ಎಬಿವಿಪಿ ರಾಜ್ಯಾಧ್ಯಕ್ಷರಾಗಿ ಪ್ರಾಧ್ಯಾಪಕ, ಲೇಖಕ ಡಾ|ರೋಹಿಣಾಕ್ಷ ಶಿರ್ಲಾಲು ಆಯ್ಕೆ

0

ಪುತ್ತೂರು : ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನ ಕರ್ನಾಟಕದ 2022-23ನೇ ಸಾಲಿನ ರಾಜ್ಯಾಧ್ಯಕ್ಷರಾಗಿ ಕಲಬುರಗಿ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಜಾನಪದ ಶಾಸ್ತ್ರ ಮತ್ತು ಬುಡಕಟ್ಟು ಅಧ್ಯಯನ ವಿಭಾಗದ ಸಹಾಯಕ ಪ್ರಾಧ್ಯಾಪಕ, ಯುವಚಿಂತಕ ಹಾಗೂ ಲೇಖಕ ಡಾ|ರೋಹಿಣಾಕ್ಷ ಶಿರ್ಲಾಲು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಚಾಮರಾಜನಗರದಲ್ಲಿ ನಡೆಯುವ ಎಬಿವಿಪಿಯ 41ನೇ ರಾಜ್ಯ ಸಮ್ಮೇಳನದಲ್ಲಿ ಇವರು ಜವಾಬ್ದಾರಿ ಸ್ವೀಕರಿಸಲಿದ್ದು ಮುಂದಿನ ಒಂದು ವರ್ಷದವರೆಗೆ ಜವಾಬ್ದಾರಿ ನಿರ್ವಹಿಸಲಿದ್ದಾರೆ.

ಡಾ.ರೋಹಿಣಾಕ್ಷ ಶಿರ್ಲಾಲು ಪರಿಚಯ: ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಶಿರ್ಲಾಲು ಗ್ರಾಮದವರಾದ ಇವರು 1998 ರಿಂದಲೂ ವಿದ್ಯಾರ್ಥಿ ಪರಿಷತ್ ಕಾರ್ಯಕರ್ತರಾಗಿದ್ದಾರೆ. ಎಬಿವಿಪಿ ಪುತ್ತೂರು ನಗರ ಅಧ್ಯಕ್ಷರಾಗಿ, ಮಂಗಳೂರು ವಿಭಾಗ ಪ್ರಮುಖರಾಗಿ, ರಾಜ್ಯ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ. 2005ರಲ್ಲಿ ಮಂಗಳೂರು ವಿಶ್ವವಿದ್ಯಾಲಯದಿಂದ ಎಂ.ಎ ಪದವಿ, ಹಂಪಿಯ ಕನ್ನಡ ವಿಶ್ವವಿದ್ಯಾಲಯದಿಂದ ಎಂ.ಫಿಲ್. ಹಾಗೂ ಪಿಎಚ್.ಡಿ ಪದವಿಯನ್ನು ಪಡೆದಿದ್ದಾರೆ. ಅನೇಕ ರಾಷ್ಟ್ರೀಯ, ಅಂತರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಪ್ರಬಂಧ ಮಂಡಿಸಿದ್ದಾರೆ. ಕರ್ನಾಟಕ ರಾಜ್ಯ ಸರ್ಕಾರದಿಂದ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದಾರೆ. ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಕೊಡಮಾಡಿದ 2019ರ ಮೊದಲ ವಾಗ್ದೇವಿ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ. ಇವರ ಸಂಶೋಧನಾ ಲೇಖನಗಳು ಹಲವು ಸಂಶೋಧನಾ ನಿಯತಕಾಲಿಕಗಳಲ್ಲಿ ಪ್ರಕಟವಾಗಿದೆ. ಹಲವು ದಿನಪತ್ರಿಕೆಗಳಲ್ಲಿ ವೈಚಾರಿಕ ಬರಹಗಳು ಪ್ರಕಟವಾಗಿದೆ. ಪ್ರಸ್ತುತ ವಿಜಯ ಕರ್ನಾಟಕ ದಿನಪತ್ರಿಕೆಯ ಅಂಕಣಕಾರರಾಗಿದ್ದಾರೆ. ಕುವೆಂಪು ಭಾಷಾ ಭಾರತಿ ಇವರಿಗೆ ಕುವೆಂಪು ಹಿರಿಯ ಫೆಲೋಶಿಪ್ ನೀಡಿ ಗೌರವಿಸಿದೆ. ರಾಷ್ಟ್ರೋತ್ಥಾನ ಸಾಹಿತ್ಯ ಫೆಲೋಶಿಪ್ ಪಡೆದುಕೊಂಡಿದ್ದಾರೆ. ವಿದ್ಯಾರ್ಥಿ ಪಥ ಮಾಸಿಕ ಪತ್ರಿಕೆಯ ಸಂಪಾದಕರಾಗಿ, ಕರ್ನಾಟಕ ಸರ್ಕಾರದ ಪಠ್ಯಪುಸ್ತಕ ಪರಿಶೀಲನಾ ಸಮಿತಿ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದಾರೆ. ಇವರ ಮೊದಲ ಸಂಶೋಧನಾ ಲೇಖನಗಳ ಸಂಕಲನ ಸಾಹಿತ್ಯ ವಿಚಾರಕ್ಕೆ 2016ರ ಬೇಂದ್ರೆ ಗ್ರಂಥ ಪುರಸ್ಕಾರ ಲಭಿಸಿದೆ. ಇವರ ಕನ್ನಡವೂ ಭಾರತವೂ ಜಗವೆಲ್ಲವೂ ಒಂದೇ, ಜಲಿಯನ್‌ವಾಲಾ ಬಾಗ್ ಹತ್ಯಾಕಾಂಡ, ನೆಲದನಿಯ ಶೋಧ, ಸೇರಿದಂತೆ ಒಟ್ಟು 5 ಕೃತಿಗಳು ಪ್ರಕಟವಾಗಿದೆ.

LEAVE A REPLY

Please enter your comment!
Please enter your name here