ಡಾ| ಬಿ.ಆರ್ ಅಂಬೇಡ್ಕರ್‌ಗೆ ಅವಮಾನ, ದಲಿತ ಯುವಕನ ಕೊಲೆ ಪ್ರಕರಣ – ಪುತ್ತೂರಿನಲ್ಲಿ ದ.ಕ.ದಲಿತ್ ಸೇವಾ ಸಮಿತಿಯಿಂದ ಪ್ರತಿಭಟನೆ

0

  • ದಲಿತರ ಮೇಲಿನ ಅವಮಾನ ನಿಲ್ಲದಿದ್ದರೆ ದೊಡ್ಡ ಮಟ್ಟದ ಪ್ರತಿಭಟನೆ ಎಚ್ಚರಿಕೆ -ಸೇಸಪ್ಪ ಬೆದ್ರಕಾಡು
  • ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಬಳಿಕ ದೌರ್ಜನ್ಯ ಹೆಚ್ಚಾಗಿದೆ- ಗಣೇಶ್ ಗುರಿಯಾನ
  • ನಮ್ಮೊಂದಿಗೆ ತಾರತಮ್ಯ ಮಾಡಬೇಡಿ – ಅಣ್ಣಪ್ಪ ಕಾರೆಕ್ಕಾಡು

ಪುತ್ತೂರು: ಸಂವಿಧಾನ ಶಿಲ್ಪಿ ಡಾ| ಬಿ.ಆರ್ ಅಂಬೇಡ್ಕರ್ ಅವರಿಗೆ ಅವಮಾನ ಮಾಡಿದ ರಾಯೂಚೂರ್ ಜಿಲ್ಲೆಯ ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡ ಅವರನ್ನು ವರ್ಗಾವಣೆ ಮಾಡುವ ಬದಲು ವಜಾಗೊಳಿಸಿ ಮತ್ತು ದೇಶದ್ರೋಹದ ಪ್ರಕರಣ ದಾಖಲಿಸಬೇಕು. ಅದೇ ರೀತಿ ಬೆಳ್ತಂಗಡಿಯಲ್ಲಿ ಹತ್ಯೆಯಾದ ದಲಿತ ಯುವಕನ ಕುಟುಂಬಕ್ಕೂ ಸರಕಾರ ಆರ್ಥಿಕ ಸೌಲಭ್ಯ ಒದಗಿಸುವಂತೆ ಆಗ್ರಹಿಸಿ ದ.ಕ.ಜಿಲ್ಲಾ ದಲಿತ್ ಸೇವಾ ಸಮಿತಿ ನೇತೃತ್ವದಲ್ಲಿ ತಾಲೂಕು ಸಮಿತಿ ಮತ್ತು ಇತರ ದಲಿತ ಪರ ಸಂಘಟನೆಯ ಜೊತೆ ಮಾ.7ರಂದು ಪುತ್ತೂರು ತಾಲೂಕು ಆಡಳಿತ ಸೌಧದ ಬಳಿಯ ಅಮರ್ ಜವಾನ್ ಸ್ಮಾರಕ ಜ್ಯೋತಿಯ ಎದುರು ಪ್ರತಿಭಟನೆ ನಡೆಸಲಾಯಿತು.

ದಲಿತರ ಮೇಲಿನ ಅವಮಾನ ನಿಲ್ಲದಿದ್ದರೆ ದೊಡ್ಡ ಮಟ್ಟದ ಪ್ರತಿಭಟನೆ ಎಚ್ಚರಿಕೆ:
ದ.ಕ.ಜಿಲ್ಲಾ ದಲಿತ ಸೇವಾ ಸಮಿತಿ ಸ್ಥಾಪಕ ಅಧ್ಯಕ್ಷ ಸೇಸಪ್ಪ ಬೆದ್ರಾಕಾಡು ಅವರು ಮಾತನಾಡಿ ದೇಶದ ಪ್ರಧಾನಿಯವರನ್ನು ಪ್ರಶ್ನೆ ಮಾಡಿದವರ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಾಗುತ್ತದೆ. ಇಂತಹ ಸಂದರ್ಭದಲ್ಲಿ ಸಂವಿಧಾನವನ್ನೇ ಬರೆದ ಡಾ.ಬಿ.ಆರ್ ಅಂಬೇಡ್ಕರ್ ಅವರನ್ನು ಅವಮಾನ ಮಾಡಿದವರ ವಿರುದ್ಧ ಕೇವಲ ವರ್ಗಾವಣೆ ಶಿಕ್ಷೆ ಆಗದೆ ಅವರನ್ನು ವಜಾಗೊಳಿಸುವ ಮೂಲಕ ಅವರ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಬೇಕೆಂದು ಒತ್ತಾಯ ಮಾಡುತ್ತೇನೆ ಎಂದರು. ಅದೇ ರೀತಿ ಬೆಳ್ತಂಗಡಿಯಲ್ಲಿ ದಲಿತ ಯುವಕನ ಹತ್ಯೆಯನ್ನು ಬಿಜೆಪಿಯವರು ಮಾಡಿದ್ದಾರೆ. ಬಿಜೆಪಿಯವರಾಗಲಿ, ಕಾಂಗ್ರೆಸ್‌ನವರಾಗಲಿ, ದಲಿತ ಸಂಘಟನೆಯಾಗಲಿ ಒಬ್ಬರನ್ನು ಹತ್ಯೆ ಮಾಡುವ ಅಧಿಕಾರ ಈ ಸಂವಿಧಾನ ಯಾರಿಗೂ ಕೊಟ್ಟಿಲ್ಲ. ಇವತ್ತು ಹಿಂದುಗಳು ಮುಸಲ್ಮಾನರಿಂದ, ಮುಸಲ್ಮಾರು ಹಿಂದುಗಳಿಂದ ಕೊಲ್ಲಲ್ಪಟ್ಟರೆ ಅವರಿಗೆ ಪರಿಹಾರ ಕೊಡುವ ಸರಕಾರಗಳಿವೆ. ಆದರೆ ಒಬ್ಬ ದಲಿತ ಯುವಕ ಬಿಜೆಪಿಯಿಂದ ಹತ್ಯೆಯಾದಾಗ ಆ ಕುಟುಂಬಕ್ಕೆ ಪರಿಹಾರ ನೀಡಲು ಬಿಜೆಪಿ ಶಾಸಕರು ಯಾಕೆ ಮುಂದಾಗಿಲ್ಲ. ಇಂತಹ ತಾರತಮ್ಯ ಇರಬಾರದು ಎಂದ ಅವರು ಶಿವಮೊಗ್ಗದಲ್ಲಿ ಹತ್ಯೆಯಾದ ಹರ್ಷಾ ಎಂಬ ಹಿಂದು ಕಾರ್ಯಕರ್ತನಿಗೆ ಸರಕಾರ ರೂ. ೨೫ಲಕ್ಷ ಪರಿಹಾರ ಕೊಟ್ಟಿದೆ ಎಂಬ ಮಾಹಿತಿ ಇದೆ. ಇಲ್ಲಿ ನಮ್ಮ ಆಗ್ರಹ ಏನೆಂದರೆ ಹರ್ಷಾನ ಕುಟುಂಬಕ್ಕೆ ಇನ್ನಷ್ಟು ಪರಿಹಾರ ಕೊಡುವುದಾದರೆ ಕೊಡಿ. ಆದರೆ ಬೆಳ್ತಂಡಿಯಲ್ಲಿ ಹತ್ಯೆಯಾದ ದಲಿತ ಯುವಕನ ಕುಟುಂಬಕ್ಕೂ ಪರಿಹಾರ ನೀಡಿ ಎಂದು ಒತ್ತಾಯಿಸಿದರು. ಸಂವಿಧಾನದಲ್ಲಿ ಎಲ್ಲರು ಸಮಾನರು. ಇವತ್ತು ರಾಜಕೀಯ ಲಾಭಕ್ಕಾಗಿ ಹತ್ಯೆಗಳಾಗುತ್ತಿವೆ. ಮುಖ್ಯಮಂತ್ರಿಗಳು ಒಂದು ಸಮುದಾಯವನ್ನು ಮಾತ್ರ ಒಲೈಕೆ ಮಾಡದೆ ಎಲ್ಲರನ್ನು ಸಮಾನವಾಗಿ ನೋಡಬೇಕು. ಮುಂದಿನ ದಿನ ಅಂಬೇಡ್ಕರ್ ವಿಚಾರದಲ್ಲಿ ದಲಿತರಿಗೆ ಇನ್ನೂ ಅನ್ಯಾಯಗಳು ಮುಂದುವರಿದರೆ ದೊಡ್ಡ ಮಟ್ಟದ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಬಳಿಕ ದೌರ್ಜನ್ಯ ಹೆಚ್ಚಾಗಿದೆ:
ದಲಿತ ಸಂಘರ್ಷ ಸಮಿತಿ ಕೃಷ್ಣಪ್ಪ ಸ್ಥಾಪಿತ ಇದರ ತಾಲೂಕು ಸಂಚಾಲಕ ಗಣೇಶ್ ಗುರಿಯಾನ ಅವರು ಮಾತನಾಡಿ ರಾಯಚೂರ್ ಜಿಲ್ಲೆಯ ನ್ಯಾಯಧೀಶ ಮಲ್ಲಿಕಾರ್ಜುನ ಗೌಡ ಅವರು ಯೋಗ್ಯ ನ್ಯಾಯಾಧೀಶರಾಗಲು ಅರ್ಹರಾಗಿಲ್ಲ. ಇವತ್ತು ಅವರನ್ನು ವರ್ಗಾಯಿಸಲಾಗಿದೆ. ಆದರೆ ನಮಗೆ ವರ್ಗಾವಣೆ ಮುಖ್ಯವಲ್ಲ. ಅವರನ್ನು ನ್ಯಾಯಾಧೀಶರ ಸ್ಥಾನದಿಂದ ವಜಾಗೊಳಿಸಿ ಮತ್ತು ದೇಶದ್ರೋಹದ ಪಟ್ಟಿಯಲ್ಲಿ ಸೇರಿಸುವಂತ ಒತ್ತಾಯಿಸಿದರು. ಅದೇ ರೀತಿ ಕೊಲೆಯಾದ ಹಿಂದು ಸಂಘಟನೆಯ ಕಾರ್ಯಕರ್ತನಿಗೆ ಬಿಜೆಪಿ ಸರಕಾರ ನೀಡಿದ ಪರಿಹಾರದಂತೆ ಬಿಜೆಪಿ ಕಾರ್ಯಕರ್ತನಿಂದ ಕೊಲೆಯಾದ ದಲಿತ ಯುವಕ ದಿನೇಶ್ ಅವರ ಕುಟುಂಬಕ್ಕೂ ನೀಡಬೇಕಿತ್ತು. ಆದರೆ ಇವತ್ತು ಅದು ಆಗಿಲ್ಲ. ಇಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಸರಕಾರ ದಲಿತರಿಗೆ ಮತ್ತು ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ನಿರಂತರ ಅವಮಾನ ಮಾಡುವ ಷಡ್ಯಂತ್ರ ಮಾಡುತ್ತಿದೆ ಎಂದ ಅವರು ಮುಂದಿನ ದಿನ ಒರೆಂಗಾವ್ ಯುದ್ದ ನಡೆಯಲಿ ಎಂದು ಎಚ್ಚರಿಸಿದರು.

ನಮ್ಮೊಂದಿಗೆ ತಾರತಮ್ಯ ಮಾಡಬೇಡಿ:
ದಲಿತ್ ಸೇವಾ ಸಮಿತಿ ತಾಲೂಕು ಅಧ್ಯಕ್ಷ ಬಿ.ಕೆ.ಅಣ್ಣಪ್ಪ ಕಾರೆಕ್ಕಾಡು ಅವರು ಮಾತನಾಡಿ ದಲಿತರನ್ನು ತಾರತಮ್ಯದಿಂದ ನೋಡುವುದು ತಪ್ಪು. ಸಮಾನ ದೃಷ್ಟಿಯಿಂದ ನೋಡಿ ಆಗಿರುವ ಅನ್ಯಾಯಕ್ಕೆ ನ್ಯಾಯ ಕೊಡಿಸಿ ಎಂದ ಅವರು ಹಿಂದು ಸಂಘಟನೆಯಿಂದ ಕೊಲೆಯಾದ ಬೆಳ್ತಂಗಡಿ ದಿನೇಶ್‌ನ ಕುಟುಂಬಕ್ಕೆ ಪರಿಹಾರ ನೀಡಬೇಕಂದು ಆಗ್ರಹಿಸಿದರು. ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಮೀನಾಕ್ಷಿ ನೆಲ್ಲಿಗುಡ್ಡೆ, ಮಹಿಳಾ ಘಟಕದ ಪುತ್ತೂರು ತಾಲೂಕು ಅಧ್ಯಕ್ಷೆ ಲಲಿತ ಪಾಲ್ತಾಜೆ, ತುಳುವಪ್ಪೆನ ಜೋಕ್ಲು ಇದರ ವಸಂತ ಪಟ್ಟೆ, ಬಂಟ್ವಾಳ ದಲಿತ ಸೇವಾ ಸಮಿತಿ ಜಿಲ್ಲಾ ಉಪಾಧ್ಯಕ್ಷ ಪ್ರಸಾದ್ ಬೊಲ್ಮಾರು, ಜಿಲ್ಲಾ ಸಂಘದ ಸುಂದರ ನರಿಮೊಗರು, ಯಾಮಿನಿ ಬೆಟ್ಟಂಪಾಡಿ, ವಿಮಲ, ವಸಂತ ಪಟ್ಟೆ, ಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು. ಜಿಲ್ಲಾಧ್ಯಕ್ಷ ಚಂದ್ರಶೇಖರ್ ವಿಟ್ಲ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here