ಕಣಿಯೂರು ಶ್ರೀ ಚಾಮುಂಡೇಶ್ವರೀ ದೇವೀ ಕ್ಷೇತ್ರದಲ್ಲಿ ಬ್ರಹ್ಮಕಲಶೋತ್ಸವ ಸಂಭ್ರಮ

0

 

  • ಧರ್ಮದ ಮೇಲೆ ನಂಬಿಕೆ ಇದ್ದಾಗ ಸಮಾಜ ಸುಭಿಕ್ಷ-ಸುಬ್ರಹ್ಮಣ್ಯ ಶ್ರೀ
  • ಧರ್ಮ, ಸಂಸ್ಕೃತಿ ಇದ್ದರೆ ಬದುಕು ಹಸನು-ಒಡಿಯೂರು ಶ್ರೀ
  • ಜಾತಿ ಧರ್ಮ ಬಿಟ್ಟು ನೀತಿಯುತ ಬದುಕು ಕಟ್ಟಬೇಕು-ಮಾಣಿಲ ಶ್ರೀ
  • ಮನಸ್ಸಿನ ಶ್ರೀಮಂತಿಕೆಯಿಂದ ಸುಂದರ ಆಲಯ ನಿರ್ಮಾಣ-ಕಣಿಯೂರು ಶ್ರೀ
  • ದುಷ್ಟಾಚಾರ, ಭ್ರಷ್ಟಾಚಾರವನ್ನು ಬಿಟ್ಟರೆ ಲೋಕಕ್ಕೆ ಒಳಿತು-ಕಮಲಾದೇವಿ ಪ್ರಸಾದ ಅಸ್ರಣ್ಣ

ವಿಟ್ಲ ಜನರಿಗೆ ಧರ್ಮದ ಪ್ರಜ್ಞೆ ಕಡಿಮೆಯಾಗುತ್ತಾ ಹೋಗುತ್ತಿದೆ.ಧರ್ಮ ಪ್ರಜ್ಞೆ ಬಾರದಿದ್ದಲ್ಲಿ ಅಪಾಯವಿದೆ.ಮಠ ಮಂದಿರಗಳನ್ನು ನಿರ್ಮಾಣ ಮಾಡುವ ಮೂಲಕ ಧಾರ್ಮಿಕ ಪ್ರಜ್ಞೆ ಮೂಡಿಸುವ ಕೆಲಸವಾಗಬೇಕು.ಧರ್ಮದ ಮೇಲೆ ನಂಬಿಕೆ ಇದ್ದಾಗ ಸಮಾಜ ಸುಭಿಕ್ಷವಾಗಿರುತ್ತದೆ ಎಂದು ಸುಬ್ರಹ್ಮಣ್ಯ ಶ್ರೀ ಸಂಪುಟ ನರಸಿಂಹ ಸ್ವಾಮಿ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.

ಕಣಿಯೂರು ಶ್ರೀ ಚಾಮುಂಡೇಶ್ವರೀ ದೇವೀ ಕ್ಷೇತ್ರದ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವ, ಚಂಡಿಕಾಯಾಗ ಅಂಗವಾಗಿ ಮಾತೃಶ್ರೀ ವೇದಿಕೆಯಲ್ಲಿ ನಡೆದ ಧರ್ಮ ಸಭೆಯನ್ನು ಅವರು ಉದ್ಘಾಟಿಸಿ ಆಶೀರ್ವಚನ ನೀಡಿದರು.ಎಲ್ಲರೂ ಒಳ್ಳೆಯದರಲ್ಲಿ ಬದುಕಬೇಕೆನ್ನುವ ಅಪೇಕ್ಷೆಯೇ ಧರ್ಮವಾಗಿದೆ.ಧರ್ಮದ ಅಸ್ತಿತ್ವಕ್ಕೆ ದೇವರು ಬೇಕು. ನಂಬಿಕೆಯನ್ನು ಗಟ್ಟಿಗೊಳಿಸುವ ಕಾರ್ಯವಾಗಬೇಕು. ಮಕ್ಕಳಿಗೆ ಮನೆಯಲ್ಲೇ ಧರ್ಮ ವಿಚಾರವನ್ನು ನೀಡಬೇಕು. ಧರ್ಮ ಪ್ರಜ್ಞೆ ಇದ್ದಾಗ ಉತ್ತಮ ಬದುಕು ಸಾಧ್ಯ ಎಂದವರು ನುಡಿದರು.

ಬದುಕು ಮುನ್ನಡೆಯಲು ಧರ್ಮ,ಸಂಸ್ಕೃತಿ ಅಗತ್ಯ: ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಿ ಸಾಧು ಸಂತರಿಗೆ ಗೌರವ ನೀಡಿದ ದೇಶವೆಂದರೆ ಅದು ಭಾರತ. ದಾರಿ ಎಂದರೆ ಧರ್ಮ. ಬದುಕು ಮುನ್ನಡೆಯಬೇಕಾದರೆ ಧರ್ಮ ಮತ್ತು ಸಂಸ್ಕೃತಿ ಅಗತ್ಯ. ಶ್ರದ್ಧಾಕೇಂದ್ರಗಳು ನಮ್ಮ ರಕ್ಷಣೆಯ ಕೇಂದ್ರವಾಗಿದೆ.ಧರ್ಮ ಶ್ರದ್ಧೆಯಿಂದ ಸಂಸ್ಕೃತಿಯೆಂಬ ಪುಷ್ಪ ಅರಳುತ್ತದೆ. ಧರ್ಮ ಸಂಸ್ಕೃತಿ ಇದ್ದರೆ ಬದುಕು ಹಸನಾಗುತ್ತದೆ. ಧರ್ಮ ಜಾಗೃತಿಯಾಗುವುದು ಅಗತ್ಯ. ರಾಷ್ಟ್ರದ ಉಳಿವುಗಾಗಿ ಯುವಶಕ್ತಿಯ ಪ್ರಯತ್ನ ಅತೀ ಅಗತ್ಯ ಎಂದರು.

ಪ್ರಾರ್ಥನಾ ಮಂದಿರ ಶಕ್ತಿ ನೀಡುವ ಕೇಂದ್ರ: ಶ್ರೀಧಾಮ ಮಾಣಿಲ ಶ್ರೀ ಮಹಾಲಕ್ಷ್ಮೀ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರು ಆಶೀರ್ವಚನ ನೀಡಿ ಕಣಿಯೂರು ಸ್ವಾಮೀಜಿಯ ತಪಸ್ಸು ಇಂದು ಸಾಕಾರವಾಗಿದೆ.ಸಾಧು ಸಂತರು ಒಂದಾಗಿದ್ದರೆ ಸಮಾಜ ಬರಿದಾಗದು. ಧರ್ಮದ ಆಚರಣೆಯನ್ನು ನಾವು ಮಾಡಬೇಕು.ಪ್ರಾರ್ಥನಾ ಮಂದಿರಗಳು ಶಕ್ತಿನೀಡುವ ಕೇಂದ್ರಗಳು. ಶ್ರೀ ಚಾಮುಂಡೇಶ್ವರೀ ದೇವೀಯ ಮಹಿಮೆ ಅಪಾರವಾಗಿದೆ.ಕಣಿಯೂರು ಕ್ಷೇತ್ರಕ್ಕೆ ಉತ್ತಮ ಭವಿಷ್ಯವಿದೆ. ನಾವೆಲ್ಲರೂ ಒಂದಾದರೆ ಸಮಾಜ ಸುಧಾರಣೆ ಸಾಧ್ಯ. ಧರ್ಮ ಪ್ರಜ್ಞೆ ಮಾನವೀಯತೆಯ ಮೌಲ್ಯವಾಗಿದೆ. ಜಗತ್ತು ಹಾಳಾಗುತ್ತಿರುವುದು ನಮ್ಮೊಳಗಿನ ಮಾತ್ಸರ್ಯದಿಂದ.ಜಾತಿ ಧರ್ಮ ಬಿಟ್ಟು ನೀತಿಯುತ ಬದುಕು ಕಟ್ಟಬೇಕು.ಯಾಂತ್ರೀಕೃತ ಬದುಕಿನ ಸೋಗಿನಲ್ಲಿ ನಾವು ಎಲ್ಲವನ್ನೂ ಮರೆಯುತ್ತಿzವೆ.ಅತಿಯಾದರೆ ವಿಜ್ಞಾನವೂ ಮಾರಕ.ಪರಿಸರಗಳನ್ನು ಉಳಿಸುವ ಜೊತೆಗೆ ನಮ್ಮ ಆಚಾರ ವಿಚಾರಗಳನ್ನು ಉಳಿಸುವ ಕೆಲಸವಾಗಬೇಕು.ಭ್ರಷ್ಟಾಚಾರದ ವೈರಸ್ ಅಧಿಕವಾಗುತ್ತಿದೆ. ಅದನ್ನು ಸದೆಬಡಿಯುವ ಕಾರ್ಯವಾಗಬೇಕು. ತಂತ್ರಜ್ಞಾನಗಳಿಂದ ಯುವಶಕ್ತಿ ತಪ್ಪುದಾರಿ ಹಿಡಿಯುತ್ತಿದೆ. ಸಾಧು ಸಂತರ ತತ್ವ ಸಿದ್ಧಾಂತಗಳು ಸಮಾಜಕ್ಕೆ ಮಾರ್ಗದರ್ಶನ ಮಾಡುತ್ತಿದೆ ಎಂದರು.
ಮನಸ್ಸಿನ ಶ್ರೀಮಂತಿಕೆಯಿಂದ ಸುಂದರ ಆಲಯ: ಕಣಿಯೂರು

ಶ್ರೀ ಚಾಮುಂಡೇಶ್ವರೀ ದೇವೀ ಕ್ಷೇತ್ರದ ಶ್ರೀ ಮಹಾಬಲ ಸ್ವಾಮೀಜಿ ಆಶೀರ್ವಚನ ನೀಡಿ ಸಮಾಜದಲ್ಲಿ ಮೇಲು ಕೀಳೆಂಬ ತತ್ವಗಳಿಲ್ಲ. ಎಲ್ಲರನ್ನೂ ಸಮಾನವಾಗಿ ಕಾಣುವ ಮನಸ್ಸು ನಮ್ಮದಾಗಬೇಕು. ನೆಲೆ ಹಾಗೂ ಚೈತನ್ಯ ತುಂಬಲು ಗುರುವಿನ ಅಗತ್ಯವಿದೆ. ನಿರೀಕ್ಷೆ ಮೀರಿದ ಸಹಕಾರ ಎಲ್ಲರಿಂದ ಸಿಕ್ಕಿದೆ. ನೀವು ನೀಡಿದ ಮನಸ್ಸಿನ ಶ್ರೀಮಂತಿಕೆಯಿಂದ ಸುಂದರ ಆಲಯ ನಿರ್ಮಾಣವಾಗಿದೆ ಎಂದರು.

ದುಷ್ಟಾಚಾರ, ಭ್ರಷ್ಟಾಚಾರ ಬಿಟ್ಟರೆ ಲೋಕಕ್ಕೆ ಒಳಿತು: ಕಟೀಲು ಶ್ರೀ ಕ್ಷೇತ್ರದ ಕಮಲಾದೇವಿ ಪ್ರಸಾದ ಅಸ್ರಣ್ಣ ಮಾತನಾಡಿ ಧರ್ಮದ ಮೇಲಿನ ನಂಬಿಕೆ ನಮ್ಮಲ್ಲಿರಬೇಕು. ದರ್ಮಕ್ಕೆ ಲೋಕವನ್ನು ರಕ್ಷಿಸುವ ಸಾಮರ್ಥ್ಯವಿದೆ. ದೇವರ ಮೇಲೆ ಭಕ್ತಿ ಇದ್ದವನಿಗೆ ಅಹಂಕಾರ ಬಾರದು. ದುಷ್ಟಾಚಾರ ಹಾಗೂ ಭ್ರಷ್ಟಾಚಾರವನ್ನು ಬಿಟ್ಟರೆ ಲೋಕಕ್ಕೆ ಒಳಿತಾಗುತ್ತದೆ.ಆಧ್ಯಾತ್ಮದ ನೆಲೆಯಿಂದ ಊರಿಗೆ ಬೆಲೆ ಬರುತ್ತದೆ.ಶಾಶ್ವತವಾದ ಸಾಧನೆಯಿಂದ ಬದುಕಿಗೆ ಮಹತ್ವ ಬರುತ್ತದೆ. ಧರ್ಮ ಎಂಬುದು ಲೋಕವನ್ನು ಸಂರಕ್ಷಣೆ ಮಾಡುತ್ತದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಚಾಮುಂಡೇಶ್ವರೀ ದೇವೀ ಸೇವಾ ಟ್ರಸ್ಟ್‌ನ ಅಧ್ಯಕ್ಷ ಪದ್ಮನಾಭ ಪೂಜಾರಿ ಸಣ್ಣಗುತ್ತು ವಹಿಸಿದ್ದರು.ಕೇಪು ಖಂಡಿಗ ಶ್ರೀ ಕೈಲಾಸೇಶ್ವರ ದೇವಸ್ಥಾನದ ಧರ್ಮದರ್ಶಿ ರವೀಶ ಖಂಡಿಗ, ಒಡಿಯೂರು ಶ್ರೀ ವಿವಿಧೋzಶ ಸೌಹಾರ್ದ ಸಹಕಾರಿಯ ಅಧ್ಯಕ್ಷ ಎ. ಸುರೇಶ್ ರೈ, ಬೆಳ್ತಂಗಡಿ ಶ್ರೀ ಗುರುದೇವ ಕಾಲೇಜು ನಿವೃತ್ತ ಪ್ರಾಂಶುಪಾಲ ಎ.ಕೃಷ್ಣಪ್ಪ ಪೂಜಾರಿ, ಪಲ್ಲತ್ತಡ್ಕ ಹೊಸಮ್ಮ ದೈವಸ್ಥಾನದ ಪ್ರಧಾನ ಕಾರ್ಯದರ್ಶಿ ಗೋಪಾಲಕೃಷ್ಣ ಮಾಡಾವು, ಉದ್ಯಮಿಗಳಾದ ರವಿ ಕಕ್ಕೆಪದವು, ಸದಾಶಿವ ಆಚಾರ್ಯ, ಕನ್ಯಾನ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿಜಯಶಂಕರ ಆಳ್ವ, ಯುವ ವಾಹಿನಿ ಮಾಣಿ ಘಟಕದ ನಿಕಟ ಪೂರ್ವ ಅಧ್ಯಕ್ಷ ಪ್ರಶಾಂತ್ ಅನಂತಾಡಿ, ವಿಟ್ಲ ಗ್ರಾಮೀಣ ಸಹಕಾರಿ ಬ್ಯಾಂಕ್ ಅಧ್ಯಕ್ಷ ಎಚ್. ಜಗನ್ನಾಥ ಸಾಲ್ಯಾನ್, ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ ಅನೆಯಾಲ ಮಂಟಮೆ ಮೊದಲಾದವರು ಉಪಸ್ಥಿತರಿದ್ದರು.ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಜಯಂತ ನಡುಬೈಲ್ ಸ್ವಾಗತಿಸಿದರು. ಕಾರ್ಯದರ್ಶಿ ಚಂದ್ರಶೇಖರ ಕಣಿಯೂರು ವಂದಿಸಿದರು. ಹೊರೆಕಾಣಿಕೆ ಸಮಿತಿಯ ವಿನೋದ್ ಶೆಟ್ಟ ಪಟ್ಲಗುತ್ತು ಕಾರ್ಯಕ್ರಮ ನಿರೂಪಿಸಿದರು.

ಧಾರ್ಮಿಕ ಕಾರ್ಯಕ್ರಮ: ಫೆ.೫ರಂದು ಬೆಳಗ್ಗೆ ಗಣಪತಿಹೋಮ, ಅನುಜ್ಞಾಕಲಶ ಪೂಜೆ, ಬಾಲಾಲಯದಲ್ಲಿ ಅನುಜ್ಞಾಕಲಶ ಅಭಿಷೇಕ, ದುರ್ಗಾ ಹೋಮ, ಪ್ರಾಯಶ್ಚಿತ್ತ ಹೋಮ, ಸಪ್ತಶತಿ ಪಾರಾಯಣ, ಮಂಟಪ ಸಂಸ್ಕಾರ, ಮಂಟಪದಲ್ಲಿ ಪೂಜೆ ನಡೆದು ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು. ಸಾಯಂಕಾಲ ಬಿಂಬಶುದ್ಧ ಕಲಶ, ಆದಿವಾಸಗಳು, ಆದಿವಾಸಹೋಮ, ಪ್ರತಿಷ್ಠಾ ಕಲಶಪೂರಣೆ ಪೂಜೆ, ತತ್ವ ಕಲಶಪೂಜೆ, ಹೋಮ ಕಲಾವಾಹನೆ, ಸಪ್ತಶತಿ ಪಾರಾಯಣ, ಮಂಟಪದಲ್ಲಿ ಮಹಾಪೂಜೆ, ಪ್ರಸಾದ ವಿತರಣೆ ನಡೆಯಿತು.

ಸಾಂಸ್ಕೃತಿಕ ಕಾರ್ಯಕ್ರಮ: ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಫೆ.೫ರಂದು ಮಧ್ಯಾಹ್ನ ಟಿ.ಕೆ.ಭಟ್, ನಯಮಗೌರಿ ಸೇರಾಜೆ ಮತ್ತು ಬಳಗದವರಿಂದ ಭಕ್ತಿಪುಷ್ಪಾರ್ಚನೆ ನಡೆಯಿತು. ರಾತ್ರಿ ಇಂಚರ ಮೆಲೋಡಿಸ್ ಅರ್ಪಿಸುವ ‘ಸಂಗೀತ ಗಾನ ಸಂಭ್ರಮ’ ನಡೆಯಿತು.

ಫೆ.06 ಬ್ರಹ್ಮಕಲಶಾಭಿಷೇಕ : ಬೆಳಗ್ಗೆ ಗಣಪತಿಹೋಮ,ಕಲಶಾಧಿವಾಸ ಹೋಮ ಬ್ರಹ್ಮಕಲಶಪೂಜೆ, ಶಿಖರಕಲಶಪೂಜೆ ನಡೆದು ಶ್ರೀ ಚಾಮುಂಡೇಶ್ವರೀ ದೇವಿಯ ಮೂರ್ತಿಪ್ರತಿಷ್ಠೆ, ಪ್ರತಿಷ್ಠಾ ಕಲಶಾಭಿಷೇಕ ಪೂಜೆ, ನಿತ್ಯ ನೈಮಿತ್ತಿಕ ನಡಾವಳಿಗಳ ನಿರ್ಣಯ, ನಿವೇದನೆ, ಸಪ್ತಶತಿ ಪಾರಾಯಣ, ಗುಳಿಗ ಪ್ರತಿಷ್ಠೆ ಕಲಶಾಭಿಷೇಕ, ವಿಶೇಷ ದ್ರವ್ಯ ಕಲಶ ಸಹಿತ ಬ್ರಹ್ಮಕಲಶಾಭಿಷೇಕ, ಶಿಖರ ಪ್ರತಿಷ್ಠೆ, ಶಿಖರ ಕಲಶಾಭಿಷೇಕ, ಕ್ಷೇತ್ರದ ನಾಗ ಸಾನಿಧ್ಯದಲ್ಲಿ ಸಾನಿಧ್ಯಕಲಶ ಪೂಜೆ, ಸಾನಿಧ್ಯಕಲಶಾಭಿಷೇಕ, ನಾಗಪೂಜಾ ತಂಬಿಲಾದಿಗಳು, ರಕ್ತೇಶ್ವರೀ ಅಣ್ಣಪ್ಪ ಸ್ವಾಮಿ ಸಾನಿಧ್ಯದಲ್ಲಿ ಕಲಶಾಭಿಷೇಕ ನಡೆಯಲಿದೆ.ಮಧ್ಯಾಹ್ನ ಸರ್ವಾಲಂಕಾರ ಸಹಿತ ಮಹಾಪೂಜೆ, ಪರಿವಾರ ಸಾನಿಧ್ಯಗಳಲ್ಲಿ ತಂಬಿಲಾದಿಗಳು, ಕ್ರಿಯಾದಕ್ಷಿಣಾದಿಗಳು, ಮಹಾಮಂತ್ರಾಕ್ಷತೆ ನಡೆದು ಪ್ರಸಾದ ವಿತರಣೆ ನಡೆಯಲಿದೆ. ರಾತ್ರಿ ರಂಗಪೂಜೆ ಪ್ರಸಾದ ವಿತರಣೆ ನಡೆದು ಅನ್ನಸಂತರ್ಪಣೆ ನಡೆಯಲಿದೆ.ಬೆಳಗ್ಗೆ ೧೦.೩೦ಕ್ಕೆ ನಡೆಯುವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ, ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ, ಧರ್ಮಸ್ಥಳ ಕನ್ಯಾಡಿ ಶ್ರೀ ರಾಮಕ್ಷೇತ್ರ ಮಹಾಸಂಸ್ಥಾನದ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ, ಕಣಿಯೂರು ಶ್ರೀ ಚಾಮುಂಡೇಶ್ವರೀ ದೇವಿ ಕ್ಷೇತ್ರದ ಶ್ರೀ ಮಹಾಬಲ ಸ್ವಾಮೀಜಿ, ಶ್ರೀ ಕ್ಷೇತ್ರ ಕಟೀಲಿನ ಲಕ್ಷ್ಮೀನಾರಾಯಣ ಅಸ್ರಣ್ಣರು ಉಪಸ್ಥಿತರಿರಲಿದ್ದು, ಆಶೀರ್ವಚನ ನೀಡಲಿದ್ದಾರೆ. ಕಣಿಯೂರು ಶ್ರೀ ಚಾಮುಂಡೇಶ್ವರೀ ದೇವೀ ಕ್ಷೇತ್ರದ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಜಯಂತ ನಡುಬೈಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ವಿವಿಧ ಕ್ಷೇತ್ರದ ಗಣ್ಯರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ನವಕರ್ನಾಟಕ ಕೃಪಾಪೋಷಿತ ಯಕ್ಷಗಾನ ಮಂಡಳಿ ಬಾಯಾರು ಮತ್ತು ದಿ. ತಾಳ್ತಜೆ ಸುಬ್ರಾಯ ಭಟ್ ಪ್ರತಿಷ್ಠಾನದಿಂದ ಮೇಧಿನಿ ನಿರ್ಮಾಣ ಯಕ್ಷಗಾನ ತಾಳಮದ್ದಳೆ ನಡೆಯಲಿದೆ. ಸಾಯಂಕಾಲ ಝೀ ಕನ್ನಡ ಸರಿಗಮಪ ಲಿಟ್ಲ್ ಚಾಂಪ್ ಖ್ಯಾತಿಯ ಜ್ಞಾನಗುರುರಾಜ್ ಪುತ್ತೂರು ಇವರಿಂದ ಜ್ಞಾನ ಗಾನಾಂಜಲಿ, ನೃತ್ಯ ಕಲಾವಿದೆ ಕವಿತಾ ಸುಧಾಕರ್ ಮತ್ತು ತಂಡದವರಿಂದ ಭರತನಾಟ್ಯಾಂಜಲಿ ನಡೆಯಲಿದೆ. ರಾತ್ರಿ ರಾಷ್ಟ್ರದೇವೋಭವ ಖ್ಯಾತಿಯ ಮಂಗಳೂರಿನ ಸನಾತನ ನಾಟ್ಯಾಲಯದ ಸನಾತನ ನೃತ್ಯಾಂಜಲಿ ಭರತ ನಾಟ್ಯ, ದೇಶಭಕ್ತಿ, ಜಾನಪದ ನೃತ್ಯ ವೈವಿದ್ಯ ನಡೆಯಲಿದೆ.

LEAVE A REPLY

Please enter your comment!
Please enter your name here