ರೋಟರಿ ಸಿಟಿಯಿಂದ ಕ್ರಿಸ್ಮಸ್ ಸಹಮಿಲನ

0

  • ಮನುಕುಲದಲ್ಲಿ ಮನುಷ್ಯತ್ವದಿಂದ ಜೀವಿಸುವುದೇ ಧರ್ಮವಾಗಿದೆ-ವಂ|ಅಶೋಕ್ ರಾಯನ್

ಪುತ್ತೂರು: ಪ್ರಭು ಯೇಸುಕ್ರಿಸ್ತರ ಬೋಧನೆಗಳಾದ ಪರಸ್ಪರ ಕ್ಷಮೆ, ಪ್ರೀತಿ, ಕರುಣೆ, ದಯೆ, ಸಹನೆ, ಸೇವೆಯಿಂದ ಬಾಳುವ ಮೂಲಕ ಶಾಂತಿ, ಸೌಹಾರ್ದತೆ, ಬಂಧುತ್ವ ಸಮಾಜದಲ್ಲಿ ನೆಲೆಗೊಳ್ಳಲಿ. ಪ್ರಮುಖವಾಗಿ ಮನುಕುಲದಲ್ಲಿ ಮನುಷ್ಯತ್ವದಿಂದ ಜೀವಿಸುವುದೇ ಧರ್ಮವಾಗಿದೆ ಮಾತ್ರವಲ್ಲದೆ ಇದುವೇ ಕ್ರಿಸ್ಮಸ್ ಸಂದೇಶ ಕೂಡ ಎಂದು ಮಾಯಿದೆ ದೇವುಸ್ ಚರ್ಚ್ ಸಮೂಹ ಶಿಕ್ಷಣ ಸಂಸ್ಥೆಗಳಲ್ಲೊಂದಾದ ಸಂತ ಫಿಲೋಮಿನಾ ಕಾಲೇಜಿನ ಸ್ನಾತಕೋತ್ತರ ವಾಣಿಜ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕ ಹಾಗೂ ಕಾಲೇಜಿನ ಪುರುಷರ ವಸತಿನಿಲಯದ ವಾರ್ಡನ್ ಆಗಿರುವ ವಂ|ಅಶೋಕ್ ರಾಯನ್ ಕ್ರಾಸ್ತಾರವರು ಹೇಳಿದರು.

ರೋಟರಿ ಕ್ಲಬ್ ಪುತ್ತೂರು ಸಿಟಿ ವತಿಯಿಂದ ಜ.೨೬ ರಂದು ಚಿಕ್ಕಪುತ್ತೂರು ರೈಲ್ವೇ ಸ್ಟೇಷನ್ ಬಳಿ ಕ್ಲಬ್ ಮಾಜಿ ಅಧ್ಯಕ್ಷ ಜ್ಯೋ ಡಿ’ಸೋಜರವರ ಮನೆಯಂಗಳದಲ್ಲಿ ನಡೆದ ಕ್ರಿಸ್ಮಸ್ ಹಬ್ಬದ ಸಹಮಿಲನ ಕಾರ್ಯಕ್ರಮದಲ್ಲಿ ಅವರು ಮುಖ್ಯ ಅತಿಥಿಯಾಗಿ ಮಾತನಾಡಿದರು. ಯೇಸುಕ್ರಿಸ್ತರು ಮಾನವನಾಗಿ ಭುವಿಗೆ ಹುಟ್ಟಿ ಬಂದದ್ದು ಮಾನವನಲ್ಲಿರುವ ಅಜ್ಞಾನದ ಕತ್ತಲೆಯನ್ನು ಹೋಗಲಾಡಿಸಲು ಆಗಿದೆ. ಯೇಸುಕ್ರಿಸ್ತರು ತಮ್ಮ ಪವಾಡಗಳಿಂದ ಜನರಿಗೆ ಸಂಪೂರ್ಣತೆಯ ಜೀವನ ನೀಡಿದವರಾಗಿದ್ದಾರೆ. ಯೇಸುಕ್ರಿಸ್ತರ ಬೋಧನೆಗಳನ್ನು ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ನಮ್ಮ ಜೀವನವು ಹೊಸತನವನ್ನು ಕಾಣಬಲ್ಲುದಾಗಿದೆ ಎಂದರು.

ರೋಟರಿ ಅಸಿಸ್ಟೆಂಟ್ ಗವರ್ನರ್ ಜಿ.ಸುರೇಂದ್ರ ಕಿಣಿರವರು ಮಾತನಾಡಿ, ಕ್ರಿಸ್ಮಸ್ ಹಬ್ಬದ ಆಚರಣೆಯು ಕೇವಲ ಒಂದು ಪಂಗಡಕ್ಕೆ ಮಾತ್ರ ಸೀಮಿತವಲ್ಲ ಬದಲಾಗಿ ಎಲ್ಲಾ ಸಮುದಾಯಕ್ಕೆ ಅದು ಸೀಮಿತವಾಗಿದೆ. ನನ್ನಂತೆ ಪರರನ್ನು ಪ್ರೀತಿಯಿಂದ ಕಾಣು ಎಂಬ ಯೇಸುಕ್ರಿಸ್ತರ ತತ್ವದಂತೆ ಮನುಕುಲವು ಎಲ್ಲರನ್ನು ಪ್ರೀತಿಯಿಂದ ಕಾಣಬೇಕಾಗಿದೆ. ರೋಟರಿ ಸಂಸ್ಥೆಯಲ್ಲೂ ಎಲ್ಲಾ ಜಾತಿ-ಧರ್ಮವರು ಇದ್ದಾರೆ. ಪ್ರತಿಯೋರ್ವರು ತಮ್ಮ ಜೀವನದಲ್ಲಿ ಸಾಮಾಜಿಕ ಬದ್ಧತೆಯಿರಲಿ, ಕ್ರಿಸ್ಮಸ್ ಹಬ್ಬವು ಎಲ್ಲರಿಗೂ ಒಳಿತ್ತನ್ನು ಮಾಡಲಿ ಎಂದು ಆಶಯ ವ್ಯಕ್ತಪಡಿಸಿದರು.
ಅಧ್ಯಕ್ಷತೆ ವಹಿಸಿದ ರೋಟರಿ ಸಿಟಿಯ ಅಧ್ಯಕ್ಷ ಪ್ರಮೋದ್ ಮಲ್ಲಾರರವರು ಸ್ವಾಗತಿಸಿ ಮಾತನಾಡಿ ರೋಟರಿಯಲ್ಲೂ ದೀಪಾವಳಿ, ರಮ್ಜಾನ್, ಕ್ರಿಸ್ಮಸ್ ಹಬ್ಬಗಳನ್ನು ಸದಸ್ಯರೊಡಗೂಡಿ ಆಚರಿಸುವ ಮೂಲಕ ಸೌಹಾರ್ದತೆಯನ್ನು ಪಾಲಿಸುತ್ತಾ ಬಂದಿದ್ದು ಇದೇ ಒಗ್ಗಟ್ಟು ನಿರಂತರ ಮುಂದುವರೆಯಲಿ ಎಂದು ಹೇಳಿ ಜಾರ್ಯಕ್ರಮದ ಪ್ರಾಯೋಜಕತ್ವವನ್ನು ವಹಿಸಿಕೊಂಡ ಸದಸ್ಯರಾದ ಡೆನ್ನಿಸ್ ಮಸ್ಕರೇನ್ಹಸ್, ಲಾರೆನ್ಸ್-ಗ್ರೇಸಿ ಗೊನ್ಸಾಲ್ವಿಸ್, ಜೋನ್ ಕುಟಿನ್ಹಾ, ಜೋನ್ ರೆಬೆಲ್ಲೋ, ಮಾರ್ಸೆಲ್ ವೇಗಸ್, ವಲೇರಿಯನ್ ಮೊಂತೇರೋ, ವಿಕ್ಟರ್ ಮಾರ್ಟಿಸ್, ಜೆರೋಮಿಯಸ್-ಪ್ರೆಸ್ಸಿ ಪಾಸ್, ಲೀನಾ ಪಾಸ್‌ರವರಿಗೆ ಹೂ ನೀಡಿ ಅಭಿನಂದಿಸಿದರು.

ನಿಕಟಪೂರ್ವ ಅಧ್ಯಕ್ಷ ಕೃಷ್ಣಮೋಹನ್ ಪಿ.ಎಸ್, ನಿಯೋಜಿತ ಅಧ್ಯಕ್ಷ ಪ್ರಶಾಂತ್ ಶೆಣೈರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯದರ್ಶಿ ಗುರುರಾಜ್‌ರವರು ವರದಿ ಮಂಡಿಸಿ, ಮಾಜಿ ಅಧ್ಯಕ್ಷ ಜ್ಯೋ ಡಿ’ಸೋಜ ವಂದಿಸಿದರು.

ಕೇಕ್/ಸ್ಮರಣಿಕೆ/ಕ್ಯಾಂಪ್ ಫೈಯರ್…
ಕ್ಲಬ್‌ನ ಮಾಜಿ ಅಧ್ಯಕ್ಷ ಜಯಕುಮಾರ್ ರೈ ಎಂ.ಆರ್‌ರವರ ಪತ್ನಿ ಸ್ವರ್ಣಲತಾ ರೈಯವರು ಪತಿಯ ಜೊತೆಗೂಡಿ ಕೇಕ್ ಕತ್ತರಿಸುವ ಮೂಲಕ ಹುಟ್ಟುಹಬ್ಬವನ್ನು ಆಚರಿಸಲಾಯಿತು. ಸಹಮಿಲನ ಕಾರ್ಯಕ್ರಮಕ್ಕೆ ಸ್ಥಳವಕಾಶ ಒದಗಿಸಿ ಸಹಕರಿಸಿದ ಮಾಜಿ ಅಧ್ಯಕ್ಷ ಜ್ಯೋ ಡಿ’ಸೋಜ ಹಾಗೂ ಅವರ ಪತ್ನಿ ಫಿಲೋಮಿನಾ ಡಿ’ಸೋಜರವರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಸಭಾ ಕಾರ್ಯಕ್ರಮ ಬಳಿಕ ಮನೆಯ ಹಿಂದುಗಡೆ ಕಸಕಡ್ಡಿಗಳಿಂದ ಗುಡ್ಡೆ ಹಾಕಿದ ಬೃಹತ್ ರಾಶಿಗೆ ಕ್ಲಬ್ ಸದಸ್ಯರು ಬೆಂಕಿ ಹಾಕುವ ಮೂಲಕ ಕ್ಯಾಂಪ್ ಫೈಯರ್ ಅನ್ನು ಆಚರಿಸಲಾಯಿತು.

LEAVE A REPLY

Please enter your comment!
Please enter your name here