ವಿವೇಕಾನಂದ ಎಂಜಿನಿಯರಿಂಗ್ ಕಾಲೇಜಿನ ಎಂಬಿಎ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ, ಪ್ರೇರಣಾ ಕಾರ್ಯಕ್ರಮ

0

ಪುತ್ತೂರು: ಬ್ರಿಟಿಷರು ಬಿಟ್ಟು ಹೋದ ಶಿಕ್ಷಣ ವ್ಯವಸ್ಥೆಯು ನಮ್ಮನ್ನು ಕೆಲಸಗಾರರನ್ನಾಗಿಸುತ್ತದೆಯೇ ಹೊರತು ಇತರರಿಗೆ ಉದ್ಯೋಗ ನೀಡುವ ಉದ್ಯಮಪತಿಗಳನ್ನಾಗಿ ಮಾಡುವಲ್ಲಿ ಅಸಮರ್ಥವಾಗಿದೆ ಎಂದು ಪುತ್ತೂರಿನ ಮುಳಿಯ ಜುವೆಲ್ಲರ್ಸ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಕಾರ್ಯನಿರ್ವಾಹಕ ನಿರ್ದೇಶಕ ಕೃಷ್ಣನಾರಾಯಣ ಮುಳಿಯ ಹೇಳಿದರು. ಅವರು ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಎಂಬಿಎ ವಿಭಾಗದ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಮತ್ತು ಪ್ರೇರಣಾ ಕಾರ್ಯಕ್ರಮದಲ್ಲಿ ಮಾತಾಡಿದರು. ಪ್ರಾಂಶುಪಾಲ ಡಾ.ಮಹೇಶ್‌ಪ್ರಸನ್ನ ಕೆ. ಮಾತನಾಡಿ ಜೀವನದಲ್ಲಿ ಹಾಸುಹೊಕ್ಕಾಗಿರುವ ಡಿಜಿಟಲ್ ತಂತ್ರಜ್ಞಾನವು ಎಷ್ಟು ಸಹಕಾರಿಯೋ ಅಷ್ಟೇ ಗೊಂದಲಮಯವಾಗಿಯೂ ಇದೆ. ಇದರ ನಡುವೆ ಏಕಾಗ್ರತೆಯನ್ನು ಸಾಧಿಸುವುದು ಸವಾಲಿನ ಕೆಲಸ ಎಂದರು. ಈ ಸವಾಲನ್ನು ಜಯಿಸಿದರೆ ಜೀವನದ ಎಲ್ಲಾ ಸಮಸ್ಯೆಗಳನ್ನು ಗೆಲ್ಲಬಹುದು ಎಂದರು. ಎಂಬಿಎ ವಿಭಾಗದ ನಿರ್ದೇಶಕ ಡಾ.ಶೇಖರ್ ಎಸ್. ಅಯ್ಯರ್ ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಪೋರೇಟ್ ಜಗತ್ತಿನ ಅನೇಕ ಕಂಪೆನಿಗಳು ಕ್ಯಾಂಪಸ್ ನೇಮಕಾತಿಗಾಗಿ ಕಾಲೇಜಿಗೆ ಆಗಮಿಸುತ್ತವೆ, ನೇಮಕಾತಿಗಾಗಿ ಬೇಕಾದ ಪೂರಕ ತರಬೇತಿಗಳನ್ನು ಒದಗಿಸಿ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಲಾಗುತ್ತದೆ ಎಂದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜು ಆಡಳಿತ ಮಂಡಳಿಯ ನಿರ್ದೇಶಕ ರವಿಕೃಷ್ಣ ಡಿ. ಕಲ್ಲಾಜೆ ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಗೆ ಕಾಲೇಜು ಸರ್ವ ಸವಲತ್ತುಗಳನ್ನು ಒದಗಿಸುತ್ತದೆ ಜತೆಯಲ್ಲಿ ಸಂಸ್ಕಾರಯುತ ಶಿಕ್ಷಣವನ್ನು ನೀಡುತ್ತದೆ. ಈ ಸೌಲಭ್ಯಗಳನ್ನು ಬಳಸಿಕೊಂಡು ಎಲ್ಲರೂ ಉತ್ತಮ ಉದ್ಯಮ ಆಡಳಿತಗಾರರು ಮತ್ತು ಉದ್ಯಮಿಗಳಾಗಿ ಸಮಾಜದ ಉನ್ನತಿಗಾಗಿ ಶ್ರಮಿಸಿ ಎಂದರು.

೨೦೨೧ನೇ ಸಾಲಿನ ಅಂತಿಮ ಪರೀಕ್ಷೆಯಲ್ಲಿ ಉತ್ತಮ ಸಾಧನೆಯನ್ನು ಮಾಡಿದ ಶ್ರೇಯಾ ಪೈ, ಹೇಮಚಂದ್ರ.ಕೆ ಮತ್ತು ಶ್ರದ್ಧಾ ಪೈ ಇವರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು. ವಿದ್ಯಾರ್ಥಿನಿಯರಾದ ಕೆ.ಎಂ.ಪೊನ್ನಮ್ಮ ಸ್ವಾಗತಿಸಿ, ಶ್ರೀರಂಜನಿ.ಬಿ ವಂದಿಸಿದರು. ಶೀತಲ್.ಎಸ್.ಕೆ ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here