ಮಾ. 23ರಂದು ಕುಳದಪಾರೆ ಕುಳ ತರವಾಡು ಮನೆಯಲ್ಲಿ ಬ್ರಹ್ಮಕಲಶೋತ್ಸವ

0

 

ಪುತ್ತೂರು: ಕಾಸರಗೋಡು ನೆಟ್ಟಣಿಗೆ ಗ್ರಾಮದ ಕುಳದಪಾರೆ ಕುಳ ತರವಾಡು ಮನೆಯಲ್ಲಿ ಧರ್ಮದೈವ ಶ್ರೀ ಪ್ಲಾವಡ್ಕತ್ತಾಯ, ಮಹಾದೈವ ಶ್ರೀ ವಿಷ್ಣುಮೂರ್ತಿ ರಕ್ತೇಶ್ವರಿ ಹಾಗೂ ಪರಿವಾರ ದೈವಗಳ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಮಾ. 23ರಂದು ನಡೆಯಲಿದೆ.

 


ಇತಿಹಾಸ: ಸುಮಾರು 250 ವರ್ಷಗಳ ಹಿಂದೆ ಚೇರಿಪ್ಪಾಡಿ ಎಂಬಲ್ಲಿಂದ ವಿಷ್ಣುಮೂರ್ತಿ ದೈವವು ಚೀರಿಪ್ಪಾಡಿ ಕೋಲಾನ್ (ಮಣಿಯಾಣಿ) ವಂಶದ ಅಣ್ಣ ತಂಗಿಯರೊಂದಿಗೆ “ತಕ್ಕನ್ನ್ ವಡಕ್ಕೊಟ್ಟ್” ವಲಸೆ ಹೊರಟು ನೆಟ್ಟಣಿಗೆ ಕಾಸರಗೋಡು ತಾಲೂಕಿನ ನೆಟ್ಟಣಿಗೆ ಗ್ರಾಮದ ಕುಳದಪಾರೆಗೆ ಬಂದಿತೆಂದೂ ಅಲ್ಲಿನ ಪ್ರಕೃತಿ ಸೌಂದರ್ಯಕ್ಕೆ ಮನಸೋತು ಅಲ್ಲಿ ಸ್ವಲ್ಪ ಹೊತ್ತು ತಂಗಿತೆಂದೂ ಅಲ್ಲಿಂದ ಬಡಗುಭಾಗಕ್ಕೆ ಮುಂದುವರಿದು ವಿಶಾಲವಾದ ಕೊಳದ ಪರಿಸರದ `ಕುಳ’ ಎಂಬಲ್ಲಿ ನೆಲಸಿಕೊಂಡಿತೆಂದೂ ತಿಳಿದು ಬರುತ್ತದೆ. ಆಗ ಕುರಳದಲ್ಲಿ ಕೊಳತ್ತಾಯ ಎಂಬ ತುಳು ಬ್ರಾಹ್ಮಣ ವಂಶ ವಾಸಿಸುತ್ತಿತ್ತೆಂದೂ ಆ ವಂಶದ ಏಕೈಕ ಕುಡಿಯುವ ಕೊಳದಲ್ಲಿ ಸ್ನಾನ ಮಾಡುತ್ತಿದ್ದಾಗ ತೀರಿಕೊಂಡಿತೆಂದೂ ಇದರಿಂದ ಮನನೊಂದ ಆ ಬ್ರಾಹ್ಮಣ ವಂಶ ಅಲ್ಲಿಂದ ಮನನೊಂದು ಹೊರಟು ಹೋಯಿತೆಂದೂ ಆ ಬಳಿಕ ದೈವದ ಪೇರಣೆಯಂತೆ ಚೇರಿಪ್ಪಾಡಿಯಿಂದ ಬಂದ ಮಣಿಯಾಣಿ ವಂಶವು ಅಲ್ಲಿ ವಾಸ್ತವ್ಯ ಹೂಡಿತೆಂದೂ ಹೇಳಲಾಗುತ್ತಿದೆ.

 


ಬಳಿಕ ಶ್ರೀ ವಿಷ್ಣುಮೂರ್ತಿ ದೈವವು ತನ್ನನ್ನು ಪೂರ್ಣ ಮನಸ್ಸಿನಿಂದ ಆರಾಧಿಸುತ್ತಾ ವರ್ಷಂಪ್ರತಿ ತನ್ನಿಷ್ಟದ ಸ್ಥಳದ ಕುಳದಪಾರೆಯಲ್ಲಿ “ಒತ್ತೆಕೋಲ” ಮಹೋತ್ಸವವನ್ನು ನೆರವೇರಿಸಿಕೊಂಡು ಬರಲು ಪ್ರೇರೇಪಿಸಿತೆಂದೂ ಆ ಪ್ರಕಾರ ಮೇಷ ಮಾಸದ 8,9 ರಂದು ಕುಳದಪಾರೆಯಲ್ಲಿ ಶ್ರೀ ದೈವದ ಒತ್ತೆಕೋಲವು ಪ್ರಾರಂಭಗೊಂಡಿತೆಂದೂ ತಿಳಿದು ಬರುತ್ತದೆ. ದೈವದ ಅನುಗ್ರಹದಂತೆ ಕುಳದಲ್ಲಿ ಮಣಿಯಾಣಿ ವಂಶವು ಅಭಿವೃದ್ಧಿಗೊಂಡಿತೆಂದೂ ಮುಂದೆ ಕ್ರಿ.ಶ. 1852ರಲ್ಲಿ ಆ ವಂಶದ ಮಾಲಿಂಗ ಮಣಿಯಾಣಿ ಎಂಬವರು ಬಂಟಾಜೆ ಕಾಡಿನ ನೆರಳತಳದಲ್ಲಿ ಭತ್ತದ ಗದ್ದೆ, ತೆಂಗು-ಕಂಗುಗಳಿಂದ ಶೋಭಿಸುವ ಸುಂದರ ಭೂ ಪ್ರದೇಶದಲ್ಲಿ ಪೂರ್ವಾಭಿಮುಖವಾಗಿ ಈಗ ಕುಳದಲ್ಲಿ ಕಂಡು ಬರುವ ಶ್ರೀ ವಿಷ್ಣುಮೂರ್ತಿ ದೈವಸ್ಥಾನ ಮತ್ತು ತರವಾಡು ಮನೆಯನ್ನು ಕಟ್ಟಿಸಿದರೆಂದೂ ಇತಿಹಾಸದಿಂದ ತಿಳಿದು ಬರುತ್ತದೆ.

ಎತ್ತರದಲ್ಲಿ ದೈವಸ್ಥಾನ, ಅದರ ಕೆಳಗೆ ಒತ್ತಿನಲ್ಲಿ ತರವಾಡು ಮನೆ, ಮನೆಯ ಮುಂದೆ ಎರಡು ಹಂತದಲ್ಲಿ ಅಂಗಳ, ಅಲ್ಲಿಂದ ಕೆಳಗಿಳಿಯಲು ಮೆಟ್ಟಿಲುಗಳು, ಮೆಟ್ಟಿಲಿಳಿದು ಮುಂದು ಸಾಗಿದರೆ ವಿಶಾಲವಾದ ಕೊಳ, ಕೊಳದ ಬದಿಯಲ್ಲಿ ನಾಗಪ್ರತಿಷ್ಠೆಯಿರುವ ಬನ, ಪೂರ್ವದಲ್ಲಿ ವಯನಾಡು ಕುಲವನ್ ದೈವಸ್ಥಾನ, ಎಡಬಲಗಳಲ್ಲಿ ವಿಶಾಲವಾದ ಗದ್ದೆಗಳು, ದಕ್ಷಿಣದ ಕೊನೆಯಲ್ಲಿ ಸಾರ್ವಜನಿಕ ರಸ್ತೆಗಳು, ಪಕ್ಕದಲ್ಲಿ ಗೋಳಿ, ಅಶ್ವತ್ಥ ಮರಗಳಿಂದಾವೃತಗೊಂಡಿರುವ ಶ್ರೀ ವಿಷ್ಣುಮೂರ್ತಿ ದೈವದ ಒತ್ತೆಕೋಲ ಜರಗುವ “ಕುಳದಪಾರೆ” ಎಂಬ ಸ್ಥಳ, ಹೀಗೆ ಕಂಡು ಬರುವ ಕುಳದ ದೈವಸ್ಥಾನದ ಪರಿಸರದಲ್ಲಿ ಎಲ್ಲವೂ ಇದೆ. ದೈವಸ್ಥಾನದಲ್ಲಿ ಎರಡು ಕೊಠಡಿಗಳಿದ್ದು, ಒಂದರಲ್ಲಿ ಹುಲಿಭೂತದ ಭಂಡಾರ, ಇನ್ನೊಂದರಲ್ಲಿ ಹುಲಿಭೂತದ ಭಂಡಾರ, ಇನ್ನೊಂದರಲ್ಲಿ ವಿಷ್ಣುಮೂರ್ತಿ ಪ್ರಾಡಗತ್ತಾಯ, ರಕ್ತೇಶ್ವರಿ, ಧೂಮಾವತಿ, ಪಂಜುರ್ಲಿ, ಪೊಟ್ಟ ಮುಂತಾದ ದೈವಗಳ ಭಂಡಾರ ಪ್ರತಿಷ್ಠಾಪನೆಗೊಂಡಿದೆ. ದೈವಸ್ಥಾನದ ಜಗಲಿಯಲ್ಲಿ ತ್ರಿಶೂಲವನ್ನು ಆಯುಧವನ್ನಾಗಿರಿಸಿ ಕೊಂಡ ಗುಳಿಗದ ನೆಲೆಯೂ ಇದೆ.

ಪಂಚಲೋಹಗಳಿಂದ ನಿರ್ಮಿಸಲ್ಪಟ್ಟ ಇಲ್ಲಿ ಮಹಾದೈವಗಳ ಮುಖವಾಡಗಳ ಆಯುಧಗಳು ಮತ್ತು ಬೆಳ್ಳಿ ಬಂಗಾರದಿಂದ ತಯಾರಿಸಲ್ಪಟ್ಟ ಆಭರಣಗಳ ಅಗೋಚರವಾಗಿ ಅಡಕಗೊಂಡಿರುವ ದೈವಿಕ ಶಕ್ತಿಯ ಮೌಲ್ಯವನ್ನು ಅಂದಾಜಿಸಲು ಯಾರಿಂದಲೂ ಸಾಧ್ಯವಿಲ್ಲ. ಮನೆಯಲ್ಲಿ ಶ್ರೀ ವೆಂಕಟರಮಣ ದೇವರ ಮುಡಿಪು ಮತ್ತು ಶಕ್ತಿ ಸ್ವರೂಪಿಣಿ ಕೊರತ್ತಿಯಮ್ಮನ ಆಯುಧವೂ ನೆಲೆಗೊಂಡಿದೆ. ಪೂರ್ವ ಸಂಪ್ರದಾಯದಂತೆ ಎಲ್ಲ ರೀತಿಯ ಉತ್ಸವಾಚರಣೆಗಳಿರುವುದಲ್ಲದೆ ಕ್ರಿ.ಸ. 1927ರಿಂದ ವರ್ಷಂಪ್ರತಿ ಕರ್ಕಾಟಕ ಮಾಸದಲ್ಲಿ ಶ್ರೀ ವಿಷ್ಣುಮೂರ್ತಿ ಕೋಲವನ್ನು ಕುಳದ ದೈವಸ್ಥಾನದಲ್ಲಿ ಜರುಗಿಸುತ್ತಿದ್ದು, ಈ ಬಯಲು ಕೋಲವು ಈಗ ವರ್ಷಂಪ್ರತಿ ಕರ್ಕಾಟಕ ಮಾಸದ 25,26 ರಿಂದ ಜರಗುತ್ತಿದೆ. ಅನ್ನದಾನ ಮತ್ತಿತರ ವಿನಿಯೋಗಕ್ಕೆ ವರ್ಷಂಪ್ರತಿ ೪೨ ಮುಡಿಯಷ್ಟು ಅಕ್ಕಿಯನ್ನು ಇಲ್ಲಿ ಮೀಸಲಿರಿಸಿಸಲಾಗುವುದು.

ಈ ತರವಾಡಿನ ಮತ್ತೊಂದು ವಿಶೇಷವೇನೆಂದರೆ ದೈವಸ್ಥಾನದ ಸರೀ ವಿರುದ್ಧ ದಿಕ್ಕಿನಲ್ಲಿ ವಯನಾಟ್ ಕುಲವನ್ ದೈವಸ್ಥಾನ ಇದ್ದು, ಬಹಳ ಇತಿಹಾಸ ಹಾಗೂ ತುಂಬಾ ಕಾರಣಿಕ ದೈವವಾಗಿದ್ದು , ಇದು ಕೂಡ ಈ ತರವಾಡಿಗೆ ಸಂಬಂಧಪಟ್ಟದಾಗಿದೆ.

ಪ್ರಸ್ತುತ ಈ ತರವಾಡಿನಲ್ಲಿ 25 ಜನ ಸದಸ್ಯರಿದ್ದು ಕುಳ ಬಾಲಕೃಷ್ಣ ಮಣಿಯಾಣಿ ಯಜಮಾನನಾಗಿದ್ದಾರೆ. ದಿ. ನಿದಿಯಡ್ಕ ಅಪ್ಪಯ್ಯ ಮಣಿಯಾಣಿಯವರ ಪತ್ನಿ ಯಮುನಾ ಮನೆಯ ಒಡತಿಯಾಗಿದ್ದಾರೆ. ಇವರ ಪುತ್ರ ಎನ್.ಎ. ದಾಮೋದರ್ ಕುಳರವರು ಕಳೆದ ೨೨ ವರ್ಷಗಳಿಂದ ಕುಟುಂಬದ ಹಿರಿಯ ಕಿರಿಯ ಸದಸ್ಯರು ಮತ್ತು ಸಂಬಂಧಿಕರು ಹಾಗೂ ಊರ ಪರವೂರ ಎಲ್ಲಾ ಸಮುದಾಯದ ಭಕ್ತರ ಸಹಕಾರದೊಂದಿಗೆ ಆಡಳಿತ ಮಾಡುತ್ತಿದ್ದಾರೆ. ಈ ಕ್ಷೇತ್ರದಲ್ಲಿ ಮಾ.೨೩ರಂದು ಬ್ರಹ್ಮಕಲಶೋತ್ಸವ ನಡೆಯಲಿದೆ. ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶ್ರೀ ದೈವಗಳ ಕೃಪೆಗೆ ಪಾತ್ರರಾಗಬೇಕಾಗಿ ಕುಳದ ತರವಾಡಿನ ಕುಟುಂಬಸ್ಥರ ಪರವಾಗಿ ಆಡಳಿತಾಧಿಕಾರಿ ಎನ್.ಎ. ದಾಮೋದರ ಕುಳ ವಿನಂತಿಸಿದ್ದಾರೆ.

[box type=”error” bg=”#” color=”#” border=”#” radius=”6″]ಎ.೨೨ ಮತ್ತು ೨೩ರಂದು ಇತಿಹಾಸ ಪ್ರಸಿದ್ಧ ಕುಳದ ಶ್ರೀ ವಿಷ್ಣುಮೂರ್ತಿ ದೈವದ ಒತ್ತೆಕೋಲ ನಡೆಯಲಿದೆ.[/box]

LEAVE A REPLY

Please enter your comment!
Please enter your name here