ಗೂಗಲ್ ಮೀಟ್ ಮೂಲಕ ವಿಕಲಚೇತನರ ಸಮಸ್ಯೆಗಳಿಗೆ ಪರಿಹಾರ

0

  • ಅಶಕ್ತರಿಗೆ ಕಾನೂನು ಅರಿವು ನೀಡುತ್ತಿರುವ ಕುಂಬ್ರದ ಶಿಕ್ಷಕ

ಪುತ್ತೂರು: ಗೂಗಲ್ ಮೀಟ್ ಮೂಲಕ ರಾಜ್ಯದಾದ್ಯಂತ ಇರುವ ವಿಕಲಚೇತನರಿಗೆ ಕಾನೂನು ಅರಿವು ನೀಡಿ , ವಿಕಲಚೇತನರ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡುವ ಮೂಲಕ ಅಶಕ್ತರಿಗೆ ಶಕ್ತಿತುಂಬುವ ಕೆಲಸವನ್ನು ಸರಕಾರಿ ಮತ್ತು ಅರೆಸರಕಾರಿ ವಿಕಲಚೇತನರ ನೌಕರರ ಸಂಘದ ದ ಕ ಜಿಲ್ಲಾಧ್ಯಕ್ಷರಾದ ಕುಂಬ್ರ ಕೆಪಿಎಸ್ ಸ್ಕೂಲ್ ಇದರ ಸಹ ಶಿಕ್ಷಕರಾಗಿರುವ ಶಿವಪ್ಪ ರಾಥೋಡ್ ಅವರು ಮಾಡುತ್ತಿದ್ದು ರಾಜ್ಯಾದ್ಯಂತ ನೂರಾರು ಮಂದಿ ವಿಕಲಚೇತನರು ಇದರ ಪ್ರಯೋಜನವನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಗುತ್ತಿದ್ದಾರೆ.

 

ವಿವಕಲಚೇತನರ ವಿಕಾಸ ವ್ಯಾಟ್ಸಫ್ ಗ್ರೂಪ್ ಹಾಗೂ ಕರ್ನಾಟಕ ರಾಜ್ಯ ವಿಕಲಚೇತನರ ರಕ್ಷಣಾ ಸಮಿತಿ ಸೇರಿಕೊಂಡು ಅಂಗವಿಕಲರಿಗೆ ಅವರ ಹಕ್ಕುಗಳ ಬಗ್ಗೆ ಅರಿವು ಮೂಡಿಸುವ ಕೆಲಸವನ್ನು ಕಳೆದ ಎಂಟು ತಿಂಗಳಿನಿಂದ ಆಯೋಜಿಸುತ್ತಿದೆ. ಪ್ರತೀ ಭಾನುವಾರ ಸಂಜೆ ೪ ರಿಂದ ಈ ಗೂಗಲ್ ಮೀಟ್ ಕಾರ್ಯಕ್ರಮ ಪ್ರತೀ ವಾರ ನಿರಂತರವಾಗಿ ನಡೆಯುತ್ತಿದ್ದು ಇದುವರೆಗೆ ಅನೇಕ ಮಂದಿ ವಿಕಲಚೇತನರಿಗೆ ಈ ಮೀಟ್ ನಿಂದ ಸಮಸ್ಯೆ ಪರಿಹಾರವಾಗಿರುತ್ತದೆ.

ಅಂಗವಿಕಲವ್ಯಕ್ತಿಗಳ ಹಕ್ಕುಗಳ ಅಧಿನಿಯಮ ೨೦೧೬ ರ ೬ ನೇ ಅಧ್ಯಾಯದಲ್ಲಿ ಅಂಗವಿಕಲರ ಹಕ್ಕುಗಳ ಬಗ್ಗೆ ಜಾಗೃತಿ ಶಿಬಿರ ನಡೆಸಬೇಕು ಎಂದು ಉಲ್ಲೇಖವಿದೆ. ಈ ನಿಯಮಗಳ ಬಗ್ಗೆ ಮುಖ್ಯವಾಗಿ ನ್ಯಾಯಾಧೀಶರು, ವಕೀಲರು, ಹಾಗೂ ಅನುಷ್ಠಾನಗೊಳಿಸುವ ವಿವಿಧ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ಇರಬೇಕು. ಕೇಂದ್ರ ಸರಕಾರ ೨೦೧೬ ರಲ್ಲಿ ಹಾಗೂ ರಜ್ಯ ಸರಕಾರ ೨೦೧೯ ರಲ್ಲಿ ಈ ಕಾಯ್ದೆಯನ್ನು ಅನುಷ್ಠಾನಗೊಳಿಸಿದ್ದರೂ ಜಾಗೃತಿ ಕಾರ್ಯಕ್ರಮ ಮಾತ್ರ ನಡೆಯುತ್ತಿರಲಿಲ್ಲ. ಈ ಕಾರಣಕ್ಕೆ ಬಹಳಷ್ಟು ಅಂಗವಿಕಲರಿಗೆ ತಮ್ಮ ಹಕ್ಕುಗಳ ಬಗ್ಗೆ ಅರಿವಿನ ಕೊರತೆ ಉಂಟಾಗಿತ್ತು ಈ ಕಾರಣಕ್ಕೆ ಶಿಕ್ಷಕ ಶಿವಪ್ಪ ರಾಥೋಡ್ ಗೂಗಲ್ ಮೀಟ್ ಮೂಲಕ ಹಕ್ಕುಗಳ ಬಗ್ಗೆ ತಿಳುವಳಿಕೆ ಮೂಡಿಸುವ ಕಾರ್ಯವನ್ನು ಕಳೆದ ಎಂಟು ತಿಂಗಳಿಂದ ಮಾಡುತ್ತಿದ್ದಾರೆ.

ಈ ಹಿಂದೆ ವಿಕಲಚೇತನರಿಗೆ ಮಾಹಿತಿ ನೀಡುವ ಅರಿವಿನ ಸಿಚಂನ ಎಂಬ ಕಾರ್ಯಕ್ರಮ ನಡೆಸಲಾಗುತ್ತಿತ್ತು ಅದು ಸ್ಥಗಿತಗೊಂಡಿದೆ. ಕಾನೂನು ಅಥವಾ ತಮ್ಮ ಹಕ್ಕುಗಳ ಬಗ್ಗೆ ಅರಿವು ಇದ್ದರೆ ಮಾತ್ರ ಅಶಕ್ತರು ಸೌಲಭ್ಯ ಪಡೆಯಲು ಸಾಧ್ಯವಾಗುತ್ತದೆ.ನಾವು ವಆರದಲ್ಲಿ ನಡೆಯುವ ಗೂಗಲ್ ಮೀಟ್‌ನಲ್ಲಿ ಅರ್ಧ ಭಾಗದಲ್ಲಿ ಕಾನೂನು ಅರಿವು ನೀಡುವ ಕೆಲಸವನ್ನು ಮಾಡುತ್ತಿದ್ದೇವೆ. ಓರ್ವ ವಿಕಲಚೇತನನಾಗಿ ನಾನು ಅನುಭವಿಸಿದ ಕಷ್ಟವನ್ನು ಯಾರೂ ಅನುಭವಿಸಬಾರದು ಎಂಬ ಉದ್ದೇಶ ನನ್ನಲ್ಲಿತ್ತು, ಕೋವಿಡ್ ಸಂದರ್ಭದಲ್ಲಿ ಅನೇಕ ಅಂಗವಿಕಲರಿಗೆ ಮನೆಯಿಂದ ಹೊರಗೆ ಬರಲಾರದ ಅಸಹಾಯಕ ಪರಿಸ್ಥಿತಿ ಎದುರಾಗಿತ್ತು.ಕೋವಿಡ್ ವೇಳೆ ಈ ಆಲೋಚನೆ ನನ್ನಲ್ಲಿ ಮೂಡಿ ಬಂದು ಈಗಾಗಲೇ ೩೦ ಕ್ಕೂ ಹೆಚ್ಚು ಕಂತುಗಳನ್ನು ಪೂರೈಸುವಷ್ಟರಲ್ಲೇ ನೂರಾರು ಮಂದಿ ಇದರಿಂದ ಪ್ರಯೋಜನವನ್ನು ಪಡೆದುಕೊಳ್ಳುವಂತಾಗಿದ್ದು ಸಂತೋಷದಾಯಕದ ಸಂಗತಿಯಾಗಿದೆ ಎನ್ನುತ್ತಾರೆ ಶಿಕ್ಷಕ ಶಿವಪ್ಪ ರಾಥೋಡ್ ರವರು.

ಏನೆಲ್ಲಾ ಚರ್ಚೆಯಾಗುತ್ತದೆ
ತೆರಿಗೆ, ಸೇವಾಕ್ಷೇತ್ರ, ಸಂಚಾರಿ ಭತ್ಯೆ, ಬ್ಯಾಂಕ್ ಸಾಲ, ಸ್ವಯಂ ಉದ್ಯೋಗದ ಮಾಹಿತಿ ಸೇರಿದಂತೆ ಅನೇಕ ವಿಷಯಗಳ ಬಗ್ಗೆ ಗೂಗಲ್ ಮೀಟ್‌ನಲ್ಲಿ ವಿವಿಧ ಅಧಿಕಾರಿಗಳ ಜೊತೆ ಚರ್ಚೆಯಾಗುತ್ತದೆ. ಸದ್ಯಕ್ಕೆ ೧೦೦ ಜನರ ಮಿತಿಯಲ್ಲಿ ಕಾರ್ಯಕ್ರಮ ನಡೆಯುತ್ತಿದೆ.ಇತ್ತೀಚಿನ ದಿನಗಳಲ್ಲಿ ಗೂಗಲ್ ಮೀಟ್‌ನಲ್ಲಿ ಹಿರಿಯ ಅಧಿಕಾರಿಗಳು, ನ್ಯಾಯಾಧೀಶರನ್ನು ಆಮಂತ್ರಿಸಿ ಅವರು ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಮಾಡುತ್ತಿದ್ದಾರೆ. ಅಧಿಕಾರಿಗಳು ನೇರವಾಗಿ ಫಲಾನುಭವಿ ಜೊತೆ ಸಂಪರ್ಕ ಪಡೆದುಕೊಳ್ಳುವ ಕಾರಣ ಸಮಸ್ಯೆಗಳ ಇತ್ಯರ್ಥಕ್ಕೂ ಸುಲಭವಾಗುತ್ತದೆ. ಅಧಿಕಾರಿಗಳೂ ಕಾರ್ಯಕ್ರಮದಲ್ಲಿ ಕಾನೂನಿನ ಅರಿವು ಪಡೆದುಕೊಂಡಲ್ಲಿ ಕಚೇರಿಗೆ ಬರುವ ವಿಕಲಚೇನತರಿಗೆ ಸಹಾಯವಾಗುತ್ತದೆ ಎನ್ನುತ್ತಾರೆ ಶಿವಪ್ಪ ರಾಥೋಡ್.ಶಿಕ್ಷಕರಾಗಿದ್ದುಕೊಂಡು ಅಂಗವಿಕಲರ ಹಕ್ಕಿಗಾಗಿ ಹೋರಾಡುತ್ತಿರುವ ಶಿಕ್ಷಕ ಶಿವಪ್ಪ ರಾಥೋಡ್ ಅವರ ಗೂಗಲ್ ಮೀಟ್ ಕಾರ್ಯಕ್ರಮದ ಬಗ್ಗೆ ರಜ್ಯಮಟ್ಟದಲ್ಲಿ ಶ್ಲಾಘನೆ ವ್ಯಕ್ತವಾಗಿದೆ.

“ಅಂಗವಿಕಲರ ಇಲಾಖೆಯಲ್ಲಿ ಸೇವೆಯಲ್ಲಿ ಇಲ್ಲದೇ ಇದ್ದರೂ ಓರ್ವ ಶಿಕ್ಷಕರಾಗಿ ಅಂಗವಿಕಲರ ಕಲ್ಯಾಣಕ್ಕಾಗಿ ಅವರ ಹಕ್ಕುಗಳಿಗಾಗಿ ಅವಿರತ ಶ್ರಮವಹಿಸುತ್ತಿರುವುದು ಶ್ಲಾಘನೀಯವಾಗಿದೆ. ಗೂಗಲ್ ಮೀಟ್ ಮೂಲಕ ಅನೇಕ ಅಶಕ್ತರಿಗೆ ಕಾನೂನಿನ ಅರಿವು ನೀಡುವಲ್ಲಿ ಯಶಸ್ವಿಯಾಗಿದ್ದಾರೆ. ಪುತ್ತೂರು ಹಾಗೂ ಕಡಬ ತಾಲೂಕಿನ ಬಹುತೇಕ ವಿಕಲಚೇತನರಿಗೆ ಯುಡಿಐಡಿ ಕಾರ್ಡು ಪಡೆಯುವಲ್ಲಿ ಶಿಕ್ಷಕ ಶಿವಪ್ಪ ರಾಥೋಡ್ ಅವರ ಶ್ರಮವೇ ಕಾರಣವಾಗಿದೆ. ವಿಕಲ ಚೇತನರು ಸೌಲಭ್ಯದಿಂದ ವಂಚಿತರಾಗಿದ್ದಲ್ಲಿ ಸ್ವತ ಅವರೇ ಅವರನ್ನು ಭೇಟಿಯಾಗಿ ಪರಿಹಾರ ಮಾಡಿಕೊಡುತ್ತಿದ್ದಾರೆ – ಸಂಜೀವ ಕಬಕ, ಬಳಕೆದಾರರ ವೇದಿಕೆ ಕಾರ್ಯಕರ್ತರು

LEAVE A REPLY

Please enter your comment!
Please enter your name here