ಉಪ್ಪಿನಂಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಿಜಾಬ್ ವಿವಾದ:

0

  • ವಿದ್ಯಾರ್ಥಿಗಳಿಂದ ತರಗತಿ ಬಹಿಷ್ಕಾರ, ಇತ್ತಂಡವಾಗಿ ಗೊಂದಲ ಸೃಷ್ಠಿ
  • 2 ದಿನಗಳ ಕಾಲ ಕಾಲೇಜಿಗೆ ರಜೆ ಸಾರಲಾಗಿದೆ-ಸುಬ್ಬಪ್ಪ ಕೈಕಂಬ

 

ಉಪ್ಪಿನಂಗಡಿ: ಹಿಜಾಬ್ ಧರಿಸಿ ತರಗತಿಗೆ ಪ್ರವೇಶ ನೀಡದಿರುವುದನ್ನು ವಿರೋಧಿಸಿದ ವಿದ್ಯಾರ್ಥಿನಿಯರು ಮತ್ತು ಅವರಿಗೆ ಬೆಂಬಲವಾಗಿ ನಿಂತ ಇನ್ನೂ ಕೆಲವು ವಿದ್ಯಾರ್ಥಿಗಳು ತರಗತಿಯನ್ನು ಬಹಿಷ್ಕರಿಸಿದ ಘಟನೆ ಉಪ್ಪಿನಂಗಡಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗುರುವಾರ ನಡೆದಿದ್ದು, ಬಳಿಕದ ಬೆಳವಣಿಗೆಯಲ್ಲಿ ಇನ್ನಷ್ಟು ಗೊಂದಲಗಳು ಸೃಷ್ಠಿಯಾದ ಕಾರಣದಿಂದಾಗಿ ಮುನ್ನೆಚ್ಚರಿಕಾ ಕ್ರಮವಾಗಿ ಕಾಲೇಜಿಗೆ ಎರಡು ದಿನಗಳ ಕಾಲ ರಜೆ ಸಾರಲಾಗಿದೆ.

ಫೆ. 17ರಂದು ಕಾಲೇಜಿಗೆ ಕೆಲ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿಕೊಂಡು ಬಂದಿದ್ದರು, ಅವರು ತರಗತಿ ಕೊಠಡಿಯೊಳಗೆ ಪ್ರವೇಶ ಮಾಡುವುದಕ್ಕೆ ಪ್ರಾಂಶುಪಾಲರು ನಿರಾಕರಿಸಿ, ನ್ಯಾಯಾಲಯದ ಮಧ್ಯಂತರ ಆದೇಶವನ್ನು ಮನವರಿಕೆ ಮಾಡಿಕೊಟ್ಟು ಕಾಲೇಜು ಕೊಠಡಿಯೊಳಗೆ ಸಮವಸ್ತ್ರ ಧರಿಸಲು ಮಾತ್ರ ಅವಕಾಶವೆಂದು ಸ್ಪಷ್ಟ ಪಡಿಸಿದರು. ಆದರೆ ಹಿಜಾಬ್ ತೆಗೆದು ತರಗತಿ ಕೊಠಡಿಗೆ ಹಾಜರಾಗಲು ಒಪ್ಪದ ವಿದ್ಯಾರ್ಥಿನಿಯರು ನಾವಿಲ್ಲೇ ನಿಲ್ಲುವುದಾಗಿ ಕಾಲೇಜಿನ ಆವರಣದಲ್ಲಿ ನಿಂತು ಪ್ರತಿಭಟಿಸಿದರು.

ಆಗ ಇವರಿಗೆ ಬೆಂಬಲವಾಗಿ ನಿಂತ ಇನ್ನೂ ಕೆಲವು ವಿದ್ಯಾರ್ಥಿಗಳು ಕಾಲೇಜಿನ ಹೊರಗಡೆ ಬಂದು ಪ್ರತಿಭಟನಾ ನಿರತ ವಿದ್ಯಾರ್ಥಿಗಳೊಂದಿಗೆ ಸೇರಿಕೊಂಡರು. ಹಿಜಾಬ್ ಧರಿಸಿ ಬಂದ ವಿದ್ಯಾರ್ಥಿಗಳನ್ನು ತರಗತಿಗೆ ಪ್ರವೇಶ ನೀಡುವಂತೆ ಆಗ್ರಹಿಸಿದರು.

ರಜೆ ಬೇಡ, ಹಿಜಾಬ್ ವಿರೋಧಿ ವಿದ್ಯಾರ್ಥಿಗಳ ಆಗ್ರಹ:
ಹಿಜಾಬ್ ಪರವಾಗಿರುವವರು ಕಾಲೇಜು ತರಗತಿ ಬಹಿಷ್ಕರಿಸಿರುವುದಕ್ಕೆ ಕಾಲೇಜಿಗೆ ರಜೆ ಸಾರಿರುವುದನ್ನು ವಿರೋಧಿಸಿದ ಇನ್ನುಳಿದ ವಿದ್ಯಾರ್ಥಿಗಳು “ನಮಗೆ ತರಗತಿ ಬೇಕು, ಕಾಲೇಜಿಗೆ ರಜೆ ಸಾರುವುದು ಬೇಡ” ಎಂದು ಪ್ರಾಂಶುಪಾಲರನ್ನು ಆಗ್ರಹಿಸಿದರು. ಈ ವಿದ್ಯಾರ್ಥಿಗಳ ಬೇಡಿಕೆಯನ್ನು ಆಲಿಸಿದ ಪ್ರಾಂಶುಪಾಲರು ಅವರಿಗೂ ಪರಿಸ್ಥಿತಿಯ ಸೂಕ್ಷ್ಮತೆ
ಮನವರಿಕೆ ಮಾಡಿಕೊಟ್ಟರು.

ಪರಿಸ್ಥಿತಿಯ ಸೂಕ್ಷ್ಮತೆ ಅರಿತ ಪ್ರಾಂಶುಪಾಲರು ಮತ್ತೆ ಎರಡೂ ತಂಡದವರಿಗೆ ಪ್ರತ್ಯೇಕವಾಗಿ ಮನವರಿಕೆ ಮಾಡಿಕೊಟ್ಟು ಕಾಲೇಜಿಗೆ ಎರಡು ದಿನಗಳ ಕಾಲ ರಜೆ ಘೋಷಿಸಿದರು. ಬಳಿಕ ಎಲ್ಲಾ ವಿದ್ಯಾರ್ಥಿಗಳು ಕಾಲೇಜು ಕ್ಯಾಂಪಸ್‌ನಿಂದ ಹೊರಗೆ ತೆರಳಿದರು. ಗ್ರಾಮಾಂತರ ಪೊಲೀಸ್ ಇನ್ಸ್‌ಪೆಕ್ಟರ್ ಉಮೇಶ್ ಉಪ್ಪಳಿಕೆ, ಸಬ್ ಇನ್ಸ್‌ಪೆಕ್ಟರ್ ಕುಮಾರ್ ಕಾಂಬ್ಲೆ ಮತ್ತು ಪೊಲೀಸ್ ಸಿಬ್ಬಂದಿಗಳು ಸ್ಥಳದಲ್ಲಿದ್ದು, ಪರಿಸ್ಥಿತಿಯ ಅವಲೋಕನ ನಡೆಸಿದರು.

ಸರ್ಕಾರದ ಆದೇಶದಂತೆ 2 ದಿನಗಳ ರಜೆ ನೀಡಲಾಗಿದೆ-ಸುಬ್ಬಪ್ಪ ಕೈಕಂಬ
ಎಂದಿನಂತೆ ಬೆಳಿಗ್ಗೆ ಕಾಲೇಜು ಆರಂಭವಾದಾಗ ಒಂದು ವರ್ಗದ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿಕೊಂಡು ತರಗತಿಗೆ ಪ್ರವೇಶಿಸಲು ಬಂದರು. ಹೈಕೋರ್ಟ್‌ನ ನಿರ್ದೇಶನವನ್ನು ಅವರಿಗೆ ಮನವರಿಕೆ ಮಾಡಿ ತರಗತಿಗೆ ಪ್ರವೇಶ ನಿರಾಕರಿಸಲಾಯಿತು. ಆಗ ಅವರನ್ನು ಬೆಂಬಲಿಸಿ ಕೆಲ ವಿದ್ಯಾರ್ಥಿಗಳು ಅವರಿಗೆ ತರಗತಿಗೆ ಪ್ರವೇಶ ನಿರಾಕರಿಸಿದರೆ, ನಾವು ತರಗತಿಯಲ್ಲಿ ಕುಳಿತುಕೊಳ್ಳುವುದಿಲ್ಲ ಎಂದು ಹೇಳಿ ತರಗತಿ ಬಹಿಷ್ಕರಿಸಿ ಹೊರಗೆ ಬಂದರು”. ಈ ವಿಚಾರವನ್ನು ಕಾಲೇಜು ಶಿಕ್ಷಣ ಇಲಾಖೆಯ ಪ್ರಾದೇಶಿಕ ಜಂಟಿ ನಿರ್ದೇಶಕರ ಗಮನಕ್ಕೆ ತಂದಾಗ ಅವರು ಕಾಲೇಜಿಗೆ ರಜೆ ಸಾರಲು ನಿರ್ದೇಶನ ನೀಡಿದರು. ಅಲ್ಲದೇ, ಈ ಮೊದಲೇ ಇಂತಹ ಸೂಕ್ಷ್ಮ ಪರಿಸ್ಥಿತಿ ಇದ್ದರೆ ರಜೆ ಸಾರಲು ಜಿಲ್ಲಾಧಿಕಾರಿಗಳು ಅವಕಾಶವನ್ನು ಕೊಟ್ಟಿದ್ದರು. ಈ ಹಿನ್ನೆಲೆಯಲ್ಲಿ ಕಾಲೇಜಿಗೆ ಎರಡು ದಿನಗಳ ಕಾಲ ರಜೆಯನ್ನು ಸಾರಲಾಯಿತು. ಬಳಿಕ ಇನ್ನುಳಿದ ವಿದ್ಯಾರ್ಥಿಗಳು “ತಮಗೆ ತರಗತಿಗಳು ಬೇಕು. ಕಾಲೇಜಿಗೆ ರಜೆ ಸಾರಬೇಡಿ. ತರಗತಿಗಳನ್ನು ನಡೆಸಿ ಎಂದು ಮನವಿ ಸಲ್ಲಿಸಿದ್ದು, ಅವರಿಗೆ ಪರಿಸ್ಥಿತಿಯ ಸೂಕ್ಷ್ಮತೆಯನ್ನು ಮನವರಿಕೆ ಮಾಡಿಕೊಟ್ಟಿದ್ದೇನೆ. ಬಳಿಕ ಕಾಲೇಜಿಗೆ ರಜೆ ಇದ್ದುದ್ದರಿಂದ ಎಲ್ಲಾ ವಿದ್ಯಾರ್ಥಿಗಳು ಶಾಂತವಾಗಿಯೇ ಕಾಲೇಜು ಕ್ಯಾಂಪಸ್‌ನಿಂದ ಹೊರಗೆ ತೆರಳಿದರು”. ಪ್ರೊ. ಸುಬ್ಬಪ್ಪ ಕೈಕಂಬ ಪ್ರಾಂಶುಪಾಲರು, ಸರಕಾರಿ ಪ್ರಥಮ ದರ್ಜೆ ಕಾಲೇಜು, ಉಪ್ಪಿನಂಗಡಿ

LEAVE A REPLY

Please enter your comment!
Please enter your name here