ಕಣಿಯೂರು ಬ್ರಹ್ಮಕಲಶೋತ್ಸವಕ್ಕೆ ಹರಿದುಬಂದ ಹಸಿರುವಾಣಿ

0

  • ನಿರೀಕ್ಷೆಗೂ ಮೀರಿದ ಹೊರೆಕಾಣಿಕೆ – ಜಯಂತ ನಡುಬೈಲು

ವಿಟ್ಲ: ಬಂಟ್ವಾಳ ತಾಲೂಕು ಕನ್ಯಾನ ಗ್ರಾಮದ ಕಣಿಯೂರು ಶ್ರೀ ಚಾಮುಂಡೇಶ್ವರೀ ದೇವಿ ಕ್ಷೇತ್ರದಲ್ಲಿ ಫೆ.೭ರ ವರೆಗೆ ನಡೆಯಲಿರುವ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಹಾಗೂ ಚಂಡಿಕಾಯಾಗದ ಪ್ರಯುಕ್ತ ಫೆ.3 ರಂದು ಊರ ಪರವೂರ ಭಗವದ್ಭಕ್ತರಿಂದ ಹಸಿರುವಾಣಿ ಹೊರೆಕಾಣಿಕೆ ವೈಭವದ ಮೆರವಣಿಗೆಯೊಂದಿಗೆ ಸಾಗಿ ಸಮರ್ಪಣೆಯಾಯಿತು. ಕುಟ್ಟಿತ್ತಡ್ಕ ಶ್ರೀ ವಿಷ್ಣುಮೂರ್ತಿ ಭಜನಾಮಂದಿರದ ವಠಾರದಲ್ಲಿ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಜಯಂತ ನಡುಬೈಲ್‌ರವರು ತೆಂಗಿನಕಾಯಿ ಒಡೆದು ಚಾಲನೆ ನೀಡಿದರು.


ಬಳಿಕ ಮಾತನಾಡಿದ ಅವರು ’ಪೂಜ್ಯ ಶ್ರೀ ಮಹಾಬಲ ಸ್ವಾಮೀಜಿಯವರ ಕನಸು ಇಂದು ನನಸಾಗಿದೆ. ದೇವಿಯ ಅನುಗ್ರಹದಿಂದ ಜೀರ್ಣೋದ್ಧಾರದ ಕಾರ್ಯಗಳು ಪೂರ್ಣಗೊಂಡು ವೈಭವದ ಬ್ರಹ್ಮಕಲಶೋತ್ಸವಕ್ಕೆ ಅತ್ಯುತ್ತಮ ರೀತಿಯ ಹಸಿರುವಾಣಿ ಮೆರವಣಿಗೆಯೊಂದಿಗೆ ಶುಭ ಚಾಲನೆ ದೊರಕಿರುವುದು ಎಲ್ಲವನ್ನೂ ದೇವಿ ಸಂತೃಪ್ತಳಾಗಿ ಸ್ವೀಕರಿಸಿದ್ದಾಳೆ ಎಂಬ ಭಕ್ತಿಯ ಭಾವ ನಮ್ಮಲ್ಲಿ ಮೂಡಿದೆ. ಪೂಜ್ಯ ಶ್ರೀಗಳೂ ಸಂತಸಭರಿತರಾಗಿರುವುದು ಬ್ರಹ್ಮಕಲಶೋತ್ಸವದ ಎಲ್ಲಾ ಕಾರ್ಯಕ್ರಮಗಳು ಯಶಸ್ವಿಯಾಗಿ ನೆರವೇರುವಲ್ಲಿ ನಮಲ್ಲಿ ಇನ್ನಷ್ಟು ಪುಷ್ಟಿ ನೀಡಿದೆ ಎಂದರು. ಈಗಾಗಲೇ ಹಸಿರುವಾಣಿ ಹೊರೆಕಾಣಿಕೆಗಳು ಕ್ಷೇತ್ರಕ್ಕೆ ಬಂದು ತಲುಪಿದ್ದು, ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಸಾಧ್ವೀ ಶ್ರೀ ಮಾತಾನಂದಮಯಿರವರು ಉಗ್ರಾಣ ಮುಹೂರ್ತ ನೆರವೇರಿಸಿದ್ದಾರೆ. ನಮ್ಮ ನಿರೀಕ್ಷೆಗೂ ಮೀರಿ ಹಸಿರುವಾಣಿ ಹೊರೆ ಕಾಣಿಕೆಯು ಸುತ್ತಲಿನ ನಾಲ್ಕು ಊರುಗಳಿಂದ ಬಂದು ತಲುಪಿದೆ. ಸುಮಾರು ಒಂದೂವರೆ ಕೋಟಿ ರೂಪಾಯಿ ವೆಚ್ಚದಲ್ಲಿ ಕ್ಷೇತ್ರದ ಜೀರ್ಣೋದ್ಧಾರ ಕಾರ್ಯ ಪೂರ್ಣಗೊಂಡಿದೆ. ಬ್ರಹ್ಮಕಲಶೋತ್ಸವ ಕಾರ್ಯಕ್ರಮಕ್ಕೆ ಸುಮಾರು ಇಪ್ಪತೈದು ಸಾವಿರಕ್ಕೂ ಅಧಿಕ ಭಕ್ತಾಧಿಗಳು ಸೇರುವ ನಿರೀಕ್ಷೆ ಇದೆ. ಐದು ದಿನಗಳ ಕಾಲ ಕ್ಷೇತ್ರದಲ್ಲಿ ನಡೆಯುವ ಕಾರ್ಯಕ್ರಮಕ್ಕೆ ತಮ್ಮೆಲ್ಲರನ್ನೂ ಪ್ರೀತಿ ಪೂರ್ವಕವಾಗಿ ಆಮಂತ್ರಿಸಿ ಸ್ವಾಗತಿಸುತ್ತಿದ್ದೇನೆ ಎಂದು ಹೇಳಿದ ಅವರು, ಕ್ಷೇತ್ರದ ಆಡಳಿತ ಟ್ರಸ್ಟ್, ಜೀರ್ಣೋದ್ಧಾರ ಸಮಿತಿ, ಬ್ರಹ್ಮಕಲಶೋತ್ಸವ ಸಮಿತಿಯ ಏಕಮನಸ್ಸಿನ ಯೋಚನೆ ಯೋಜನೆಗಳು ಇಲ್ಲಿ ಸಾಕಾರಗೊಂಡಿವೆ ಎಂದರು.


ಕಣಿಯೂರು ಶ್ರೀ ಚಾಮುಂಡೇಶ್ವರೀ ದೇವಿ ಕ್ಷೇತ್ರದ ಶ್ರೀ ಮಹಾಬಲ ಸ್ವಾಮೀಜಿಯವರು ಆಶೀರ್ವಚನ ನೀಡಿ ಶ್ರೀ ದೇವಿಯ ಬ್ರಹ್ಮಕಲಶೋತ್ಸವದ ಈ ಶುಭಸಂದರ್ಭದಲ್ಲಿ ಹಸಿರುವಾಣಿ ಹೊರೆಕಾಣಿಕೆ ಸನ್ನಿಧಾನಕ್ಕೆ ಬಂದು ತಲುಪಿದೆ. ನಾಳೆ ತಂತ್ರಿಗಳ ಆಗಮನವಾಗಲಿದೆ. ಆ ಬಳಿಕ ಮೂರ್ತಿ ಪ್ರತಿಷ್ಠೆ ಬ್ರಹ್ಮಕಲಶೋತ್ಸವ ನಡೆಯಲಿದೆ. ಕಳೆದ ನಾಲ್ಕು ವರುಷಗಳಿಂದ ಜೀರ್ಣೋದ್ದಾರ ಕಾರ್ಯಗಳ ನಡೆಯುತ್ತಿದೆ. ಈ ಸಂದರ್ಭದಲ್ಲಿ ದೇವಿ ಅನುಗ್ರಹಿಸಿದ್ದಾಳೆ. ಆಕೆಯ ಅನುಗ್ರಹದಿಂದ ಬ್ರಹ್ಮಕಲಶೋತ್ಸವ ವಿಜ್ರಂಭಣೆಯಿಂದ ನಡೆಸಲು ಸಾಧ್ಯವಾಗಲಿದೆ. ಕೊರೋನಾ ಅಲ್ಪ ಕಡಿಮೆಯಾಗಿದೆ. ಸರಕಾರದ ಸೂಚನೆಗಳನ್ನು ಪಾಲಿಸಿಕೊಂಡು ಬ್ರಹ್ಮಕಲಶೋತ್ಸವ ನಡೆಯಲಿದೆ ಎಂದರು. ವಿವಿಧ ಸಮಿತಿಗಳನ್ನು ರಚಿಸಿಕೊಂಡು ಆ ಪ್ರಕಾರ ಅಚ್ಚುಕಟ್ಟಾಗಿ ಬ್ರಹ್ಮಕಲಶೋತ್ಸವ ನಡೆಸಲು ಉದ್ದೇಶಿಸಿ ನಾವೆಲ್ಲ ರೂಪುರೇಶಗಳನ್ನು ತಯಾರಿಸಿದ್ದೇವೆ. ಎಲ್ಲಾ ಭಕ್ತಾದಿಗಳು ನಮ್ಮದೆಂದು ಭಾವಿಸಿ ಬಂದು ಸೇರಿಕೊಂಡು ತನ್ನಿಂದಾಗುವ ತನು, ಮನ, ಧನದ ಸಹಕಾರವನ್ನು ನೀಡಿ ಕಾರ್ಯಕ್ರಮ ಯಶಸ್ಸುಗೊಳಿಸಬೇಕೆಂದವರು ವಿನಂತಿಸಿದರು.

ಕಣಿಯೂರು ಶ್ರೀ ಚಾಮುಂಡೇಶ್ವರೀ ದೇವೀ ಸೇವಾ ಟ್ರಸ್ಟ್ ನ ಅಧ್ಯಕ್ಷರಾದ ಪದ್ಮನಾಭ ಪೂಜಾರಿ ಸಣ್ಣಗುತ್ತುರವರು ಮಾತನಾಡಿ ಜೀರ್ಣೋದ್ದಾರ ಸಮಿತಿಯನ್ನು ರಚಿಸಿಕೊಂಡು ಸುಮಾರು ಒಂದೂವರೆ ಕೋಟಿ ರೂಪಾಯಿ ವೆಚ್ಚದಲ್ಲಿ ಈ ಒಂದು ದೇವಸ್ಥಾನದ ಪುನರ್ ನವೀಕರಣ ಮಾಡುವ ಕಾರ್ಯದಲ್ಲಿ ನಾವೆಲ್ಲ ಇಳಿದಿದ್ದು ಎಲ್ಲಾ ಸಮಿತಿಯವರು, ಟ್ರಸ್ಟಿಯವರು ಸೇರಿಕೊಂಡು ಶ್ರಮವಹಿಸಿದರ ಫಲವಾಗಿ ಸುದೀಘ ಐದು ವರ್ಷದಲ್ಲಿ ಕ್ಷೇತ್ರದ ಪುನರ್ ನವೀಕರಣ ಕಾರ್ಯ ಮುಗಿದಿದೆ. ಇದೀಗ ಬ್ರಹ್ಮಕಲಶೋತ್ಸವದ ಸಿದ್ದತೆಯಲ್ಲಿ ನಾವಿದ್ದೇ ವೆ. ಬ್ರಹ್ಮಕಲಶೋತ್ಸವ ನಡೆಸಲು ಪ್ರತ್ಯೇಕ ಸಮಿತಿಯನ್ನು ರಚಿಸಬೇಕೇನ್ನುವ ಉದ್ದೇಶದಿಂದ ಜಯಂತ ನಡುಬೈಲ್ ರವರ ನೇತೃತ್ವದಲ್ಲಿ ಬ್ರಹ್ಮಕಲಶೋತ್ಸವ ಸಮಿತಿಯನ್ನು ರಚಿಸಿ ಅವರ ನೇತೃತ್ವದಲ್ಲಿ ಈ ಒಂದು ಬ್ರಹ್ಮಕಲಶೋತ್ಸವದ ಪ್ರಥಮ ಘಟ್ಟವಾದ ಹಸಿರುವಾಣಿ ಹೊರೆಕಾಣಿಕೆಯನ್ನು ಕ್ಷೇತ್ರಕ್ಕೆ ಅರ್ಪಿಸುವ ಕಾರ್ಯ ಬಹಳ ವಿಜ್ರಂಭಣೆಯಿಂದ ಆಗಿದೆ ಎಂದರು. ಈ ಒಂದು ಕ್ಷೇತ್ರಕ್ಕೆ ಬೇರೆ ಬೇರೆ ಕ್ಷೇತ್ರಗಳ ಸ್ವಾಮೀಜಿಗಳ ಪಾದಸ್ಪರ್ಶವಾಗಲಿದೆ. ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿಯವರ ಸಂಪೂರ್ಣ ಸಹಕಾರ ಹಾಗೂ ಮಾರ್ಗದರ್ಶನ ನಮಗೆ ದೊರೆತಿದೆ. ಕಾರ್ಯಕ್ರಮದ ಯಶಸ್ಸಿಗಾಗಿ ಎಲ್ಲರ ಸಹಕಾರ ಅಗತ್ಯ ಎಂದರು.

ಸುಮಾರು ೨ ಕಿ.ಮೀ. ದೂರ ಶೋಭಾಯಾತ್ರೆ ಪಾದಯಾತ್ರೆಯಲ್ಲಿ ಸಾಗಿ ನೂರಕ್ಕೂ ಅಧಿಕ ವಾಹನಗಳು ಸಾಲುಗಟ್ಟಿ ಮೆರವಣಿಗೆಗೆ ಶೋಭೆ ನೀಡಿದವು. ಚೆಂಡೆ ಮೇಳದ ಝೇಂಕಾರ, ಸಿಡಿಮದ್ದು ಪ್ರದರ್ಶನದೊಂದಿಗೆ ವಿಜೃಂಭಣೆಯಿಂದ ಸಾಗಿ ಬಂದ ಮೆರವಣಿಗೆಯನ್ನು ಕನ್ಯಾನ ಜಂಕ್ಷನ್‌ನಲ್ಲಿ ಕ್ಷೇತ್ರದ ವತಿಯಿಂದ ಶ್ರೀ ಮಹಾಬಲ ಸ್ವಾಮೀಜಿಯವರು ಬರಮಾಡಿಕೊಂಡರು. ಅಲ್ಲಿಂದ ಮಾತೆಯರ ಬಣ್ಣದ ಕೊಡೆ, ಕಲಶಕನ್ನಡಿಯ ಸಾಲಿನೊಂದಿಗೆ ಸಾಗಿ ಬಂದ ಮೆರವಣಿಗೆ ಕ್ಷೇತ್ರಕ್ಕೆ ಬಂದು ದೇವಿಯ ಮುಂಭಾಗದಲ್ಲಿ ಸಮರ್ಪಣೆಗೊಳಿಸಲಾಯಿತು. ನೂರಾರು ಕಾರ್ಯಕರ್ತರು ಮೆರವಣಿಗೆಯಲ್ಲಿ ಬಂದ ಹಸಿರುವಾಣಿ ಕಾಣಿಕೆಗಳನ್ನು ಉಗ್ರಾಣ ತುಂಬಿಸುವಲ್ಲಿ ನಿರತರಾದರು.


ಒಡಿಯೂರು ಸಂಸ್ಥಾನದ ಸಾದ್ವೀ ಶ್ರೀ ಮಾತಾನಂದಮಯೀರವರು ಉಗ್ರಾಣ ಮುಹೂರ್ತ ನಡೆಸಿದರು. ಕಣಿಯೂರು ಕ್ಷೇತ್ರದ ಶ್ರೀ ಮಹಾಬಲ ಸ್ವಾಮೀಜಿಯವರು ಕ್ಷೇತ್ರದ ಸೇವಾ ಕೌಂಟರ್ ಅನ್ನು ದೀಪಬೆಳಗಿಸಿ ಉದ್ಘಾಟಿಸಿದರು.

ಈ ಸಂದರ್ಭಲ್ಲಿ ಬ್ರಹ್ಮಕಲಶೋತ್ಸವ ಸಮಿತಿ ಗೌರವ ಸಲಹೆಗಾರರಾದ ಯಶೋಧರ ಬಂಗೇರ ಅಳಿಕೆ, ಕಾರ್ಯಾಧ್ಯಕ್ಷರಾದ ಕೆಯ್ಯೂರು ನಾರಾಯಣ ಭಟ್, ಕೋಶಾಧಿಕಾರಿ ಮೋನಪ್ಪ ಗೌಡ ಕನ್ಯಾನ, ಉಪಾಧ್ಯಕ್ಷರಾದ ಎಸ್.ಬಿ. ಕಣಿಯೂರು, ಶಿವಪ್ರಸಾದ್ ಶೆಟ್ಟಿ ಅನೆಯಾಲಗುತ್ತು, ಪದ್ಮಾವತಿ ಚಂದ್ರಶೇಖರ ಕಣಿಯೂರು, ಹರೀಶ್ ಪೂಜಾರಿ ಬಾಕಿಲ, ನೋಣಯ್ಯ ಪೂಜಾರಿ ಸಣ್ಣಗುತ್ತು, ಜೊತೆ ಕಾರ್ಯದರ್ಶಿ ರಮೇಶ್ ಶೆಟ್ಟಿ ಅನೆಯಾಲಗುತ್ತು, ಕಣಿಯೂರು ಶ್ರೀ ಚಾಮುಂಡೇಶ್ವರೀ ದೇವೀಸೇವಾ ಟ್ರಸ್ಟ್ ನ ಅಧ್ಯಕ್ಷ ಪದ್ಮನಾಭ ಪೂಜಾರಿ, ಕೋಶಾಧಿಕಾರಿ ಜಯಾನಂದ ಕಣಿಯೂರು, ಕಾರ್ಯದರ್ಶಿ ಚಂದ್ರಶೇಖರ ಕಣಿಯೂರು, ಟ್ರಸ್ಟಿಗಳಾದ ಉದಯರಮಣ ಭಟ್ ಕೋಡಿತೂಟ, ವಿಶುಕುಮಾರ್ ಕಣಿಯೂರು, ಸಂಜೀವ ಪೂಜಾರಿ ವಿಟ್ಲ, ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ಪಿ. ಲಿಂಗಪ್ಪ ಗೌಡ ಪನೆಯಡ್ಕ, ಅಧ್ಯಕ್ಷ ಚಂದ್ರಶೇಖರ ಶೆಟ್ಟಿ ಅನೆಯಾಲ ಮಂಟಮೆ, ಕಾರ್ಯಾಧ್ಯಕ್ಷರಾದ ಕೆ.ಪಿ. ರಘುರಾಮ ಶೆಟ್ಟಿ ಕನ್ಯಾನ, ಶಿವಪ್ರಸಾದ್ ಶೆಟ್ಟಿ ಅನೆಯಾಲಗುತ್ತು, ಕಾರ್ಯದರ್ಶಿ ಮಾತೇಶ್ ಭಂಡಾರಿ, ಕನ್ಯಾನ, ಜೊತೆ ಕಾರ್ಯದರ್ಶಿ ನಾಗರಾಜ ಕಣಿಯೂರು, ರೇಣುಕಾ ಲೋಕೇಶ್ ಪಜೀರು ಮೊದಲಾದವರು ಉಪಸ್ಥಿತರಿದ್ದರು. ಮೆರವಣಿಗೆಯಲ್ಲಿ ಪಾಲ್ಗೊಂಡ ಭಕ್ತಾಭಿಮಾನಿಗಳಿಗೆ ಕ್ಷೇತ್ರದಲ್ಲಿ ಸಂಜೆ ಉಪಾಹಾರದ ವ್ಯವಸ್ಥೆ ಏರ್ಪಡಿಸಲಾಗಿತ್ತು.

ಇಂದು ಕ್ಷೇತ್ರದಲ್ಲಿ
ಫೆ. ೪ರಂದು ಸಾಯಂಕಾಲ ತಂತ್ರಿಗಳು ಮತ್ತು ವಾಸ್ತುಶಿಲ್ಪಿ ಮಹೇಶ್ ಮುನಿಯಂಗಳರವರ ಆಗಮನ, ಆಲಯ ಪರಿಗ್ರಹ, ಸ್ಥಳಶುದ್ಧಿ, ಸಪ್ತಶುದ್ಧಿ, ಪ್ರಾರ್ಥನೆ, ಆಚಾರ್ಯಾದಿ ಋತ್ವಿಹ್ವರಣೆ ವಾಸ್ತುಹೋಮ, ವಾಸ್ತು ರಾಕ್ಷೋಘ್ನ ಹೋಮ, ವಾಸ್ತುಬಲಿ, ಶ್ರೀ ದೇವಿ ಚಾಮುಂಡೇಶ್ವರಿಗೆ ಬಾಲಾಲಯದಲ್ಲಿ ಪೂಜೆ ನಡೆಯಲಿದೆ. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸಾಯಂಕಾಲ ಕಲಾಬದುಕು ಸಂಸ್ಥೆಯಿಂದ ರಾಜ್ಯದ ವಿವಿಧ ಭಾಗದ ಪ್ರಶಸ್ತಿಪಡೆದ ಪ್ರತಿಭೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಶಿವತಾಂಡವ ನೃತ್ಯ ನಡೆಯಲಿದೆ. ಬಳಿಕ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾ ಸಂಘ ಕನ್ಯಾನ ಇವರಿಂದ ವೀರ ಸೇನ, ಮಹಿಷಮರ್ದಿನಿ ಯಕ್ಷಗಾನ ಬಯಲಾಟ ನಡೆಯಲಿದೆ.

 

ಹಸಿರುವಾಣಿ ಮೆರವಣಿಗೆ ವಿಶೇಷತೆ
ನೂರಾರು ವಾಹನಗಳಲ್ಲಿ ಹೊರೆಕಾಣಿಕೆ ಸಮರ್ಪಣೆ
ಮೆರವಣಿಗೆಯುದ್ದಕ್ಕೂ ಚೆಂಡೆ ಮೇಳದ ನಿನಾದ
ಬಣ್ಣದ ಕೊಡೆ, ಕಲಶಕನ್ನಡಿ ಹಿಡಿದ ಮಾತೆಯರ ಸಾಲು
ಮೆರುಗು ನೀಡಿದ ಚಿಣ್ಣರ ಕುಣಿತ ಭಜನೆ
ಅಲ್ಲಲ್ಲಿ ಸಿಡಿಮದ್ದು ಪ್ರದರ್ಶನದೊಂದಿಗೆ ಸಾಗಿದ ಮೆರವಣಿಗೆ

LEAVE A REPLY

Please enter your comment!
Please enter your name here