು, ಸದಸ್ಯರು, ಸಮಿತಿ ಪದಾಧಿಕಾರಿಗಳು, ಅಂಬಿಕಾ ವಿದ್ಯಾಲಯದ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷೆ ಸೀಮಾನಾಗರಾಜ್, ಸಂಸ್ಥೆಯ ಪ್ರಾಂಶುಪಾಲೆ ಮಾಲತಿ ಡಿ ಮತ್ತಿತರರು ಹಾಜರಿದ್ದರು.

ಶ್ರೀರಾಮ ಜನ್ಮಭೂಮಿಯಲ್ಲಿ ಶ್ರೀರಾಮಮಂದಿರ ನಿರ್ಮಾಣ ಸಂದರ್ಭದಲ್ಲಿ ಶೃಂಗೇರಿ ಜಗದ್ಗುರುಗಳ ಸೂಚನೆಯಂತೆ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳಿಂದ ಸುಮಾರು ೭೫ ಲಕ್ಷದಷ್ಟು ರಾಮ ತಾರಕ ಜಪ ಮಹಾಯಜ್ಞವನ್ನು ಕೈಗೊಳ್ಳಲಾಗಿತ್ತು. ಸಂಸ್ಥೆಯ ವಿದ್ಯಾರ್ಥಿಗಳು ನೂರಾರು ದಿನಗಳ ಕಾಲ ಶ್ರೀ ರಾಮ ಜಯರಾಮ ಜಯಜಯರಾಮ ಮಂತ್ರವನ್ನು ಪಠಿಸಿದ್ದರು. ಈ ನೆಲೆಯಲ್ಲಿ ಜಗದ್ಗುರು ಶ್ರೀ ವಿಧುಶೇಖರ ಭಾರತಿ ಸನ್ನಿಧಾನಂಗಳವರಿಗೆ ಅಂಬಿಕಾ ವಿದ್ಯಾಲಯದ ದಶಮಾನೋತ್ಸವದ ಪ್ರಯುಕ್ತ ಶ್ರೀರಾಮ ಮಂದಿರದ ಸ್ವರ್ಣ ಮಾದರಿಯನ್ನು ಸಮರ್ಪಿಸಲಾಯಿತು.

LEAVE A REPLY

Please enter your comment!
Please enter your name here