ಎಸ್‌ಡಿಎಂಸಿ ಊರ್ಜಿತ ಇರುವಾಗಲೇ ಪುನಃ ಸಮಿತಿ ರಚನೆಗೆ ನಿರ್ಧಾರ

0

  • ಪಾಣಾಜೆ ಶಾಲಾ ಮುಖ್ಯ ಗುರುಗಳು ಕರೆದಿರುವ ಸಭೆಗೆ ಹೈಕೋರ್ಟ್ ತಡೆಯಾಜ್ಞೆ

ಪುತ್ತೂರು: ಎಸ್‌ಡಿಎಂಸಿ ಊರ್ಜಿತ ದಲ್ಲಿರುವಾಗಲೇ ಹೊಸ ಸಮಿತಿ ರಚನೆಗೆ ಗ್ರಾಪಂ ಅಧ್ಯಕ್ಷರ ಸೂಚನೆಯಂತೆ ಶಾಲಾ ಮುಖ್ಯಗುರುಗಳು ಕರೆದಿದ್ದ ಎಸ್‌ಡಿಎಂಸಿ ಸಮಿತಿ ರಚನಾ ಸಭೆಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದ ಪರಿಣಾಮ ಜ.14 ರಂದು ನಡೆಯಬೇಕಿದ್ದ ಸಭೆಯನ್ನು ಮುಂದೂಡಲಾದ ಘಟನೆ ಪಾಣಾಜೆ ಸಹಿಪ್ರಾಶಾಲೆಯಲ್ಲಿ ನಡೆದಿದೆ.

ಪಾಣಾಜೆ ದ ಕ ಜಿ ಪ ಹಿ ಪ್ರಾ ಶಾಲೆಯ ನೂತನ ಎಸ್ ಡಿ ಎಂ ಸಿ ರಚನೆಯ ಬಗ್ಗೆ ವಿದ್ಯಾರ್ಥಿಗಳ ಪೋಷಕರ ಸಬೆಯು ದಿನಾಂಕ ಅ. 30 ರಂದು ಪಾಣಾಜೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಭಾರತಿ ಭಟ್ ರವರ ಅಧ್ಯಕ್ಷತೆಯಲ್ಲಿ ನಡೆದಿತ್ತು.

ಈ ಸಭೆಯಲ್ಲಿ ಸೇರಿದ್ದ ಪೋಷಕರು ನಿಯಮದಂತೆ ಒಟ್ಟು 18 ಜನರನ್ನು ಎಸ್. ಡಿ. ಎಂ. ಸಿ ಸದಸ್ಯರನ್ನಾಗಿ ಆಯ್ಕೆ ಮಾಡಿದ್ದರು,ಆ ಬಳಿಕ ನಡೆದ ಎಸ್ ಡಿ ಎಂ ಸಿ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಯಲ್ಲಿ ಮೂರು ಜನರು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆಗೆ ಇಳಿದ ಕಾರಣ ಚುನಾವಣೆ ನಡೆಸಲಾಗಿತ್ತು. ಎಸ್ ಡಿ ಎಂ ಸಿ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ದಿಸಿದ್ದ ಸೀತಾ ಉದಯ ಶಂಕರ ಭಟ್ ಚಂಬರಕಟ್ಟ ಹಾಗೂ ಹಿಂದಿನ ಎಸ್ ಡಿ ಎಂ ಸಿ ಅಧ್ಯಕ್ಷ ಅಬೂಬಕ್ಕರ್ ಅರ್ಲಪದವು ರವರಿಗೆ ಸಮಾನ ಮತಗಳು ಬಂದ ಕಾರಣ, ಪಂಚಾಯಿತಿ ಅಧ್ಯಕ್ಷರು ಇಬ್ಬರು ಅಭ್ಯರ್ಥಿಗಳ ಹೆಸರಿನ ಚೀಟಿಯನ್ನು ಎತ್ತುವ ಪ್ರಕ್ರಿಯೆ ನಡೆಸಿದರು. ಚೀಟಿ ಎತ್ತಿದಾಗ ಸೀತಾ ಉದಯಶಂಕರ ಭಟ್ಟರವರ ಹೆಸರು ಬಂದದ್ದರಿಂದ ಸೀತಾ ಉದಯ ಶಂಕರ ಭಟ್ ರವರನ್ನು ಶಾಲೆಯ ನೂತನ ಎಸ್ ಡಿ ಎಂ ಸಿ ಅಧ್ಯಕ್ಷರನ್ನಾಗಿ ಘೋಷಣೆ ಮಾಡಿ ಸಭೆಯ ನಡವಳಿಯಲ್ಲಿ ದಾಖಲಿಸಲಾಗಿತ್ತು. ಆ ಬಳಿಕ ಸೀತಾ ಉದಯ ಶಂಕರ ಭಟ್ ರವರು ಎಸ್ ಡಿ ಎಂ ಸಿ ಅಧ್ಯಕ್ಷರಾಗಿ ತನ್ನ ಶಾಲಾ ಕರ್ತವ್ಯವನ್ನು ನಿರ್ವಹಿಸುತ್ತಿದ್ದರು, ಕೆಲವು ದಿನಗಳ ಬಳಿಕ ಅಧ್ಯಕ್ಷರು, ಎಸ್ ಡಿ ಎಂ ಸಿ ಸಭೆ ಕರೆಯಬೇಕೆಂದು ಮುಖ್ಯಗುರುಗಳಲ್ಲಿ ಕೇಳಿಕೊಂಡಾಗ ಮುಖ್ಯಗುರುಗಳು ಎಸ್ ಡಿ ಎಂ ಸಿ ಆಯ್ಕೆ ಬಗ್ಗೆ ತಕರಾರು ಇದೆ ಈ ಕುರಿತು ಪಂಚಾಯತ್‌ನ ಸೂಚನೆ ಬರದೆ ಸಭೆ ಕರೆಯಲು ಸಾಧ್ಯವಿಲ್ಲವೆಂದು ತಿಳಿಸಿದ್ದರು.

ಇದರಿಂದ ನೊಂದು ಎಸ್ ಡಿ ಎಂ ಸಿ ರಚನೆಯ ಬಗ್ಗೆ ನಡೆದ ಸಭೆಯ ನಡವಳಿ ಯ ಪ್ರತಿ ನೀಡಬೇಕೆಂದು ಕೇಳಿ ಕೊಂಡಾಗ, ತನ್ನ ಅರ್ಜಿಯನ್ನೇ ಸ್ವೀಕರಿಸಲು ನಿರಾಕರಿಸಿದ ಮುಖ್ಯ ಗುರುಗಳ ಕರ್ತವ್ಯಲೋಪದ ಕುರಿತು ಸೀತಾ ಉದಯ ಶಂಕರ್ ಭಟ್ ರವರು,ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಲಿಖಿತ ದೂರು ಸಲ್ಲಿಸಿದ್ದರು. ಈ ಎಲ್ಲಾ ಬೆಳವಣಿಗೆ ನಡುವೆ ನೂತನವಾಗಿ ಎಸ್ ಡಿ ಎಂ ಸಿ ರಚನೆ ಮಾಡಬೇಕೆಂದು ಗ್ರಾಮ ಪಂಚಾಯತ ಅಧ್ಯಕ್ಷರ ಸೂಚನೆಯಂತೆ ಶಾಲಾ ಮುಖ್ಯಗುರುಗಳಾದ ಶೀಲಾವತಿಯವರು ಹೊಸ ಎಸ್ ಡಿ ಎಂ ಸಿ ರಚನೆ ಮಾಡುವ ಕುರಿತು ಜ.14 ರಂದು ರಂದು ಪೋಷಕರ ಸಭೆ ಕರೆದಿದ್ದರು.

ಎಸ್ ಡಿ ಎಂ ಸಿ ರಚನೆಯಾಗಿ ಅಧ್ಯಕ್ಷರಾಗಿ ನೇಮಕ ಗೊಂಡು ಎಸ್ ಡಿ ಎಂ ಸಿ ಸಮಿತಿ ಊರ್ಜಿತದಲ್ಲಿರುವಾಗಲೇ ನಿಯಮಬಾಹಿರವಾಗಿ ಪುನಃ ಎಸ್ ಡಿ ಎಂ ಸಿ ರಚನೆಯ ಬಗ್ಗೆ ಕರೆದಿರುವ ಸಭೆಯು ಕಾನೂನು ಬಾಹಿರವೆಂದು, ಈ ಸಭೆಯನ್ನು ರದ್ದು ಪಡಿಸಬೇಕೆಂದು, ಈ ರೀತಿ ಕಾನೂನು ಬಾಹಿರವಾಗಿ ಸಭೆ ಕರೆದಿರುವವರ ಹಾಗೂ ಇದಕ್ಕೆ ಕಾರಣಕರ್ತರ ವಿರುದ್ಧ ಕ್ರಮ ಕೈಗೊಳ್ಳ ಬೇಕೆಂದು ಸೀತಾ ಉದಯ ಶಂಕರ ಭಟ್ ರವರು ಹೈ ಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಿ ಮನವಿ ಮಾಡಿದ್ದರು ,ಇವರ ಈ ಅರ್ಜಿಯನ್ನು ಪರಿಗಣಿಸಿದ ರಾಜ್ಯ ಉಚ್ಚ ನ್ಯಾಯಾಲಯವು ಜ.14ರ ಎಸ್ ಡಿ ಎಂ ಸಿ ರಚನೆ ಸಭೆಗೆ ತಡೆಯಾಜ್ಞೆ ನೀಡಿರುತ್ತದೆ.ಹೈ ಕೋರ್ಟ್ ನಲ್ಲಿ ಸೀತಾ ಭಟ್‌ರವರ ಪರವಾಗಿ ನ್ಯಾಯವಾದಿ ಲತೀಫ್ ಬಡಗನ್ನೂರುರವರು ವಾದಿಸಿದ್ದರು.

ನಾನು ಎಸ್‌ಡಿಎಂಸಿ ಅಧ್ಯಕ್ಷಳಾಗಿ ಚುನಾವಣೆಯ ಮೂಲಕ ಆಯ್ಕೆಯಾಗಿದ್ದೇನೆ. ಕಳೆದ ಅಕ್ಟೋಬರ್‌ನಿಂದ ನಾನೇ ಅಧ್ಯಕ್ಷಳಾಗಿದ್ದೇನೆ. ನಾನು ಅಧ್ಯಕ್ಷೆಯಾಗಿ ಮುಂದುವರೆಯಬಾರದು ಎಂಬ ದುರುದ್ದೇಶದಿಂದ ಗ್ರಾಪಂ ಅಧ್ಯಕ್ಷೆ ಮತ್ತು ಹಿಂದಿನ ಅಧ್ಯಕ್ಷರಾದ ಅಬೂಬಕ್ಕರ್ ಆರ್ಲಪದವು ರವರು ಶಾಲೆಯಲ್ಲಿ ರಾಜಕೀಯ ಮಾಡಿದ್ದಾರೆ. ನಾನು ಶಾಲೆಗೆ ಹೋದರೆ ನನ್ನ ವಿರುದ್ದ ಪೊಲೀಸರಿಗೆ ದೂರು ಕೊಡಿ ಎಂದು ಶಾಲಾ ಮುಖ್ಯಗುರುಗಳಿಗೆ ಇವರಿಬ್ಬರೂ ಹೇಳಿದ್ದಾರೆ ಇದರ ವಾಯಿಸ್ ರೆಕಾರ್ಡ್ ನನ್ನಲ್ಲಿದೆ. ಕಾನೂನು ಅಥವಾ ನಿಯಮದ ಪ್ರಕಾರವೇ ನಾನು ಅಧ್ಯಕ್ಷಳಾಗಿ ಆಯ್ಕೆಯಾಗಿದ್ದೇನೆ. ನನಗೆ ಅವಮಾನ ಮಾಡಿದ್ದಾರೆ, ನನಗಾದ ಅನ್ಯಾಯದ ವಿರುದ್ದ ಕಾನೂನಾತ್ಮಕ ಹೋರಾಟ ಮುಂದುವರೆಸುವೆ. ಸತ್ಯ ವಿಚಾರ ಜನರಿಗೂ ತಿಳಿಯಬೇಕಿದೆ- ಸೀತಾ ಉದಯಶಂಕರ ಭಟ್, ದೂರುದಾರರು

ಈ ಹಿಂದೆ ಪಾಣಾಜೆ ಶಾಲೆಯಲ್ಲಿ ನೂತನ ಎಸ್‌ಡಿಎಂಸಿ ರಚನೆಯಾಗಿತ್ತು. ರಚನೆಯಾದ ಎಸ್‌ಡಿಎಂಸಿ ಕ್ರಮಬದ್ದವಾಗಿ ನಡೆಯಲಿಲ್ಲ, ಪೋಷಕರ ಅನುಪಾತದಲ್ಲಿ ನಡೆದಿದ್ದು ಮಕ್ಕಳ ಅನುಪಾತದಲ್ಲಿ ನಡೆಯಲಿಲ್ಲ, ಸಮಿತಿ ರಚನೆ ಸುತ್ತೋಲೆಯ ಪ್ರಕಾರ ನಡೆಯಲಿಲ್ಲ ಎಂದು ಹಿಂದಿನ ಅಧ್ಯಕ್ಷರಾದ ಆರ್ಲಪದವು ಅಬೂಬಕ್ಕರ್ ಅವರು ಗ್ರಾಪಂಗೆ ಲಿಖಿತವಾಗಿ ತಿಳಿಸಿದ್ದರು. ಎಸ್‌ಡಿಎಂಸಿ ರಚನೆಯ ವಿಚಾರ ಶಿಕ್ಷಣ ಇಲಾಖೆಯ ಸುಪರ್ಧಿಗೆ ಬರುವ ಕಾರಣ ಶಿಕ್ಷಣ ಇಲಾಖೆಗೆ ತಿಳಿಸಿ ಎಂದು ಅರ್ಜಿದಾರರಿಗೆ ತಿಳಿಸಿದ್ದೆ. ಅಬೂಬಕ್ಕರ್ ಆರ್ಲಪದವು ಅವರು ಶಿಕ್ಷಣ ಇಲಾಖೆಗೆ ದೂರು ನೀಡಿದ್ದು ಅವರ ದೂರಿನ ಆಧಾರದಲ್ಲಿ ಶಿಕ್ಷಣ ಇಲಾಖೆಯ ವತಿಯಿಂದ ಗ್ರಾಪಂಗೆ ಸೂಚನೆ ಬಂದಿದ್ದು ಹಳೆಯ ಸಮಿತಿಯನ್ನು ರದ್ದು ಮಾಡಲಾಗಿದ್ದು, ಹೊಸ ಸಮಿತಿ ರಚನೆ ವೇಳೆ ಕೆಲವೊಂದು ಪ್ರಮಾಧವಾಗಿದೆ ಎಂದು ಹೇಳಿದ್ದ ಶಿಕ್ಷಣಾಧಿಕಾರಿಗಳು ಹೊಸ ಸಮಿತಿ ರಚನೆ ಮಾಡುವಂತೆ ಕೇಳಿಕೊಂಡಿದ್ದರು. ಅದರಂತೆ ನಾವು ಹೊಸ ಸಮಿತಿ ರಚನೆಗೆ ದಿನಾಂಕವನ್ನು ನಿಗಧಿಮಾಡಿ ಪೋಷಕರಿಗೆ ತಿಳಿಸಿದ್ದೆವು. ಇದಕ್ಕೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದ ಸೀತಾ ಉದಯಶಂಕರ ಭಟ್ ಅವರು ನ್ಯಾಯಾಲಯದ ಮೂಲಕ ತಡೆಯಾಜ್ಞೆ ತಂದಿದ್ದಾರೆ ಎಂಬ ಮಾಹಿತಿ ಇದ್ದು ಆ ಕಾರಣಕ್ಕೆ ಸಭೆ ರದ್ದಾಗಿತ್ತು. ಎಸ್‌ಡಿಎಂಸಿ ರಚನೆಯ ವಿಚಾರ ಶಿಕ್ಷಣ ಇಲಾಖೆ ಮತ್ತು ಶಿಕ್ಷಣ ಅಧಿಕಾರಿಗಳ ಸುಪರ್ಧಿಗೆ ಬರುತ್ತದೆ ಗ್ರಾಪಂ ಅದರಲ್ಲಿ ಭಾಗವಹಿಸಿ ಸಭೆಯನ್ನು ನಡೆಸಿಕೊಡುವುದು ಮಾತ್ರ ನಮ್ಮ ಕೆಲಸವಾಗಿದೆ – ಭಾರತಿ ಭಟ್ ಗ್ರಾಪಂ ಅಧ್ಯಕ್ಷರು ಪಾಣಾಜೆ

ಎಸ್‌ಡಿಎಂಸಿ ನಿಯಮಾಮುಸಾರ ಅಥವಾ ಸರಕಾರದ ಸುತ್ತೋಲೆ ಪ್ರಕಾರ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯಲಿಲ್ಲ ಎಂಬ ಕಾರಣಕ್ಕೆ ಪಾಣಾಜೆ ಗ್ರಾಮಪಂಚಾಯತ್ ಹೊಸ ಸಮಿತಿ ರಚನೆಗೆ ಸಂಬಂಧಿಸಿದಂತೆ ಪೋಷಕರ ಸಭೆಯನ್ನು ಕರೆದಿದ್ದಾರೆ. ಆ ಸಭೆಗೆ ನ್ಯಾಯಾಲಯ ತಡೆಯಾಜ್ಞೆ ತಂದಿದೆ ಎಂಬ ವಿಚಾರ ನನ್ನ ಗಮನಕ್ಕೆ ಬಂದಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್‌ರವರು ತಿಳಿಸಿದ್ದಾರೆ.

ಮಕ್ಕಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ
ಎಸ್‌ಡಿಎಂಸಿ ಇಲ್ಲದೇ ಶಾಲೆಯಲ್ಲಿ ಮೂಲಭೂತ ಅವಶ್ಯಕತೆಗಳಿಗೆ ಸಮಸ್ಯೆಯಾಗಿದೆ. ಯಾವುದೇ ಹಣ ಬಳಕೆಗೆ ಎಸ್‌ಡಿಎಂಸಿ ಬೇಕು. ಹಾಗಾಗಿ ಇದು ಮಕ್ಕಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಕ್ಷೇತ್ರ ಶಿಕ್ಷಣಾಧಿಕಾರಿಗಳ ಆದೇಶದಂತೆ ನಾವು ಎಸ್‌ಡಿಎಂಸಿಗೆ ಮರು ಆಯ್ಕೆ ಪ್ರಕ್ರಿಯೆ ನಡೆಸಲು ದಿನನಿಗದಿಯಾಗಿತ್ತು. ಆ ದಿನ ನಡೆಸಬಾರದೆಂದು ಕೋರ್ಟು ತಡೆಯ ವಕೀಲರ ನೋಟೀಸ್ ಬಂದಿದೆ. ಆದರೆ ಕೋರ್ಟುನಿಂದ ಯಾವುದೆ ಅಧಿಕೃತ ಆದೇಶ ನಮಗೆ ಬಂದಿಲ್ಲ. ಆದರೂ ಮಾನ್ಯ ನ್ಯಾಯಾಲಯಕ್ಕೆ ಗೌರವ ನೀಡಿ ಜ. ೧೪ ರ ಸಭೆಯನ್ನು ನಡೆಸಿಲ್ಲ ಶೀಲಾವತಿ ಮುಖ್ಯಗುರುಗಳು

LEAVE A REPLY

Please enter your comment!
Please enter your name here