ಪುತ್ತೂರು ನ್ಯಾಯವಾದಿ ಶ್ರೀಗಿರೀಶ್ ಮಳಿ ಕಛೇರಿಯಲ್ಲಿ 3 ವರ್ಷದ ಹಿಂದೆ ವಕೀಲರಾಗಿದ್ದ ಗಾಯತ್ರಿ – ಮಂಗಳೂರು ಆಸ್ಪತ್ರೆಯಲ್ಲಿ ಪ್ರಥಮ ಹೆರಿಗೆ ಸಮಯ ಗರ್ಭದಲ್ಲಿದ್ದ ಮಗು ಸಹಿತ ಮೃತ್ಯು

0

ಪುತ್ತೂರು: 3 ವರ್ಷಗಳ ಹಿಂದೆ ಪುತ್ತೂರು ನ್ಯಾಯವಾದಿ ಶ್ರೀಗಿರೀಶ್ ಮಳಿಯವರ ಕಚೇರಿಯಲ್ಲಿ ವಕೀಲ ವೃತ್ತಿ ಆರಂಭಿಸಿ, ಪ್ರಸ್ತುತ ಮಂಗಳೂರು ನ್ಯಾಯವಾದಿ ದಯಾನಂದ ರೈ ಅವರ ಕಚೇರಿಯಲ್ಲಿ ವಕೀಲ ವೃತ್ತಿ ಮಾಡುತ್ತಿದ್ದ ನ್ಯಾಯವಾದಿ ಗಾಯತ್ರಿ(38ವ)ರವರು ಪ್ರಥಮ ಹೆರಿಗೆ ಸಂದರ್ಭ ಗರ್ಭದಲ್ಲಿದ್ದ ಮಗು ಸಹಿತ ಮಂಗಳೂರು ಆಸ್ಪತ್ರೆಯಲ್ಲಿ ನಿಧನರಾಗಿರುವ ದುರ್ಘಟನೆ ಫೆ. 24ರ ನಸುಕಿನ ಜಾವ ನಡೆದಿದೆ.

ಮಾಣಿ ಸಮೀಪದ ಕಡೆಶಿವಾಲಯ ಬುಡೋಳಿ ನಿವಾಸಿಯಾಗಿರುವ ಗಾಯತ್ರಿಯವರು ಪುತ್ತೂರು ಶ್ರೀಗಿರೀಶ್ ಮಲಿಯವರ ಕಚೇರಿಯಲ್ಲಿ ವಕೀಲ ವೃತ್ತಿ ಆರಂಭಿಸಿದ್ದರು. ಸುಮಾರು ೮ ವರ್ಷ ವಕೀಲ ವೃತ್ತಿ ಮಾಡಿದ ಅವರಿಗೆ ೨೦೧೦ರಲ್ಲಿ ಪೆರ್ಲದ ಆನಡ್ಕ ಕಾಡಮನೆ ಸುದಾಕರ್ ಅವರೊಂದಿಗೆ ವಿವಾಹವಾಗಿತ್ತು. ವಿವಾಹದ ಬಳಿಕ ೨೦೧೭ರಿಂದ ಮಂಗಳೂರಿನ ಲೆಡಿಹಿಲ್ ಸಮೀಪ ವಾಸ್ತವ್ಯ ಹೊಂದಿದ್ದರು. ಅಲ್ಲಿಯೇ ಅವರು ಮಂಗಳೂರು ನ್ಯಾಯವಾದಿ ದಯಾನಂದ ರೈ ಅವರ ಕಚೇರಿಯಲ್ಲಿ ವಕೀಲ ವೃತ್ತಿ ಪುನರಾರಂಭಿಸಿದರು. ಪುತ್ತೂರು ವಿವೇಕಾನಂದ ಕಾನೂನು ಮಹಾವಿದ್ಯಾಲಯದಲ್ಲಿ ಕಾನೂನು ಪದವಿ ಪಡೆದ ಅವರು ಪುತ್ತೂರಿನ ವಕೀಲ ಸಂಘದ ಸದಸ್ಯತ್ವ ಹೊಂದಿದ್ದರು. ಈ ನಿಟ್ಟಿನಲ್ಲಿ ಅವರು ಆಗಾಗ ಪುತ್ತೂರಿನ ವಕೀಲ ಸಂಘದ ಸಂಪರ್ಕದಲ್ಲಿದ್ದರು. ಫೆ. ೨೩ರಂದು ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಮಂಗಳೂರು ಆಸ್ಪತ್ರೆಗೆ ತೆರಳಿದ ಅವರು ನಸುಕಿನ ಜಾವ ಹೆರಿಗೆ ಸಂದರ್ಭ ಅವರು ಮಗು ಸಮೇತವಾಗಿ ಮೃತಪಟ್ಟಿದ್ದಾರೆ. ಮೃತರು ಗಂಡ ಮಂಗಳೂರು ಶಿರಡಿ ಸಾಯಿ ಮಂದಿರದಲ್ಲಿ ಸೇವಾಕರ್ತರಾಗಿದ್ದು, ಶ್ರೀ ಸಾಯಿ ಕೇಬಲ್ ನೆಟ್‌ವರ್ಕ್‌ನಲ್ಲಿ ಕೆಲಸ ನಿರ್ವಹಿಸುತ್ತಿರುವ ಸುಧಾಕರ್, ಸಹೋದರಿ ಪುತ್ತೂರಿನಲ್ಲಿ ಎಚ್.ಡಿ. ಲೀಗಲ್ ಕಚೇರಿಯಲ್ಲಿ ವಕೀಲ ವೃತ್ತಿ ಮಾಡುತ್ತಿರುವ ಅಕ್ಷತಾ, ಸಹೋದರ ದಯಾನಂದ ಅವರನ್ನು ಅಗಲಿದ್ದಾರೆ.

ವಕೀಲರ ಸಂಘದಲ್ಲಿ ಸಂತಾಪ:
ವಕೀಲರ ಸಂಘದ ಸದಸ್ಯರಾಗಿರುವ ಗಾಯತ್ರಿಯವರ ನಿಧನದ ಹಿನ್ನೆಲೆಯಲ್ಲಿ ಪುತ್ತೂರು ವಕೀಲರ ಸಂಘದ ಪರಾಶರ ಹಾಲ್‌ನಲ್ಲಿ ಸಂತಾಪ ಸಭೆ ನಡೆಸಲಾಯಿತು. ಪುತ್ತೂರು ವಕೀಲರ ಸಂಘದ ಅಧ್ಯಕ್ಷ ಮನೋಹರ್ ಕೆ.ವಿ, ನ್ಯಾಯವಾದಿ ಚಿದಾನಂದ ಬೈಲಾಡಿ, ಶ್ರೀಗಿರೀಶ್ ಮಲಿ, ಗ್ರೆಗೋರಿ ಡಿಸೋಜ, ಚಂದ್ರಾವತಿ ನುಡಿನಮನ ಸಲ್ಲಿಸಿದರು. ೫ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನಾಯಾಲಾಯದ ನ್ಯಾಯಾಧೀಶ ರುಡಾಲ್ಫ್ ಪಿರೇರಾ, ಪ್ರಧಾನ ಹಿರಿಯ ವ್ಯವಹಾರಿಕ ನ್ಯಾಯಾಧೀಶರಾಗಿರುವ ಹೆಚ್ಚುವರಿ ಮುಖ್ಯ ನ್ಯಾಯಿಕ ದಂಡಾಧಿಕಾರಿ ರಮೇಶ್ ಎಮ್, ಹಿರಿಯ ಸಿವಿಲ್ ನ್ಯಾಯಾಧೀಶೆ ನಿರ್ಮಲ ಕೆ, ಪ್ರಿನ್ಸಿಪಾಲ್ ಸಿವಿಲ್ ನ್ಯಾಯಾಧೀಶ, ಜೆಎಮ್‌ಎಫ್‌ಸಿ ಬಿ.ಅರುಣ್ ಕುಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಘದ ಸದಸ್ಯರು ಸಭೆಯಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here