ಪುತ್ತೂರು: ಮಾಯಿದೆ ದೇವುಸ್ ಚರ್ಚ್ ಸಮೂಹ ಶಿಕ್ಷಣ ಸಂಸ್ಥೆಯಲ್ಲೊಂದಾದ ಸಂತ ಫಿಲೋಮಿನಾ ಕಾಲೇಜಿನಲ್ಲಿ 2021-22ನೇ ಸಾಲಿನ ವಿದ್ಯಾರ್ಥಿ ಸಂಘದ ಚುನಾವಣಾ ಪ್ರಕ್ರಿಯೆಯು ಕಾಲೇಜಿನ ಪ್ರಾಂಶುಪಾಲ ಡಾ|ಆಂಟನಿ ಪ್ರಕಾಶ್ ಮೊಂತೇರೋರವರ ಮಾರ್ಗದರ್ಶನದಲ್ಲಿ ಜ.14 ರಂದು ಜರಗಿತು.
ಅಧ್ಯಕ್ಷರಾಗಿ ಅಂತಿಮ ಬಿಎಸ್ಡಬ್ಲ್ಯೂ ವಿಭಾಗದ ಅಮಿತ್ ಆರಾನ್ಹಾ ಹಾಗೂ ಕಾರ್ಯದರ್ಶಿಯಾಗಿ ಅಂತಿಮ ಬಿಎಸ್ಸಿ ವಿಭಾಗದ ಪ್ರಖ್ಯಾತ್ ಟಿ.ಜೆರವರು ಆಯ್ಕೆಯಾದರು. ಅಧ್ಯಕ್ಷ ಸ್ಥಾನಕ್ಕೆ ಅಂತಿಮ ಬಿಸಿಎ ವಿಭಾಗದ ಸಾರ್ಥಕ್ ಬಿ ಹಾಗೂ ಕಾರ್ಯದರ್ಶಿ ಸ್ಥಾನಕ್ಕೆ ಅಂತಿಮ ಬಿಕಾಂ ವಿಭಾಗದ ಶಿನಾನ್ರವರು ಸ್ಪರ್ಧಿಸಿದ್ದರು. ತಾಂತ್ರಿಕ ಕಾರಣಗಳಿಂದಾಗಿ ಜೊತೆ ಕಾರ್ಯದರ್ಶಿ ಸ್ಥಾನವು ಅಂತಿಮವಾಗಿಲ್ಲ. ಮುಂದಿನ ದಿನಗಳಲ್ಲಿ ನೇಮಕ ಮಾಡಲಾಗುವುದು ಎಂದು ಕಾಲೇಜು ಪ್ರಕಟಣೆ ತಿಳಿಸಿದೆ.


ಮೊದಲಿಗೆ ಕಾಲೇಜಿನ ಪ್ರಾಂಶುಪಾಲ ಡಾ|ಆಂಟನಿ ಪ್ರಕಾಶ್ ಮೊಂತೇರೋರವರು ವಿದ್ಯಾರ್ಥಿ ಸಂಘದ ಪ್ರಾಮುಖ್ಯತೆ ಹಾಗೂ ಧ್ಯೇಯೋದ್ಧೇಶಗಳ ಬಗ್ಗೆ ಮಾತನಾಡಿ ವಿದ್ಯಾರ್ಥಿಗಳು ಶಿಸ್ತಿನಿಂದ ಚುನಾವಣೆಯಲ್ಲಿ ಭಾಗವಹಿಸಬೇಕು ಎಂದರು. ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ.ಚಂದ್ರಶೇಖರ್ರವರು ಚುನಾವಣಾ ಪ್ರಕ್ರಿಯೆಯ ನಿಯಮಾವಳಿಗಳನ್ನು ಪ್ರಸ್ತುತಪಡಿಸಿ, ವಂದಿಸಿದರು. ಮತ್ತೋರ್ವೆ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಹಾಗೂ ಆಂಗ್ಲ ಭಾಷಾ ವಿಭಾಗದ ಮುಖ್ಯಸ್ಥೆ ಭಾರತಿ ಎಸ್ ರೈ ಕಾರ್ಯಕ್ರಮ ನಿರೂಪಿಸಿದರು. ಬ್ಯಾಲೆಟ್ ಪೇಪರ್ ಹಾಗೂ ರಿಟರ್ನಿಂಗ್ ಆಫೀಸರ್ಸ್ಗಳಾಗಿ ಕನ್ನಡ ಭಾಷಾ ವಿಭಾಗದ ಮುಖ್ಯಸ್ಥ ಡಾ|ವಿಜಯ ಕುಮಾರ್ ಮೊಳೆಯಾರ್, ಗಣಕ ವಿಜ್ಞಾನ ವಿಭಾಗದ ಮುಖ್ಯಸ್ಥ ವಿನಯಚಂದ್ರ, ಕಾಲೇಜಿನ ಪಿಆರ್ಒ ಹಾಗೂ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಎ.ಪಿ ರಾಧಾಕೃಷ್ಣ, ಮತ ಎಣಿಕೆ ಮುಖ್ಯಸ್ಥರಾಗಿ ರಸಾಯನಶಾಸ್ತ್ರ ವಿಭಾಗದ ಪ್ರೊ|ಎಡ್ವಿನ್ ಡಿ’ಸೋಜ ಸಹಿತ ಕಾಲೇಜಿನ ಉಪನ್ಯಾಸಕ, ಸಹಾಯಕ ಪ್ರಾಧ್ಯಾಪಕ ವೃಂದ ಹಾಗೂ ಆಡಳಿತ ಸಿಬ್ಬಂದಿ ವೃಂದದವರು ಸಹಕರಿಸಿದರು.
ಕೋವಿಡ್ ನಿಯಮ ಪಾಲನೆಯೊಂದಿಗೆ ಚುನಾವಣೆ:
ಕಾಲೇಜಿನಲ್ಲಿ ಎಂದಿನಂತೆ ಚುನಾವಣಾ ದಿನಾಂಕ ಅಧಿಕೃತ ಘೋಷಣೆಯನ್ನು ಹೊರಡಿಸಿದ ಬಳಿಕ ಆಭ್ಯರ್ಥಿಗಳು ಕಾಲೇಜು ಕ್ಯಾಂಪಸ್ಸಿನಲ್ಲಿ ಗುಂಪುಗಳೊಂದಿಗೆ ಮತಯಾಚನೆಯ ಸನ್ನಿವೇಶವಿತ್ತು. ಅಲ್ಲದೆ ಚುನಾವಣಾ ದಿನ ಕಾಲೇಜಿನ ಸಭಾಂಗಣದಲ್ಲಿ ಎಲ್ಲಾ ವಿದ್ಯಾರ್ಥಿಗಳನ್ನು ಸೇರಿಸಿ ಆಭ್ಯರ್ಥಿಗಳು ಚುನಾವಣಾ ಭಾಷಣವನ್ನು ಮಾಡಬೇಕಿತ್ತು. ಆಯಾ ತರಗತಿಗಳಲ್ಲಿ ಬ್ಯಾಲೆಟ್ ಪೇಪರ್ನಲ್ಲಿ ಚುನಾವಣೆ ನಡೆದು ವಿಜೇತ ಆಭ್ಯರ್ಥಿಗಳ ಘೋಷಣೆಯಾದ ಬಳಿಕ ಕಾಲೇಜು ಕ್ಯಾಂಪಸ್ಸಿನಲ್ಲಿ ಡಿ.ಜೆ ಸಂಗೀತದೊಂದಿಗೆ ವೈಭವಯುತ ಮೆರವಣಿಗೆ ಮೊದಲ್ಗೊಳ್ಳುತ್ತಿತ್ತು ಮತ್ತು ದುಂದುವೆಚ್ಚಕ್ಕೆ ರಹದಾರಿಯಾಗಿತ್ತು. ಆದರೆ ಈ ಬಾರಿ ಇವೆಲ್ಲಕ್ಕೂ ಬ್ರೇಕ್ ನೀಡಿದ ಕಾಲೇಜು, ಆಭ್ಯರ್ಥಿಗಳ ಮತದಾನ ಭಾಷಣವು ಪ್ರಾಂಶುಪಾಲರ ಕೊಠಡಿಯಲ್ಲಿಯೇ ಮೈಕ್ ಮುಖಾಂತರ ಮಾಡಲಾಯಿತು. ಚುನಾವಣಾ ಹಿಂದಿನ ದಿನ ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿಗಳೊಂದಿಗೆ ಆಭ್ಯರ್ಥಿಗಳು ಪ್ರತಿ ತರಗತಿಗಳಿಗೆ ತೆರಳಿ ಮತಯಾಚನೆ ಮಾಡಿದ್ದರು. ಸಂಜೆ ಪ್ರಾಂಶುಪಾಲ \|ಡಾ|ಆಂಟನಿ ಪ್ರಕಾಶ್ ಮೊಂತೇರೋರವರು ವಿಜೇತ ಆಭ್ಯರ್ಥಿಗಳನ್ನು ಘೋಷಿಸಿ, ಅಭಿನಂದಿಸಿದರು. ಈ ಬಾರಿಯ ಚುನಾವಣಾ ಪ್ರಕ್ರಿಯೆಯು ಸಾಮಾಜಿಕ ಅಂತರದೊಂದಿಗೆ ಸಂಪೂರ್ಣ ಕೋವಿಡ್ ಸೂಚನೆಯನ್ನು ಪಾಲಿಸುತ್ತಾ ಯಶಸ್ವಿಯಾಗಿ ನಡೆಸಲಾಗಿರುವುದು ಮಾದರಿಯೆನಿಸಿದೆ.
ವೈಶಿಷ್ಟ್ಯತೆಗಳು…
–ಸಂಭ್ರಮದ ಮೆರವಣಿಗೆ, ಡಿ.ಜೆ ಸಂಗೀತ, ಕುಣಿತಕ್ಕೆ ಬ್ರೇಕ್
-ಪ್ರಾಂಶುಪಾಲರ ಕೊಠಡಿಯಿಂದಲೇ ಆಭ್ಯರ್ಥಿಗಳ ಭಾಷಣಕ್ಕೆ ಅವಕಾಶ
-ಗುಂಪಿನೊಂದಿಗೆ ಮತಯಾಚನೆ ನಿಷಿದ್ಧ
-ದುಂದುವೆಚ್ಚಕ್ಕೆ ಕಡಿವಾಣ