ಮಣ್ಣಾಪು ಶ್ರೀ ಕೊರಗಜ್ಜ ಕ್ಷೇತ್ರದಲ್ಲಿ ವಾರ್ಷಿಕ ನೇಮೋತ್ಸವ ಸಾಮೂಹಿಕ ಪ್ರಾರ್ಥನೆ, ಗಣಹೋಮ, ಸತ್ಯನಾರಾಯಣ ಪೂಜೆ

0

ಪುತ್ತೂರು: ಸರಿಸುಮಾರು 380 ವರ್ಷಗಳ ಇತಿಹಾಸವಿರುವ ಕೆಮ್ಮಿಂಜೆ ಗ್ರಾಮದ ಮೊಟ್ಟೆತ್ತಡ್ಕ ಶ್ರೀ ಕೊರಗಜ್ಜ ಮತ್ತು ಶ್ರೀ ಆದಿಬ್ರಹ್ಮ ಮೊಗೇರ್ಕಳ ದೈವಸ್ಥಾನದ ಶ್ರೀ ಕ್ಷೇತ್ರ ಮಣ್ಣಾಪು ಕೊರಗಜ್ಜ ದೈವಸ್ಥಾನದ ವಾರ್ಷಿಕ ನೇಮೋತ್ಸವವು ಜ.23 ರಿಂದ 25ರ ತನಕ ಮಣ್ಣಾಪು ಶ್ರೀ ಕ್ಷೇತ್ರದಲ್ಲಿ ವಿಜ್ರಂಭಣೆಯಿಂದ ನಡೆಯಲಿದ್ದು, ಶ್ರೀ ಕ್ಷೇತ್ರದಲ್ಲಿ ಹಬ್ಬದ ಸಂಭ್ರಮ ಮನೆಮಾಡಿದೆ.
ಜ.೨೩ ರಂದು ಬೆಳಿಗ್ಗೆ ಸಾಮೂಹಿಕ ಪ್ರಾರ್ಥನೆ, ಗಣಹೋಮ, ಬಳಿಕ ಶ್ರೀ ಸತ್ಯನಾರಾಯಣ ಪೂಜೆ ಇತ್ಯಾದಿ ಧಾರ್ಮಿಕ ಕಾರ್ಯಕ್ರಮಗಳು ಗ್ರಾಮದೇವರ ಅರ್ಚಕರ ನೇತೃತ್ವದಲ್ಲಿ ಜರಗಿತು. ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು. ನೂರಾರು ಭಕ್ತಾಧಿಗಳು ಈ ಧಾರ್ಮಿಕ ವಿಧಿ ಕಾರ್ಯಕ್ರಮದಲ್ಲಿ ಶ್ರದ್ಧಾ ಭಕ್ತಿಯಿಂದ ಪಾಲ್ಗೊಂಡರು. ಶ್ರೀ ಕ್ಷೇತ್ರದ ಗೌರವಾಧ್ಯಕ್ಷ ಎನ್.ರವೀಂದ್ರ ಶೆಟ್ಟಿ ನುಳಿಯಾಲು, ಕೆಮ್ಮಿಂಜೆ-ಮಣ್ಣಾಪು ಶ್ರೀ ಕೊರಗಜ್ಜ ಮತ್ತು ಶ್ರೀ ಆದಿಬ್ರಹ್ಮ ಮೊಗೇರ್ಕಳ ದೈವಸ್ಥಾನದ ಅಧ್ಯಕ್ಷ ವಿಶ್ವನಾಥ್ ಮಣ್ಣಾಪು-ಕೆಮ್ಮಿಂಜೆ, ಉಪಾಧ್ಯಕ್ಷ ಕೇಶವ ಮಣ್ಣಾಪು, ಕಾರ್ಯದರ್ಶಿ ಉಮೇಶ್ ಮಣ್ಣಾಪು, ಮಧ್ಯಸ್ತರಾದ ಗಣೇಶ್ ಪೂಜಾರಿ ಕೆಮ್ಮಿಂಜೆ, ಅರ್ಚಕರಾದ ಕುಂಡ ಮಣ್ಣಾಪು ಹಾಗೂ ಅಣ್ಣು ಮಣ್ಣಾಪು, ಉಪಾಧ್ಯಕ್ಷ ವಿಶ್ವನಾಥ್ ಪೂಜಾರಿ ಮೊಟ್ಟೆತ್ತಡ್ಕ, ಪ್ರಮುಖರಾದ ಗೌರವ ಸಲಹೆಗಾರ ಗಂಗಾಧರ್ ಮಣ್ಣಾಪು, ಲಕ್ಷ್ಮೀ ಮಣ್ಣಾಪು, ರವಿ ಕೆ.ಮಣ್ಣಾಪು, ಸುಶೀಲ ಮಣ್ಣಾಪು, ಚನ್ನು ಮಣ್ಣಾಪು, ಲೋಕೇಶ್ ಜಿ.ಆರ್ ಮಣ್ಣಾಪು, ಹಾಗೂ ಕೆಮ್ಮಿಂಜೆ-ಮಣ್ಣಾಪು ಪರಿಸರದ ಸ್ಥಳೀಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಹರಕೆಯನ್ನು ಒಪ್ಪಿಸುವವರು ಅದೇ ದಿನ ಸಮಿತಿಯವರಲ್ಲಿ ತಿಳಿಸತಕ್ಕದ್ದು. ಪ್ರತೀ ಸಂಕ್ರಮಣದಂದು ಅಗೇಲು ಸೇವೆ ನಡೆಯಲಿರುವುದು. ಅಕ್ಕಿ, ಹೂ, ಹಿಂಗಾರ, ಬೀಡ, ಚಕ್ಕುಲಿ, ಶೇಂದಿ ಇತ್ಯಾದಿಗಳನ್ನು ಕೃತಜ್ಞತಾಪೂರ್ವಕವಾಗಿ ಸ್ವೀಕರಿಸಲಾಗುತ್ತದೆ. ಭಕ್ತಾಧಿಗಳಿಂದ ಅನ್ನದಾನಕ್ಕೆ ಬೇಕಾದ ಅಕ್ಕಿ, ತೆಂಗಿನಕಾಯಿ, ದವಸಧಾನ್ಯಗಳು, ತರಕಾರಿಗಳು, ಬಾಳೆಎಲೆ ಮೊದಲಾದುವುಗಳನ್ನು ಕೃತಜ್ಞತಾಪೂರ್ವಕವಾಗಿ ಶ್ರೀ ಕ್ಷೇತ್ರದಲ್ಲಿ ಸ್ವೀಕರಿಸಲಾಗುತ್ತದೆ. ಹರಕೆಯನ್ನು ಸಲ್ಲಿಸಲು ಆಗಮಿಸುವ ಭಕ್ತಾಧಿಗಳಿಗೆ ಯಾವುದೇ ಬೇಡಿಕೆಗಳನ್ನು ಶ್ರೀ ಕ್ಷೇತ್ರದಲ್ಲಿ ಕೇಳಲಾಗುವುದಿಲ್ಲ. ಭಕ್ತರ ಇಚ್ಚೆಯನುಸಾರ ಕಾಣಿಕೆಯನ್ನು ನೀಡಿದ್ದಲ್ಲಿ ಮಾತ್ರ ಸ್ವೀಕರಿಸಲಾಗುವುದು ಎಂದು ಶ್ರೀ ಕ್ಷೇತ್ರವು ಪ್ರಕಟಣೆಯಲ್ಲಿ ತಿಳಿಸಿದೆ.

ಶಿಸ್ತುಬದ್ಧವಾಗಿ ನಡೆಯಲು ಕೋರಿಕೆ…
ಶ್ರೀ ಕ್ಷೇತ್ರದಲ್ಲಿ ಚಪ್ಪರ ಮುಹೂರ್ತದಿಂದ ಹಿಡಿದು ಪುನರ್ ಪ್ರತಿಷ್ಠೆ ಹಾಗೂ ನೇಮೋತ್ಸವದ ತನಕ ನಡೆದ ಪ್ರತಿಯೊಂದು ಕಾರ್ಯಕ್ರಮವು ಬಹಳ ಅಚ್ಚುಕಟ್ಟಾಗಿ ಹಾಗೂ ಶಿಸ್ತುಬದ್ಧವಾಗಿ ನಡೆದಿರುವ ಹಿಂದೆ ಇಲ್ಲಿನ ಸ್ಥಳೀಯರು ನಿರ್ವಹಿಸಿದ ಕಾರ್ಯವೈಖರಿಯೇ ಕಾರಣವಾಗಿದೆ. ಪ್ರತಿಯೋರ್ವರು ತಮಗೆ ವಹಿಸಿದ ಕಾರ್ಯವನ್ನು ನಿಸ್ಸಂದೇಹವಾಗಿ ಯಶಸ್ವಿಯಾಗಿ ನಿರ್ವಹಿಸಿದ್ದಾರೆ ಎಂದು ಹೇಳಲು ಹೆಮ್ಮೆಯಾಗುತ್ತದೆ. ಇಲ್ಲಿನ ಮಣ್ಣಾಪು ಕೊರಗಜ್ಜ ಕ್ಷೇತ್ರವು ಜಾತ್ಯಾತೀತವಾಗಿ ಅಭಿವೃದ್ಧಿ ಪಥದಲ್ಲಿ ಸಾಗಲು ಶ್ರೀ ಕೊರಗಜ್ಜರವರೇ ಪ್ರೇರೇಪಣಾ ಶಕ್ತಿಯಾಗಿ ಆಶೀರ್ವದಿಸುತ್ತಿದ್ದಾರೆ. ಪ್ರಸ್ತುತ ನಡೆಯುವ ವಾರ್ಷಿಕ ನೇಮೋತ್ಸವ ಕಾರ್ಯಕ್ರಮವು ಎಲ್ಲರ ಸಹಕಾರದಿಂದ ಶಿಸ್ತುಬದ್ಧವಾಗಿ ನಡೆದು ಶ್ರೀ ಕೊರಗಜ್ಜರವರ ಆಶೀರ್ವಾದವನ್ನು ಗಳಿಸುವಂತಾಗಲಿ – ಎನ್.ರವೀಂದ್ರ ಶೆಟ್ಟಿ ನುಳಿಯಾಲು, ಗೌರವಾಧ್ಯಕ್ಷರು, ಶ್ರೀ ಮಣ್ಣಾಪು ಕೊರಗಜ್ಜ ಕ್ಷೇತ್ರ

ಇಂದು ಶ್ರೀ ಕ್ಷೇತ್ರದಲ್ಲಿ…
ಜ.24 ರಂದು ಮಧ್ಯಾಹ್ನ 12.30ಕ್ಕೆ ಶ್ರೀ ಆದಿ ನಾಗಬ್ರಹ್ಮ ಮೊಗೇರ್ಕಳ ದೈವದ ಕಾಲಾವಧಿ ತಂಬಿಲ ನಡೆಯಲಿದೆ ಎಂದು ಶ್ರೀ ಕ್ಷೇತ್ರದ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here