ಜ.26:ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವ ಪೆರೇಡ್‌ನಲ್ಲಿ ಫಿಲೋಮಿನಾ ಕಾಲೇಜಿನ ಕಿರಣ್ ಭಾಗಿ

0

-ಸಂತೋಷ್ ಮೊಟ್ಟೆತ್ತಡ್ಕ

ಪುತ್ತೂರು: ಮಾಯಿದೆ ದೇವುಸ್ ಚರ್ಚ ಸಮೂಹ ಶಿಕ್ಷಣ ಸಂಸ್ಥೆಗಳಲ್ಲೊಂದಾದ ಸಂತ ಫಿಲೋಮಿನಾ ಕಾಲೇಜ್‌ನ ಮುಕುಟಕ್ಕೆ ಮತ್ತೊಂದು ಗರಿ ಎಂಬಂತೆ ಜ.೨6 ರಂದು ನವದೆಹಲಿಯಲ್ಲಿ ಪ್ರತಿಷ್ಠಿತ ಗಣರಾಜ್ಯೋತ್ಸವ ಪೆರೇಡ್‌ನಲ್ಲಿ ಕರ್ನಾಟಕ ಮತ್ತು ಗೋವಾ ಎನ್‌ಸಿಸಿ ಡೈರೆಕ್ಟರೇಟ್‌ನಿಂದ ಭಾಗವಹಿಸಲು ಕಾಲೇಜ್‌ನ ಅಂತಿಮ ವಿಜ್ಞಾನ ವಿಭಾಗದ ವಿದ್ಯಾರ್ಥಿ ಹಾಗೂ ಎನ್‌ಸಿಸಿ ಕೆಡೆಟ್ ಆಗಿರುವ ಜ್ಯೂನಿಯರ್ ಅಂಡರ್ ಆಫೀಸರ್ ಕಿರಣ್‌ರವರು ಆಯ್ಕೆಯಾಗಿರುತ್ತಾರೆ.

ಸತತ ಮೂರು ವರ್ಷಗಳಿಂದ ಫಿಲೋಮಿನಾ ಕಾಲೇಜಿನ ಎನ್‌ಸಿಸಿ ಕೆಡೆಟ್‌ಗಳು ಈ ಪ್ರತಿಷ್ಠಿತ ಸಮಾರಂಭದಲ್ಲಿ ಭಾಗವಹಿಸುತ್ತಿರುವುದು ವಿಶೇಷತೆಯಾಗಿದೆ. ದರ್ಬೆ ಬೈಪಾಸ್‌ನಲ್ಲಿನ ಶ್ರೀದೇವಿ ಕಾಂಪ್ಲೆಕ್ಸ್‌ನಲ್ಲಿ ವ್ಯವಹರಿಸುತ್ತಿರುವ ಕಿರಣ್ ಎಂಟರ್‌ಪ್ರೈಸಸ್ ಮಳಿಗೆಯ ಮಾಲಕರಾದ ಕೇಶವ ನಾಯಕ್ ಹಾಗೂ ವಿದ್ಯಾ ಕೇಶವ್‌ರವರ ಪುತ್ರರಾದ ಕಿರಣ್‌ರವರು ಕಾಲೇಜಿನಲ್ಲಿನ ಎನ್‌ಸಿಸಿ ಘಟಕದಲ್ಲಿ ಅತ್ಯಂತ ಉತ್ಸುಕರಾಗಿ ಭಾಗವಹಿಸುವುದರೊಂದಿಗೆ ಗಣರಾಜ್ಯೋತ್ಸವ ಪೆರೇಡ್‌ಗೆ ಆಯ್ಕೆಯಾಗುವ ಮೂಲಕ ತಮ್ಮ ನಿಲುವನ್ನು ತೋರಿಸಿರುತ್ತಾರೆ ಮಾತ್ರವಲ್ಲದೆ ಎನ್‌ಸಿಸಿಯಲ್ಲಿ ಹಲವಾರು ವಿಷಯಗಳಲ್ಲಿ ಭಾಗವಹಿಸುವ ಮೂಲಕ ಹಲವಾರು ಪ್ರಶಸ್ತಿಗಳನ್ನು ಪಡೆದಿರುತ್ತಾರೆ. ರಜಾದಿನಗಳಲ್ಲಿ ಸೈಕ್ಲಿಂಗ್‌ನೊಂದಿಗೆ ತಮ್ಮ ಆತ್ಮೀಯ ಸಹಪಾಠಿಗಳೊಂದಿಗೆ ವಿವಿಧ ರಮಣೀಯ ಪ್ರದೇಶಗಳಿಗೆ ತೆರಳಿ ಪ್ರಕೃತಿಯ ಸೊಬಗನ್ನು ವೀಕ್ಷಿಸಿರುತ್ತಾರೆ. ಎನ್‌ಸಿಸಿಯಲ್ಲಿ ಸಕ್ರಿಯರಾಗಿ ಭಾಗವಹಿಸುವ ಮೂಲಕ ಕಿರಿಯ ಕೆಡೆಟ್ ಸಹಪಾಠಿಗಳಿಗೆ ತಮ್ಮ ಅನುಭವವನ್ನು ಧಾರೆಯೆರೆಯುವ ಮೂಲಕ ಕಿರಿಯ ಕೆಡೆಟ್‌ಗಳಿಗೆ ಪ್ರೇರಣೆ ಕೂಡ ನೀಡಿರುತ್ತಾರೆ.

ಪ್ರತಿ ಡೈರೆಕ್ಟರೇಟ್‌ನಿಂದ ೫೭ ಕೆಡೆಟ್:
ಭಾರತದಲ್ಲಿ ಒಟ್ಟು ೧೭ ಡೈರೆಕ್ಟರೇಟ್ ಎನ್.ಸಿ.ಸಿ ಘಟಕಗಳಿದ್ದು ಅದರಲ್ಲಿ ಕರ್ನಾಟಕ ಮತ್ತು ಗೋವಾ ಡೈರೆಕ್ಟರೇಟ್ ಒಂದು. ವಿವಿಧ ಭಾಗಗಳಿಂದ ಆಯ್ಕೆಯಾದ ವಿದ್ಯಾರ್ಥಿಗಳಲ್ಲಿ ಕರ್ನಾಟಕ ಮತ್ತು ಗೋವಾ ರಾಜ್ಯಗಳನ್ನು ಪ್ರತಿನಿಧಿಸಲು ಆಯ್ಕೆಯಾಗಿರುವ ಮಂದಿಯಲ್ಲಿ ಮಂಗಳೂರು ಗ್ರೂಪಿನ ‘೧೯ ಕರ್ನಾಟಕ ಬೆಟಾಲಿಯನ್ ಎನ್‌ಸಿಸಿ’ಯಲ್ಲಿ ಕಿರಣ್‌ರವರು ಓರ್ವರಾಗಿದ್ದಾರೆ. ಭಾರತದಲ್ಲಿ ಸುಮಾರು ೧೩ ಲಕ್ಷಕ್ಕೂ ಅಧಿಕ ಕೆಡೆಟ್‌ಗಳಿದ್ದು ಅದರಲ್ಲಿ ದೇಶದ ವಿವಿಧ ಭಾಗಗಳಿಂದ ಆಗಮಿಸುವ ಸುಮಾರು ೨೩೦೦ಕ್ಕೂ ಮಿಕ್ಕಿ ಕೆಡೆಟ್‌ಗಳು ಮಾತ್ರ ಪೆರೇಡ್‌ನಲ್ಲಿ ಭಾಗವಹಿಸಲು ಅವಕಾಶ ಪಡೆಯಲು ಅರ್ಹರಾಗಿದ್ದರು ಮತ್ತು ಪ್ರತೀ ವರ್ಷ ಡೈರೆಕ್ಟರೇಟ್‌ನಿಂದ ೧೧೧ ಕೆಡೆಟ್‌ಗಳು ನವದೆಹಲಿಯಲ್ಲಿ ನಡೆಯುವ ಪೆರೇಡ್‌ನಲ್ಲಿ ಭಾಗವಹಿಸುತ್ತಿದ್ದರು. ಆದರೆ ಕೊರೋನಾ ಮಹಾಮಾರಿಯ ಹಿನ್ನೆಲೆಯಲ್ಲಿ ಈ ಬಾರಿ ಕೇವಲ ೫೭ ಕೆಡೆಟ್‌ಗಳಿಗೆ ಮಾತ್ರ ಭಾಗವಹಿಸಲು ಅವಕಾಶ ಲಭಿಸಿರುತ್ತದೆ. ಕಿರಣ್‌ರವರು ಮಡಿಕೇರಿ, ಮಂಗಳೂರು ಹಾಗೂ ಬೆಂಗಳೂರಿನಲ್ಲಿ ಸಾಂಸ್ಕೃತಿಕ, ಡ್ರಿಲ್ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಒಟ್ಟು ೭೦ ದಿನಗಳ ತರಬೇತಿ ಶಿಬಿರದಲ್ಲಿ ಭಾಗವಹಿಸಿರುತ್ತಾರೆ.

ಕಳೆದ ಐದು ವರ್ಷಗಳಿಂದ ಫಿಲೋಮಿನಾ ಕಾಲೇಜಿನಿಂದ ಏಳು ಮಂದಿ ಕೆಡೆಟ್‌ಗಳು ಅಲ್ಲದೆ ಎನ್‌ಸಿಸಿ ಅಧಿಕಾರಿ ಸೇರಿದಂತೆ ಎಂಟು ಮಂದಿ ಪ್ರತಿಷ್ಠಿತ ಗಣರಾಜ್ಯೋತ್ಸವ ಪೆರೇಡ್‌ನಲ್ಲಿ ಭಾಗವಹಿಸುವ ಅವಕಾಶ ಲಭಿಸಿರುತ್ತದೆ. ೨೦೧೭ರಲ್ಲಿ ಬ್ರ್ಯಾಂಡನ್ ಹಾಗೂ ರಚನಾ, ೨೦೧೮ರಲ್ಲಿ ಜೊವಿನ್ ಜೋಸೆಫ್, ೨೦೨೦ರಲ್ಲಿ ಚೇತನ್ ಪಿ. ಹಾಗೂ ಮಹಾಲಸಾ ಪೈ, ೨೦೨೧ನೇ ಸಾಲಿನಲ್ಲಿ ಆಯ್ಕೆಯಾದ ದಕ್ಷಿಣ ಕನ್ನಡ ಜಿಲ್ಲೆಯ ಏಕಮಾತ್ರ ಕೆಡೆಟ್ ರಕ್ಷಾ ಅಂಚನ್, ಪ್ರಸ್ತುತ ವರ್ಷ ಕಿರಣ್‌ರವರು ಆಯ್ಕೆಯಾಗಿರುತ್ತಾರೆ ಜೊತೆಗೆ ೨೦೨೦ರ ಸಾಲಿನಲ್ಲಿ ಕಾಲೇಜಿನ ಎನ್‌ಸಿಸಿ ಅಧಿಕಾರಿ ಲೆಪ್ಟಿನೆಂಟ್ ಜೋನ್ಸನ್ ಡೇವಿಡ್ ಸಿಕ್ವೇರಾರವರೂ ಕೂಡ ಕರ್ನಾಟಕ ಮತ್ತು ಗೋವಾ ಡೈರೆಕ್ಟರೇಟ್‌ನ ಕಂಟಿಂಜೆಂಟ್ ಅಧಿಕಾರಿಯಾಗಿ ಪೆರೇಡ್‌ನಲ್ಲಿ ಭಾಗವಹಿಸಿದ್ದರು.

ಸಾಂಸ್ಕೃತಿಕ ವಿಭಾಗದಲ್ಲಿ ಭಾಗವಹಿಸುವಿಕೆ…
೨೦೨೧, ಡಿಸೆಂಬರ್ ೧೭ ರಂದು ಕಿರಣ್‌ರವರು ದೆಹಲಿಗೆ ಪ್ರಯಾಣ ಬೆಳೆಸಿದ್ದು, ಕೊರೋನಾ ಹಿನ್ನೆಲೆಯಲ್ಲಿ ೧೪ ದಿನಗಳ ಕಾಲ ಕ್ವಾರಂಟೈನ್‌ನಲ್ಲಿರಬೇಕಾಗುತ್ತದೆ. ಜನವರಿ ಮೂರರಿಂದ ಪೆರೆಡಿನ ತರಬೇತಿ ಪ್ರಾರಂಭಗೊಂಡಿದ್ದು, ಜನವರಿ ೩೦ ರಂದು ಬೆಂಗಳೂರಿಗೆ ಹಿಂತಿರುಗಲಿದ್ದಾರೆ. ಕಿರಣ್‌ರವರು ಕೇವಲ ೩೦ ದಿನಗಳಲ್ಲಿ ಯಕ್ಷಗಾನ ಕಲೆಯನ್ನು ಕಲಿತುಕೊಳ್ಳುವ ಮೂಲಕ ಜನವರಿ ೨೭ ರಂದು ನಡೆಯುವ ಪ್ರಧಾನ ಮಂತ್ರಿ ರ‍್ಯಾಲಿಯ ಸಾಂಸ್ಕೃತಿಕ ವಿಭಾಗದಲ್ಲಿ ಯಕ್ಷಗಾನದಲ್ಲಿ ಭಾಗವಹಿಸಲಿದ್ದಾರೆ. ಕೊರೋನಾ ಹಾವಳಿಯ ಹಿನ್ನೆಲೆಯಲ್ಲೂ ಕಿರಣ್‌ರವರು ಧೃತಿಗೆಡದೆ ಹೆತ್ತವರ ಪ್ರೋತ್ಸಾಹದಿಂದ ಈ ಪ್ರತಿಷ್ಠಿತ ಪೆರೇಡಿನಲ್ಲಿ ಭಾಗವಹಿಸಲಿದ್ದಾರೆ.

LEAVE A REPLY

Please enter your comment!
Please enter your name here