ಕೇಂದ್ರದಿಂದ ತಾಲಿಬಾನಿಗಳಿಗೆ ಅನುದಾನ, ರಾಜ್ಯದಿಂದ ಹಿಜಾಬ್ ವಿವಾದ ಆರೋಪ

0

  • ಪುತ್ತೂರು ಬ್ಲಾಕ್ ಕಾಂಗ್ರೆಸ್‌ನಿಂದ ಪ್ರತಿಭಟನೆ
  • ಪೊಲೀಸರ ಮನವಿ-ಪಂಜಿನ ಮೆರವಣಿಗೆ ಬದಲು ಮೊಬೈಲ್ ಟಾರ್ಚ್ ಬೆಳಕಿನಲ್ಲಿ ಪ್ರತಿಭಟನೆ
  • ಬಿಜೆಪಿಯ ಹಿಡೆನ್ ಅಜೆಂಡ ದೇಶಕ್ಕೆ ಮಾರಕ-ಎಂ.ಬಿ.ವಿಶ್ವನಾಥ ರೈ
  • ನಾರಾಯಣಗುರುಗಳ ವಿಚಾರ ಡೈವರ್ಟ್ ಮಾಡಲೆಂದೇ ಹಿಜಾಬ್ ಪ್ರಕರಣ-ಮಹಮ್ಮದ್ ಆಲಿ
  • ಅಖಂಡ ಭಾರತದ ಹೆಸರಿನಲ್ಲಿ ದೇಶವನ್ನು ಛಿದ್ರ ಮಾಡುತ್ತಿದ್ದಾರೆ-ಭಾಸ್ಕರ್ ಕೋಡಿಂಬಾಳ
  • ಬಿಜೆಪಿ,ಎಸ್‌ಡಿಪಿಐನಿಂದ ದಕ್ಷಿಣ ಕನ್ನಡ ಶೈಕ್ಷಣಿಕ ವಿದ್ಯಾಭ್ಯಾಸಕ್ಕೆ ತೊಂದರೆ – ಪ್ರಸಾದ್ ಕೌಶಲ್ ಶೆಟ್ಟಿ

 


ಪುತ್ತೂರು: ತಾಲಿಬಾನಿಗಳಿಗೆ ರೂ.200ಕೋಟಿ ಬಜೆಟ್ ಅನುದಾನ ನೀಡಿದ ಮೋದಿ ಸರಕಾರದ ತಾಲಿಬಾನ್ ಪ್ರೇಮವನ್ನು ವಿರೋಧಿಸಿ ಮತ್ತು ಹಿಜಾಬ್ ವಿವಾದವನ್ನು ಮುಂದಿಟ್ಟು ವಿದ್ಯಾರ್ಥಿಗಳಲ್ಲಿ ಕೋಮು ಭಾವನೆ ಉದ್ರೇಕಿಸಿ ವಿದ್ಯಾರ್ಥಿಗಳ ಭವಿಷ್ಯವನ್ನು ಹಾಳುಗೆಡಹುತ್ತಿದ್ದಾರೆಂದು ಆರೋಪಿಸಿ ರಾಜ್ಯ ಬಿಜೆಪಿ ಸರಕಾರದ ವಿರುದ್ಧ ಪುತ್ತೂರು ಬ್ಲಾಕ್ ಕಾಂಗ್ರೆಸ್ ವತಿಯಿಂದ ಫೆ.16ರಂದು ರಾತ್ರಿ ಬ್ಲಾಕ್ ಕಾಂಗ್ರೆಸ್ ಕಚೇರಿ ಬಳಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.ಪಂಜಿನ ಮೆರವಣಿಗೆಯ ಮೂಲಕ ನಡೆಸುವುದಾಗಿ ಹೇಳಿದ್ದ ಪ್ರತಿಭಟನೆಯಲ್ಲಿ ಪೊಲೀಸರ ಮನವಿಯಂತೆ ಪಂಜಿನ ಮೆರವಣಿಗೆಯನ್ನು ರದ್ದುಪಡಿಸಿ ಮೊಬೈಲ್ ಟಾರ್ಚ್ ಬೆಳಕಿನಲ್ಲಿ ಪ್ರತಿಭಟನೆ ನಡೆಸಿದರು.

ಬಿಜೆಪಿಯ ಹಿಡೆನ್ ಅಜೆಂಡ ದೇಶಕ್ಕೆ ಮಾರಕ: ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ.ವಿಶ್ವನಾಥ ರೈ ಅವರು ಮಾತನಾಡಿ ಪಾಕಿಸ್ಥಾನವನ್ನು ದೂರುವ ಪ್ರಧಾನಿ ಮೋದಿಯವರು ಅಲ್ಲಿನ ಪ್ರಧಾನಿ ಮನೆಗೆ ಹೋಗಿ ಬಿರಿಯಾನಿ ಊಟ ಮಾಡುತ್ತಾರೆ.ಗಾಂಧಿಗೆ ಕೈ ಮುಗಿಯುತ್ತಾರೆ.ಜೊತೆಗೆ ಗಾಂಧಿ ಕೊಂದ ಗೋಡ್ಸೆಗೂ ಕೈ ಮುಗಿಯುತ್ತಾರೆ.ಅಪಘಾನಿಸ್ತಾನವನ್ನು ದೂರುತ್ತಾರೆ. ಅವರಿಗೆ ಕೋಟಿ ಕೋಟಿ ಅನುದಾನ ಕೊಡುತ್ತಾರೆ.ಈ ರೀತಿಯಾಗಿ ನರೇಂದ್ರ ಮೋದಿಯವರ ಹಿಡನ್ ಅಜೆಂಡಾ ನೀತಿ ದೇಶಕ್ಕೆ ಮಾರಕವಾಗಲಿದೆ.ಈ ಎಲ್ಲಾ ವಿಚಾರದ ವಿರುದ್ಧ ನಾವು ಪ್ರತಿಭಟನೆ ಹಮ್ಮಿಕೊಂಡಾಗ ಪೊಲೀಸರ ಮನವಿಯಂತೆ ಪಂಜಿನ ಮೆರವಣಿಗೆ ರದ್ದು ಮಾಡಿದ್ದೇವೆ.ಇದು ದೊಡ್ಡ ವಿಚಾರವಲ್ಲ.ಆದರೆ ಮುಂದಿನ ದಿನ ಯಾವ ಪಕ್ಷಕ್ಕೂ ಪಂಜಿನ ಮೆರವಣಿಗೆಗೆ ಅವಕಾಶ ಕೊಡಬಾರದು ಎಂದು ಆಗ್ರಹಿಸಿದರು.
ಇವತ್ತು ಬಿಜೆಪಿ ಸರಕಾರ ಹಿಜಾಬ್ ಹೆಸರಿನಲ್ಲಿ ಶಾಲೆಗೆ ಹೋಗುವ ಮಕ್ಕಳ ಭವಿಷ್ಯದ ಮೇಲೆ ಆಟವಾಡುತ್ತಿದೆ.ರಾಜ್ಯ ಬಿಜೆಪಿ ಸರಕಾರದ ಜೊತೆಗೆ ಎಸ್.ಡಿ.ಪಿ.ಐ ಸೇರಿಕೊಂಡು ಹಿಜಾಬ್‌ಗಾಗಿ ಶಾಲಾ ಮಕ್ಕಳ ಭವಿಷ್ಯದ ಮೇಲೆ ಚೆಲ್ಲಾಟವಾಡುತ್ತಿದ್ದಾರೆ.ನಮ್ಮ ರಾಜ್ಯದ ಮಂತ್ರಿ ಈಶ್ವರಪ್ಪರವರು ಮೆದುಳು ಮತ್ತು ನಾಲಿಗೆಗೆ ಸಂಪರ್ಕ ಇಲ್ಲದೆ, ಕೆಂಪು ಕೋಟೆಯಲ್ಲಿ ಕೇಸರಿ ಧ್ವಜ ಹಾರಿಸುತ್ತೇವೆ.ರಾಷ್ಟ್ರ ಧ್ವಜ ಇಳಿಸುತ್ತೇವೆ ಎಂದು ಹೇಳುತ್ತಾರೆ.ಅವರ ಹೇಳಿಕೆ ಬಿಜೆಪಿಯ ಹಿಡನ್ ಅಜೆಂಡಾ,ರಾಷ್ಟ್ರಧ್ವಜದ ಮೆಲೆ ಮಾಡಿದ ಅಪಮಾನವನ್ನು ಭಾರತದ ಪ್ರಜೆಗಳಾಗಿ ನಾವು ಅದನ್ನು ಸಹಿಸಲು ಸಾಧ್ಯವಿಲ್ಲ.ಒಂದು ವೇಳೆ ಇದರ ವಿರುದ್ಧ ಆಕ್ರೋಶ ವ್ಯಕ್ತಪಡಿಸದಿದ್ದರೆ ನಮಗೆ ನಾವು ಆತ್ಮದ್ರೋಹ ಮಾಡಿದಂತಾಗುತ್ತದೆ.ಈ ನಿಟ್ಟಿನಲ್ಲಿ ಈಶ್ವರಪ್ಪ ಅವರನ್ನು ಮಂತ್ರಿ ಪದವಿಯಿಂದ ತೆಗೆಯುವ ಕೆಲಸ ಮಾಡಬೇಕೆಂದು ನಾವು ಒಟ್ಟಾಗಿ ಧ್ವನಿ ಎತ್ತುವ ಕೆಲಸ ಮಾಡಬೇಕೆಂದು ಹೇಳಿದರು.

ನಾರಾಯಣಗುರುಗಳ ಸ್ತಬ್ದ ಚಿತ್ರದ ವಿಚಾರ ಡೈವರ್ಟ್ ಮಾಡಲೆಂದೇ ಹಿಜಾಬ್ ಪ್ರಕರಣ:
ನಗರ ಕಾಂಗ್ರೆಸ್ ಅಧ್ಯಕ್ಷ ಹೆಚ್.ಮಹಮ್ಮದ್ ಆಲಿಯವರು ಮಾತನಾಡಿ ನಾರಾಯಣ ಗುರುಗಳ ಸ್ತಬ್ದ ಚಿತ್ರಕ್ಕೆ ಗಣರಾಜ್ಯೋತ್ಸವ ಮೆರವಣಿಗೆಯಲ್ಲಿ ಅವಕಾಶ ಕೊಡದೇ ಇದ್ದುದಕ್ಕೆ ರಾಜ್ಯದ ಎಲ್ಲಾ ಬಿಲ್ಲವರು ಸರಕಾರದ ವಿರುದ್ಧ ಎದ್ದು ನಿಂತಾಗ ಆ ವಿಚಾರವನ್ನು ಡೈವರ್ಟ್ ಮಾಡಲು ಹಿಜಾಬ್ ಅನ್ನುವ ಪ್ರಕರಣ ಮುಂದೆ ತಂದಿದ್ದಾರೆ. ಉಡುಪಿ ಕಾಲೇಜಿನಲ್ಲಿ ಆದಂತಹ ಸಣ್ಣ ಪ್ರಕರಣವನ್ನು ಅಲ್ಲಿನ ಎಸ್‌ಡಿಎಮ್‌ಸಿ ಅಧ್ಯಕ್ಷರು ಮುಗಿಸಬೇಕಾಗಿತ್ತು. ಆದರೆ ಅದನ್ನು ರಾಜ್ಯಾದ್ಯಂತ ಕೊಂಡೊಯ್ದು ರಾಜ್ಯದ ಕಾನೂನು ಸುವ್ಯವಸ್ಥೆಗೆ ಕೋಮು ಸೌಹಾರ್ದತೆಗೆ, ವಿದ್ಯಾರ್ಥಿಗಳ ಮಧ್ಯೆ ವಿಷಕಾರಕ ಭಾವನೆ ಬಿತ್ತುವ ಕೆಲಸವನ್ನು ಸಂಘ ಪರಿವಾರ ಮತ್ತು ಬಿಜೆಪಿ ಸರಕಾರ ಮಾಡುತ್ತಿದೆ.ಇದನ್ನು ಪುತ್ತೂರು ಕಾಂಗ್ರೆಸ್ ತೀವ್ರವಾಗಿ ಖಂಡಿಸುತ್ತದೆ ಎಂದರು.

  ಕಾಂಗ್ರೆಸ್‌ನಿಂದ ಸಚಿವ ಈಶ್ವರಪ್ಪರವರ ಭಾವಚಿತ್ರ ದಹನ

ಅಖಂಡ ಭಾರತದ ಹೆಸರಿನಲ್ಲಿ ದೇಶ ಛಿದ್ರ ಮಾಡುತ್ತಿದ್ದಾರೆ: ಬ್ಲಾಕ್ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಭಾಸ್ಕರ್ ಗೌಡ ಕೋಡಿಂಬಾಳ ಅವರು ಮಾತನಾಡಿ ಬಿಜೆಪಿ ಸರಕಾರ ಅಖಂಡ ಭಾರತದ ಹೆಸರಿನಲ್ಲಿ ದೇಶವನ್ನು ಛಿದ್ರ ಮಾಡುತ್ತಿದೆ. ಜಾತಿ, ಧರ್ಮದ ಹೆಸರಿನಲ್ಲಿ ಒಡೆದು ಆಳುವ ಕೆಲಸ ಇವರದ್ದು, ಸಿ.ಎ.ಎ ತಂದು ಸ-ಲವಾಗದಾಗ ಹಿಜಾಬ್ ವಿವಾದ ಮುಂದಿಟ್ಟರು.ಇವರಿಗೆ ಹಿಂದು ಧರ್ಮದ ಮೇಲೆ ಅಭಿಮಾನ ಇರುತ್ತಿದ್ದರೆ ಸರ್ವೇಜನಾಃ ಸುಖಿನೋ ಭವಂತು ಎಂಬಂತೆ ಎಲ್ಲಾ ಧರ್ಮದವರನ್ನು ಒಟ್ಟು ಮಾಡುವ, ಗಣರಾಜ್ಯೋತ್ಸವದ ದಿನ ಬ್ರಹ್ಮಶ್ರೀ ನಾರಾಯಣ ಗುರುಗಳ ಸ್ತಬ್ಧ ಚಿತ್ರಕ್ಕೆ ಅವಕಾಶ ಕೊಡುವ, ತಾಲಿಬಾನ್‌ಗೆ ರೂ. 200 ಕೋಟಿ ಕೊಡದೆ ಇರುವ ಕೆಲಸ ಮಾಡುತ್ತಿದ್ದರು. ಆದರೆ ಅದನ್ನು ಯಾವುದನ್ನೂ ಮಾಡಿಲ್ಲ.ಆದರೆ ನಮ್ಮ ದೇಶದಲ್ಲಿ ಎಲ್ಲರೂ ಒಟ್ಟಾಗಿ ಬಾಳಬೇಕೆಂಬುದು ಕಾಂಗ್ರೆಸ್ ಬಯಸುತ್ತದೆ ಎಂದರು.

ಬಿಜೆಪಿ, ಎಸ್‌ಡಿಪಿಐನಿಂದ ದಕ್ಷಿಣ ಕನ್ನಡ ಶೈಕ್ಷಣಿಕ ವಿದ್ಯಾಭ್ಯಾಸಕ್ಕೆ ತೊಂದರೆ: ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಪ್ರಸಾದ್ ಕೌಶಲ್ ಶೆಟ್ಟಿಯವರು ಮಾತನಾಡಿ ಹಿಜಾಬ್ ವಿಚಾರ ಸೇರಿದಂತೆ ಅನೇಕ ರೀತಿಯಲ್ಲಿ ಶೈಕ್ಷಣಿಕ ಕೇಂದ್ರಗಳಲ್ಲಿ ಗಲಭೆ ಸೃಷ್ಟಿಸುವ ಹುನ್ನಾರ ನಡೆಸುತ್ತಿರುವ ಬಿಜೆಪಿ ಮತ್ತು ಎಸ್‌ಡಿಪಿಐ ಅವರಿಂದಾಗಿ ಇವತ್ತು ದಕ್ಷಿಣ ಕನ್ನಡಕ್ಕೆ ಶೈಕ್ಷಣಿಕ ವಿದ್ಯಾಭ್ಯಾಸಕ್ಕೆಂದು ಬರುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಆಗುತ್ತಿದೆ. ಇವೆಲ್ಲ ಜಿಲ್ಲೆಯ ಹಿತದೃಷ್ಟಿಗೆ ಮಾರಕವಾಗಲಿದೆ.

ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಆಲಿಕುಂಞಿಯವರು ಮಾತನಾಡಿ ರಾಜ್ಯ ಸರಕಾರ ಕಳೆದ 5 ವರ್ಷದಲ್ಲಿ ಜನರಿಗೆ ಪ್ರಯೋಜನವಾಗುವ ಯಾವ ಕಾರ್ಯಕ್ರಮವನ್ನು ಮಾಡಿಲ್ಲ ಎಂದು ಆರೋಪಿಸಿದರು. ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಮಳ ರಾಮಚಂದ್ರ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.ನಗರ ಕಾಂಗ್ರೆಸ್ ಸದಸ್ಯ ಶಕ್ತಿ ಸಿನ್ಹಾ, ಬ್ಲಾಕ್ ಉಪಾಧ್ಯಕ್ಷ ಮೌರಿಸ್ ಮಸ್ಕರೇನಸ್, ಬ್ಲಾಕ್ ಕಾರ್ಯದರ್ಶಿ ಪವನ್ ಡಿ ಜಿ, ಹಬೀಬ್ ಕಣ್ಣೂರು, ಜಯಂತ್ ಕೆಂಗುಡೇಲು, ಯುವ ಕಾಂಗ್ರೆಸ್ ಉಪಾಧ್ಯಕ್ಷ ಬಾಲಕೃಷ್ಣ ಗೌಡ ಕೆಮ್ಮಾರ, ನಗರ ಕಾಂಗ್ರೆಸ್ ಉಪಾಧ್ಯಕ್ಷ ಸುರೇಶ್ ಪೂಜಾರಿ ಮೊಟ್ಟೆತಡ್ಕ, ಮೂಸೆ ಕುಂಞಿ ಹಾಜಿ ಕುಂಜೂರು, ನಗರ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ದಾಮೋದರ್ ಭಂಡಾರ್ಕರ್, ಯೂಸುಫ್ ಸಾಲ್ಮರ, ಮೌರೀಸ್ ಕುಟಿನ್ಹಾ ರಾಗಿದಕುಮೇರು, ಕಾರ್ಯದರ್ಶಿಗಳಾದ ಇಸ್ಮಾಯಿಲ್ ಬೊಳ್ವಾರ್, ಸಂತ ಲಾರೆನ್ಸ್ ಕೆರೆಮೂಲೆ, ವಾಲ್ಟರ್ ಕೋಡಿಜಾಲ್, ಜಿಲ್ಲಾ ಯುವ ಕಾಂಗ್ರೆಸ್ ಉಪಾಧ್ಯಕ್ಷ ಅಭಿಷೇಕ್ ಬೆಳ್ಳಿಪ್ಪಾಡಿ, ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಂಜಿತ್ ಬಂಗೇರ, ಕೆಯ್ಯೂರು ವಲಯ ಕಾಂಗ್ರೆಸ್ ಅಧ್ಯಕ್ಷ ಎ.ಕೆ.ಜಯರಾಮ್ ರೈ,ಕೆದಂಬಾಡಿ ವಲಯ ಕಾಂಗ್ರೆಸ್ ಅಧ್ಯಕ್ಷ ಪುರಂದರ ರೈ ಕೋರಿಕ್ಕಾರ್, ಮಾಜಿ ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀರಾಮ್ ಪಕ್ಕಳ, ಬ್ಲಾಕ್ ಕಾರ್ಯದರ್ಶಿ ರೋಶನ್ ರೈ ಬನ್ನೂರು, ಅಲ್ಪ ಸಂಖ್ಯಾತ ಘಟಕದ ಮೊಯಿದಿನ್ ಕುಂಞಿ ಕುಂಜೂರು, ಕಿಸಾನ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿಕ್ರಂ ರೈ ಸಾಂತ್ಯ, ನಗರ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸೂರಜ್ ಶೆಟ್ಟಿ ಸಾಮೆತ್ತಡ್ಕ, ಪ್ರಹ್ಲಾದ್ ಬೆಳ್ಳಿಪ್ಪಾಡಿ, ಶರತ್ ಕೇಪುಳು, ನಗರ ಕಾಂಗ್ರೆಸ್ ಸಂಘಟನಾ ಕಾರ್ಯದರ್ಶಿ ಸುರೇಶ್ ಸಾಲಿಯಾನ್ ಸಾಮೆತ್ತಡ್ಕ, ಶಿರಾಜ್ ಸಾಮೆತ್ತಡ್ಕ, ಯಂಗ್ ಬ್ರಿಗೇಡ್‌ನ ಶೆರೀ- ಬಲ್ನಾಡ್, ಎಸ್.ಸಿ ಘಟಕದ ಅಧ್ಯಕ್ಷ ಕೇಶವ ಪಡೀಲ್, ಕಾರ್ಮಿಕ ಘಟಕದ ಅಧ್ಯಕ್ಷ ಶರೊನ್ ಸಿಕ್ವೆರಾ, ಒಳಮೊಗರು ವಲಯ ಕಾಂಗ್ರೆಸ್ ಅಧ್ಯಕ್ಷ ಅಶೋಕ ಪೂಜಾರಿ ಬೊಳ್ಳಾಡಿ, ಕುರಿಯ ವಲಯ ಕಾಂಗ್ರೆಸ್ ಅಧ್ಯಕ್ಷ ಸನತ್ ರೈ, ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಮಹಾಬಲ ರೈ ಒಳತ್ತಡ್ಕ, ಯಾಕೂಬ್ ಮುಲಾರ್, ಶಶಿಕಿರಣ್ ರೈ, ಜಿಲ್ಲಾ ಕಾಂಗ್ರೆಸ್ ಎಸ್ಸಿ ಘಟಕದ ಪದಾಽಕಾರಿ ಬಾಬು ಮರಿಕೆ, ಮುಂಡೂರು ಪಂಚಾಯತ್ ಮಾಜಿ ಉಪಾಧ್ಯಕ್ಷ ಇಬ್ರಾಹಿಂ ಮುಲಾರ್, ಕಾರ್ಮಿಕ ಘಟಕದ ಜಯಪ್ರಕಾಶ್ ರಾವ್, ನಗರ ಕಾಂಗ್ರೆಸ್ ಉಪಾಧ್ಯಕ್ಷ ಸೂಫಿ ಬಪ್ಪಳಿಗೆ, ಕೊಳ್ತಿಗೆ ಪಂಚಾಯತ್ ಸದಸ್ಯ ಸುಂದರ ಮಣಿಕ್ಕರ, ಅರ್ಯಾಪು ಸಹಕಾರಿ ಸಂಘದ ನಿರ್ದೇಶಕ ಹಾರಿಸ್ ಸಂಟ್ಯಾರ್, ಸಲಾಂ ಸಂಪ್ಯ, ಜಿಲ್ಲಾ ಸೇವಾದಳದ ಅಧ್ಯಕ್ಷ ಜೋಕಿಂ ಡಿ ಸೋಜಾ, ಪುತ್ತೂರು ಬ್ಲಾಕ್ ಸಾಮಾಜಿಕ ಜಾಲತಾಣದ ಕೊ ಆರ್ಡಿನೇಟರ್ ಸಿದ್ದಿಕ್ ಸುಲ್ತಾನ್, ಆಶಿ- ಕುರಿಯ, ಇಸ್ಮಾಯಿಲ್ ಬೊಳುವಾರು ಮತ್ತಿತರರು ಪ್ರತಿಭಟನೆಯಲ್ಲಿ ಉಪಸ್ಥಿತರಿದ್ದರು.

ಮುಂದೆ ಪಂಜಿನ ಮೆರವಣಿಗೆ ಮಾಡಿದರೆ ಡಿವೈಎಸ್ಪಿ ಕಚೇರಿ ಎದುರು ಪ್ರತಿಭಟನೆ
ನಾವು ಪೊಲೀಸ್ ಅಧಿಕಾರಿಗಳ ಮನವಿಯಂತೆ ಪಂಜಿನ ಮೆರವಣಿಗೆಯನ್ನು ರದ್ದು ಪಡಿಸಿದ್ದೇವೆ.ಮುಂದೆ ಯಾರಿಗೂ ಪುತ್ತೂರಿನಲ್ಲಿ ಪಂಜಿನ ಮೆರವಣಿಗೆ ಮಾಡಲು ಬಿಡುವುದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.ಆದರೆ ಕೋಮುವಾದಿ ಸಂಘಟನೆಗಳು ನಿಮ್ಮ ಮಾತನ್ನು ಮೀರಿ ಪ್ರಕರಣ ನಡೆಸುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ನಾವು ಕೂಡಾ ಅವರಿಗೆ ಶರತ್ತು ವಿಧಿಸಿದ್ದೇವೆ.ಒಂದು ವೇಳೆ ಮುಂದೆ ಪಂಜಿನ ಮೆರವಣಿಗೆ ಪುತ್ತೂರಿನಲ್ಲಿ ನಡೆದರೆ ಡಿವೈಎಸ್ಪಿ ಕಚೇರಿ ಮುಂದೆ ಒಂದು ಸಾವಿರ ಜನ ಸೇರಿ ಪಂಜನ್ನು ಹಿಡಿದು ಪ್ರತಿಭಟನೆ ಮಾಡಲಿದ್ದೇವೆ – ಹೆಚ್.ಮಹಮ್ಮದ್ ಆಲಿ, ಅಧ್ಯಕ್ಷರು ನಗರ ಕಾಂಗ್ರೆಸ್ ಪುತ್ತೂರು

LEAVE A REPLY

Please enter your comment!
Please enter your name here