ಬಪ್ಪಳಿಗೆಯ ಅಂಬಿಕಾ ಕ್ಯಾಂಪಸ್‌ನಲ್ಲಿ ಸೈಬರ್ ಕ್ರೈಂ ಬಗೆಗಿನ ಮಾಹಿತಿ ಕಾರ್ಯಾಗಾರ

0

ಆನ್‌ಲೈನ್ ಮೂಲಕ ನಡೆಯುವ ಮೋಸಗಳ ಬಗೆಗೆ ಜಾಗೃತಿ ಅಗತ್ಯ : ಡಾ.ಗಾನ

ಪುತ್ತೂರು: ಇಂದು ಆನ್‌ಲೈನ್ ಮೂಲಕ ಮೋಸ ಮಾಡುವ ದಂಧೆ ಎಗ್ಗಿಲ್ಲದೆ ನಡೆಯುತ್ತಿದೆ. ತಂತ್ರಜ್ಞಾನ ಮುಂದುವರಿದಂತೆ ಮೋಸಮಾಡುವ ಮಂದಿಯೂ ಹೆಚ್ಚಾಗುತ್ತಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ಸುಳ್ಳು ಖಾತೆಗಳನ್ನು ಸೃಷ್ಟಿಸಿ ಹಣ ಕೇಳುವ ವ್ಯವಸ್ಥಿತ ಸಂಚುಗಳ ಪ್ರಕರಣ ಆಗಾಗ ಕಾಣಿಸಿಕೊಳ್ಳುತ್ತಿದೆ. ಈ ನೆಲೆಯಲ್ಲಿ ಪ್ರತಿಯೊಬ್ಬರೂ ಜಾಗ್ರತೆ ವಹಿಸಬೇಕಾದ ಅಗತ್ಯವಿದೆ. ಅಂತೆಯೇ ಇಂತಹ ಘಟನೆಗಳ ಕುರಿತಾದ ಮಾಹಿತಿ ಗಮನಕ್ಕೆ ಬಂದಾಗ ತಕ್ಷಣ ಅದನ್ನು ಪೋಲಿಸರಿಗೆ ತಿಳಿಸುವ ಪ್ರವೃತ್ತಿಯನ್ನು ಬೆಳೆಸಿಕೊಳ್ಳಬೇಕು ಎಂದು ಪುತ್ತೂರಿನ ಡಿವೈಎಸ್‌ಪಿ ಡಾ.ಗಾನ ಪಿ.ಕುಮಾರ್ ಹೇಳಿದರು.

ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ಪದವಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕ, ಐಕ್ಯುಎಸಿ ಹಾಗೂ ಬಪ್ಪಳಿಗೆಯ ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ, ಅಂಬಿಕಾ ಪದವಿಪೂರ್ವ ವಿದ್ಯಾಲಯಗಳ ಸಹಯೋಗದಲ್ಲಿ ಬಪ್ಪಳಿಗೆಯ ಅಂಬಿಕಾ ಕ್ಯಾಂಪಸ್‌ನಲ್ಲಿ ಆಯೋಜಿಸಲಾದ ಸೈಬರ್ ಕ್ರೈಂ ಬಗೆಗಿನ ಮಾಹಿತಿ ಕಾರ್ಯಾಗಾರದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಗುರುವಾರ ಮಾತನಾಡಿದರು.

ಈಗಿನ ದಿನಮಾನಗಳಲ್ಲಿ ಪ್ರತಿಯೊಬ್ಬರ ಕೈಯಲ್ಲೂ ಆಧುನಿಕ ಮೊಬೈಲ್ ಫೋನ್‌ಗಳಿವೆ. ಇದರಿಂದಾಗಿ ಹಣಕಾಸಿನ ವ್ಯವಹಾರ, ಸಾಮಾಜಿಕ ಜಾಲತಾಣಗಳ ಬಳಸುವಿಕೆ ನಿರಂತರವಾಗಿ ನಡೆಯುತ್ತಿದೆ. ಇದು ಮೋಸ ಮಾಡುವ ಮಂದಿಗೆ ಅನುಕೂಲವಾಗಿ ಪರಿಣಮಿಸಿದೆ. ಸಾಮಾಜಿಕ ಜಾಲತಾಣಗಳಲ್ಲಿ ನಾವು ಪ್ರಕಟಿಸಿದ ನಮ್ಮ ಫೊಟೋಗಳನ್ನು ತಿದ್ದುಪಡಿ ಮಾಡಿ ಅಶ್ಲೀಲವಾಗಿಸಿ, ಹಣ ಕೊಡದಿದ್ದರೆ ಪ್ರಕಟಿಸುವುದಾಗಿ ಬೆದರಿಸುವುದು ಕೂಡ ನಡೆಯುತ್ತಿದೆ. ಹೀಗೆ ಯಾರಾದರೂ ಹಣಕ್ಕಾಗಿ ಬೆದರಿಸಿ, ಬ್ಲಾಕ್ ಮೇಲ್ ಮಾಡಿದರೆ ತಕ್ಷಣ ಹತ್ತಿರದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಬೇಕು ಎಂದು ಹೇಳಿದರು.

ವೀಡಿಯೋ ಕಾಲ್‌ನಲ್ಲಿ ವ್ಯವಹರಿಸುವಾಗ ಎಚ್ಚರಿಕೆ ಅಗತ್ಯ. ಕೆಲವರು ವೀಡಿಯೋ ಕಾಲ್ ಅನ್ನು ದಾಖಲೀಕರಣಗೊಳಿಸಿ, ಹಣ ಕೊಡದಿದ್ದರೆ ಅಥವ ಅವರ ಬೇಡಿಕೆಗೆ ಸ್ಪಂದಿಸದಿದ್ದರೆ ಅದನ್ನು ಸಾಮಾಜಿಕ ಮಾಧ್ಯಮದಲ್ಲಿ ಪ್ರಕಟಿಸುವುದಾಗಿ ಬೆದರಿಸುತ್ತಾರೆ. ಈ ರೀತಿಯ ಕಿರುಕುಳದಿಂದಾಗಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಗಳೂ ಇವೆ. ಆದ್ದರಿಂದ ವೀಡಿಯೋ ಕಾಲ್‌ನಲ್ಲಿ ಮಾತನಾಡುವ ಮೊದಲು ಸಾಕಷ್ಟು ಯೋಚನೆ ಮಾಡಬೇಕು ಎಂದರಲ್ಲದೆ ನೀವು ಬಹುಮಾನ ಗೆದ್ದಿದ್ದೀರಿ, ಸಾಗಣೆಯ ಮೊತ್ತವನ್ನು ಪಾವತಿಸಿ ಎಂದು ಮೊಬೈಲ್‌ಗೆ ಸಂದೇಶ ಕಳುಹಿಸಿ ಹಣ ಕೀಳುವ ಮಂದಿಗಳು ಇದ್ದಾರೆ. ಹಾಗಾಗಿ ಇಂತಹ ಸಂದೇಶಗಳು ಬಂದಾಗ ಎಚ್ಚರದಿಂದ ವ್ಯವಹರಿಸಬೇಕು ಎಂದು ನುಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಮಾತನಾಡಿ ಮೋಸ ಮಾಡಿ ತಮ್ಮ ಬದುಕನ್ನು ಕಟ್ಟಿಕೊಳ್ಳುವ ಕನಸು ಕಾಣುವ ಮಂದಿಯಿಂದಾಗಿ ಸಮಾಜದ ಬಗೆಗೇ ಬೇಸರ ಮೂಡುವಂತಾಗುತ್ತದೆ. ಇಂತಹ ಕೀಳು ಮಟ್ಟದ ಮಂದಿಯನ್ನು ಹತ್ತಿಕ್ಕುವುದಕ್ಕೆ ಸಮಾಜದ ಪ್ರತಿಯೊಬ್ಬರೂ ಪೋಲಿಸರಂತೆ ಸೂಕ್ಷ್ಮಮತಿಗಳಾಗಬೇಕಿದೆ. ಯಾವುದೇ ಮೋಸ ಮಾಡುವ ಪ್ರವೃತ್ತಿ ಗಮನಕ್ಕೆ ಬಂದಾಗ ತಕ್ಷಣ ಪೋಲಿಸರಿಗೆ ತಿಳಿಸಿ ಸಹಕಾರ ನೀಡಬೇಕು ಎಂದರಲ್ಲದೆ ಪ್ರತಿಯೊಂದು ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳನ್ನು ಸಂಸ್ಕಾರಭರಿತರನ್ನಾಗಿಸುವ ಹೊಣೆ ಹೊರಬೇಕಿದೆ ಎಂದರು.

ವೇದಿಕೆಯಲ್ಲಿ ಅಂಬಿಕಾ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ವಿನಾಯಕ ಭಟ್ಟ ಗಾಳಿಮನೆ, ಅಂಬಿಕಾ ಸಿಬಿಎಸ್‌ಇ ವಿದ್ಯಾಲಯದ ಪ್ರಾಚಾರ್ಯೆ ಮಾಲತಿ ಡಿ, ರಾಷ್ಟ್ರೀಯ ಸೇವಾ ಯೋಜನೆ ಘಟಕದ ಸಂಯೋಜಕ ನವೀನ್ ಡಿ, ಘಟಕದ ನಾಯಕ ಭರತ್ ಉಪಸ್ಥಿತರಿದ್ದರು.

ವಿದ್ಯಾರ್ಥಿನಿ ಸಾಯಿಶ್ವೇತ ಸ್ವಾಗತಿಸಿದರು. ಅಂಬಿಕಾ ಪದವಿಪೂರ್ವ ವಿದ್ಯಾಲಯದ ಪ್ರಾಚಾರ್ಯ ಶಂಕರನಾರಾಯಣ ಭಟ್ ಪ್ರಸ್ತಾವನೆಗೈದರು. ವಿದ್ಯಾರ್ಥಿ ಕಾರ್ತಿಕ್ ಕೆದಿಮಾರು ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು.

LEAVE A REPLY

Please enter your comment!
Please enter your name here