ಜಂಟಿ ಸರ್ವೆ ಮಾಡಿಯೇ ಹಕ್ಕು ಪತ್ರ ವಿತರಿಸಲು ಆಗ್ರಹ

0

 

ಹಕ್ಕು ಪತ್ರ ಮಾಡಿಸಲು ಲಂಚದ ಮೇಲಾಟ, ಇಲಾಖೆಯಲ್ಲಿ ಗುಪ್ತಚರ ಬೇಕು: ಮಲೆನಾಡು ಜನಹಿತ ರಕ್ಷಣಾ ವೇದಿಕೆ 

ಅಕ್ರಮ-ಸಕ್ರಮ, 94ಸಿ ಸೇರಿದಂತೆ ವಿವಿಧ ಯೋಜನೆಯಡಿ ಸರಕಾರಿ ಜಾಗದ ಸಕ್ರಮೀಕರಣಕ್ಕೆ ಅರ್ಜಿ ಸ್ವೀಕರಿಸುವ ಮೊದಲು ಅರಣ್ಯ ಇಲಾಖೆ ಹಾಗೂ ಕಂದಾಯ ಇಲಾಖೆ ಜಂಟಿ ಸರ್ವೆ ಮಾಡಬೇಕು. ಇದರಿಂದ ಸಮಸ್ಯೆ ಉಂಟಾಗುವುದಿಲ್ಲ ಎಂದು ಮಲೆನಾಡು ಜನಹಿತ ರಕ್ಷಣಾ ವೇದಿಕೆ ಸಂಚಾಲಕ ಕಿಶೋರ್ ಶಿರಾಡಿ ತಿಳಿಸಿದರು.
ಅವರು ಸುಬ್ರಹ್ಮಣ್ಯ ದಲ್ಲಿ ಅ.20 ರಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಸರಕಾರದ ಯೋಜನೆ ಫಲಾನುಭವಿಗಳಿಗೆ ತಲುಪುವ ಹಂತದಲ್ಲಿ ಅರಣ್ಯ ಇಲಾಖೆ ಆಕ್ಷೇಪ ಅಥವಾ ಸಮಸ್ಯೆ ಕಂಡುಬರುತ್ತಿದ್ದು, ಇದಕ್ಕೆ ಪರಿಹಾರವಾಗಿ ಎಲ್ಲಾ ಕಡೆ ಅರಣ್ಯ ಹಾಗೂ ಕಂದಾಯ ಇಲಾಖೆ ಜಂಟಿ ಸರ್ವೆ ನಡೆಸಿ ಸರಕಾರಿ ಜಾಗ ಗೊತ್ತುಪಡಿಸಿದಲ್ಲಿ ಬಳಿಕ ಜಾಗ ಮಂಜೂರಾತಿಗೆ, ಹಕ್ಕುಪತ್ರ ವಿತರಣೆಗೆ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ ಎಂದರು.

ಲಂಚ ಮೇಲಾಟ ನಡೆಯುತ್ತಿದೆ:
ಅಕ್ರಮ ಸಕ್ರಮ ಯೋಜನೆಯಡಿ ಹಕ್ಕಪತ್ರ ಮಾಡಿಸಲು ಲಂಚದ ಬೇಡಿಕೆಯ ದೂರು ಕೇಳಿಬರುತ್ತಿದೆ. ಜಿಲ್ಲೆಯಲ್ಲಿ ಹಾಗೂ ಕಡಬ ತಾಲೂಕಿನಲ್ಲಿ ಶೇ.75ಕ್ಕೂ ಅಧಿಕ ಪ್ರಮಾಣದಲ್ಲಿ ಹಕ್ಕುಪತ್ರ ಲಂಚ ಪಡೆದೇ ನೀಡಲಾಗಿದೆ ಎಂದು ಅವರು ಆರೋಪಿಸಿದರು. ಹಲವೆಡೆ ಅರಣ್ಯ ಸಮಸ್ಯೆ ಇದ್ದರೂ ಹಕ್ಕುಪತ್ರ ನೀಡಲಾಗಿದೆ. ಮುಂದಕ್ಕೆ ಫಲಾನುಭವಿಗಳು ಸಮಸ್ಯೆ ಅನುಭವಿಸುವ ಸಾಧ್ಯತೆ ಹೆಚ್ಚಿದೆ. ಆದ್ದರಿಂದ ಹಕ್ಕುಪತ್ರ ವಿತರಣೆ ಮೊದಲು ಖಾತರಿ ಮಾಡಬೇಕು ಎಂದ ಅವರು ಜಾಗ ಪರಿಶೀಲನೆ ನಡೆಸಿ ಹಕ್ಕುಪತ್ರ ವಿತರಿಸಬೇಕು ಎಂದರು.

ಗುಪ್ತಚರ ನೇಮಿಸಿ;
ಅಪರಾಧ ತಡೆಗೆ ಪೊಲೀಸ್ ಇಲಾಖೆಯಲ್ಲಿ ಗುಪ್ತಚರ ದಳ ಇರುವಂತೆ ಕಂದಾಯ ಇಲಾಖೆಯಲ್ಲೂ ಗುಪ್ತಚರ ನೇಮಿಸುವಂತೆ ಒತ್ತಾಯಿಸಿದ ಅವರು ಈ ತಂಡದಿಂದ ಕಂದಾಯ ಇಲಾಖೆಯಲ್ಲಿ ನಡೆಯುವ ಅಕ್ರಮಗಳನ್ನು ಹೊರಗೆಳೆಯಬೇಕು, ಇದಕ್ಕೆ ನಾವು ಸಹಕರಿಸುತ್ತೇವೆ ಎಂದರು. ಮರುಳುಗಾರಿಕೆ ದಂಧೆಗೆ ಕಡಿವಾಣ ಹಾಕುವಂತೆ ಒತ್ತಾಯಿಸಿದ ಅವರು ಸ್ಥಳೀಯವಾಗಿ ಸ್ಥಳೀಯ ಪಿಕಪ್ ಗಳಿಗೆ ಮರುಳು ಸಾಗಾಟಕ್ಕೆ ಅವಕಾಶ ನೀಡಬೇಕು. ಇದರಿಂದ ವಸತಿ ಫಲಾನುಭವಿಗಳಿಗೆ ಪ್ರಯೋಜನವಾಗಲಿದೆ ಎಂದರು.
ನವೆಂಬರ್ 10ರಂದು ಸುಬ್ರಹ್ಮಣ್ಯ ದಲ್ಲಿ ಕಸ್ತೂರಿ ರಂಗನ್ ವರದಿ ಹೋರಾಟದ ಬಗ್ಗೆ ಸಮಾಲೋಚನಾ ಸಭೆ ನಡೆಸಲಾಗುವುದು. ಸರಕಾರ ಕಸ್ತೂರಿ ರಂಗನ್ ವರದಿಗೆ ಸಂಬಂಧಿಸಿದಂತೆ ಐವರು ಶಾಸಕರ ಸಮಿತಿ ರಚಿಸಿದ್ದು, ಇವರು ಸರ್ವೆ ನಡೆಸಿ ವರದಿ ನೀಡುವಂತೆ 2021ರಲ್ಲಿ ಸೂಚಿಸಲಾಗಿದೆ. ಆದರೆ ಇದರಲ್ಲಿ ಮಲೆನಾಡು ಪ್ರದೇಶದ ಬಾಧಿತ ಕ್ಷೇತ್ರದ ಚುನಾಯಿತರಾದ ಎಂಪಿ, ಎಂಎಲ್ಎ ಅವರು ಇಲ್ಲ. ಆದ್ದರಿಂದ ಸಮಿತಿಗೆ ಕಸ್ತೂ ರಂಗನ್ ಬಾಧಿತ ಪ್ರದೇಶದ ಸ್ಥಳೀಯ ಶಾಸಕನ್ನು ಸಮಿತಿಗೆ ಸೇರಿಸಬೇಕು ಎಂದು ಅಂದಿನ ಸಭೆಯಲ್ಲಿ ಒತ್ತಾಯಿಸಲಾಗುವುದು ಎಂದರು. ಹಾಗೂ ವಿವಿಧ ವಿಚಾರಗಳ ಬಗ್ಗೆ ಅಂದಿನ ಸಭೆಯಲ್ಲಿ ಚರ್ಚಿಸಲಾಗುವುದು ಎಂದರು. ಹರೀಶ್, ಶೇಖರ್ ಕೊಲ್ಲಮೊಗ್ರು, ನಿಶಾಂತ್ ಶಿರಾಡಿ, ಬುಕ್ಷಿತ್ ಐನೆಕಿದು, ಶ್ರೀಜಿತ್ ಶಿರಾಡಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here