ರಾಮಕುಂಜ: ಸಾಮಾಜಿಕ ಪರಿಶೋಧನೆಯ ಗ್ರಾಮಸಭೆ

0

 


ರಾಮಕುಂಜ: ರಾಮಕುಂಜ ಗ್ರಾಮ ಪಂಚಾಯತ್‌ನ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಹಾಗೂ 14 ಮತ್ತು 15ನೇ ಹಣಕಾಸು ಅನುದಾನದ 2020-21ನೇ ಸಾಲಿನ ಕಾಮಗಾರಿಗಳ ಸಾಮಾಜಿಕ ಪರಿಶೋಧನೆಯ ಗ್ರಾಮಸಭೆ ಮಾ.೮ರಂದು ಬೆಳಿಗ್ಗೆ ಗ್ರಾಮ ಪಂಚಾಯತ್‌ನ ಸಭಾಂಗಣದಲ್ಲಿ ನಡೆಯಿತು.

ಸಭೆಯ ಅಧ್ಯಕ್ಷತೆ ವಹಿಸಿದ್ದ ತಾಲೂಕು ಸಮಾಜ ಕಲ್ಯಾಣ ಅಧಿಕಾರಿ ಭಾರತಿಯವರು ಮಾತನಾಡಿ, ಕಾಮಗಾರಿಗಳು ಪಾರದರ್ಶಕವಾಗಿ ನಡೆಯಬೇಕೆಂಬ ಉದ್ದೇಶವಿಟ್ಟುಕೊಂಡು ವರ್ಷದಲ್ಲಿ ಎರಡು ಬಾರಿ ಸಾಮಾಜಿಕ ಪರಿಶೋಧನೆಯ ಗ್ರಾಮಸಭೆಗಳು ಗ್ರಾಮ ಪಂಚಾಯತ್‌ನಲ್ಲಿ ನಡೆಯುತ್ತವೆ. ಉದ್ಯೋಗ ಖಾತರಿ ಯೋಜನೆಯಡಿ ವೈಯಕ್ತಿಕ ಹಾಗೂ ಸಾರ್ವಜನಿಕ ಕೆಲಸ ನಿರ್ವಹಿಸಲು ಅವಕಾಶವಿದೆ. ಗ್ರಾಮಸ್ಥರು ಗ್ರಾಮ ಪಂಚಾಯತ್‌ನಿಂದ ಯೋಜನೆಯ ಕುರಿತು ಮಾಹಿತಿ ಪಡೆದುಕೊಂಡು ಅನುಷ್ಠಾನಗೊಳಿಸಬೇಕು ಎಂದು ಹೇಳಿದರು. ಉದ್ಯೋಗ ಖಾತರಿ ಯೋಜನೆಯ ಇಂಜಿನಿಯರ್ ಮನೋಜ್‌ಕುಮಾರ್‌ರವರು ಉದ್ಯೋಗ ಖಾತರಿ ಯೋಜನೆಯಡಿ ನಿರ್ವಹಿಸಬಹುದಾದ ಕಾಮಗಾರಿ ಹಾಗೂ ಅನುದಾನದ ಕುರಿತು ಮಾಹಿತಿ ನೀಡಿ, ಗ್ರಾಮಸ್ಥರು ಸರಕಾರದ ಈ ಯೋಜನೆಯ ಬಳಕೆ ಮಾಡಿಕೊಳ್ಳುವಂತೆ ಹೇಳಿದರು. ಗ್ರಾ.ಪಂ.ಅಧ್ಯಕ್ಷೆ ಮಾಲತಿ ಎನ್.ಕೆ.ರವರು ಮಾತನಾಡಿ, ಉದ್ಯೋಗ ಖಾತ್ರಿ ಯೋಜನೆಯಲ್ಲಿ ಗ್ರಾಮಸ್ಥರಿಗೆ ತಮ್ಮ ಜಮೀನಿನಲ್ಲಿಯೇ ವೈಯಕ್ತಿಕ ಕಾಮಗಾರಿಗಳ ನಿರ್ವಹಣೆ ಸಾಧ್ಯವಿದೆ. ಕಾಮಗಾರಿ ನಿರ್ವಹಣೆಗೆ ಮೊದಲು ಯೋಜನೆಯ ಕುರಿತು ಸಮಗ್ರ ಮಾಹಿತಿ ಪಡೆದುಕೊಂಡು ಗ್ರಾಮ ಪಂಚಾಯತ್‌ಗೆ ಅರ್ಜಿ ನೀಡಬೇಕು. ಗ್ರಾಮಸ್ಥರು ಹೆಚ್ಚಿನ ಕೆಲಸ ಮಾಡಿ ಗ್ರಾಮದ ಅಭಿವೃದ್ಧಿಗೆ ಸಹಕರಿಸಬೇಕೆಂದು ಹೇಳಿದರು. ಉಪಾಧ್ಯಕ್ಷ ಪ್ರಶಾಂತ್ ಆರ್.ಕೆ.,ಮಾತನಾಡಿ, ಯೋಜನೆಯ ಕುರಿತು ಯಾವುದೇ ಗೊಂದಲಗಳಿದ್ದಲ್ಲಿ ಗ್ರಾಮಸ್ಥರು ಗ್ರಾಮ ಪಂಚಾಯತ್‌ಗೆ ಬಂದು ಮಾಹಿತಿ ಪಡೆದುಕೊಳ್ಳಿ. ಯೋಜನೆಯ ಸದ್ಬಳಕೆ ಮಾಡಿಕೊಳ್ಳುವ ಮೂಲಕ ಗ್ರಾಮದ ಅಭಿವೃದ್ಧಿಗೆ ಕೈಜೋಡಿಸುವಂತೆ ಹೇಳಿದರು.

ಒಣ ಕಸ ಸಂಗ್ರಹ:
ಪಿಡಿಒ ಜೆರಾಲ್ಡ್ ಮಸ್ಕರೇನಸ್‌ರವರು ಮಾತನಾಡಿ, ಗ್ರಾಮ ಪಂಚಾಯತ್‌ನಿಂದ ಒಣ ಕಸ ಸಂಗ್ರಹ ಆರಂಭಿಸಲಾಗುವುದು. ಇದರ ನಿರ್ವಹಣೆ ಸಂಜೀವಿನಿ ಒಕ್ಕೂಟದವರಿಗೆ ನೀಡಲಾಗಿದ್ದು ಒಕ್ಕೂಟದ ಸದಸ್ಯೆಯರು ತರಬೇತಿ ಪಡೆಯುತ್ತಿದ್ದಾರೆ. ವಾಹನವೂ ಬುಕ್ಕಿಂಗ್ ಆಗಿದೆ. ಗ್ರಾಮದಲ್ಲಿ ಗುರುತು ಮಾಡುವ ನಿಗದಿತ ಸ್ಥಳಕ್ಕೆ ನಿಗದಿತ ಸಮಯದಲ್ಲಿ ಕಸ ಸಂಗ್ರಹದ ವಾಹನ ಬರಲಿದೆ. ಈ ಸಂದರ್ಭದಲ್ಲಿ ಗ್ರಾಮಸ್ಥರು ಶುದ್ಧವಾದ ಒಣಕಸ ನೀಡಿ ಸಹಕರಿಸಬೇಕೆಂದು ತಿಳಿಸಿದರು. ಉದ್ಯೋಗ ಖಾತರಿ ಯೋಜನೆಯ ಕ್ರೀಯಾ ಯೋಜನೆ ಗ್ರಾಮಸಭೆ ಪ್ರತಿವರ್ಷ ಅಕ್ಟೋಬರ್ ತಿಂಗಳಿನಲ್ಲಿ ನಡೆಯುತ್ತಿದೆ. ಈ ಸಂದರ್ಭದಲ್ಲಿ ಗ್ರಾಮಸ್ಥರು ಕಾಮಗಾರಿ ನಿರ್ವಹಣೆ ಬಗ್ಗೆ ಅರ್ಜಿ ನೀಡಬೇಕು. ಕಾಮಗಾರಿಯ ಜಿಪಿಎಸ್ ಮಾಡುವ ಹಂತದಲ್ಲಿ ಫಲಾನುಭವಿಗಳು ನಾಮಫಲಕ ಅಳವಡಿಸಿರಬೇಕು. ಇಲ್ಲದೇ ಇದ್ದಲ್ಲಿ ಮುಂದಿನ ಹಂತಕ್ಕೆ ಹೋಗಲು ಆಗುವುದಿಲ್ಲ ಎಂದು ಪಿಡಿಒ ಜೆರಾಲ್ಡ್‌ರವರು ಮಾಹಿತಿ ನೀಡಿದರು.

ಗ್ರಾ.ಪಂ.ಸದಸ್ಯರಾದ ಸೂರಪ್ಪ ಕುಲಾಲ್, ಆಯಿಷಾ ಶರೀಫ್ ಹಾಗೂ ಉದ್ಯೋಗ ಖಾತ್ರಿ ಯೋಜನೆ ಫಲಾನುಭವಿಗಳು, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಗ್ರಾಮಸ್ಥರು ಸಭೆಯಲ್ಲಿ ಉಪಸ್ಥಿತರಿದ್ದರು. ಉದ್ಯೋಗ ಖಾತರಿ ಯೋಜನೆಯ ಗ್ರಾಮ ಸಂಪನ್ಮೂಲ ವ್ಯಕ್ತಿ ಜಯಮಣಿಯವರು ವರದಿ ಮಂಡಿಸಿದರು. ಪಿಡಿಒ ಜೆರಾಲ್ಡ್ ಮಸ್ಕರೇನಸ್‌ರವರು ಸ್ವಾಗತಿಸಿ, ಯೋಜನೆಯ ಕುರಿತು ಮಾಹಿತಿ ನೀಡಿದರು. ಗ್ರಾಮ ಸಂಪನ್ಮೂಲ ವ್ಯಕ್ತಿಗಳಾದ ಶ್ವೇತಾಕ್ಷಿ, ಸವಿತಾಕುಮಾರಿ, ಯಶ್ಮಿತಾ, ಪ್ರಣಮ್ಯ, ವಿನುತಾ ಹಾಗೂ ಗ್ರಾ.ಪಂ.ಸಿಬ್ಬಂದಿಗಳು ಸಹಕರಿಸಿದರು.

56.29ಲಕ್ಷ ರೂ.,ಖರ್ಚು:
1-10-2020 ರಿಂದ 30-9-2021ರ ಅವಧಿಯ ತನಕ ರಾಮಕುಂಜ ಗ್ರಾಮ ಪಂಚಾಯತ್‌ನಲ್ಲಿ ಒಟ್ಟು 181 ಕಾಮಗಾರಿಗಳ ಅನುಷ್ಠಾನವಾಗಿದೆ. ಇದಕ್ಕೆ 44,20,816 ರೂ.,ಕೂಲಿ ಹಾಗೂ 12,08,850 ರೂ.,ಸಾಮಾಗ್ರಿ ಮೊತ್ತ ಸೇರಿ ಒಟ್ಟು 56,29,660 ರೂ.,ಪಾವತಿಯಾಗಿದೆ. 415 ಕುಟುಂಬಗಳ 773 ಜನ ಕೆಲಸ ಮಾಡಿದ್ದು ಒಟ್ಟು 15,641 ಮಾನವ ದಿನ ಸೃಜನೆಯಾಗಿದೆ. 14 ಮತ್ತು 15ನೇ ಹಣಕಾಸು ಅನುದಾನದಲ್ಲಿ 2020-21ನೇ ಸಾಲಿನಲ್ಲಿ ಒಟ್ಟು 108 ಕಾಮಗಾರಿಗಳು ಅನುಷ್ಠಾನಗೊಂಡಿದ್ದು 14ನೇ ಹಣಕಾಸು ಅನುದಾನದಲ್ಲಿ 49,16,323 ಹಾಗೂ 15ನೇ ಹಣಕಾಸು ಅನುದಾನದಲ್ಲಿ 8,26,941 ರೂ., ಖರ್ಚು ಆಗಿದೆ ಎಂದು ಸಭೆಗೆ ಮಾಹಿತಿ ನೀಡಲಾಯಿತು.

LEAVE A REPLY

Please enter your comment!
Please enter your name here