ಕೆಎಸ್‌ಆರ್‌ಟಿಸಿಯಲ್ಲಿ ಅಪಘಾತ ರಹಿತ ಚಾಲಕ, ಚಾಲಕ ಕಂ ನಿರ್ವಾಹಕರಿಗೆ ಬೆಳ್ಳಿಪದಕ ವಿತರಣೆ

0

  • ಆರ್.ಟಿ.ಓ ಇಲಾಖೆಗೆ ಪುತ್ತೂರಿನಲ್ಲಿ ಐದು ಎಕರೆ ಜಾಗ-ಶಾಸಕ ಮಠಂದೂರು


ಪುತ್ತೂರು; ಸಾರಿಗೆ ನಿಗಮಕ್ಕೆ ಸ್ಥಳೀಯವಾಗಿ ನೇಮಕಾತಿ ಮಾಡಿಕೊಳ್ಳುವುದು ಹಾಗೂ ನಿರುದ್ಯೋಗಿ ಯುವಕ, ಯುವತಿಯರಿಗೆ ಉತ್ತಮ ತರಬೇತಿ ನೀಡಿ ಅವರಿಗೆ ಉದ್ಯೋಗ ಒದಗಿಸುವ ನಿಟ್ಟಿನಲ್ಲಿ ಪ್ರಾದೇಶಿಕ ಸಾರಿಗೆ ಇಲಾಖೆಗೆ ಪುತ್ತೂರಿನಲ್ಲಿ ಐದು ಎಕರೆ ಜಾಗ ಮಂಜೂರು ಮಾಡಲು ಬದ್ದನಾಗಿರುವುದಾಗಿ ಶಾಸಕ ಸಂಜೀವ ಮಠಂದೂರು ಹೇಳಿದರು. ಮುಕ್ರಂಪಾಡಿಯಲ್ಲಿರುವ ಕೆಎಸ್‌ಆರ್‌ಟಿಸಿ ವಿಭಾಗೀಯ ಕಾರ್ಯಾಗಾರದಲ್ಲಿ ಫೆ.19ರಂದು ಸಂಜೆ ನಡೆದ ೨೦೧೯ನೇ ಸಾಲಿನ ಅಪಘಾತ ರಹಿತ ಚಾಲಕರಿಗೆ ಬೆಳ್ಳಿಪದಕ ವಿತರಣಾ ಸಮಾರಂಭವನ್ನು ಉದ್ಘಾಟಿಸಿ, ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ರಾಜ್ಯದಲ್ಲಿ ಚಾಮರಾಜನಗರ ಹಾಗೂ ಪುತ್ತೂರು ವಿಭಾಗದಲ್ಲಿ ಚಾಲಕ-ನಿರ್ವಾಹಕರು ಹಾಗೂ ತಾಂತ್ರಿಕ ವರ್ಗದವರ ಕೊರತೆಯಿರುವುದರಿಂದ ಪ್ರಸ್ತುತ ಕಾರ್ಯ ನಿರ್ವಹಿಸುತ್ತಿರುವವರು ವರ್ಗಾವಣೆ ಬಯಸದೆ ಸಂಸ್ಥೆಯ ಮೇಲಿನ ಅಭಿಮಾನದಿಂದ ಇಲ್ಲಿಯೇ ಕೆಲಸ ಮಾಡುವ ಮನೋಭಾವ ಹೊಂದಿರಬೇಕು. ಪ್ರತಿಯೊಬ್ಬರು ವೃತ್ತಿ ಧರ್ಮವನ್ನು ಪಾಲನೆ ಮಾಡಿಕೊಳ್ಳಬೇಕು. ಈ ಮೂಲಕ ಪುತ್ತೂರು, ಸುಳ್ಯ, ಮಡಿಕೇರಿ ಹಾಗೂ ಬಿ.ಸಿ.ರೋಡ್ ಈ ನಾಲ್ಕು ಡಿಪೋಗಳನ್ನು ಚಾಲಕ-ನಿರ್ವಾಹಕರು, ತಾಂತ್ರಿಕ ಸಿಬ್ಬಂದಿಗಳು ಮಾದರಿ ಘಟಕವನ್ನಾಗಿ ಮಾಡುವ ಪ್ರಯತ್ನ ಮಾಡಬೇಕು. ಎಂದು ಹೇಳಿದ ಶಾಸಕರು ಪುತ್ತೂರು ಕೆಎಸ್‌ಆರ್‌ಟಿಸಿಗೆ ವಿಭಾಗಕ್ಕೆ ತನ್ನದೇ ಆದ ಹೆಸರಿದ್ದು, ಸುರಕ್ಷತೆ, ನಿಯಮ ಪಾಲನೆ, ಸೇವಾ ಮನೋಭಾವನೆ ಚಾಲಕ-ನಿರ್ವಾಹಕರಿಗಿದೆ. ಈ ಮೂಲಕ ದೇಶದಲ್ಲಿ ವೈಶಿಷ್ಟ್ಯತೆಯನ್ನು ಪಡೆದುಕೊಂಡಿದೆ. ಕೋವಿಡ್‌ನಿಂದಾಗಿ ಪದಕ ವಿತರಿಸುವುದು ಸ್ವಲ್ಪ ವಿಳಂಬವಾಗಿತ್ತು. ಚಾಲಕರಿಗೆ ಚಿನ್ನ ಹಾಗೂ ಬೆಳ್ಳಿ ಪದಕವನ್ನು ಮತ್ತೆ ವಿತರಿಸುವ ಮೂಲಕ ನಿಮ್ಮ ಕಾರ್ಯಪಾಲನೆಗೆ ಮನ್ನಣೆ ಕೊಡುವ ಕೆಲಸ ಸರಕಾರ ಮಾಡಿದೆ ಎಂದರು.


ಮುಖ್ಯ ಅತಿಥಿಗಳಾಗಿ ಸಹಾಯಕ ಆಯುಕ್ತ ಗಿರೀಶ್ ನಂದನ್ ಮಾತನಾಡಿ, ಸಾರಿಗೆ ನಿಗವು ಜನರಿಗೆ ಬಹಳಷ್ಟು ಚಿರಪರಿಚಿತ ಸಂಸ್ಥೆ. ಹಳ್ಳಿಗಾಡಿನ ಜನರು ನಿಗಮದ ಬಸ್ ಮೇಲೆ ಹೊಂದಿಕೊಡಿರುತ್ತಾರೆ. ಹಳ್ಳಿಗಾಡಿನಿಂದ ಬಂದ ಜನರಿಗೆ ಕೆಎಸ್‌ಆರ್‌ಟಿಸಿಯ ಸಮಸ್ಯೆಗಳು ಬಹುಬೇಗ ಅರ್ಥವಾಗುತ್ತದೆ. ಪುತ್ತೂರು ವಿಭಾಗದ ಚಾಲಕರ ಸಾಧನೆ ಮೆಚ್ಚುವಂತದ್ದು. ಇನ್ನಷ್ಟು ಜನಪರ ಕೆಲಸದೊಂದಿಗೆ ಸಾಧನೆ ಮಾಡುವಂತಾಗಲಿ ಎಂದು ಹಾರೈಸಿದರು.


ಡಿವೈಎಸ್‌ಪಿ ಗಾನ ಪಿ.ಕುಮಾರ್ ಮಾತನಾಡಿ, ತನ್ನ ಜೀವ ಕಾಪಾಡಿಕೊಳ್ಳುವ ಮೂಲಕ ಪ್ರಯಾಣಿಕರ ಜೀವ ಕಾಪಾಡುವುದು ಚಾಲಕ ಕೈಯಲ್ಲಿದೆ. ಈ ನಿಟ್ಟಿನಲ್ಲಿ ನಿಗಮದಿಂದ ಸಿಗುವ ಎಲ್ಲಾ ಸೌಲಭ್ಯಗಳು ನಿಮ್ಮನ್ನು ತಲುಪಲಿ ಎಂದರು.


ಪ್ರಾದೇಶಿಕ ಸಾರಿಗೆ ಅಧಿಕಾರಿ ಆನಂದ ಗೌಡ ಮಾತನಾಡಿ, ಕರ್ನಾಟಕದ ರಸ್ತೆ ನರನಾಡಿಯಿದ್ದಂತೆ. ಈ ನಿಟ್ಟಿನಲ್ಲಿ ವೃತ್ತಿಯಲ್ಲಿ ಪ್ರೀತಿ ಇಡುವ ಮೂಲಕ ತನ್ನ ಚಾಲನಾ ವೇಳೆಯಲ್ಲಿ ಹೆಚ್ಚಿನ ಗಮನ ನೀಡುವ ಮೂಲಕ ತನ್ನ ಕರ್ತವ್ಯವನ್ನು ನಿಭಾಯಿಸಬೇಕು. ಈ ಮೂಲಕ ಪುತ್ತೂರು ವಿಭಾಗಕ್ಕೆ ಹೆಚ್ಚಿನ ರಾಜಸ್ವ, ಹೆಸರು ತರುವ ಕೆಲಸ ಮಾಡಬೇಕು. ಸ್ವಚ್ಚತೆಗೂ ಆಧ್ಯತೆ ನೀಡುವ ಚಾಲಕ ನಿರ್ವಾಹಕರಿಗೂ ಪುರಸ್ಕಾರ ನೀಡುವಂತಾಗಬೇಕು ಎಂದರು.
ನಗರ ಸಭಾ ಅಧ್ಯಕ್ಷ ಜೀವಂಧರ್ ಜೈನ್, ಸದಸ್ಯೆ ಶೈಲಾ ಪೈ ವೇದಿಕೆಯಲ್ಲಿ ಉಪಸ್ಥಿತರಿದ್ದರು.

18ಚಾಲಕರು, 9 ಚಾಲಕ ಕಂ ನಿರ್ವಾಹಕರಿಗೆ ಬೆಳ್ಳಿ ಪದಕ ಪ್ರದಾನ:
ಚಾಲಕರಾದ ಪುತ್ತೂರು ಘಟಕದ ಧನಂಜಯ ನಾಯ್ಕ, ವಲ್ಲಿ, ಬಸವರಾಜ್, ಸುಳ್ಯ ಘಟಕದ ಬಾಲಕೃಷ್ಣ ಕೆ.ಬಿ., ರಾಮಣ್ಣ ಬಿ., ಜಗದೀಶ ಡಿ., ಧರ್ಮಸ್ಥಳ ಘಟಕದ ಸತೀಶ ಗೌಡ, ಶ್ರೀಧರ ಕೆ., ಸತೀಶ ಪ್ರಭು ಯು., ಪ್ರಕಾಶ್ ಗೌಡ ಪಾಟೀಲ್, ವೆಂಕಪ್ಪ ಗೌಡ, ನವೀನ್ ಕೆ.ಎಸ್., ಜಯಪ್ರಕಾಶ್, ಪಿ.ಜಿ ರಘು, ಮಡಿಕೇರಿ ಘಟಕದ ಮ್ಯಾಥ್ಯೂ ಪೆರಾಂಪೆಲ್, ಸುಧಾಕರ ಬಿ.ಬಿ., ಕುಂಞಣ್ಣ ಎಂ.ಸಿ., ಟಿ.ಎ ಅಯ್ಯಣ್ಣ, ಚಾಲಕ ಕಂ ನಿರ್ವಾಹಕರಾದ ಪುತ್ತೂರು ಘಟಕದ ರಿಚರ್ಡ್ ಡಿ’ಸೋಜ, ಧರ್ಮಸ್ಥಳ ಘಟಕದ ಮಹಮ್ಮದ್ ರಫೀಕ್ ಮಕಾನದಾರ್, ಸುಂದರ ಕೆ., ಮಡಿಕೇರಿ ಘಟಕದ ಸೋಮಶೇಖರ ಹೆಚ್. ಹೆಚ್., ಗಿರೀಶ ಟಿ.ಎಲ್., ಬಾಪು ಗೌಡ, ಸುಳ್ಯ ಘಟಕದ ವಿಜಯ ಕುಮಾರ್ ಸಿ., ಬಿ.ಸಿ ರೋಡ್ ಘಟಕದ ಜಿನ್ನಪ್ಪ ಹಾಗೂ ತುಳಸಿಗೇರಪ್ಪ ಮೊಖಾಶಿಯವರು ಬೆಳ್ಳಿಪದಕ ಪಡೆದುಕೊಂಡರು.

ಸನ್ಮಾನ, ಅಭಿನಂದನೆ;
ಪದ್ಮಶ್ರೀ ಪುರಸ್ಕೃತ ಅಮೈ ಮಹಾಲಂಗ ನಾಯ್ಕರವರನ್ನು ಸನ್ಮಾನಿಸಲಾಯಿತು. ಪುತ್ತೂರು ವಿಭಾಗದಿಂದ ೨೦೧೬ ಮತ್ತು ೨೦೧೭ನೇ ಸಾಲಿನ ಮುಖ್ಯ ಮಂತ್ರಿಗಳ ಚಿನ್ನದ ಪದಕ ವಿಜೇತ ಚಾಲಕರಾದ ನಂದೀಶ ಎಸ್.ಎಸ್., ವಿಜಯ ಕುಮಾರ್ ಕೆ., ಹರಿಶ್ಚಂದ್ರ ಕೆ., ಎಸ್ ಉಮೇಶ್, ಪ್ರವೀಣ ಸಾಲಿಯಾನ್, ಹೆಚ್.ಪಿ ರಾಜು, ವಸಂತ ಬಂಗೇರ, ಬಿ.ಕೇಶವ ಗೌಡ, ನಂದಕುಮಾರ್, ಟಿ.ಯು ಸತೀಶ, ಕೆ.ಪಿ ಮಹಮ್ಮದ್, ಎಪ್ ಗೋಪಾಲಕೃಷ್ಣ ಹಾಗೂ ಪಿ.ಎ ಶಿವರಾಮ್‌ರವರನ್ನು ಕಾರ್ಯಕ್ರಮದಲ್ಲಿ ಅಭಿನಂದಿಸಲಾಯಿತು.

ಬಿ.ಸಿ ರೋಡ್ ಘಟಕದ ತಂಡ ಪ್ರಾರ್ಥಿಸಿದರು. ವಿಭಾಗೀಯ ನಿಯಂತ್ರಣಾಧಿಕಾರಿ ಜಯಕರ ಶೆಟ್ಟಿ ಪ್ರಸ್ರಾವನೆಯೊಂದಿಗೆ ಸ್ವಾಗತಿಸಿದರು. ಪುತ್ತೂರು ಘಟಕ ವ್ಯವಸ್ಥಾಪಕ ಇಸ್ಮಾಯಿಲ್, ತಾಂತ್ರಿಕ ಅಭಿಯಂತರೆ ಆಶಾಲತಾ, ಕಾರ್ಮಿಕ ಕಲ್ಯಾಣ ಅಧಿಕಾರಿ ಪ್ರಕಾಶ್, ಸಹಾಯಕ ಸಂಚಾರ ವ್ಯವಸ್ಥಾಪಕಿ ಸತ್ಯಲತಾ, ಸಹಾಯಕ ಉಗ್ರಣಾಧಿಕಾರಿ ಮಂಜುನಾಥ ಶೆಟ್ಟಿ ಅತಿಥಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಿದರು. ರಮೇಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ವಿಭಾಗೀಯ ಸಂಚಲಣಾಧಿಕಾರಿ ವಂದಿಸಿದರು. ತಾ.ಪಂ ಮಾಜಿ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ಎಪಿಎಂಸಿ ಸದಸ್ಯ ವಿ.ಎಚ್.ಎ ಶಕೂರ್ ಹಾಜಿ ಸಹಿತ ಹಲವು ಮಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಸ್ವಾತಂತ್ರ್ಯೋತ್ಸವದ ಅಮೃತಮಹೋತ್ಸವದ ಅಂಗವಾಗಿ ಸುದ್ದಿ ಪತ್ರಿಕೆಯು ಹಮ್ಮಿಕೊಂಡ ಆನ್‌ಲೈನ್ ಓಟಿಂಗ್ ಮೂಲಕ ಉತ್ತಮ ಅಧಿಕಾರಿ ಹಾಗೂ ಸಿಬಂದಿಗಳ ಆಯ್ಕೆಯಲ್ಲಿ ಸಾರಿಗೆ ಇಲಾಖೆಯಲ್ಲಿ ಪ್ರಥಮ ಪ್ರಾಶಸ್ತ್ಯದಲ್ಲಿ ವಿಜೇತರಾದ ಪ್ರಾದೇಶಿಕ ಸಾರಿಗೆ ಅಧಿಕಾರಿ ಆನಂದ ಗೌಡರವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.

LEAVE A REPLY

Please enter your comment!
Please enter your name here