





ಪುತ್ತೂರು:ಪುಣಚ ಮತ್ತು ಇರ್ದೆ ಗ್ರಾಮದ ಸೀರೆಹೊಳೆ ನದಿಯ ಮಧ್ಯಭಾಗದಲ್ಲಿ ಕಳೆದ ಹಲವಾರು ವರ್ಷಗಳಿಂದ ವಿಶೇಷವಾಗಿ ಮಳೆಗಾಗಿಯೇ ನಡೆಸುವ ಶ್ರೀ ಸತ್ಯನಾರಾಯಣ ಪೂಜೆಯನ್ನು ಈ ವರ್ಷವೂ ಬಹಳ ಶ್ರದ್ಧಾ ಭಕ್ತಿಯಿಂದ ನಡೆಸಲಾಯಿತು. ಸತ್ಯಶಂಕರ ಉಪಾಧ್ಯಾಯ ಮಣಿಮುಂಡ ಅವರ ಕೈಂಕರ್ಯದಲ್ಲಿ ಪೂಜಾ ವಿಧಾನ ಕಾರ್ಯ ಮೇ.18ರಂದು ನೆರವೇರಿತು.


ವಿವಿಧ ಅಲಂಕಾರವನ್ನು ಒಳಗೊಂಡ ಪೂಜೆಯೂ ಸಂಜೆ.6.30ಕ್ಕೆ ಆರಂಭಗೊಂಡು ರಾತ್ರಿ 9ರವರೆಗೂ ನಡೆದು ಮಂಗಳಾರತಿ ,ಪ್ರಸಾದ ವಿತರಣೆ ನಡೆಯಿತು. ಈ ಸಂದರ್ಭದಲ್ಲಿ ಊರ ಪರವೂರಿನ ಭಕ್ತರು ಸೇರಿದಂತೆ ಸುಮಾರು ನೂರರಷ್ಟು ಭಕ್ತರು ಸತ್ಯನಾರಾಯಣ ಪೂಜೆಯಲ್ಲಿ ಪಾಲ್ಗೊಂಡರು.






ವರುಣನ ಕೃಪೆಗಾಗಿಯೇ ನಡೆಸುವಂತಹ ಪೂಜೆ
ಸಾಧಾರಣವಾಗಿ ಸತ್ಯನಾರಾಯಣ ಪೂಜೆ ದೇವಸ್ಥಾನದ ಪ್ರಾಂಗಣಗಳಲ್ಲಿ ಅಥವಾ ಮನೆಗಳಲ್ಲಿ ನಡೆಯುವುದನ್ನು ನೋಡಿರುತ್ತೇವೆ ಆದರೆ ಇಲ್ಲಿ ನಡೆಯುವ ಸತ್ಯನಾರಾಯಣ ಪೂಜೆ ಅವೆಲ್ಲಕ್ಕಿಂತ ಭಿನ್ನವಾಗಿದೆ. ಎರಡು ಗ್ರಾಮಗಳಾದ ಪುಣಚ ಮತ್ತು ಇರ್ದೆ ಗ್ರಾಮಗಳ ನದಿಯ ಮಧ್ಯ ಕೇಂದ್ರದಲ್ಲಿ ಮಳೆಗಾಗಿಯೇ ಪೂಜಾ ಕೈಂಕರ್ಯ ಸುಮಾರು ವರ್ಷಗಳಿಂದ ನಡೆದುಕೊಂಡು ಬರುತ್ತಿರುವುದು ಇಲ್ಲಿನ ವಿಶೇಷ.

ಭಕ್ತರ ಪ್ರಾರ್ಥನೆಗೆ ಧರೆಗಿಳಿದ ವರುಣರಾಯ
ಈ ಬಾರಿ ಸುಡುವ ಬಿಸಿಲಿನ ತಾಂಡವ ಒಂದೆಡೆಯಾದರೆ, ನೀರಿಲ್ಲದೆ ಹಪಹಪಿಸುವ ಜನರು ಪಾಡು ಒಂದೆಡೆ. ಇಂತಹ ಸಂದರ್ಭದಲ್ಲಿ ನಾನಾ ಕಡೆಗಳಲ್ಲಿ ಮಳೆಗಾಗಿ ಪ್ರಾರ್ಥನೆ ನಡೆದಿದೆ, ನಡೆಯುತ್ತಲೇ ಇದೆ. ಅದೇ ರೀತಿ ಇಲ್ಲಿಯೂ ಪ್ರಾರ್ಥನೆ ನಡೆದಿದ್ದು, ಅಚ್ಚರಿ ಎಂಬಂತೆ ಪೂಜೆ ಸಲ್ಲಿಸಿದ ಕೆಲವೇ ಗಂಟೆಗಳಲ್ಲಿ ವರುಣನ ಮುನಿಸು ಕಳೆದು ಬೇಡಿದ ಭಕ್ತರಿಗೆ ಅಮೃತದಂತಹ ನೀರನ್ನು ದಯಪಾಲಿಸಿ ಭಕ್ತರ ಪಾಲಿನ ಪ್ರಾರ್ಥನೆಗೆ ಅಸ್ತು ಎಂದಿದ್ದಾನೆ ವರುಣರಾಯ.









