ಸುದ್ದಿ ಪತ್ರಿಕೆ, ಸಂಪಾದಕರು ಮತ್ತು ಸಿಬ್ಬಂದಿಗಳಿಗೆ ನಿಂದನೆ ಪ್ರಕರಣ – ಗುರುಪ್ರಸಾದ್ ಪಂಜ ಕ್ಷಮೆಯಾಚನೆ

0

ಪುತ್ತೂರು : ಸುದ್ದಿ ಬಿಡುಗಡೆ ಪತ್ರಿಕೆ, ಸಂಪಾದಕರು ಮತ್ತು ಮಹಿಳಾ ಸಿಬ್ಬಂದಿಗಳ ವಿರುದ್ಧ ಮಾನಹಾನಿಕರ ಮತ್ತು ನಿಂದನಾತ್ಮಕ ಕರೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಗುರುಪ್ರಸಾದ್ ಪಂಜ ಸುದ್ದಿಯೊಂದಿಗೆ ನ್ಯಾಯಾಲಯದಲ್ಲಿ ಕ್ಷಮೆಯಾಚನೆ ನಡೆಸಿದ್ದು, ಈ ಹಿನ್ನಲೆಯಲ್ಲಿ ಮಾ.12ರಂದು ನಡೆದ ಮೆಗಾ ಲೋಕ ಅದಾಲತ್‌ನಲ್ಲಿ ಪ್ರಕರಣ ರಾಜಿಯಲ್ಲಿ ಇತ್ಯರ್ಥಗೊಂಡಿದೆ.

ನಾಲ್ಕು ವರ್ಷಗಳ ಹಿಂದೆ ಸುದ್ದಿಯು ಬಲಾತ್ಕಾರದ ಬಂದ್ ವಿರುದ್ಧ ಆಂದೋಲನ ಕೈಗೊಂಡ ಸಂದರ್ಭದಲ್ಲಿ ಗುರುಪ್ರಸಾದ್ ಪಂಜ ಮತ್ತು ಅವರ ಬೆಂಬಲಿಗರು ಸಾಮಾಜಿಕ ಜಾಲತಾಣದಲ್ಲಿ ಕೀಳುಮಟ್ಟದ ಅಪಪ್ರಚಾರ ನಡೆಸುತ್ತಿದ್ದರು. ಈ ವಿಚಾರ ಪತ್ರಿಕೆಯಲ್ಲಿ ಬಂದಾಗ ಪತ್ರಿಕಾ ಕಚೇರಿಗೆ ಕರೆ ಮಾಡಿ ಪತ್ರಿಕೆಯ ಸಂಪಾದಕರು ಮತ್ತು ಸಿಬ್ಬಂದಿಗಳ ವಿರುದ್ಧ ಮಾನಹಾನಿಕಾರಕವಾಗಿ ನಿಂದಿಸಿ ಮಾತನಾಡಿದ್ದರು. ಈ ಕುರಿತಂತೆ ಕಚೇರಿ ವ್ಯವಸ್ಥಾಪಕರು ಪೊಲೀಸ್ ದೂರು ನೀಡಿದ್ದರು. ಮತ್ತೊಂದು ಪ್ರಕರಣದಲ್ಲಿ ವರದಿಗಾರರಿಗೆ ಕರೆ ಮಾಡಿಯೂ ಸಂಪಾದಕರಿಗೆ ಅವಾಚ್ಯವಾಗಿ ನಿಂದಿಸಿದ್ದರು. ಈ ಎರಡು ಪ್ರತ್ಯೇಕ ಪ್ರಕರಣಗಳು ಸುಳ್ಯ ಮತ್ತು ಸುಬ್ರಹ್ಮಣ್ಯ ಠಾಣೆಗಳಲ್ಲಿ ದಾಖಲಾಗಿದ್ದು, ಪ್ರಕರಣ ತನಿಖೆಯ ಹಂತದಲ್ಲಿತ್ತು. ಸುಳ್ಯ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿತ್ತು. ಆರೋಪಿ ಮತ್ತು ದೂರುದಾರರಿಗೆ ಹಲವು ಬಾರಿ ಸಮನ್ಸ್ ಜಾರಿಯಾಗಿತ್ತು. ಆರೋಪಿ ಕ್ಷಮೆಯಾಚನೆಗೆ ಒಲವು ತೋರಿದ್ದರಿಂದ ಪ್ರಕರಣ ರಾಜಿಯಲ್ಲಿ ಇತ್ಯರ್ಥಗೊಳ್ಳಲು ನ್ಯಾಯವಾದಿಗಳು ಪ್ರಯತ್ನ ನಡೆಸಿದ್ದರು.

ಅದರಂತೆ ಮಾ. 12ರಂದು ಮೆಗಾ ಲೋಕ ಅದಾಲತ್‌ನ ಮುನ್ನಾ ದಿನವಾದ ಮಾ. 11ರಂದು ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ ಸುಳ್ಯ ಠಾಣೆಯಲ್ಲಿ ದಾಖಲಾದ ಪ್ರಕರಣದ ಬಗ್ಗೆ ವಿಚಾರಣೆ ನಡೆಯಿತು. ಈ ವೇಳೆ ಹಿರಿಯ ಸಿವಿಲ್ ನ್ಯಾಯಾಧೀಶ ಸೋಮಶೇಖರ್‌ರವರು ಆರೋಪಿ ಗುರುಪ್ರಸಾದ್ ಪಂಜರನ್ನು ತೀವ್ರ ತರಾಟೆಗೆತ್ತಿಕೊಂಡು, ಮುಂದೆ ಈ ರೀತಿ ಸಾಮಾಜಿಕ ಜಾಲತಾಣದಲ್ಲಿ ಮಾನಹಾನಿಕರ ಬರಹಗಳನ್ನು ಹಾಕುವುದಿಲ್ಲವೇ? ಎಂದು ಪ್ರಶ್ನಿಸಿದರು. ಇದಕ್ಕೆ ಗುರುಪ್ರಸಾದ್ ಇಲ್ಲವೆಂದು ಹೇಳಿ ಪ್ರಕರಣದ ಬಗ್ಗೆ ಕ್ಷಮೆ ಯಾಚಿಸುವುದಾಗಿ ವಿನಂತಿಸಿಕೊಂಡರು. ನ್ಯಾಯಾಧೀಶರ ಸಮ್ಮುಖದಲ್ಲಿ ಸುಳ್ಯ ಸುದ್ದಿ ಕಚೇರಿ ವ್ಯವಸ್ಥಾಪಕ ಯಶ್ವಿತ್ ಕಾಳಮನೆಯವರೊಡನೆ ಗುರುಪ್ರಸಾದ್ ಪಂಜ ಕ್ಷಮೆ ಕೇಳಿಕೊಂಡರು. ನಂತರ ಅವರಿಬ್ಬರು ಪರಸ್ಪರ ಹಸ್ತಲಾಘವ ಮಾಡಿಕೊಂಡರು.

ನಂತರ ನ್ಯಾಯಾಽಶರು ಸುದ್ದಿ ಬಿಡುಗಡೆ ಸಂಪಾದಕ ಡಾ.ಯು.ಪಿ.ಶಿವಾನಂದರನ್ನು ಕಲಾಪಕ್ಕೆ ಕರೆಸಿ, ಗುರುಪ್ರಸಾದ ಪಂಜ ರವರು ಕ್ಷಮೆ ಕೇಳಿದ ಬಗ್ಗೆ ತಿಳಿಸಿದರು. ಕ್ಷಮೆ ಕೇಳಿದೊಡನೆ ಅವರನ್ನು ಬಿಟ್ಟು ಬಿಡುವುದೇ?. ಮುಂದಕ್ಕೆ ಆತ ಈ ರೀತಿಯ ಮಾನಹಾನಿಕರ ಬರಹಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಲಿಕ್ಕಿಲ್ಲವೇ ಎಂದು ಡಾ. ಯು.ಪಿ.ಶಿವಾನಂದರೊಡನೆ ಪ್ರಶ್ನಿಸಿದರು. ಅದಕ್ಕೆ ಡಾ.ಯು.ಪಿ. ಶಿವಾನಂದರು, ಮುಂದಕ್ಕೆ ಈ ರೀತಿ ಮಾಡುವುದಿಲ್ಲವೆಂಬ ಭರವಸೆ ಇದೆ , ಇನ್ನು ಮುಂದಕ್ಕೆ ಅವರಿಗೆ ಒಳ್ಳೆಯದಾಗಲಿ ಎಂದು ತಿಳಿಸಿದರು. ಹೀಗಾಗಿ ಈ ಪ್ರಕರಣ ಅಂತ್ಯ ಕಂಡಿದ್ದು, ಮರುದಿನ ಮಾ. 12ರಂದು ನ್ಯಾಯಾಲಯದಲ್ಲಿ ನಡೆದ ಮೆಗಾ ಲೋಕ ಅದಾಲತ್‌ನಲ್ಲಿ ಕ್ಷಮಾಪಣಾ ಪತ್ರಕ್ಕೆ ಸಹಿ ಹಾಕುವುದರ ಮೂಲಕ ರಾಜಿ ಇತ್ಯರ್ಥ ಕಂಡಿತು. ಇನ್ನೊಂದು ಪ್ರಕರಣದಲ್ಲಿ ಸುಬ್ರಹ್ಮಣ್ಯ ಠಾಣೆಯಲ್ಲಿ ದಾಖಲಾದ ಕೇಸ್ ಕಿರಿಯ ಸಿವಿಲ್ ನ್ಯಾಯಾಲಯದಲ್ಲಿ ಮಾ. 11ರಂದು ಕಿರಿಯ ನ್ಯಾಯಾಽಶ ಯಶ್ವಂತ್‌ಕುಮಾರ್‌ರವರ ನೇತೃತ್ವದಲ್ಲಿ ನಡೆಯಿತು. ಇಲ್ಲಿಯು ಕೂಡಾ ಗುರುಪ್ರಸಾದ ಪಂಜರೊಡನೆ ನ್ಯಾಯಾಧೀಶರು ಪ್ರಕರಣದ ಬಗ್ಗೆ ವಿಚಾರಿಸುತ್ತಾ, ಈ ರೀತಿ ಸಾಮಾಜಿಕ ಜಾಲತಾಣದಲ್ಲಿ ಅವಾಚ್ಯವಾಗಿ ನಿಂದಿಸುವುದರಿಂದ ನಿನ್ನ ಆಸ್ತಿ, ಸಂಪತ್ತು, ಐಶ್ವರ್ಯ ಏನಾದರೂ ಹೆಚ್ಚಾಗಿದೆಯೇ? ಎಂದು ಪ್ರಶ್ನಿಸಿದರು. ಇಲ್ಲಿಯೂ ಕೂಡಾ ಡಾ.ಯು.ಪಿ.ಶಿವಾನಂದರೊಡನೆ ಗುರುಪ್ರಸಾದ್ ಪಂಜ ಪ್ರಕರಣದ ಬಗ್ಗೆ ಕ್ಷಮೆ ಯಾಚಿಸುವುದರ ಮೂಲಕ ತಾರ್ಕಿಕ ಅಂತ್ಯ ಕಂಡಿತು.

LEAVE A REPLY

Please enter your comment!
Please enter your name here