ಮಾ.7 :ಪ್ರೊ ಕಬಡ್ಡಿ ರನ್ನರ್ಸ್ ವಿಜೇತ ಪಾಟ್ನಾ ಪೈರೇಟ್ಸ್ ತಂಡದ ಕಪ್ತಾನ, ಫಿಲೋಮಿನಾದ ಹಿರಿಯ ವಿದ್ಯಾರ್ಥಿ ಪ್ರಶಾಂತ್ ರೈರವರಿಗೆ ಪೌರ ಸನ್ಮಾನ

0

✍️ -ಸಂತೋಷ್ ಮೊಟ್ಟೆತ್ತಡ್ಕ

ಪುತ್ತೂರು: ಗ್ರಾಮೀಣ ಕ್ರೀಡೆಯೆನಿಸಿರುವ ಕಬಡ್ಡಿ ಕ್ರೀಡೆಗೆ ಪ್ರಸ್ತುತ ವಿದ್ಯಾಮಾನದಲ್ಲಿ ಎಲ್ಲಿಲ್ಲದ ಮನ್ನಣೆ. ಪ್ರೊ ಕಬಡ್ಡಿ ಸೀಸನ್ ಬಂದಾಗಿನಿಂದ ಅಂತೂ ಕಬಡ್ಡಿ ಕ್ರೀಡೆಯು ಅಂತರ್ರಾಷ್ಟ್ರೀಯ ಕ್ರೀಡೆಯಾಗಿ ಮಾರ್ಪಾಡು ಹೊಂದುವಷ್ಟು ಪ್ರಸಿದ್ಧಿಯನ್ನು ಪಡೆದಿದೆ ಎಂಬುದಂತೂ ಸತ್ಯ. ಈ ಪ್ರೊ ಕಬಡ್ಡಿಯ ಎಂಟನೇ ಆವೃತ್ತಿಯಲ್ಲಿ ಪುತ್ತೂರಿನ ಕೈಕಾರದ ಹೆಮ್ಮೆಯ ಕುವರ, ಪ್ರತಿಷ್ಠಿತ ವಿಜಯಾ ಬ್ಯಾಂಕಿನ ಉದ್ಯೋಗಿ ಹಾಗೂ ಮಾಯಿದೆ ದೇವುಸ್ ಚರ್ಚ್ ಸಮೂಹ ಶಿಕ್ಷಣ ಸಂಸ್ಥೆಯಲ್ಲೊಂದಾದ ಸಂತ ಫಿಲೋಮಿನಾ ಕಾಲೇಜಿನ ಹಿರಿಯ ವಿದ್ಯಾರ್ಥಿಯೋರ್ವ ನಾಯಕನಾಗಿ ಅದ್ಭುತ ಸಾಧನೆಗೈದಿರುವಂತಹುದು ನಿಜಕ್ಕೂ ಆ ಯುವಕನ ಸಾಧನೆಗೆ ಹಿಡಿದ ಕೈಗನ್ನಡಿಯಾಗಿದೆ.

ಹೌದು, ಆತ ಬೇರಾರೂ ಅಲ್ಲ. ಎಲ್ಲರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿಯುವ ಸಾಧಕ ಪ್ರಶಾಂತ್ ಕುಮಾರ್ ರೈಯವರ ಯಶೋಗಾಥೆಯಾಗಿದೆ. ಪ್ರೊ ಕಬಡ್ಡಿಯ ಎಂಟನೇ ಆವೃತ್ತಿಯಲ್ಲಿ ಪಾಟ್ನಾ ಪೈರೆಟ್ಸ್ ತಂಡದ ಚುಕ್ಕಾಣಿ ಹಿಡಿದು ತಂಡವನ್ನು ಫೈನಲಿಗೆ ಮುನ್ನೆಡೆಸಿದ ಧೀರನೀತನಾಗಿದ್ದಾನೆ. ಹಿಂದಿನ ಸೀಸನ್‌ನಲ್ಲಿ ಪಾಟ್ನಾ ಪೈರೇಟ್ಸ್ ತಂಡಕ್ಕೆ ಪ್ರದೀಪ್ ನರ್ವಾಲ್‌ರವರು ಕಪ್ತಾನರಾಗಿದ್ದರು. ಪಾಟ್ನಾ ಪೈರೆಟ್ಸ್ ತಂಡವು ಹರಾಜು ಪ್ರಕ್ರಿಯೆಯಲ್ಲಿ ಪ್ರಶಾಂತ್ ರೈಯವರನ್ನು ರೂ.೫೫ ಲಕ್ಷ ಮೊತ್ತಕ್ಕೆ ಖರೀದಿಸಿತ್ತು ಮಾತ್ರವಲ್ಲ ಅವರನ್ನು ಪ್ರಸ್ತುತ ಆವೃತ್ತಿಯ ನಾಯಕನಾಗಿ ಪಾಟ್ನಾ ಪೈರೇಟ್ಸ್ ಫ್ರಾಂಚೈಸಿ ಘೋಷಣೆಯೂ ಮಾಡಿತ್ತು.

ಪ್ರಶಾಂತ್ ಆಟಕ್ಕೆ ಫುಲ್ ಫಿದಾ:
ಎದುರಾಳಿ ತಂಡಗಳ ವಿರುದ್ಧ ತನ್ನ ಕೆಚ್ಚೆದೆಯ ಹಾಗೂ ಮಿಂಚಿನಗತಿಯ ರೈಡಿಂಗ್‌ನಿಂದ ಪಾಯಿಂಟ್ಸ್‌ಗಳ ಮೇಲೆ ಪಾಯಿಂಟ್ಸ್‌ಗಳನ್ನು ಕಲೆ ಹಾಕಿರೋದು ಮಾತ್ರವಲ್ಲ, ತನ್ನ ಕಪ್ತಾನಗಿರಿಯಲ್ಲಿ ತನ್ನ ತಂಡದ ಇತರ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವರಲ್ಲಿ ಆತ್ಮಧೈರ್ಯ ಹಾಗೂ ಆತ್ಮಸ್ಥೈರ್ಯ ತುಂಬಿ ತನ್ನ ಚೊಚ್ಚಲ ನಾಯಕತ್ವದಲ್ಲಿಯೇ ತಂಡವನ್ನು ಫೈನಲ್ ಹಂತಕ್ಕೆ ಮುನ್ನೆಡಿಸಿದ್ದು ಅಚ್ಚರಿಯ ಕ್ಷಣಗಳಾಗಿವೆ. ಆದರೆ ಫೈನಲಿನಲ್ಲಿ ಎದುರಾಳಿ ದಬಾಂಗ್ ಡೆಲ್ಲಿ ವಿರುದ್ಧ ಕೇವಲ ಒಂದೇ ಒಂದು ಅಂಕ(೩೬-೩೫)ದೊಂದಿಗೆ ಹಿನ್ನೆಡೆ ಅನುಭವಿಸಿ ರನ್ನರ್ಸ್ ಪ್ರಶಸ್ತಿಗೆ ತೃಪ್ತಿ ಪಟ್ಟುಕೊಂಡರೂ, ಪ್ರೊ ಕಬಡ್ಡಿಯ ಇಲ್ಲಿಯವರೆಗಿನ ಪ್ರತೀ ಸೀಸನ್‌ನಲ್ಲಿ ಪ್ರಶಾಂತ್ ರೈಯವರ ಆಟಕ್ಕೆ ಪ್ರೇಕ್ಷಕರು ಹಾಗೂ ಅಭಿಮಾನಿಗಳು ಸೆಲೆಬ್ರಿಟಿಗಳಂತೆ ಫುಲ್ ಫಿದಾ ಆಗಿರುವುದು ನೂರಕ್ಕೆ ನೂರು ಸತ್ಯ.

8 ಆವೃತ್ತಿಗಳಲ್ಲೂ ಆಟ:
2014ರಲ್ಲಿ ಆರಂಭವಾದ ಪ್ರೊ ಕಬಡ್ಡಿ ಲೀಗ್‌ನಲ್ಲಿ ಮೊದಲಿಗೆ ಪ್ರಶಾಂತ್ ರೈರವರು ತೆಲುಗು ಟೈಟಾನ್ಸ್ ತಂಡವನ್ನು, ಬಳಿಕದ ಐದು ಆವೃತ್ತಿಗಳಲ್ಲಿ ದಬಾಂಗ್ ಡೆಲ್ಲಿ, ಹರಿಯಾಣ ಸ್ಟೀಲರ್ಸ್ ತಂಡವನ್ನು ಪ್ರತಿನಿಧಿಸಿದ್ದರು. ಆರನೇ ಆವೃತ್ತಿಯಲ್ಲಿ ಯು.ಪಿ ಯೋಧಾಸ್ ಪರ ಕಣಕ್ಕಿಳಿದಿದ್ದ ಪ್ರಶಾಂತ್ ರೈಯವರನ್ನು ಅಂದು ಯು.ಪಿ ಯೋಧಾಸ್ ಫ್ರಾಂಚೈಸಿ ತಂಡವು ರೂ.೭೯ ಲಕ್ಷ ದಾಖಲೆ ಮೊತ್ತವನ್ನು ನೀಡಿ ತನ್ನ ತೆಕ್ಕೆಗೆ ಸೆಳೆದುಕೊಂಡಿತ್ತು. ಆದರೆ ಐದು ಬಾರಿ ದಬಾಂಗ್ ಡೆಲ್ಲಿಯನ್ನು ಪ್ರತಿನಿಧಿಸಿದ್ದ ಪ್ರಶಾಂತ್ ರೈಯವರು ತಾನು ನಾಯಕನಾಗಿ ಪ್ರತಿನಿಧಿಸಿದ್ದ ಪಾಟ್ನಾ ಪೈರೇಟ್ಸ್ ತಂಡಕ್ಕೆ ಅದೇ ದಬಾಂಗ್ ಡೆಲ್ಲಿ ವಿರುದ್ಧ ಕೂದಲೆಳೆಯ ಅಂತರದಲ್ಲಿ ಸೋಲನ್ನು ಕಾಣುವುದರೊಂದಿಗೆ ತಂಡಕ್ಕೆ ಮೂರನೇ ಜಯ ದೊರಕಿಸಲು ಅಸಾಧ್ಯವಾಯಿತು.

ಬದುಕಿನ ಸಂಜೀವಿನಿಯಾಯಿತು ಕಬಡ್ಡಿ:
ಪ್ರಶಾಂತ್ ರೈರವರು ಓರ್ವ ವೈಟ್ ಲಿಪ್ಟರ್ ಆಗಬೇಕು ಎಂದು ಬಯಸಿದ್ದರು, ಕೈಬೀಸಿ ಕರೆದದ್ದು ಮಾತ್ರ ಕಬಡ್ಡಿ. ಕಬಡ್ಡಿಯಲ್ಲಿ ನಿರಂತರ ಬೆವರು ಸುರಿಸಿದ್ದರಿಂದಲೇ ಪ್ರಶಾಂತ್ ರೈರವರಿಗೆ ಅದೃಷ್ಟದ ಬಾಗಿಲು ತೆರೆದಿದೆ ಎಂದರೆ ಸುಳ್ಳಲ್ಲ. ಮಾತ್ರವಲ್ಲ ಫಿಲೋಮಿನಾ ಕಾಲೇಜ್‌ನ ಮೈದಾನದಲ್ಲಿ ಆಭ್ಯಸಿಸಿದ ಕಬಡ್ಡಿ ಆಟವೇ ಪ್ರಶಾಂತ್ ರೈರವರಿಗೆ ಬದುಕಿನ ಸಂಜೀವಿನಿಯಾಗಿ ಮಾರ್ಪಟ್ಟಿತ್ತು. ಪ್ರಶಾಂತ್ ರೈರವರ ಆಟಕ್ಕೆ ಮತ್ತಷ್ಟು ಪುಷ್ಟಿ ನೀಡಿದವರು ಕೋಚ್ ಹಬೀಬ್ ಮಾಣಿ ಹಾಗೂ ದೈಹಿಕ ಶಿಕ್ಷಣ ನಿರ್ದೇಶಕರಾಗಿರುವ ಎಲ್ಯಾಸ್ ಪಿಂಟೋರವರು. ಕೋಟಿ-ಚೆನ್ನಯ ಕಂಬಳ ಸಮಿತಿ ಪುತ್ತೂರು ಇದರ ಅಧ್ಯಕ್ಷರಾಗಿರುವ ಎನ್.ಚಂದ್ರಹಾಸ ಶೆಟ್ಟಿರವರು ಪ್ರಶಾಂತ್‌ರವರ ಆಟವನ್ನು ಮನಗಂಡು, ಜಯಕರ್ನಾಟಕ ಸಂಸ್ಥಾಪಕ ದಿ.ಎನ್.ಮುತ್ತಪ್ಪ ರೈರವರ ಆಶೀರ್ವಾದದೊಂದಿಗೆ ಪ್ರಶಾಂತ್‌ರವರು ವಿಜಯಾ ಬ್ಯಾಂಕ್‌ನಲ್ಲಿ ಉದ್ಯೋಗವನ್ನು ನಿರ್ವಹಿಸುತ್ತಿದ್ದಾರೆ. ಪ್ರಶಾಂತ್‌ರವರಲ್ಲದೆ ಅನೇಕ ಕ್ರೀಡಾಪಟುಗಳು ವಿಜಯಾ ಬ್ಯಾಂಕ್‌ನಲ್ಲಿ ಇಂದು ಕರ್ತವ್ಯ ನಿರ್ವಹಿಸುತ್ತಿರುವುದು ವಿಶೇಷ.

ಕೊನೆಯ ಮಾತು:
ಫಿಲೋಮಿನಾ ಕಾಲೇಜ್‌ನಲ್ಲಿನ ಮೂರು ವರ್ಷಗಳ ಪದವಿ ವಿದ್ಯಾಭ್ಯಾಸದ ಸಂದರ್ಭದಲ್ಲಿ ಕಬಡ್ಡಿಯಲ್ಲಿ ಅಂತರ್-ಟೂರ್ನಿಯನ್ನು ಗೆಲ್ಲಿಸಿಕೊಟ್ಟ ಪ್ರಶಾಂತ್‌ರವರು, ಬಳಿಕ ಅಂತರ್-ವಿಶ್ವವಿದ್ಯಾನಿಲಯ ಕಬಡ್ಡಿ ಟೂರ್ನಿಯಲ್ಲಿ ಮಂಗಳೂರು ವಿ.ವಿಯನ್ನು ಪ್ರತಿನಿಧಿಸಿದ್ದರು ಮಾತ್ರವಲ್ಲದೆ ಮಂಗಳೂರು ವಿ.ವಿಯ ಕಬಡ್ಡಿ ಟೂರ್ನಿಯ ನಾಯಕರೂ ಆಗಿದ್ದರು. ದ.ಕ ಕರಾವಳಿ ತೀರದ ಕೈಕಾರ ಎಂಬಲ್ಲಿ ತಂದೆ ಕೆಎಸ್‌ಆರ್‌ಟಿಸಿ ಚಾಲಕ ಸೀತಾರಾಮ ರೈ ಹಾಗೂ ಗೃಹಿಣಿಯಾಗಿದ್ದ ತಾಯಿ ಸತ್ಯವತಿ ರೈ ದಂಪತಿಯ ಈರ್ವರು ಗಂಡು ಮಕ್ಕಳಲ್ಲಿ ಹಿರಿಯವನಾಗಿ ಜನಿಸಿದ್ದರು. ಆದರೆ ದುರಾದೃಷ್ಟವಶಾತ್ ಪ್ರಶಾಂತ್ ರೈರವರು ತಂದೆ-ತಾಯಿಯನ್ನು ಕಳೆದುಕೊಂಡು ಬೆಳೆದರು. ಆದರೆ ತಾನು ಪ್ರೊ ಕಬಡ್ಡಿಯಲ್ಲಿ ಮಿಂಚುತ್ತಿದ್ದೇನೆ ಎಂಬ ಸತ್ಯಾಂಶವಿದ್ದರೂ, ಅದನ್ನು ಅನುಭವಿಸಲು ತಂದೆ-ತಾಯಿ ಇಲ್ಲವಲ್ಲ ಎಂಬ ಕೊರಗು ಮಾತ್ರ ಪ್ರಶಾಂತ್ ರೈರವರಿಗಿದೆ. ಆದರೂ ಛಲದಂಕಮಲ್ಲನಂತೆ ನಿರಾಶೆಗೆಡದೆ ಆಟದಲ್ಲಿ ಗಮನವನ್ನು ಕೇಂದ್ರೀಕರಿಸುತ್ತಾ, ತನ್ನ ಮುಂದೆ ನಿರ್ದಿಷ್ಟ ಗುರಿಯಿದೆ ಎಂಬುದನ್ನು ಅರಿತುಕೊಂಡು ನಿರಂತರ ಪರಿಶ್ರಮದೊಂದಿಗೆ ಅಲ್ಲದೆ ಗುರು-ಹಿರಿಯರ ಆಶೀರ್ವಾದದೊಂದಿಗೆ ಪ್ರೊ ಕಬಡ್ಡಿಯತ್ತ ತನ್ನ ಚಿತ್ತವನ್ನು ನೆಟ್ಟಿರುವುದು ಸತ್ಯವಾಗಿದೆ. ಪ್ರಸ್ತುತ ಪ್ರಶಾಂತ್‌ರವರು ಪತ್ನಿ ವಜ್ರೇಶ್ವರಿ ಹಾಗೂ ಮಗ ಶತಾಯು ರೈರವರೊಂದಿಗೆ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ.

ಪುತ್ತೂರ್‍ದ ಮುತ್ತು ಪ್ರಶಾಂತ್ ರೈ…
ಸಂತ ಫಿಲೋಮಿನಾ ಕಾಲೇಜು, ತಾ|ಅಮೆಚೂರು ಕಬಡ್ಡಿ ಅಸೋಸಿಯೇಶನ್ ಹಾಗೂ ಪ್ರಶಾಂತ್ ರೈಯವರ ಹುಟ್ಟೂರಿನ ಕೈಕಾರದ ಜನತೆ ಇವರುಗಳ ಜಂಟಿ ಆಶ್ರಯದಲ್ಲಿ ಮಾ.೭ ರಂದು ಪೂರ್ವಾಹ್ನ ಪುತ್ತೂರ್‍ದ ಮುತ್ತು ಪ್ರಶಾಂತ್ ರೈ ಕೈಕಾರರವರಿಗೆ ಪೌರ ಸನ್ಮಾನವನ್ನು ಫಿಲೋಮಿನಾ ಕಾಲೇಜಿನ ಸಿಲ್ವರ್ ಜ್ಯುಬಿಲಿ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ. ಮುಖ್ಯ ಅತಿಥಿಗಳಾಗಿ ಪುತ್ತೂರು ನಗರಸಭಾ ಅಧ್ಯಕ್ಷ ಜೀವಂಧರ್ ಜೈನ್, ಮಾಜಿ ಶಾಸಕಿ ಶಕುಂತಳಾ ಟಿ.ಶೆಟ್ಟಿಯವರು ಭಾಗವಹಿಸಲಿದ್ದಾರೆ. ಅಧ್ಯಕ್ಷತೆಯನ್ನು ಮಾಯಿದೆ ದೇವುಸ್ ಚರ್ಚ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ವಂ|ಲಾರೆನ್ಸ್ ಮಸ್ಕರೇನ್ಹಸ್‌ರವರು ವಹಿಸಲಿದ್ದು, ಗೌರವ ಉಪಸ್ಥಿತಿಯಾಗಿ ಫಿಲೋಮಿನಾ ಕಾಲೇಜಿನ ಪ್ರಾಂಶುಪಾಲ ವಂ|ಡಾ|ಆಂಟನಿ ಪ್ರಕಾಶ್ ಮೊಂತೇರೋರವರು ಭಾಗವಹಿಸಲಿದ್ದಾರೆ ಎಂದು ತಾ|ಅಮೆಚೂರು ಕಬಡ್ಡಿ ಅಸೋಸಿಯೇಶನ್‌ನ ಗೌರವಾಧ್ಯಕ್ಷ ಎನ್.ಚಂದ್ರಹಾಸ ಶೆಟ್ಟಿ ಹಾಗೂ ಪದಾಧಿಕಾರಿಗಳು, ಫಿಲೋಮಿನಾ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಎಲ್ಯಾಸ್ ಪಿಂಟೋರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮೆರವಣಿಗೆ..
ಪೌರ ಸನ್ಮಾನ ಕಾರ್ಯಕ್ರಮದ ಆರಂಭಕ್ಕೆ ಮುನ್ನ ಬೆಳಿಗ್ಗೆ ಒಂಭತ್ತು ಗಂಟೆಗೆ ಪ್ರೊ ಕಬಡ್ಡಿ ಪಟು ಪ್ರಶಾಂತ್ ರೈಯವರನ್ನು ದರ್ಬೆಯಿಂದ ಫಿಲೋಮಿನಾ ಕಾಲೇಜು ಕ್ಯಾಂಪಸ್ಸಿನೊಳಗಿರುವ ಸಭಾಂಗಣದ ವರೆಗೆ ತೆರೆದ ಜೀಪಿನಲ್ಲಿ ಮೆರವಣಿಗೆ ಮುಖಾಂತರ ಕರೆ ತರಲಾಗುತ್ತದೆ. ಪ್ರಸಕ್ತ ಕ್ರೀಡಾಪಟುಗಳು, ಹಿರಿಯ ಕ್ರೀಡಾಪಟುಗಳು, ಹಿರಿಯ-ಕಿರಿಯ ವಿದ್ಯಾರ್ಥಿಗಳು, ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗಳಿಸಬೇಕೆಂದು ಕೋರಿಕೆ.

LEAVE A REPLY

Please enter your comment!
Please enter your name here