ಜೀರ್ಣೋದ್ದಾರಗೊಂಡ ಕೊಂಬಾರು, ಕಟ್ಟೆ ಪೆರುಂದೋಡಿ ಶ್ರೀ ಶಿರಾಡಿ ದೈವ, ಗುಳಿಗ ದೈವದ ಪೀಠ ಪ್ರತಿಷ್ಠೆ ದೊಂಪದ ಬಲಿ ಉತ್ಸವ

0

ಕಡಬ: ಕೊಂಬಾರು ಕಟ್ಟೆ ಪೆರುಂದೋಡಿ ಶ್ರೀ ಶಿರಾಡಿ ದೈವಸ್ಥಾನದಲ್ಲಿ ಶ್ರೀ ಶಿರಾಡಿ ದೈವ ಹಾಗೂ ಗುಳಿಗ ದೈವದ ಪೀಠ ಪ್ರತಿಷ್ಠೆ ಹಾಗೂ ದೊಂಪದ ಬಲಿ ಉತ್ಸವವು ಫೆ.೪ರಿಂದ ಪ್ರಾರಂಭಗೊಂಡು ಫೆ.೬ರವರೆಗೆ ನಡೆಯಿತು.
ಫೆ.೪ರಂದು ಸಂಜೆಯಿಂದ ಫೆ.೫ರ ಬೆಳಿಗ್ಗೆಯವರೆಗೆ ಶ್ರೀ ಶಿರಾಡಿದೈವ ಹಾಗೂ ಗುಳಿಗ ದೈವದ ಪೀಠ ಪ್ರತಿಷ್ಠೆ ಕೆ. ಪ್ರಸಾದ ಕೆದಿಲಾಯ ಅವರಿಂದ ನಡೆಯಿತು.

ದೊಂಪದ ಬಲಿ ಉತ್ಸವ:
ಫೆ.5 ಸಂಜೆ ಕಟ್ಟೆ ಸ್ಥಾನದಿಂದ ಭಂಡಾರ ಹಿಡಿದು ಉಕ್ಕುಡ ಮಾಳ್ಯದಲ್ಲಿ ದೈವದ ದೊಂಪದ ಬಲಿ ಉತ್ಸವ ನಡೆಯಿತು. ಈ ಸಂದರ್ಭದಲ್ಲಿ ಉತ್ಸವ ಸಮಿತಿಯ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ನಾಲ್ವೇಕಿಯವರು ಹಾಗೂ ಊರಿನವರು ಉಪಸ್ಥಿತರಿದ್ದರು.

ದ.ಕ.ಜಿಲ್ಲೆಯ ಗಡಿ ಭಾಗದ ಕೊಂಬಾರು ಗ್ರಾಮದಲ್ಲಿರುವ ಕಟ್ಟೆ ಪೆರುಂದೋಡಿಯ ಉಕ್ಕುಡ ಮಾಲ್ಯದಲ್ಲಿ ದೈವಗಳ ಸಾನಿಧ್ಯವನ್ನು ಜೀರ್ಣೋದ್ದಾರಗೊಳಿಸಿ ಶ್ರೀ ಶಿರಾಡಿ ದೈವ ಹಾಗೂ ಗುಳಿಗ ದೈವದ ಪೀಠ ಪ್ರತಿಷ್ಠೆ ಮಾಡಲಾಗಿದೆ. ಅಲ್ಲದೆ ದೊಂಪದ ಬಲಿ ಉತ್ಸವವು ವಿಜೃಂಭಣೆಯಿಂದ ನಡೆದಿದೆ.

ಜೀಣೋದ್ದಾರ ಕಾರ್ಯ:
ಕೊಂಬಾರು ಗ್ರಾಮವು ಕಟ್ಟೆ ಪೆರುಂದೋಡಿ ಹಾಗೂ ಕೂತೂರು-ಕೊಂಬಾರು ಎಂಬ ಎರಡು ಕೂಡುಕಟ್ಟು ಗ್ರಾಮಗಳನ್ನೊಳಗೊಂಡಿದೆ. ಆಳ್ವೆ-ಬೈಲೋಳಿ ಹೊಳೆಗಳ ತಟದಲ್ಲಿರುವ ಕಟ್ಟೆ-ಪೆರುಂದೋಡಿ ಕೂಡುಕಟ್ಟಿಗೆ ಸೇರಿದ ಕಟ್ಟೆ, ಕಂತೋಡಿ, ಪೆರುಂದೋಡಿ, ಅಮ್ಚೂರು, ಬಗ್ಪುಣಿ, ಕಾಪಾರು, ಬೈಲೋಳಿ, ತೇರೆಬೀದಿ, ಅನಿಲ, ಇಡ್ಯಡ್ಕ, ಮಣಿಬಾಂಡ ಕೋಲ್ಪೆ, ಮಿತ್ತಬೈಲು, ನಡುಬೈಲು, ಮುಗೇರು, ಉರುಂಬಿ, ಬೊಟ್ಟಡ್ಕ ಬಯಲುಗಳ ಗ್ರಾಮ ದೇವತೆ ಶ್ರೀ ಶಿರಾಡಿ ದೈವ ಇಲ್ಲಿನವರ ಆರಾಧ್ಯ ದೇವತೆ, ಪ್ರತಿ ವರ್ಷ ತುಳುವರ ಪೊನ್ನಿ ಅಥಾವ ಮಾಯಿ ತಿಂಗಳಿನಲ್ಲಿ ಕಟ್ಟೆ ಆದಿಮನೆಯಿಂದ ಕಂತೋಡಿ ಮೂಲಕ ನಾಲ್ವೇಕಿಯವರು ಹಾಗೂ ಗಣ್ಯರ ಹಿರಿತನದಲ್ಲಿ ಶ್ರೀ ಶಿರಾಡಿ ದೈವದ ಭಂಡಾರ ತಂದು ಪೆರುಂದೋಡಿ ಉಕ್ಕುಡ ಮಾಲ್ಯದಲ್ಲಿರಿಸಿ ದೊಂಪದ ಬಲಿ ಉತ್ಸವ ಆಚರಿಸಿಕೊಂಡು ಬರುತ್ತಿದ್ದರು. ಜಿಲ್ಲೆಯಲ್ಲಿಯೇ ಕಟ್ಟೆ-ಪೆರುಂದೋಡಿ ಉಕ್ಕುಡ ಮಾಲ್ಯಕ್ಕೆ ತನ್ನದೆ ಆದ ವಿಶೇಷತೆ ಇದೆ. ತೀರ ಅಜೀರ್ಣವಸ್ಥೆಯಲ್ಲಿದ್ದ ಮಾಲ್ಯದ ಅಭಿವೃದ್ದಿಗಾಗಿ ಊರಿನವರು ಸಭೆ ಸೇರಿ ಜೀರ್ಣೋದ್ದಾರದ ಸಂಕಲ್ಪ ತೊಟ್ಟಿದ್ದರು. ೨೦೧೯ರಲ್ಲಿ ಡಿ.೧೭ರಂದು ಜ್ಯೋತಿಷಿ ಸತ್ಯನಾರಾಯಣ ಭಟ್ ಇವರ ನೇತೃತ್ವದಲ್ಲಿ ಪ್ರಶ್ನೆ ಚಿಂತನೆ ನಡೆಸಲಾಯಿತು. ಪ್ರಶ್ನಾ ಚಿಂತನೆಯಲ್ಲಿ ಕಂಡು ಬಂದಂತೆ ದೈವಸ್ಥಾನದ ಅಭಿವೃದ್ದಿ ಕಾರ್ಯ ನಡೆಸಲಾಯಿತು. ಅಭಿವೃದ್ದಿ ಕಾರ್ಯಕ್ಕೆ ಸಮಿತಿಯೊಂದನ್ನು ರಚಿಸಿ, ವಾಸ್ತುಶಿಲ್ಪಿ ಪ್ರಸಾದ್ ಮುನಿಯಂಗಳರವರ ಮಾರ್ಗದರ್ಶನದಲ್ಲಿ ಕಟ್ಟಡ ನಿರ್ಮಾಣ ಕಾರ್ಯ ನಡೆಸಲಾಗಿದೆ. ಇದೀಗ ಜೀರ್ಣೋದ್ದಾರಗೊಂಡು ದೈವಗಳಿಗೆ ನೇಮೋತ್ಸವವನ್ನು ಮಾಡಲಾಗಿದೆ.

LEAVE A REPLY

Please enter your comment!
Please enter your name here