ಬಾಕಿಲಗುತ್ತುವಿನಲ್ಲಿ ಅನ್ನಪೂರ್ಣೇಶ್ವರಿ ಅನ್ನಚತ್ರ ಲೋಕಾರ್ಪಣೆ

0

  • ಭಕ್ತಿ ಇದ್ದ ಕಡೆ ಒಗ್ಗಟ್ಟಿದೆ‌: ಶೈಲೇಂದ್ರ ವೈ ಸುವರ್ಣ
  • ಭಕ್ತರು ನಿಸ್ವಾರ್ಥ ಸೇವೆ ಸಲ್ಲಿಸಿದಾಗ ಕ್ಷೇತ್ರ ಬೆಳೆಯಲು ಸಾಧ್ಯ: ಎಂ.ಬಿ.ಸದಾಶಿವ
  • ಎಲ್ಲರ ಒಗ್ಗಟ್ಟಿನಿಂದ ಕ್ಷೇತ್ರದ ಅಭಿವೃದ್ಧಿ ಸಾಧ್ಯ: ಮಹಮ್ಮದ್ ಕುಂಞಿ
  • ಉತ್ತಮ ವಿಚಾರ ಮನಸ್ಸಿನಲ್ಲಿಟ್ಟು ಮುಂದುವರೆದರೆ ಯಶಸ್ಸು ಖಂಡಿತಾ: ಜಯಾನಂದ

ವಿಟ್ಲ:  ಭಕ್ತಿಯೇ ಶಕ್ತಿ. ಭಕ್ತಿ ಇದ್ದಕಡೆ ಒಗ್ಗಟ್ಟಿದೆ.ಭಕ್ತಿ ಇದ್ದುದರಿಂದ ಎಲ್ಲರೂ ಒಗ್ಗಟ್ಟಿನಿಂದ ಮುಂದುವರಿಯಲು ಸಾಧ್ಯವಾಗಿದೆ. ಯಾವುದೇ ದೈವಸ್ಥಾನಕ್ಕೂ ಇಷ್ಟೊಂದು ಜಾಗ ಇರುವುದು ನಾ ಕಂಡಿಲ್ಲ. ಕುಟುಂಬದ ಮಂದಿ ಇಲ್ಲಿ ಜಾತಿ ಮತ ಭೇದ ಮರೆತು ಎಲ್ಲರನ್ನೂ ಒಟ್ಟು ಸೇರಿಸಿಕೊಂಡು ಮುಂದುವರೆಯುತ್ತಿರುವುದು ಕ್ಷೇತ್ರ ಮತ್ತಷ್ಟು ಬೆಳಗಲು ಕಾರಣವಾಗಿದೆ ಎಂದು ಎಸ್.ಆರ್. ಎಸ್. ಮಸಾಲದ ಮಾಲಕ ಶೈಲೇಂದ್ರ ವೈ ಸುವರ್ಣ ರವರು ಹೇಳಿದರು.

ಅವರು 2020-21ನೇ ಸಾಲಿನಲ್ಲಿ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿಯಲ್ಲಿ  ವಿಧಾನಪರಿಷತ್ ಸದಸ್ಯ ಬಿ.ಎಂ.ಫಾರುಕ್ ರವರು ಬಿಡುಗಡೆ ಗೊಳಿಸಿದ ಅನುದಾನದಲ್ಲಿ ಹಾಗೂ ಭಕ್ತಾಧಿಗಳ ಸಹಕಾರದಲ್ಲಿ ಕ್ಷೇತ್ರದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಅನ್ನಪೂರ್ಣೇಶ್ವರಿ ಅನ್ನಛತ್ರವನ್ನು  ಉದ್ಘಾಟಿಸಿ ಮಾತನಾಡಿದರು‌‌.

ಮುಖ್ಯ ಅತಿಥಿಯಾಗಿ ಆಗಮಿಸಿದ  ರಾಜ್ಯ ಜೆಡಿಎಸ್ ಉಪಾಧ್ಯಕ್ಷ ಎಂ.ಬಿ.ಸದಾಶಿವರವರು ಮಾತನಾಡಿ ಉತ್ತಮ ವ್ಯವಸ್ಥೆ ಇರುವ ವಿಸ್ತಾರ ವಾದ ವ್ಯವಸ್ಥೆ ಇರುವ ಭವ್ಯ ಸನ್ನಿಧಿ ಇದಾಗಿದೆ. ಭಕ್ತರು ನಿಸ್ವಾರ್ಥ ಸೇವೆ ಸಲ್ಲಿಸಿದಾಗ ಯಾವುದೇ ಕ್ಷೇತ್ರ ಬೆಳೆಯಲು ಸಾಧ್ಯ.

ಜಾತಿ ಧರ್ಮವನ್ನು ಮೀರಿ ಎಲ್ಲರನ್ನು ಒಟ್ಟು ಸೇರಿಸಿಕೊಂಡು ಮುನ್ನಡೆಯುತ್ತಿರುವುದು ಈ ಕ್ಷೇತ್ರದ ಹಿರಿಮೆಗೆ ಮತ್ತೊಂದು ಗರಿಯಾಗಿದೆ.  ಜಾತಿ‌ಧರ್ಮವನ್ನು ಮೀರಿ ನಮ್ಮ ಜೆಡಿಎಸ್ ಶಾಸಕರಾದ ಬಿ.ಎಂ.ಫಾರುಕ್  ರವರು ನೀಡಿದ ಮೊತ್ತವನ್ನು ಸರಿಯಾದ ರೀತಿಯಲ್ಲಿ ಇಲ್ಲಿ ವಿನಿಯೋಗ ಮಾಡಲಾಗಿದೆ. ಮುಂದಿನ ದಿನಗಳಲ್ಲಿಯೂ ನಮ್ಮಿಂದಾಗುವ ಸಹಕಾರವನ್ನು ನಿರಂತರವಾಗಿ ನೀಡುತ್ತಾ ಬರುತ್ತೇವೆ ಎಂದರು.

ಜೆಡಿಎಸ್ ನ ಮಾಜಿ ದ.ಕ. ಜಿಲ್ಲಾಧ್ಯಕ್ಷ ಮಹಮ್ಮದ್ ಕುಂಞಿ ವಿಟ್ಲರವರು ಮಾತನಾಡಿ ಇದು ಅತ್ಯಂತ ಸುಂದರ ಪ್ರದೇಶವಾಗಿದೆ. ಎಲ್ಲರ ಸಹಕಾರದೊಂದಿಗೆ ವಸಂತ ಪೂಜಾರಿಯವರು ಇಷ್ಟೊಂದು ಕೆಲಸವನ್ನು ಮಾಡಲು ಸಾಧ್ಯವಾಗಿದೆ. ಕ್ಷೇತ್ರ ಬೆಳೆದಂತೆ ಹಲವಾರು ಅಭಿವೃದ್ಧಿ ಕಾರ್ಯಗಳು ನಡೆಯಬೇಕಾಗುತ್ತದೆ. ಅವೆಲ್ಲವೂ ಎಲ್ಲರೂ ಒಟ್ಟಾಗಿ ನಿಂತರೆ ಮಾತ್ರ ನಡೆಸಲು ಸಾಧ್ಯ. ನಾವು ಇನ್ನು ಮುಂದಿನ ದಿನಗಳಲ್ಲಿಯೂ ನಮ್ಮಿಂದಾದ ಸಹಕಾರವನ್ನು ಕ್ಷೇತ್ರಕ್ಕೆ ನೀಡಲು ಸಿದ್ದರಿದ್ದೇವೆ ಎಂದರು.

ನಿವೃತ್ತ ಮೆಸ್ಕಾಂ ಇಂಜಿನಿಯರ್ ಜಯಾನಂದರವರು ಮಾತನಾಡಿ ನೀವುಗಳು ಪುಣ್ಯವಂತರು. ದೇವರ ಬಗ್ಗೆ ಭಯಬೇಡ ಅವರನ್ನು ಪ್ರೀತಿಸಿ. ಯಾರು ಒಳ್ಳೆಯ ಕೆಲಸಮಾಡುತ್ತಾರೋ ಅವರನ್ನು ಪ್ರೋತ್ಸಾಹಿಸಿ, ಅವರ ಕಾಲೆಲೆಯಲು ಹೋಗಬೇಡಿ. ಉತ್ತಮ ವಿಚಾರವನ್ನು ಮನಸ್ಸಿನಲ್ಲಿಟ್ಟು ಮುಂದುವರೆದರೆ ಯಶಸ್ಸು ಖಂಡಿತಾ.

ಕ್ಷೇತ್ರದ ಒಳಿತಿಗಾಗಿ ಎಲ್ಲರೂ ಸಹಕಾರ ನೀಡಿ. ಕ್ಷೇತ್ರದ ಶಕ್ತಿಯ ಪರಿಚಯ ಮಾಡಿಕೊಂಡು ಅದನ್ನು ಅನುಭವಿಸುವ ಮನಸ್ಸು ನಿಮ್ಮದಾಗಬೇಕು ಎಂದರು.‌
ಅನಂತಾಡಿ ಗ್ರಾ.ಪಂ ಅಧ್ಯಕ್ಷರಾದ ಗಣೇಶ್ ಪೂಜಾರಿ ಬಂಟ್ರಿಂಜ ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದರು.

ಜಿ.ಪಂ.ಎಕ್ಸಿಕ್ಯೂಟಿವ್ ಇಂಜಿನಿಯರ್ ತಾರನಾಥ, ಬಾಕಿಲಗುತ್ತು ಆಡಳಿತ ಟ್ರಸ್ಟ್ ನ ಜತೆಕಾರ್ಯದರ್ಶಿ ಸಂಕಪ್ಪ ಪೂಜಾರಿ ಮಾಡಾವು, ವೈದ್ಯನಾಥ ದೈವದ  ಅರ್ಚಕರಾದ  ಜನಾರ್ದನ ಪೂಜಾರಿ ಬಾಕಿಲಗುತ್ತು ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಬಾಕಿಲಗುತ್ತು ಆಡಳಿತ ಟ್ರಸ್ಟ್ ನ ಅಧ್ಯಕ್ಷರಾದ ವಸಂತ ಪೂಜಾರಿ ಎ. ಮಂಗಳೂರು ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಹರೀಶ್ ಸಾಲ್ಯಾನ್ ಮಂಗಳೂರು ವಂದಿಸಿದರು.

LEAVE A REPLY

Please enter your comment!
Please enter your name here