ಕಲ್ಮಡ್ಕ ಸಹಕಾರ ಸಂಘದ ಸದಸ್ಯರ ಕೃಷಿ ಕ್ಷೇತ್ರಕ್ಕೆವಿಶೇಷ ಯೋಜನೆ-ಚಾಲನೆ

0

 

 

ರಾಜ್ಯದಲ್ಲಿಯೇ ಪ್ರಥಮ ಯೋಜನೆ

ಕಲ್ಮಡ್ಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕೃಷಿಕರಿಗೆ ನೆರವಾಗುವ ವಿನೂತನ ಯೋಜನೆ ಆರಂಭಿಸಿದ್ದು “ಸದಸ್ಯರ ಕೃಷಿ ಕ್ಷೇತ್ರದಲ್ಲಿ ಜಾಬ್ ವರ್ಕ್ ತಂಡದ ಮೂಲಕ ಕೆಲಸ ನಿರ್ವಹಣೆ” ಮಾಡವ ವಿಶೇಷ
ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಕಾರ್ಯಕ್ರಮದಲ್ಲಿ ಯೋಜನೆಯನ್ನು ದೀಪ ಬೆಳಗಿಸಿ ಪ್ರಗತಿ ಪರ ಕೃಷಿಕ ಡಾ. ಶಶಿಧರ್ ಪಡೀಲ್ ಉದ್ಘಾಟಿಸಿ ಶುಭಹಾರೈಸಿದರು.ಸಂಘದ ಅಧ್ಯಕ್ಷ ಉದಯ ಕುಮಾರ್ ಬೆಟ್ಟ ಸಭಾಧ್ಯಕ್ಷತೆ ವಹಿಸಿದ್ದರು.ಉಪಾಧ್ಯಕ್ಷ ಲಕ್ಷ್ಮೀನಾರಾಯಣ ನಡ್ಕ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ಜೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಕಾರ್ಯಕ್ರಮದಲ್ಲಿ ಪ್ರಶಾಂತ್ ಜೆ ಸ್ವಾಗತಿಸಿದರು.
ಲಕ್ಷ್ಮೀ ನಾರಾಯಣ ನಡ್ಕ ವಂದಿಸಿದರು. ಸಂಘದ ನಿರ್ದೇಶಕರು, ಸದಸ್ಯರು ಉಪಸ್ಥಿತರಿದ್ದರು.
*ರಾಜ್ಯದಲ್ಲಿಯೇ ಪ್ರಥಮ!*
ದಕ್ಷಿಣ ಕನ್ನಡ ಜಿಲ್ಲೆಯು ಸಹಕಾರಿ ಸಂಘದ ತವರೂರು. ಸಹಕಾರಿ ಸಂಘಗಳು ಪರಸ್ಪರ ಸಹಕಾರ ಎಂಬ ಮನೋಭಾವದಿಂದಲೇ ಹುಟ್ಟಿಕೊಂಡವು. ಸಹಕಾರ ಪಿತಾಮಹ ಮೊಳಹಳ್ಳಿ ಶಿವರಾಯರು ಸಹಕಾರಿ ಸಂಘಗಳ ಉದ್ದೇಶವನ್ನೇ ಸ್ಪಷ್ಟವಾಗಿ ಹೇಳಿದ್ದರು. ಕೃಷಿಕರು , ಗ್ರಾಮೀಣ ಜನರು ಹಾಗೂ ಸಂಘದ ಪರಸ್ಪರ ಸಹಕಾರದ ತತ್ತ್ವದ ಮೂಲಕ ದ. ಕ ಜಿಲ್ಲೆಯಲ್ಲಿ ಸಹಕಾರಿ ಸಂಘ ಬೆಳೆಯಿತು. ರೈತರಿಗೆ ಸಾಲ ನೀಡುವುದು, ವಸೂಲಾತಿ, ಬಡ್ಡಿ , ಉದ್ಯಮ ಇಷ್ಟೇ ಅಲ್ಲ. ರೈತರು, ಗ್ರಾಮೀಣ ಜನರು ಸಂಕಷ್ಟದಲ್ಲಿರುವಾಗ ನೆರವಾಗುವುದು ಅದಕ್ಕಾಗಿಯೇ ಲಾಭದ ಉದ್ದೇಶ ಇಲ್ಲದೆಯೇ ನೆರವಾಗುವುದು ಕೂಡಾ ಸಹಕಾರಿಯ ಉದ್ದೇಶವೂ ಆಗಿದೆ.
ಕಲ್ಮಡ್ಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಕೃಷಿಕರಿಗೆ ನೆರವಾಗುವ ತಂಡವನ್ನು ಸಿದ್ಧ ಮಾಡಿದೆ. ಸಂಘದ ಅಧ್ಯಕ್ಷ ಉದಯಕುಮಾರ್ ಬೆಟ್ಟ, ಉಪಾಧ್ಯಕ್ಷ ಲಕ್ಷ್ಮೀನಾರಾಯಣ ನಡ್ಕ ಹಾಗೂ ಆಡಳಿತದ ನಿರ್ದೇಶಕರ ತಂಡ , ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ಜೋಗಿಬೆಟ್ಟು ಅವರ ಯೋಜನೆಯೊಂದಿಗೆ ಈ ತಂಡ ಸಂಘದ ಸದಸ್ಯರ ಕೃಷಿಕರಿಗೆ ತೆಂಗಿನ ಕಾಯಿ ಕೊಯ್ಲು,ಕಳೆ ತೆಗೆಯಲು ಸೇರಿದಂತೆ ಮುಂದಿನ ವರ್ಷ ಅಡಿಕೆ ಮರಗಳಿಗೆ ಔಷಧ ಸಿಂಪಡನೆ ಮತ್ತು ಅಡಿಕೆ ಕೊಯ್ಲುಗೂ ತಂಡ ತಯಾರು ಮಾಡುವ ಯೋಜನೆಯನ್ನು ಹಾಕಿಕೊಂಡಿದ್ದಾರೆ. ಪ್ರಸ್ತುತ 7 ಜನರ ತಂಡ ಸಿದ್ಧ ಮಾಡಿದ್ದು , ಯೋಜನೆ ಚಾಲನೆಗೊಂಡಿದೆ. ಕೃಷಿಕರು ಸಂಘಕ್ಕೆ ಬೇಡಿಕೆ ಸಲ್ಲಿಸಿದರೆ ಸಂಘವು ಇದಕ್ಕಾಗಿ ನೇಮಕ ಮಾಡಿರುವ ಸಿಬ್ಬಂದಿಯ ಮೂಲಕ ಜಾಬ್ ವರ್ಕ್ ತಂಡವನ್ನು ನಿರ್ವಹಣೆ ಮಾಡುತ್ತದೆ. ಕೃಷಿಕರ ಬೇಡಿಕೆ ಗಮನಿಸಿಕೊಂಡು ಕೆಲಸವನ್ನು ವಿಭಾಗಿಸಿ ಸಂಘವು ತಂಡವನ್ನು ಕೃಷಿಕರಲ್ಲಿಗೆ ಕಳುಹಿಸಿ ಕೊಡುತ್ತದೆ. ಸಂಘದ ವತಿಯಿಂದಲೇ ಈ ತಂಡಕ್ಕೆ ಬೇಕಾದ ಪರಿಕರಗಳನ್ನು ಒದಗಿಸುತ್ತದೆ. ಫೈಬರ್ ದೋಟಿ, ಕಳೆ ಕಟಾವು ಮಾಡುವ ಯಂತ್ರವನ್ನು ಖರೀದಿ ಮಾಡಿದೆ. ಕೃಷಿಕರು ಜಾಬ್ ವರ್ಕ್ ತಂಡಕ್ಕೆ ನೀಡಬೇಕಾದ ಎಲ್ಲಾ ವೇತನವನ್ನು ಸಹಕಾರ ಸಂಘಕ್ಕೆ ಪಾವತಿ ಮಾಡಬೇಕು. ಸಂಘವು ಈ ತಂಡಕ್ಕೆ ವೇತನ ನೀಡುತ್ತದೆ.ಇದರ ಜೊತೆಗೆ ಉದ್ಯೋಗ ಭದ್ರತೆ ,ವಿಮೆ ಸೇರಿದಂತೆ ಪಿ.ಎಫ್ ಮಾದರಿಯ ಹೂಡಿಕೆಯನ್ನು ಮಾಡಲು ಯೋಜನೆಯನ್ನು ಹಾಕಿಕೊಂಡಿದೆ. ಈ ಮೂಲಕ ಜಾಬ್ ವರ್ಕ್ ಮಾಡುವ ಉದ್ಯೋಗಿಗೂ ಉದ್ಯೋಗ ಭದ್ರತೆ ಲಭ್ಯವಾಗುತ್ತದೆ. ಕೃಷಿಕರಿಗೂ ಕ್ಲಪ್ತ ಸಮಯದಲ್ಲಿ ಸೇವೆ ನೀಡಲು ಯೋಜನೆ ಹಾಕಿಕೊಂಡಿದೆ. ಈ ಕಾರ್ಯಕ್ರಮ ರಾಜ್ಯದಲ್ಲಿ ಪ್ರಥಮವಾಗಿ ಸಹಕಾರ ಸಂಘವೊಂದು ಕೃಷಿಕರಿಗೆ ಪೂರಕವಾಗುವ ವಿಶೇಷ ಯೋಜನೆಯೊಂದನ್ನು ಅನುಷ್ಠಾನ ಗೊಳಿಸಿದೆ.

LEAVE A REPLY

Please enter your comment!
Please enter your name here