ಲಂಚ, ಭ್ರಷ್ಟಾಚಾರಕ್ಕಾಗಿ ಎ.ಸಿ. ಯತೀಶ್ ಉಳ್ಳಾಲ್ ವರ್ಗಾವಣೆ

0

  • ಪುತ್ತೂರು ಶಾಸಕ ಸಂಜೀವ ಮಠಂದೂರಿಗೆ ಅಭಿನಂದನೆಗಳು
  • ಆದರೆ ಎ.ಸಿ.ಯವರು ಇಲ್ಲಿ ಇರುವಾಗಲೇ ಜನರ ಕಣ್ಣೀರು ಒರೆಸಿದ್ದರೆ?, ಹಣ ವಾಪಸ್ ತೆಗಿಸಿಕೊಡುತ್ತಿದ್ದರೆ?!!!

ಪುತ್ತೂರು, ಸುಳ್ಯ, ಬೆಳ್ತಂಗಡಿ, ಕಡಬ ವ್ಯಾಪ್ತಿಯಲ್ಲಿ ಎ.ಸಿಯಾಗಿದ್ದ ಇದೀಗ ವರ್ಗಾವಣೆಯಾಗಿರುವ ಯತೀಶ್ ಉಳ್ಳಾಲ್‌ರವರು ಬಹಳಷ್ಟು ಜನರಿಗೆ ತೊಂದರೆ ಕೊಟ್ಟಿದ್ದಾರೆ. ಭ್ರಷ್ಟಾಚಾರ, ಲಂಚದ ಸಂಸ್ಕೃತಿಯನ್ನು ಕೆಳಗಿನಿಂದಲೇ ವ್ಯವಸ್ಥಿತವಾಗಿ ಬೆಳೆಸಿದ್ದಾರೆ. 10ರಿಂದ 15 ಕೋಟಿ ಪುತ್ತೂರಿನಿಂದ ಒಯ್ದಿದ್ದಾರೆ. ಪ್ರತಿಯೊಂದು ವಿ.ಎ.ಯಿಂದ ಅಕ್ರಮ ಸಕ್ರಮಕ್ಕೆ ಇಂತಿಷ್ಟು ಎಂದು ಹೀಗೆ ಎಲ್ಲಾ ಫೈಲ್‌ಗಳಲ್ಲಿಯೂ ವಸೂಲಾತಿ ನಡೆಯುತ್ತಿತ್ತು ಎಂದು ಆರೋಪ ಕೇಳಿ ಬರುತ್ತಿದೆ. ಇದು ವರ್ಗಾವಣೆ ಆದ ಮೇಲಿನ ಆರೋಪವೇ ಅಥವಾ ನಿಜವಾದ ಘಟನೆಯೇ ಎಂಬ ಪ್ರಶ್ನೆಯು ಕೆಲವರಲ್ಲಿದೆ. ಲಂಚ, ಭ್ರಷ್ಟಾಚಾರಕ್ಕೆ ಬಹಿಷ್ಕಾರ, ಉತ್ತಮ ಸೇವೆಗೆ ಪುರಸ್ಕಾರ ಎಂಬ ಸುದ್ದಿ ಜನಾಂದೋಲನ ಪ್ರಾರಂಭವಾದ ಮೇಲೆ ಜನರು ಲಂಚ, ಭ್ರಷ್ಟಾಚಾರದ ಬಗ್ಗೆ ಬಾಯಿ ಬಿಡಲು ಪ್ರಾರಂಭಿಸಿದ್ದಾರೆ. ಆದರೂ ಆಧಾರಗಳೊಂದಿಗೆ ಮುಂದೆ ಬರಲಿಲ್ಲ. ತಮ್ಮ ಲಾಭಕ್ಕಾಗಿ ಹಾಗೆ ಮಾಡಿದರೇ? ಅಥವಾ ತಮಗೆ ತೊಂದರೆಯಾದರೆ ಎಂದು ಹೆದರಿದರೇ?. ನಮಗೆ ಯಾಕೆ ಇಲ್ಲದ ಉಸಾಬರಿ ಎಂದು ಸುಮ್ಮನಿದ್ದಾರೆಯೇ? ಗೊತ್ತಿಲ್ಲ. ಆದರೆ ಜನರಿಗೆ ತೊಂದರೆಯಾಗಿರುವುದು, ಹಣ ವಸೂಲಾತಿ ನಡೆದಿರುವುದು ಖಂಡಿತ ಎಂದು ಹೇಳುವವರ ಸಂಖ್ಯೆ ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಿದೆ.

ಲಂಚ ಭ್ರಷ್ಟಾಚಾರ ನಿಲ್ಲಿಸಲು ದೇಶ ಕಾಯುವ ಸೈನಿಕರು ಬರಬೇಕೇ? ನಮ್ಮಿಂದ ಸಾಧ್ಯವಿಲ್ಲವೇ?:
ಯತೀಶ್ ಉಳ್ಳಾಲ್‌ರವರ ಫೈಲ್‌ಗಳನ್ನು ತನಿಖೆಗೆ ಒಳಪಡಿಸಿದರೆ ಭ್ರಷ್ಟಾಚಾರ ಬಯಲಾಗುತ್ತದೆ ಎಂದು ಕಾಂಗ್ರೆಸ್ ಮುಖಂಡ ಮಹಮ್ಮದ್ ಅಲಿ ಆರೋಪಿಸಿದ್ದಾರೆ. ಅವರ ಆರೋಪಕ್ಕೆ ಕೇಸು ಮಾಡುವುದಾಗಿ ಯತೀಶ್ ಉಳ್ಳಾಲ್ ಹೇಳಿದ್ದಾರೆಂದು ವದಂತಿ ಇದೆ. ಅದೇನಿದ್ದರೂ ಪುತ್ತೂರಿನಿಂದ ಯತೀಶ್ ಉಳ್ಳಾಲ್ ವರ್ಗಾವಣೆಯಿಂದ ಬೇಸರವಾಗಿದೆ ಅದನ್ನು ರದ್ದು ಪಡಿಸಿ ಎಂದು ಯಾರೂ ಹೇಳುತ್ತಿಲ್ಲ, ಕೇಳುತ್ತಿಲ್ಲ. ಅವರನ್ನು ವರ್ಗಾಯಿಸಿ ಪುತ್ತೂರಿಗೆ ಗಿರೀಶ್ ನಂದನ್ ಎಂಬ ಉತ್ತಮ ಅಧಿಕಾರಿಯನ್ನು ಬರುವಂತೆ ಮಾಡಿರುವುದಕ್ಕೆ ಶಾಸಕ ಸಂಜೀವ ಮಠಂದೂರುರವರಿಗೆ ಅಭಿನಂದನೆ ಸಲ್ಲಲೇ ಬೇಕು ಎಂದು ಹೇಳುತ್ತಿದ್ದಾರೆ. ಆದರೆ (ವರ್ಗಾವಣೆ ರಾಜಕೀಯದ ಅನುಭವ ಇಲ್ಲದವರು) ಈ ವರ್ಗಾವಣೆಯನ್ನು ಪ್ರಾರಂಭದಲ್ಲಿ ಮಾಡಬಹುದಿತ್ತು ಎಂದು ಹೇಳುವವರೂ ಇದ್ದಾರೆ. ನಾನು ಹೇಳುವುದು ಅದನ್ನಲ್ಲ. ಪ್ರಜೆಗಳೇ ರಾಜರು, ಅಧಿಕಾರಿಗಳು ಜನಸೇವಕರು ಎಂದು ಜನರಿಗೆ ಗೊತ್ತಿದ್ದರೂ ಲಂಚ ಅಂದರೆ ದರೋಡೆ, ಭ್ರಷ್ಟಾಚಾರ ಎಂದರೆ ದೇಶದ್ರೋಹ. ಲಂಚ, ಭ್ರಷ್ಟಾಚಾರ ಮುಕ್ತ ಮಾಡುವುದು ದೊಡ್ಡ ಜನಸೇವೆ ಮತ್ತು ದೇಶಸೇವೆ ಎಂಬ ಸುದ್ದಿ ಜನಾಂದೋಲನಕ್ಕೆ ಜನತೆ ಬೆಂಬಲ ಕೊಡುತ್ತಿದ್ದರೂ ಪುತ್ತೂರಿನ ರಾಜಕೀಯ ಪಕ್ಷಗಳು, ಜನಪ್ರತಿನಿಧಿಗಳು, ನ್ಯಾಯಕ್ಕಾಗಿ ಮೆರವಣಿಗೆ-ಪ್ರತಿಭಟನೆ ನಡೆಸುವ ಸಂಘಟನೆಗಳು, ಜನಸೇವೆಯನ್ನೇ ಜೀವನದ ಗುರಿಯಾಗಿಸಿರುವ ಸೇವಾ ಸಂಸ್ಥೆಗಳು ಲಂಚ, ಭ್ರಷ್ಟಾಚಾರದಿಂದ ಜನರಿಗೆ ಆಗುತ್ತಿರುವ ಅನ್ಯಾಯವನ್ನು ನಿಲ್ಲಿಸಲು ಮುಂದೆ ಬರುವುದಿಲ್ಲ ಯಾಕೆ?. ಗೊತ್ತಿದ್ದರೂ ಸುಮ್ಮನೆ ಇರುವುದು ಯಾಕೆ? ಉದಾ: ಪುತ್ತೂರಿನಲ್ಲಿ ಸಬ್ ರಿಜಿಸ್ಟ್ರಾರ್ ಕಛೇರಿ ಅತ್ಯಂತ ಭ್ರಷ್ಟಾಚಾರದ ಕೂಪ ಎಂದು ನಮ್ಮ ರಿಪೋರ್ಟರೊಡನೆ ಪುತ್ತೂರಿನ ಕೆಲವು ಪ್ರಸಿದ್ಧ ವಕೀಲರು ಹೇಳಿದ್ದರು. ಸಾಮಾನ್ಯ ಜನರನ್ನು ಬಿಡಿ, ಅವರಿಗೆ ಏನೂ ತಿಳಿಯದು. ಆದರೆ ಸಬ್ ರಿಜಿಸ್ಟ್ರಾರ್ ಕಛೇರಿಗೆ ರಿಜಿಸ್ಟ್ರೇಷನ್‌ಗೆ ಹೋಗುವವರು ದಸ್ತಾವೇಜು ಬರಹಗಾರರು ಮತ್ತು ವಕೀಲರುಗಳು ಆಗಿರುತ್ತಾರೆ. ಅವರು ಅವರ ಕೆಲಸಕ್ಕೆ ಜನರಿಂದ ಫೀಸ್ ತೆಗೆದುಕೊಳ್ಳಲಿ ಆದರೆ ಲಂಚ ಕೊಡದೆ ಕೆಲಸ ಆಗುವುದಿಲ್ಲ ಎಂದು ಹೇಳುವುದು ಯಾಕೆ?. ಬುದ್ದಿವಂತರಾದ ಅವರು ರಿಜಿಸ್ಟ್ರೇಷನ್‌ಗೆ ಲಂಚ ತೆಗೆದುಕೊಳ್ಳುವುದನ್ನು ವಿರೋಧಿಸಬಹುದಲ್ಲ?. ನಿಲ್ಲಿಸಬಹುದಲ್ಲ?. ಯಾಕೆ ಮಾಡುತ್ತಿಲ್ಲ. ಚಂದ್ರಲೋಕಕ್ಕೆ ಹೋಗುವ ರಾಕೆಟ್ ಸೈನ್ಸ್, ಆಟಂಬಾಂಬ್‌ನ, ಆಧಾರ್ ಕಾರ್ಡ್‌ನಂತಹ ತಂತ್ರಜ್ಞಾನ ನಮ್ಮಲ್ಲಿದೆ. ಹೀಗಿರುವಾಗ ರಿಜಿಸ್ಟ್ರೇಷನನ್ನು ಲಂಚ ಇಲ್ಲದಂತೆ ಮಾಡಲು ಆಗುವುದಿಲ್ಲವೇ? ಹಿಮಾಲಯದಂತಹ ಪ್ರದೇಶದಲ್ಲಿ ಸೈನಿಕರು ಜೀವದ ಹಂಗು ತೊರೆದು ದೇಶ ರಕ್ಷಿಸುತ್ತಿದ್ದಾರೆ. ಹೀಗಿರುವಾಗ ಜನ ಸೇವೆಗಾಗಿ ಇರುವ ಸರಕಾರಿ ನೌಕರ ಸಬ್ ರಿಜಿಸ್ಟ್ರಾರ್ ಲಂಚ, ಭ್ರಷ್ಟಾಚಾರ ಮಾಡದಂತೆ ಅಂದರೆ ದೇಶದ್ರೋಹ ಮಾಡದಂತೆ ನೋಡಲಿಕ್ಕೆ ದೇಶ ಕಾಯುವ ಸೈನಿಕರನ್ನು ಕರೆಯಬೇಕೇ!. ನಮ್ಮಿಂದ ಸಾಧ್ಯವಿಲ್ಲವೇ?. ಅಷ್ಟು ಹೇಡಿಗಳು, ಕೈಲಾಗಳಾದವರು ನಾವು ಆಗಿದ್ದೇವೆಯೇ?! ಅಲ್ಲಿಗೆ ಹೋಗುವ ಮತ್ತು ಲಂಚ ಕೊಡುವ ಜನರೇ ಉತ್ತರ ಕೊಡಬೇಕು. ಅತ್ಯಂತ ಪ್ರಾಮಾಣಿಕ ಜಿಲ್ಲಾಽಕಾರಿ ಡಾ. ರಾಜೇಂದ್ರ ಕೆ.ವಿ., ಜಿ.ಪಂ.ಸಿಇಓ ಡಾ| ಕುಮಾರ್ ಮಂಗಳೂರಿನಲ್ಲಿದ್ದರೂ ಪುತ್ತೂರಿನ ಶಾಸಕರು ಪ್ರಾಮಾಣಿಕರಾಗಿದ್ದರೂ ಲಂಚ, ಭ್ರಷ್ಟಾಚಾರಕ್ಕೆ ಕಡಿವಾಣ ಬೀಳಲಿಲ್ಲ ಯಾಕೆ? ಎಂಬುವುದು ನಮಗೆ ದೊಡ್ಡ ಯಕ್ಷ ಪ್ರಶ್ನೆಯಾಗಿಯೇ ಉಳಿದಿದೆ. ಪುತ್ತೂರು, ಸುಳ್ಯ, ಬೆಳ್ತಂಗಡಿ, ಕಡಬ ತಾಲೂಕಿನ ಜನರು ಆ ಪ್ರಶ್ನೆಗೆ ಉತ್ತರ ಕಂಡು ಹಿಡಿದ ದಿನದಿಂದ ನಮ್ಮ ಊರು, ತಾಲೂಕು, ಜಿಲ್ಲೆ ಲಂಚ, ಭ್ರಷ್ಟಾಚಾರ ಮುಕ್ತವಾಗಿ ಉತ್ತಮ ಸೇವೆ ನೀಡುವ ಜಿಲ್ಲೆಯಾಗುವುದು ಖಂಡಿತ ಎಂದು ಘಂಟಾಘೋಷವಾಗಿ ಹೇಳಬಲ್ಲೆ.

ಎ.ಸಿ.ಯವರಿಂದ ಲಂಚದ ಹಣವನ್ನು ವಾಪಸ್ ತೆಗೆಸಿಕೊಟ್ಟ ಮಹನೀಯರಿಗೆ ಅಭಿವಂದನೆಗಳು:
ಎ.ಸಿ.ಯತೀಶ್ ಉಳ್ಳಾಲ್‌ರವರು ಜನರಿಂದ ಲಂಚವಾಗಿ ಪಡೆದ ಹಣವನ್ನು ಬಿಜೆಪಿ ಪಕ್ಷದ ಹಿರಿಯ ನಾಯಕರು ವಾಪಸ್ ತೆಗೆಸಿಕೊಟ್ಟಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ. ಬೆಳ್ತಂಗಡಿಯ ಮಾಜಿ ಶಾಸಕ ವಸಂತ ಬಂಗೇರರು 31.08.2021 ಪತ್ರಿಕಾಗೋಷ್ಠಿಯಲ್ಲಿ ಭ್ರಷ್ಟಾಚಾರದ ಬಗ್ಗೆ ಅಲ್ಲಿಯ ಬಿಜೆಪಿ ನಾಯಕರನ್ನು ಟೀಕಿಸುತ್ತಾ “ಪುತ್ತೂರಿನ ಎ.ಸಿ. ಡಾ| ಯತೀಶ್ ಉಳ್ಳಾಲ್‌ರವರು ಅಮಾಯಕರಿಂದ ಲಂಚದ ಮೂಲಕ ಕೋಟಿಗಟ್ಟಲೆ ಹಣ ಪಡೆದಿದ್ದಾರೆ. ಲಂಚ ನೀಡಿದವರ  ಫೈಲುಗಳು ಒಂದೇ ದಿನದಲ್ಲಿ ಆದೇಶ ಆಗುತ್ತಿದ್ದು, ಬಡವರ ಕಡತಗಳು ಪುತ್ತೂರು ಎ.ಸಿ. ಕಛೇರಿಯಲ್ಲಿ ಕೊಳೆತು ನಾರುತ್ತಿದೆ. ಕಳೆದ ಕೆಲ ದಿನಗಳ ಹಿಂದೆ ನಿಮ್ಮದೇ ಪಕ್ಷದ ಹಿರಿಯ ನಾಯಕರೊಬ್ಬರು ಎ.ಸಿ.ಯವರು ಪಡೆದುಕೊಂಡ ಎರಡು ಲಕ್ಷ ಲಂಚದ ಹಣವನ್ನು ಸಂಬಂಧ ಪಟ್ಟವರಿಗೆ ವಾಪಸು ಕೊಡಿಸಿದ ವಿಚಾರ ಬೆಳ್ತಂಗಡಿಯಾದ್ಯಂತ ಪ್ರಚಾರ ಆಗಿದ್ದು ಆ ನಂತರ ಎ.ಸಿ.ಯವರು ಎರಡು ವಾರ ನಾಚಿಕೆಯಿಂದ ಬೆಳ್ತಂಗಡಿಗೆ ಬಂದಿಲ್ಲ ” ಎಂದಿದ್ದಾರೆ. ಅದು ಹೌದಾಗಿದ್ದರೆ ಆ ಸಂಪೂರ್ಣ ಪ್ರಕರಣ ಬೆಳಕಿಗೆ ಬರಬೇಕು. ಆ ಹಿರಿಯರು ಯಾರು ಎಂದು ಗೊತ್ತಾಗಬೇಕು. ಆ ರೀತಿ ತೆಗೆಸಿಕೊಟ್ಟವರು, ಅವರು ಯಾವುದೇ ಪಕ್ಷದವರು ಆಗಿದ್ದರೂ ಅವರಿಗೆ ಅಭಿನಂದನೆ ಸಲ್ಲಲೇ ಬೇಕು. ಯಾಕೆಂದರೆ ಇಲ್ಲಿಯೂ ಅಂತಹ ಕೆಲಸ ನಡೆಯಬೇಕು. ಜನರಿಂದ ಲಂಚವಾಗಿ ಸುಲಿಗೆ ಮಾಡಿದ ಹಣವನ್ನು ಜನತೆಗೆ ವಾಪಸ್ ಕೊಡಿಸುವ ಕೆಲಸ ಇಲ್ಲಿಯೂ ನಡೆದರೆ ಹೇಗೆ? ಎಂಬ ಆಶಯ ಜನರಲ್ಲಿದೆ. ಪುತ್ತೂರಿನಲ್ಲಿ ಎ.ಸಿ.ಯತೀಶ್ ಉಳ್ಳಾಲ್ ಜನರಿಗೆ ತೊಂದರೆ ಕೊಡುತ್ತಿದ್ದಾರೆ ಎಂಬ ಅಭಿಪ್ರಾಯ ಸಂಜೀವ ಮಠಂದೂರುರವರಿಗೆ ತಲುಪಿರುವುದರಿಂದ ಅವರ ವರ್ಗಾವಣೆಗೆ ಮಠಂದೂರು ಪ್ರಯತ್ನಿಸಿದ್ದಾರೆ. ಯತೀಶ್ ಉಳ್ಳಾಲ್‌ರು ಬೆಳ್ತಂಗಡಿ, ಕಡಬ, ಸುಳ್ಯ ತಾಲೂಕಿನಲ್ಲಿ ಆ ರೀತಿ ತೊಂದರೆ ಮಾಡಲಿಲ್ಲವೇ? ಜನರಿಗೆ ಉತ್ತಮ ಕೆಲಸ ಮಾಡಿದ್ದಾರೆಯೇ?. ಆ ಕ್ಷೇತ್ರದ ಜನರು ಬಹಿರಂಗವಾಗಿ ತಿಳಿಸಬೇಕು. ಅದನ್ನು ಆಯಾ ತಾಲೂಕಿನ ಜನಪ್ರತಿನಿಧಿಗಳ ಮತ್ತು ಶಾಸಕರ ಗಮನಕ್ಕೆ ತರಬೇಕು. ಉತ್ತಮ ಸೇವೆ ಮಾಡಿದ್ದಿದ್ದರೆ ಸನ್ಮಾನಿಸಬೇಕು. ಲಂಚ, ಭ್ರಷ್ಟಾಚಾರ ಮಾಡಿದ್ದರೆ ಅವರಿಂದ ಹಣವನ್ನು ವಸೂಲಿ ಪಡೆಯುವ ಪ್ರಯತ್ನಕ್ಕೆ ಕೈ ಹಾಕಬೇಕು. ಅದಕ್ಕೆ ಆಯಾ ಶಾಸಕರ ಬೆಂಬಲ ಪಡೆಯಬೇಕು. ಆ ರೀತಿ ಮಾಡಿದರೆ ಉತ್ತಮ ಸೇವೆಗೆ ಪುರಸ್ಕಾರ ನೀಡುವ-ಲಂಚ, ಭ್ರಷ್ಟಾಚಾರಕ್ಕೆ ಬಹಿಷ್ಕಾರದ ಕಾರ್ಯ ಯಶಸ್ವಿಯಾಗಿ ಜನರ ಮನ ಪರಿವರ್ತನೆಯಾಗಿ ನಮ್ಮ ಊರು ಲಂಚ, ಭ್ರಷ್ಟಾಚಾರ ಮುಕ್ತ ಮಾತ್ರವಲ್ಲ ಉತ್ತಮ ಸೇವೆ ನೀಡುವ ರಾಮರಾಜ್ಯವೇ ಆದೀತು ಎಂದು ಹೇಳಲು ಬಯಸುತ್ತೇನೆ. ಲಂಚ ಕೊಟ್ಟರೂ ಹಣ ತೆಗೆದುಕೊಳ್ಳದೆ ಅಧಿಕಾರಿಗಳು ಉತ್ತಮ ಸೇವೆ ನೀಡುವ ವ್ಯವಸ್ಥೆ 100 ದಿನಗಳಲ್ಲಿ ಬರಲಿದೆ ಎಂದು ಕಳೆದ ವಾರದ ಸಂಪಾದಕೀಯದಲ್ಲಿ ಬರೆದಿದ್ದೇನೆ. ಜನರು ಆ 100 ದಿನದ ಗಡುವನ್ನು ನೆನಪಿಟ್ಟುಕೊಂಡು ಸುದ್ದಿ ಜನಾಂದೋಲನದ ಯಶಸ್ವಿಗೆ ಸಹಕರಿಸಬೇಕಾಗಿ ವಿನಂತಿಸುತ್ತಿದ್ದೇನೆ.

ಲಂಚ, ಭ್ರಷ್ಟಾಚಾರ ನಿರ್ಮೂಲನೆ ದೊಡ್ಡ ಜನಸೇವೆ, ದೇಶ ಸೇವೆ ಎಂದು ಗೊತ್ತಿದ್ದರೂ ರಾಜಕೀಯ ಪಕ್ಷಗಳು, ಜನಪ್ರತಿನಿಧಿಗಳು, ಸಂಘಟನೆಗಳು, ಸೇವಾ ಸಂಸ್ಥೆಗಳು ಮತ್ತು ಜನರು ಮುಂದೆ ಬರುತ್ತಿಲ್ಲ ಯಾಕೆ?. ಅಂಜಿಕೆಯೇ?, ನಾಚಿಕೆಯೇ?, ಅಸಹಾಯಕತೆಯೇ? ಅಥವಾ ಸಹಮತವೇ?, ಪಾಲುದಾರಿಕೆಯೇ?. ಮಕ್ಕಳು ಹಿರಿಯರನ್ನು ಪ್ರಶ್ನಿಸಬೇಕು. ಅದಕ್ಕೆ ದೊರಕುವ ಉತ್ತರ ಲಂಚ, ಭ್ರಷ್ಟಾಚಾರ ನಿರ್ಮೂಲನೆಗೆ ಕಾರಣವಾಗುವುದು ಖಂಡಿತ.

LEAVE A REPLY

Please enter your comment!
Please enter your name here