ಮಾ.19: ಪುತ್ತೂರಿನಲ್ಲಿ ಕೋಟಿ ಚೆನ್ನಯ ಕಂಬಳ – ಸೊರಕೆ ನೇತೃತ್ವದಲ್ಲಿ ಸಮಾಲೋಚನಾ ಸಭೆ

0

ಪುತ್ತೂರು: ಮಾ.19 ಮತ್ತು 20ರಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯಲ್ಲಿ ನಡೆಯುವ ಕೋಟಿ ಚೆನ್ನಯ ಜೋಡುಕರೆ ಕಂಬಳದ ಯಶಸ್ವಿಗಾಗಿ ಮಾಜಿ ಸಚಿವರಾದ ಕಂಬಳ ಸಮಿತಿಯ ಗೌರವಾಧ್ಯಕ್ಷ ವಿನಯ ಕುಮಾರ್ ಸೊರಕೆಯವರ ನೇತೃತ್ವದಲ್ಲಿ ಸಮಾಲೋಚನಾ ಸಭೆ ಫೆ.12ರಂದು ದರ್ಬೆ ನಿರೀಕ್ಷಣಾ ಮಂದಿರದ ಬಳಿ ನಡೆಯಿತು. ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪುತ್ತೂರಿನ ಮಾಜಿ ಶಾಸಕರೂ ಆಗಿರುವ ವಿನಯಕುಮಾರ್ ಸೊರಕೆಯವರು ಇತಿಹಾಸ ಪ್ರಸಿದ್ಧ ಪುತ್ತೂರು ಕೋಟಿ ಚೆನ್ನಯ ಜೋಡುಕರೆ ಕಂಬಳವು ಇದೊಂದು ರೈತಾಪಿ ಬಂಧುಗಳ ಕ್ರೀಡೆಯಾಗಿದ್ದು ಈ ಕ್ರೀಡೆಯ ಯಶಸ್ವಿಗೆ ಎಲ್ಲರ ಸಹಕಾರ ಅಗತ್ಯವಾಗಿದೆ. ಎಲ್ಲರೂ ಒಗ್ಗೂಡಿ ಸೌಹಾರ್ದತೆಯಲ್ಲಿ ಈ ಕ್ರೀಡೆಯ ಯಶಸ್ವಿಗೆ ಮುಂದೆ ಬರಬೇಕು ಎಂದರು.

ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಮಾತನಾಡಿ ಕಂಬಳದ ಯಶಸ್ವಿಗೆ ಸರ್ವರ ಸಹಕಾರ ಅಗತ್ಯ ಎಂದರು. ಪ್ರಾಸ್ತಾವಿಕವಾಗಿ ಮಾತನಾಡಿದ ಕಂಬಳ ಸಮಿತಿಯ ಅಧ್ಯಕ್ಷ ಚಂದ್ರಹಾಸ ಶೆಟ್ಟಿ ಮಾತನಾಡಿ ಕಂಬಳದ ರೂಪುರೇಷೆಗಳ ಬಗ್ಗೆ ವಿವರಿಸಿ ಕಂಬಳದ ಯಶಸ್ಸಿಗೆ ಎಲ್ಲರೂ ಕೈ ಜೋಡಿಸುವಂತೆ ವಿನಂತಿಸಿದರು.

ಕೋಟಿ ಚೆನ್ನಯ ಟ್ರೋಫಿ ನೀಡಲು ತೀರ್ಮಾನ:
ಇಲ್ಲಿಯವರೆಗೆ ಕಂಬಳ ವಿಜೇತ ತಂಡಗಳಿಗೆ ಪವನ್ ಚಿನ್ನ ಮಾತ್ರ ನೀಡಲಾಗುತ್ತಿದ್ದು ಈ ವರ್ಷ ಪವನ್‌ನೊಂದಿಗೆ ವಿಶೇಷವಾಗಿ ಕೋಟಿ ಚೆನ್ನಯ ಟ್ರೋಫಿ ನೀಡಲು ಸಭೆಯಲ್ಲಿ ತೀರ್ಮಾನಿಸಲಾಗಿದೆ.

ವಿಶೇಷ ಸಾಧಕರಿಗೆ ಸನ್ಮಾನ:
ಕಂಬಳದ ಕಾರ್ಯಕ್ರಮದಲ್ಲಿ ವಿಶೇಷ ಸಾಧಕರಿಗೆ ಸನ್ಮಾನಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದೆ. ಅಲ್ಲದೆ ಸಮಾರೋಪ ಸಮಾರಂಭಕ್ಕೆ ಕೂಡ ವಿಶೇಷವಾಗಿ ಎಲ್ಲ ವರ್ಗದ ರಾಜಕೀಯ ಸಾಮಾಜಿಕ ಮುಖಂಡರುಗಳನ್ನು ಅತಿಥಿಗಳನ್ನು ಆಹ್ವಾನಿಸಲು ತೀರ್ಮಾನಿಸಲಾಯಿತು.

ಕಂಬಳದ ಉದ್ಘಾಟನೆಗೆ ಹಾಗೂ ಸಮಾರೋಪ ಸಮಾರಂಭಕ್ಕೆ ಆಹ್ವಾನಿಸಿದ ಎಲ್ಲಾ ಗಣ್ಯರಿಗೆ ಆಮಂತ್ರಣ ಪತ್ರಿಕೆ ನೀಡಿ ಕಾರ್ಯಕ್ರಮಕ್ಕೆ ಆಹ್ವಾನಿಸಲು ತೀರ್ಮಾನಿಸಲಾಯಿತು. ಉಪಾಧ್ಯಕ್ಷ ನಿರಂಜನ ರೈ ಮಠಂತಬೆಟ್ಟು ವಂದಿಸಿದರು. ಪ್ರಧಾನ ಕಾರ್ಯದರ್ಶಿ ದಿನೇಶ್ ಪಿ.ವಿ., ಖಜಾಂಜಿ ಪಂಜಿಗುಡ್ಡೆ ಈಶ್ವರ ಭಟ್, ಉಪಾಧ್ಯಕ್ಷ ಶಿವರಾಮ ಆಳ್ವ ಕುರಿಯ, ಜಿನ್ನಪ್ಪ ಪೂಜಾರಿ ಮುರ, ಸುದೇಶ್ ಕುಮಾರ್ ಚಿಕ್ಕಪುತ್ತೂರು, ಜೋಕಿಮ್ ಡಿ’ಸೋಜಾ, ರೋಶನ್ ರೈ ಬನ್ನೂರು, ಕೃಷ್ಣಪ್ರಸಾದ್ ಆಳ್ವ, ಮಂಜುನಾಥ ಗೌಡ, ವಿಲ್ಫ್ರೆಡ್ ಫೆರ್ನಾಂಡಿಸ್, ಹಸೈನಾರ್ ಬನಾರಿ, ರಂಜಿತ್ ಬಂಗೇರ ಕೆ, ಲೋಕೇಶ್ ಪಡ್ಡಾಯೂರು, ವಿಕ್ರಂ ಶೆಟ್ಟಿ ಅಂತರ, ಗಣೇಶ್ ರಾಜ್ ಬಿಳಿಯೂರು, ಗಂಗಾಧರ ಶೆಟ್ಟಿ, ಬಿ.ಎಚ್ ರಝಾಕ್ ಮೊದಲಾದವರು  ಸಲಹೆ ಸೂಚನೆ ನೀಡಿದರು.

LEAVE A REPLY

Please enter your comment!
Please enter your name here