ಬೊಳುವಾರು ಪ್ರಗತಿ ಪ್ಯಾರಾ ಮೆಡಿಕಲ್ ಕಾಲೇಜಿನಲ್ಲಿ ಅಂತರಾಷ್ಟ್ರೀಯ ಹಣ್ಣು ತರಕಾರಿಗಳ ವರ್ಷಾಚರಣೆ

0

  • ಖಾಯಿಲೆಗಳನ್ನು ತಡೆಗಟ್ಟುವ ಅಂಶಗಳು ಹಣ್ಣು-ಹಂಪಲು ತರಕಾರಿಗಳಲ್ಲಿದೆ ಡಾ. ಶ್ರೀಪತಿ ರಾವ್

ಪುತ್ತೂರು : ತೋಟಗಾರಿಕೆ ಇಲಾಖೆ ಮಂಗಳೂರು, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ದಕ ಜಿಲ್ಲೆ ಇದರ ಆಶ್ರಯದಲ್ಲಿ ಪ್ರಗತಿ ಪ್ಯಾರಾಮೆಡಿಕಲ್ ಕಾಲೇಜು ಪುತ್ತೂರು ಇವರ ಸಹಕಾರದೊಂದಿಗೆ ಬೊಳುವಾರು ಪ್ರಗತಿ ಪ್ಯಾರಾ ಮೆಡಿಕಲ್ ಕಾಲೇಜು ಸಭಾಂಗಣದಲ್ಲಿ ಮಾ.9ರಂದು ಅಂತರಾಷ್ಟ್ರೀಯ ಹಣ್ಣುಗಳ ಮತ್ತು ತರಕಾರಿಗಳ ವರ್ಷಾಚರಣೆ ಸಮಾರಂಭ ಜರಗಿತು. ಪುತ್ತೂರು ಪ್ರಗತಿ ಸ್ಪೆಷಾಲಿಟಿ ಆಸ್ಪತ್ರೆಯ ಮ್ಯಾನೇಜಿಂಗ್ ಡೈರೆಕ್ಟರ್ ಡಾ.ಯು. ಶ್ರೀಪತಿ ರಾವ್ ಸಮಾರಂಭ ಉದ್ಘಾಟಿಸಿ ಮಾತನಾಡಿ ಎಲ್ಲಾ ದಿನಾಚರಣೆಗಳನ್ನು ಮಾಡುವಂತೆ ಹಣ್ಣು-ಹಂಪಲು ತರಕಾರಿಗಳ ವರ್ಷಾಚರಣೆಯನ್ನು ಮಾಡಿ ಜನಸಾಮಾನ್ಯರಿಗೆ ಜಾಗೃತಿ ಮೂಡಿಸುತ್ತಿರುವುದು ಬಹಳಷ್ಟು ವಿಶೇಷತೆಯಾಗಿದೆ. ಇಂತಹ ಕಾರ್ಯಕ್ರಮಗಳನ್ನು ಅಳವಡಿಸುತ್ತಿರುವ ಸಂಘಟನೆಗಳಿಗೆ ಕೃತಜ್ಞತೆಯನ್ನು ಸಲ್ಲಿಸುತ್ತಿದ್ದೇನೆ ಎಂದರು. ಹಣ್ಣು-ಹಂಪಲು ತರಕಾರಿಗಳು ಆರೋಗ್ಯಕ್ಕೆ ಬಹಳ ಉಪಯುಕ್ತ. ಖಾಯಿಲೆಗಳನ್ನು ತಡೆಗಟ್ಟುವ ಮುಖ್ಯವಾದ ಅಂಶಗಳು ಹಣ್ಣು-ಹಂಪಲು ತರಕಾರಿಗಳಲ್ಲಿದೆ. ಜೀವಕ್ಕೆ ಶಕ್ತಿ ಕೊಡುವಂತಹ ದ್ವಿದಳ ಧಾನ್ಯಗಳ ಜಾಗೃತಿ ಸಮಾರಂಭವನ್ನು ಮುಂದಿನ ದಿನಗಳಲ್ಲಿ ಅಳವಡಿಸಿಕೊಳ್ಳಬೇಕೆಂದು ಕರೆ ನೀಡಿದರು.

 

ಸಂಪನ್ಮೂಲ ವ್ಯಕ್ತಿಯಾಗಿ ನರಿಮೊಗರು ಪ್ರಸಾದಿನಿ ಆಯುರ್ನಿಕೇತನ್ ಆಯುರ್ವೇದ ಆಸ್ಪತ್ರೆಯ ತಜ್ಞ ವೈದ್ಯ ಡಾ.ರಾಘವೇಂದ್ರ ಪ್ರಸಾದ್ ಬಂಗಾರಡ್ಕ ಮಾತನಾಡಿ ತರಕಾರಿ, ಹಣ್ಣುಹಂಪಲುಗಳ ಸತ್ವವನ್ನು ಅರಿತುಕೊಂಡು ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ಅನಿವಾರ್ಯತೆಯಿದೆ. ಆಹಾರದಲ್ಲಿ ಹಣ್ಣು-ಹಂಪಲು ತರಕಾರಿ ಅಂಶಗಳು ಇಲ್ಲದಿದ್ದರೆ ಅದೊಂದು ಪರಿಪೂರ್ಣ ಆಹಾರವಾಗಲು ಸಾಧ್ಯವಿಲ್ಲ. ನಾರಿನಂಶ ಹೆಚ್ಚಾಗಿರುವ ಆಹಾರಗಳನ್ನು ಹೆಚ್ಚಾಗಿ ಉಪಯೋಗಿಸುವುದರಿಂದ ಕ್ಯಾನ್ಸರ್ ರೋಗಗಳನ್ನು ತಡೆಗಟ್ಟಲು ಸಾಧ್ಯವಿದೆ. ದೈನಂದಿನ ಆಹಾರದಲ್ಲಿ ಒಂದು ಹಣ್ಣನ್ನಾದರೂ ಸೇವಿಸಿ ಉತ್ತಮ ಆರೋಗ್ಯಪೂರ್ಣ ಜೀವನ ನಿಮ್ಮದಾಗಿಸಿಕೊಳ್ಳಿ ಎಂದು ಕರೆ ನೀಡಿದರು. ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ದ.ಕ ಜಿಲ್ಲಾಧ್ಯಕ್ಷ ಡಾ. ಹಾಜಿ.ಯಸ್. ಅಬೂಬಕ್ಕರ್ ಆರ್ಲಪದವು ಮಾತನಾಡಿ ಶುಭಹಾರೈಸಿದರು. ಪುತ್ತೂರು ಜಿ.ಪಂ. ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕಿ ರೇಖಾ, ಪುತ್ತೂರು ಪ್ರಗತಿ ಪ್ಯಾರಾ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲೆ ಪ್ರೀತಾ ಸಂದರ್ಭೋಚಿತವಾಗಿ ಮಾತನಾಡಿದರು. ಪುತ್ತೂರು ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಶಿವಪ್ರಕಾಶ್, ಮಧು ಕರುಣಾಕರ್, ಕಾಲೇಜು ಪ್ರಾಧ್ಯಾಪಕರು ಉಪಸ್ಥಿತರಿದ್ದರು. ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ದಕ ಜಿಲ್ಲಾ ಕಾರ್ಯದರ್ಶಿ ಕರುಣಾಕರ ಹೆಚ್.ಎಸ್ ಸ್ವಾಗತಿಸಿ ವಂದಿಸಿದರು.

LEAVE A REPLY

Please enter your comment!
Please enter your name here