ಕ್ಯಾಂಪ್ಕೋ ನೆಲ್ಯಾಡಿ ಶಾಖೆ ಉದ್ಘಾಟನೆ, ಸದಸ್ಯ ಬೆಳೆಗಾರರ ಸಭೆ

0

  • ‘ಅಡಿಕೆ ಹಾನಿಕಾರಕ ಅಲ್ಲ’ ಎಂದು ಸಾಬೀತುಪಡಿಸಲು ಸಂಶೋಧನೆ; ಕಿಶೋರ್ ಕುಮಾರ್ ಕೊಡ್ಗಿ

 

ನೆಲ್ಯಾಡಿ: ಆರೋಗ್ಯಕ್ಕೆ ‘ಅಡಿಕೆ ಹಾನಿಕಾರಕ ಅಲ್ಲ’ ಎಂಬುದನ್ನು ಸಾಬೀತುಪಡಿಸುವ ನಿಟ್ಟಿನಲ್ಲಿ ಸಂಶೋಧನೆ ನಡೆಸಲಾಗುತ್ತಿದೆ ಎಂದು ಕ್ಯಾಂಪ್ಕೋ ಅಧ್ಯಕ್ಷ ಎ.ಕಿಶೋರ್ ಕುಮಾರ್ ಕೊಡ್ಗಿ ಹೇಳಿದರು.


ಅವರು ಜ.೭ರಂದು ಬೆಳಿಗ್ಗೆ ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಕಟ್ಟಡದಲ್ಲಿ ಕ್ಯಾಂಪ್ಕೋ ನೂತನ ಶಾಖೆಯ ಉದ್ಘಾಟಿಸಿ, ಬಳಿಕ ನಡೆದ ಸದಸ್ಯ ಬೆಳೆಗಾರರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನಿಟ್ಟೆ ಯುನಿವರ್ಸಿಟಿ ಜೊತೆಗೆ ಒಪ್ಪಂದ ಮಾಡಿಕೊಂಡು ಸಂಶೋಧನೆ ನಡೆಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಅಡಿಕೆ ಹಾನಿಕಾರಕ ಅಲ್ಲ ಎಂಬ ಬಗ್ಗೆ ಸುಪ್ರೀಂಕೋರ್‍ಟ್‌ಗೆ ಸೂಕ್ತ ಪುರಾವೆ ಒದಗಿಸಲಾಗುವುದು ಎಂದು ಅವರು ಹೇಳಿದರು. ರೈತರಿಗೆ ಸಹಕಾರಿಯಾಗುವ ನಿಟ್ಟಿನಲ್ಲಿ ಕ್ಯಾಂಪ್ಕೋ ಹಲವು ಯೋಜನೆ ಹಾಕಿಕೊಂಡಿದೆ. ರೈತರು ಕ್ಯಾಂಪ್ಕೋದ ಸದಸ್ಯರಾಗಿ ವ್ಯವಹರಿಸುವುದರೊಂದಿಗೆ ಸಂಸ್ಥೆಯನ್ನು ಬಲಗೊಳಿಸಬೇಕು. ಅಡಿಕೆಯ ಒಟ್ಟು ಉತ್ಪಾದನೆಯ ಶೇ.೧೦ ರಿಂದ ೧೨ರಷ್ಟು ಮಾತ್ರ ಕ್ಯಾಂಪ್ಕೋಗೆ ಬರುತ್ತಿದೆ. ಉಳಿದವೆಲ್ಲವೂ ಖಾಸಗಿಯವರಿಗೆ ಮಾರಾಟವಾಗುತ್ತಿದೆ. ಕ್ಯಾಂಪ್ಕೋ ಅಡಿಕೆ ಧಾರಣೆ ಸ್ಥಿರತೆಗೂ ಪ್ರಯತ್ನಿಸುತ್ತಿದೆ. ಕ್ಯಾಂಪ್ಕೋಗೆ ರೈತರ ಸಹಕಾರ ಅಗತ್ಯವಿದೆ. ಕ್ಯಾಂಪ್ಕೋ ಸದಸ್ಯರಿಗೆ ಆರೋಗ್ಯ ಸಂಬಂಧಿ ಸಹಾಯ ಮಾಡುತ್ತಿದೆ. ಪಾರದರ್ಶಕ ವ್ಯವಹಾರದ ಮೂಲಕ ದೇಶದ ಆರ್ಥಿಕತೆಗೂ ಸಹಕಾರಿಯಾಗಿದೆ ಎಂದರು.


ಕ್ಯಾಂಪ್ಕೋದ ವ್ಯವಸ್ಥಾಪಕ ನಿರ್ದೇಶಕ ಎಚ್.ಎಂ.ಕೃಷ್ಣಕುಮಾರ್‌ರವರು ಪ್ರಾಸ್ತಾವಿಕವಾಗಿ ಮಾತನಾಡಿ, ‘ಕ್ಯಾಂಪ್ಕೋ ಆನ್ ವೀಲ್’ ಕಾರ್ಯಕ್ರಮದಡಿಯಲ್ಲಿ ಸಂಸ್ಥೆಯ ನುರಿತ ಸಿಬ್ಬಂದಿಗಳು ರೈತರ ಮನೆಗೆ ಭೇಟಿ ಕೊಟ್ಟು ಅಲ್ಲಿಂದಲೇ ಅಡಿಕೆ ಖರೀದಿಸುವ ಯೋಜನೆ ಹಾಕಿಕೊಳ್ಳಲಾಗಿದೆ ಎಂದರು. ಕ್ಯಾಂಪ್ಕೋ ಖರೀದಿ ಮಾತ್ರವಲ್ಲ, ಇದಕ್ಕೆ ವ್ಯವಸ್ಥಿತ ಮಾರುಕಟ್ಟೆ ಒದಗಿಸುವಲ್ಲಿಯೂ ಪ್ರಯತ್ನಿಸುತ್ತಿದೆ. ಈ ನಿಟ್ಟಿನಲ್ಲಿ ಉತ್ತರ ಭಾರತದ ನಾಲ್ಕು ಕಡೆ ಸೇಲ್ಸ್ ಡಿಪೋ ಆರಂಭಿಸಲಾಗಿದೆ. ಕಾವುನಲ್ಲಿ ಬೃಹತ್ ಗೋದಾಮು ಮಾಡಲಾಗಿದೆ. ಸಹಕಾರ ಹಾಗೂ ವ್ಯಾಪಾರ ಮನೋಭಾವ ಇಟ್ಟುಕೊಂಡು ಕಾರ್ಯಯೋಜನೆ ಹಾಕಿಕೊಳ್ಳಲಾಗಿದೆ ಎಂದರು. ಡಿಜಿಎಂ ರವೀಶ್‌ರವರು ಕ್ಯಾಂಪ್ಕೋದಿಂದ ಸದಸ್ಯರಿಗೆ ಸಿಗುವ ಆರೋಗ್ಯ ಸೇವೆ ಹಾಗೂ ಇತರೇ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು. ಕ್ಯಾಂಪ್ಕೋದ ಸದಸ್ಯರಾದ ಅಗ್ರಾಳ ನಾರಾಯಣ ರೈ, ದಿವಾಕರ ಗೌಡ ಉದನೆ, ಶಶಿನಾಥ್ ದಾಂಬ್ಳೆ ಅರಸಿನಮಕ್ಕಿ, ದಯಾಕರ ರೈ, ಪುಷ್ಪರಾಜ್, ಕಮಲಾಕ್ಷ ಪಂಡಿತ್ ಮತ್ತಿತರರು ಸಲಹೆ ಸೂಚನೆ ನೀಡಿದರು.

ಮುಖ್ಯ ಅತಿಥಿಯಾಗಿದ್ದ ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಉಮೇಶ್ ಶೆಟ್ಟಿ, ನೆಲ್ಯಾಡಿ ಗ್ರಾ.ಪಂ.ಅಧ್ಯಕ್ಷೆ ಚೇತನಾ ಸಂದರ್ಭೋಚಿತವಾಗಿ ಮಾತನಾಡಿ ಶುಭಹಾರೈಸಿದರು. ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಯಾಕರ ರೈ ಮುಂಡಾಳಗುತ್ತು, ಕ್ಯಾಂಪ್ಕೋದ ನಿರ್ದೇಶಕ ರಾಘವೇಂದ್ರ ಭಟ್, ಎಜಿಎಂ ರಾಘವೇಂದ್ರ, ಪುತ್ತೂರು ಪ್ರಾದೇಶಿಕ ವ್ಯವಸ್ಥಾಪಕ ಗೋವಿಂದ ಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ನಿರ್ದೇಶಕ ಎಂ.ಮಹೇಶ್ ಚೌಟ ಸ್ವಾಗತಿಸಿ, ಉಪಾಧ್ಯಕ್ಷ ಶಂಕರನಾರಾಯಣ ಭಟ್ ಖಂಡಿಗೆ ವಂದಿಸಿದರು. ನಿತಿನ್ ಕಾರ್ಯಕ್ರಮ ನಿರೂಪಿಸಿದರು. ಅಭಿಜ್ಞಾ, ಅನ್ವಿ ಪ್ರಾರ್ಥಿಸಿದರು. ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಕಮಲಾಕ್ಷ ಪಂಡಿತ್, ನಿರ್ದೇಶಕರಾದ ಬಾಲಕೃಷ್ಣ ಬಾಣಜಾಲು, ಜಯಾನಂದ ಬಂಟ್ರಿಯಾಲ್, ಸರ್ವೋತ್ತಮ ಗೌಡ, ಸುದರ್ಶನ್, ಉಷಾ ಅಂಚನ್, ನಿವೃತ್ತ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಎಂ.ಆರ್.ಎಡಪಡಿತ್ತಾಯ, ನಿವೃತ್ತ ಮೇನೇಜರ್ ಸತೀಶ್ ಶೆಟ್ಟಿ, ಎನ್.ವಿ.ವ್ಯಾಸ, ಕುಶಾಲಪ್ಪ ಗೌಡ ಪೂವಾಜೆ ಮತ್ತಿತರರು ಉಪಸ್ಥಿತರಿದ್ದರು. ಜನಾರ್ದನ ಕದ್ರ, ವಿನೋದ್ ಶೆಟ್ಟಿ, ಉದಯಕುಮಾರ್ ಮತ್ತಿತರರು ಸಹಕರಿಸಿದರು.

ಸನ್ಮಾನ:
ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ಕ್ಯಾಂಪ್ಕೋ ಅಧ್ಯಕ್ಷ ಎ.ಕಿಶೋರ್ ಕುಮಾರ್ ಕೊಡ್ಗಿಯವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಸಂಘದ ಅಧ್ಯಕ್ಷ ಉಮೇಶ್ ಶೆಟ್ಟಿಯವರು ಶಾಲುಹಾಕಿ, ಸ್ಮರಣಿಕೆ ನೀಡಿ ಸನ್ಮಾನಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಯಾಕರ ರೈ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here