ಗೋಳಿತ್ತೊಟ್ಟು: ಮದ್ಯ ಮಾರಾಟ ಮಳಿಗೆ ಸ್ಥಳಾಂತರಕ್ಕೆ ಆಗ್ರಹಿಸಿ ಗ್ರಾಮಸ್ಥರಿಂದ ಗ್ರಾ.ಪಂ.ಗೆ ಮನವಿ

0

ನೆಲ್ಯಾಡಿ: ಗೋಳಿತ್ತೊಟ್ಟು ಗ್ರಾಮದ ಸಮರಗುಂಡಿ ಎಂಬಲ್ಲಿ ತೆರೆಯಲು ಉದ್ದೇಶಿಸಿರುವ ಸರಕಾರಿ ಸ್ವಾಮ್ಯದ(ಎಂಎಸ್‌ಐಎಲ್)ಮದ್ಯ ಮಾರಾಟ ಮಳಿಗೆ ಸ್ಥಳಾಂತರಗೊಳಿಸಬೇಕೆಂದು ಒತ್ತಾಯಿಸಿ ಸಮರಗುಂಡಿ ಅಸುಪಾಸಿನ ಗ್ರಾಮಸ್ಥರು ಫೆ.೨೪ರಂದು ಬೆಳಿಗ್ಗೆ ಗೋಳಿತ್ತೊಟ್ಟು ಗ್ರಾ.ಪಂ.ಮುಂದೆ ಜಮಾಯಿಸಿ ಪ್ರತಿಭಟನೆ ಸಲ್ಲಿಸಿ ಗ್ರಾ.ಪಂ.ಗೆ ಮನವಿ ಸಲ್ಲಿಸಿದರು.

 


ಸಮರಗುಂಡಿ ಅಸುಪಾಸಿನ ಜನತೆ ಕಳೆದ ೫೦ ವರ್ಷಗಳಿಂದ ಯಾವುದೇ ಶಾಂತಿಭಂಗ ಇಲ್ಲದೆ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಈಗ ಇಲ್ಲಿ ಸರಕಾರಿ ಸ್ವಾಮ್ಯದ ಮದ್ಯ ಮಾರಾಟ ಮಳಿಗೆ ತೆರೆಯುವ ಬಗ್ಗೆ ವದಂತಿ ಹಬ್ಬಿದೆ. ಫೆ.೨೩ರಂದು ಸಂಜೆ ಇಲ್ಲಿಗೆ ಪಿಕಪ್ ವಾಹನದಲ್ಲಿ ಮದ್ಯ ಸರಬರಾಜು ಮಾಡಿದ್ದು ಇದು ನಮ್ಮ ಗಮನಕ್ಕೆ ಬಂದು ಪಿಕಪ್ ವಾಹನ ಸ್ಥಳದಿಂದ ಹಿಂತಿರುಗಲು ಅವಕಾಶ ನೀಡಿರಲಿಲ್ಲ. ನಾವು ಮಾರ್ಗ ಬಂದ್ ಮಾಡಿರುವುದನ್ನು ಕಂಡು ಸನ್ನದುದಾರರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಬಳಿಕ ಮದ್ಯವನ್ನು ಅಂಗಡಿಯಲ್ಲಿ ಖಾಲಿ ಮಾಡಿ ಬೀಗ ಹಾಕಿ ಅಬಕಾರಿ ಇಲಾಖೆ ಅಧಿಕಾರಿಗಳು ತೆರಳಿರುತ್ತಾರೆ. ಯಾವುದೇ ಕಾರಣಕ್ಕೂ ನಮ್ಮ ಪರಿಸರದಲ್ಲಿ ಮದ್ಯ ಮಾರಾಟ ಮಾಡಲು ಅವಕಾಶ ನೀಡುವುದಿಲ್ಲ. ಇಲ್ಲಿ ಮದ್ಯ ಮಾರಾಟದ ಅಂಗಡಿ ತೆರೆಯುವ ಬಗ್ಗೆ ಮೂರು ತಿಂಗಳ ಹಿಂದೆ ನಮಗೆ ಮಾಹಿತಿ ಸಿಕ್ಕಿದ್ದು ಈ ಬಗ್ಗೆ ಗ್ರಾಮ ಪಂಚಾಯತ್ ಹಾಗೂ ಅಬಕಾರಿ ಇಲಾಖೆ ಅಧಿಕಾರಿಗಳಿಗೆ ಆಕ್ಷೇಪಣೆಯನ್ನೂ ಸಲ್ಲಿಸಿದ್ದೇವು. ಆದರೂ ನಮ್ಮ ಆಕ್ಷೇಪಣೆಯನ್ನು ಪರಿಗಣಿಸದೆ ಈಗ ಏಕಾ ಏಕಿ ಮದ್ಯ ಮಾರಾಟದ ಅಂಗಡಿ ತೆರೆಯುವರೇ ಮದ್ಯ ತಂದು ಶೇಖರಣೆ ಮಾಡಲಾಗಿದೆ. ಸ್ವಚ್ಛ ಭಾರತದ ಕಲ್ಪನೆಯನ್ನು ಸಾಕಾರಗೊಳಿಸಲು ನಾವು ಕಟಿಬದ್ಧರಾಗಿದ್ದು ನಮ್ಮ ಈ ಮನವಿಯನ್ನು ಗಂಭೀರವಾಗಿ ಪರಿಗಣಿಸಿ ಮತ್ತು ವಸತಿ ಸಮುಚ್ಚಯವಿರುವ ಪ್ರದೇಶದಲ್ಲಿ ಮದ್ಯ ಮಾರಾಟದ ಅಂಗಡಿ ತೆರೆಯಲು ಅನುಮತಿ ನೀಡಿರುವುದರ ವಿರುದ್ಧ ಪ್ರತಿಭಟನೆ ನಡೆಸಿ ಈಗ ಮನವಿ ಸಲ್ಲಿಸುತ್ತಿದ್ದೇವೆ ಹಾಗೂ ಮದ್ಯ ಮಾರಾಟ ಅಂಗಡಿ ತೆರೆಯದಂತೆ ಮತ್ತೊಮ್ಮೆ ಈ ಮೂಲಕ ಆಕ್ಷೇಪಣೆ ಸಲ್ಲಿಸುತ್ತಿದ್ದೇವೆ ಎಂದು ೪೦ಕ್ಕೂ ಹೆಚ್ಚು ಮಂದಿಯ ಸಹಿಯುಳ್ಳ ಮನವಿ ಪತ್ರವನ್ನು ಗ್ರಾಮಸ್ಥರು ಗ್ರಾಮ ಪಂಚಾಯತ್‌ಗೆ ಸಲ್ಲಿಸಿದರು. ಅಬಕಾರಿ ಉಪ ನಿರೀಕ್ಷಕರು ಪುತ್ತೂರು ಹಾಗೂ ಉಪ್ಪಿನಂಗಡಿ ಆರಕ್ಷಕ ಠಾಣೆ ಉಪನಿರೀಕ್ಷಕರಿಗೂ ಮನವಿಯ ಪ್ರತಿ ಸಲ್ಲಿಸಲಾಗಿದೆ. ಗ್ರಾಮಸ್ಥ ಸುರೇಶ್ ತಿರ್ಲೆ ಮನವಿ ಪತ್ರ ವಾಚಿಸಿದರು.

ಈ ಸಂದರ್ಭದಲ್ಲಿ ಎಪಿಎಂಸಿ ಸದಸ್ಯ ಕುಶಾಲಪ್ಪ ಗೌಡ ಅನಿಲ, ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಉಪಾಧ್ಯಕ್ಷ ಕಮಲಾಕ್ಷ ಪಂಡಿತ್ ಗೋಳಿತ್ತೊಟ್ಟು, ಗ್ರಾಮಸ್ಥರಾದ ಸತೀಶ್ ರೈ ಕೊಣಾಲುಗುತ್ತು, ವೆಂಕಪ್ಪ ಗೌಡ ಸಮರಗುಂಡಿ, ವೀರಪ್ಪ ಗೌಡ ಸಮರಗುಂಡಿ, ರೋಹಿನಾಥ ಕಲ್ಲಡ್ಕ, ನಾಗೇಶ ಕುದ್ಕೋಳಿ, ಡೊಂಬಯ್ಯ ಗೌಡ ಸಮರಗುಂಡಿ, ಅಶೋಕ್ ಶೆಟ್ಟಿ ಸಮರಗುಂಡಿ, ಸಾಂತಪ್ಪ ಶೆಟ್ಟಿ ಸಮರಗುಂಡಿ, ರಾಜೇಶ್ ಗೌಡ ಸಮರಗುಂಡಿ, ದಯಾವತಿ ಸಮರಗುಂಡಿ, ಕಮಲಾಕ್ಷ ಗೌಡ ಗೋಳಿತ್ತೊಟ್ಟು, ಕಮಲ ಸಮರಗುಂಡಿ, ಜಾನಕಿ ಕಾಲೋನಿ ಗೋಳಿತ್ತೊಟ್ಟು, ಭಾರತಿ ಪುಳಿತ್ತಡಿ ಕೊಣಾಲು, ಹರೀಶ್ ಎಸ್.ಸಮರಗುಂಡಿ, ಯಮುನಾ ಸಮರಗುಂಡಿ, ಸಂಧ್ಯಾ ಸಮರಗುಂಡಿ, ನಾಗೇಶ್ ಶೆಟ್ಟಿ ಸಮರಗುಂಡಿ, ಉದಯ ಶೆಟ್ಟಿ ಸಮರಗುಂಡಿ, ಗೋಳಿತ್ತೊಟ್ಟು ಜನತಾ ಕಾಲೋನಿ ನಿವಾಸಿಗಳಾದ ಅಬ್ದುಲ್ ರಹಿಮಾನ್, ಅಶ್ರಫ್, ಆರೀಫ್ ಹಾಜಿ, ಲತೀಫ್, ಸಫ್ವಾನ್, ನಾಸೀರ್, ನೌಫಾಲ್, ಅನ್ಸೀಫ್, ಅಲ್ತಾಫ್, ಅಬ್ದುಲ್ ಕುಂಞಿ, ಸಫಿಯಾ, ಮೈಮುನಾ, ಇಬ್ರಾಹಿಂ ಮತ್ತಿತರರು ಉಪಸ್ಥಿತರಿದ್ದರು. ಪಿಡಿಒ ಜಗದೀಶ್ ನಾಯ್ಕ್, ಕಾರ್ಯದರ್ಶಿ ಚಂದ್ರಾವತಿಯವರು ಮನವಿ ಸ್ವೀಕರಿಸಿದರು.

LEAVE A REPLY

Please enter your comment!
Please enter your name here