ಫಿಲೋಮಿನಾ ಪ್ರೌಢಶಾಲೆಯಲ್ಲಿ ನಿವೃತ್ತರಾಗಲಿರುವ ಹಿರಿಯ ಶಿಕ್ಷಕ

0

  • ರಿಚರ್ಡ್ ವೇಗಸ್‌ರವರಿಗೆ ಬೀಳ್ಕೊಡುಗೆ ಸನ್ಮಾನ
  • ಬಹುಮುಖ ಪ್ರತಿಭೆಯುಳ್ಳವರಾಗಿದ್ದಾರೆ ರಿಚರ್ಡ್ ಮಾಸ್ಟ್ರು-ವಂ|ಲಾರೆನ್ಸ್ ಮಸ್ಕರೇನ್ಹಸ್

ಪುತ್ತೂರು: ಶಿಕ್ಷಕ ವೃತ್ತಿಯಲ್ಲಿ ಹಲವಾರು ವಿದ್ಯಾರ್ಥಿಗಳನ್ನು ಸಮಾಜದ ಮೇಲಸ್ತರಕ್ಕೇರಲು ಕಾರಣೀಭೂತರಾಗಿದ್ದು ಮಾತ್ರವಲ್ಲದೆ ತನ್ನ ಸರಳತೆ ಹಾಗೂ ಸೌಜನ್ಯತೆಯ ವ್ಯಕ್ತಿತ್ವದಿಂದ ಎಲ್ಲರ ಪ್ರೀತಿಗೆ ಪಾತ್ರರಾಗಿರುವ ಶಾಲೆಯ ರಿಚರ್ಡ್ ಮಾಸ್ಟ್ರು ನಿಜವಾಗಿಯೂ ಬಹುಮುಖ ಪ್ರತಿಭೆಯುಳ್ಳವರಾಗಿದ್ದಾರೆ ಎಂದು ಮಾಯಿದೆ ದೇವುಸ್ ಚರ್ಚ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕರಾಗಿರುವ ವಂ|ಲಾರೆನ್ಸ್ ಮಸ್ಕರೇನ್ಹಸ್‌ರವರು ಹೇಳಿದರು.

 

 

ಮಾರ್ಚ್ ಕೊನೆಗೆ ತನ್ನ 31 ವರ್ಷಗಳ ಶಿಕ್ಷಕ ವೃತ್ತಿಯಿಂದ ಸೇವಾ ನಿವೃತ್ತಿಗೊಳ್ಳಲಿರುವ ಸಂತ ಫಿಲೋಮಿನಾ ಪ್ರೌಢಶಾಲೆಯ ಗಣಿತ, ವಿಜ್ಞಾನ ಹಾಗೂ ಹಿಂದಿ ಭಾಷಾ ಹಿರಿಯ ಶಿಕ್ಷಕರಾಗಿರುವ ರಿಚರ್ಡ್ ವೇಗಸ್‌ರವರ ಬೀಳ್ಕೊಡುಗೆ ಸನ್ಮಾನವನ್ನು ಶಾಲೆಯ ಸಭಾಂಗಣದಲ್ಲಿ ಮಾ.೧೯ ರಂದು ಹಮ್ಮಿಕೊಳ್ಳಲಾಗಿದ್ದು, ಈ ಸಮಾರಂಭದ ಅಧ್ಯಕ್ಷತೆ ವಹಿಸಿ, ನಿವೃತ್ತರಿಗೆ ಸನ್ಮಾನಿಸಿ ಮಾತನಾಡಿದರು. ಕಳೆದ 16 ತಿಂಗಳ ಅವಧಿಯಲ್ಲಿ ಶಾಲೆಯು ಮುಖ್ಯ ಶಿಕ್ಷಕರಾಗಿದ್ದ ಓಸ್ವಾಲ್ಡ್ ರೊಡ್ರಿಗಸ್, ಲಿಯೋನಿಲ್ಲ ವೇಗಸ್, ರಾಜಶೇಖರ್, ಜ್ಯೋ ಡಿ’ಮೆಲ್ಲೋ, ವಿಶಾಲಾಕ್ಷಿ ಹಾಗೂ ಪ್ರಸ್ತುತ ರಿಚರ್ಡ್ ವೇಗಸ್ ಸೇರಿದಂತೆ ಆರು ಮಂದಿ ಶಿಕ್ಷಕರನ್ನು ಸೇವೆಯಿಂದ ಬೀಳ್ಕೊಟ್ಟಿದ್ದೇವೆ. ಶಿಕ್ಷಕರನ್ನು ಸೇವಾ ನಿವೃತ್ತಿಯಿಂದ ಬೀಳ್ಕೊಡುವ ಈ ಸಂದರ್ಭದಲ್ಲಿ ನಮಗೆ ತುಂಬಾ ಬೇಸರವಾಗುತ್ತದೆ ಆದರೆ ನಿವೃತ್ತಿ ಎಂಬ ಅಲಿಖಿತ ನಿಯಮಕ್ಕೆ ನಾವು ತಲೆ ಬಾಗಲೇಬೇಕಾಗುತ್ತದೆ. ಸೇವೆ ಮಾಡುವ ಯಾವುದೇ ಕ್ಷೇತ್ರವಾಗಿರಲಿ, ಸೇವೆ ಎಂಬುದನ್ನು ಮನಪೂರ್ವಕವಾಗಿ, ಪ್ರೀತಿಯಿಂದ ಮಾಡಬೇಕಾಗುತ್ತದೆ ಎಂಬುದಕ್ಕೆ ರಿಚರ್ಡ್ ಸರ್‌ರವರೇ ಉದಾಹರಣೆಯಾಗಿದ್ದು, ಎಲ್ಲರಿಗೂ ಅವರು ಪ್ರೇರಣೆಯಾಗಲಿ ಎಂದು ಹೇಳಿ ರಿಚರ್ಡ್ ವೇಗಸ್‌ರವರ ಮುಂದಿನ ನಿವೃತ್ತಿ ಜೀವನಕ್ಕೆ ಶುಭ ಹಾರೈಸಿದರು.

ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿರುವ ನ್ಯಾಯವಾದಿ ಎನ್.ಕೆ ಜಗನ್ನೀವಾಸ್ ರಾವ್‌ರವರು ಮಾತನಾಡಿ, ನಿವೃತ್ತಿಗೊಳ್ಳಲಿರುವ ರಿಚರ್ಡ್ ವೇಗಸ್‌ರವರಿಗೂ ನನಗೂ ಹಿರಿಯ ವಿದ್ಯಾರ್ಥಿ ಸಂಘದಲ್ಲಿ ಎಂಟು ವರ್ಷಗಳ ನಂಟು. ಯಾಕೆಂದರೆ ಅವರು ಹಿರಿಯ ವಿದ್ಯಾರ್ಥಿ ಸಂಘದ ಕಾರ್ಯದರ್ಶಿಯಾಗಿದ್ದುಕೊಂಡು ಸಂಘಕ್ಕೆ ಬೆನ್ನೆಲುಬಾಗಿ ಸೇವೆ ಸಲ್ಲಿಸುತ್ತಿದ್ದರು. ಸರಕಾರ ನಿವೃತ್ತಿ ಘೋಷಿಸಿರಬಹುದು ಆದರೆ ಹಿರಿಯ ವಿದ್ಯಾರ್ಥಿ ಸಂಘದಲ್ಲಿ ಸೇರ್ಪಡೆಗೊಂಡವರಿಗೆ ನಿವೃತ್ತಿಯಿಲ್ಲ. ನಿವೃತ್ತರಾಗಲಿರುವ ರಿಚರ್ಡ್‌ರವರು ತನ್ನ ಸೇವಾ ವೈಖರಿಯಿಂದ ಹಲವಾರು ವಿದ್ಯಾರ್ಥಿಗಳ ಪ್ರೀತಿಯನ್ನು ಸಂಪಾದಿಸಿದ್ದಾರೆ. ಮುಂದಿನ ಅವರ ನಿವೃತ್ತ ಜೀವನವು ಸುಖಕರವಾಗಿರಲಿ ಎಂಬುದೇ ನಮ್ಮ ಹಾರೈಕೆಯಾಗಿದೆ ಎಂದರು.

ಸಂತ ಫಿಲೋಮಿನಾ ಕಾಲೇಜಿನ ಕ್ಯಾಂಪಸ್ ನಿರ್ದೇಶಕರಾಗಿರುವ ವಂ|ಸ್ಟ್ಯಾನಿ ಪಿಂಟೋರವರು ಮಾತನಾಡಿ, ಶಿಕ್ಷಕ ವೃತ್ತಿಯೆಂಬುದು ಪವಿತ್ರ ವೃತ್ತಿ. ಈ ಶಿಕ್ಷಕ ವೃತ್ತಿಯಲ್ಲಿ ರಿಚರ್ಡ್ ವೇಗಸ್‌ರವರು ಪ್ರಾಮಾಣಿಕ ಸೇವೆಯನ್ನು ಸಲ್ಲಿಸಿರುತ್ತಾರೆ. ಅವರು ನೀಡಿದ ಪ್ರಾಮಾಣಿಕ ಸೇವೆಗೆ ದೇವರು ಆಶೀರ್ವದಿಸಲಿ ಎಂಬುದೇ ನಮ್ಮ ಪ್ರಾರ್ಥನೆಯಾಗಿದೆ ಎಂದರು.

ಮಾಯಿದೆ ದೇವುಸ್ ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷರಾದ ಮೌರಿಸ್ ಮಸ್ಕರೇನ್ಹಸ್‌ರವರು ಮಾತನಾಡಿ, ಸಮಾಜದಲ್ಲಿ ಗೌರವಾನ್ವಿತ ಹುದ್ದೆ ಇದೆ ಎಂದಾದರೆ ಅದು ಶಿಕ್ಷಕ ಹುದ್ದೆ. ಶಿಕ್ಷಕ ಹುದ್ದೆಗೆ ಸಿಗುವ ಮನ್ನಣೆ ಹಾಗೂ ಗೌರವ ಇತರ ಯಾವ ಹುದ್ದೆಗೂ ಸಿಗಲಾರದು. ನಿವೃತ್ತಗೊಳ್ಳಲಿರುವ ರಿಚರ್ಡ್‌ರವರೋರ್ವ ಮಿತಭಾಷಿಯಾಗಿದ್ದಾರೆ. ಕವಿತೆ ಹಾಗೂ ಲೇಖನಗಳನ್ನು ಬರೆಯುವ ಗೀಳು ಅವರಲ್ಲಿತ್ತು. ಅವರ ಉತ್ತಮ ಸೇವೆಯ ಮೂಲಕ ಹಲವಾರು ವಿದ್ಯಾರ್ಥಿಗಳು ಇಂದು ಸಮಾಜದ ಉನ್ನತ ಸ್ಥಾನದಲ್ಲಿದ್ದಾರೆ ಎಂದು ಹೇಳಿ ನಿವೃತ್ತ ಜೀವನಕ್ಕೆ ಶುಭ ಹಾರೈಸಿದರು.

ಶಾಲೆಯ ರಕ್ಷಕ-ಶಿಕ್ಷಕ ಸಂಘದ ಜೊತೆ ಕಾರ್ಯದರ್ಶಿ, ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕಿ ಅಶ್ವಿನಿರವರು ಮಾತನಾಡಿ, ವಿದ್ಯಾರ್ಥಿಗಳನ್ನು ಕತ್ತಲೆಯಿಂದ ಜ್ಞಾನದ ಬೆಳಕಿನತ್ತ ಕೊಂಡೊಯ್ಯವ ಕಾಯಕವನ್ನು ಮಾಡುತ್ತಿರುವವರು ಶಿಕ್ಷಕರು. ಮಕ್ಕಳಿಗೆ ಉತ್ತಮ ಭವಿಷ್ಯವನ್ನು ರೂಪಿಸುವತ್ತ ಶಿಕ್ಷಕರು ಪ್ರಮುಖ ಪಾತ್ರ ವಹಿಸುತ್ತಾರೆ. ತನ್ನಲ್ಲಿದ್ದ ಅಪಾರ ಅನುಭವವನ್ನು ಮಕ್ಕಳಿಗೆ ಧಾರೆ ಎರೆದು ಅವರನ್ನು ಸುಸಂಸ್ಕೃತರನ್ನಾಗಿ ಮಾಡುವಲ್ಲಿಯೂ ಶಿಕ್ಷಕರು ಶ್ರಮಿಸುತ್ತಾರೆ. ಈ ನಿಟ್ಟಿನಲ್ಲಿ ನಿವೃತ್ತಗೊಳ್ಳಲಿರುವ ರಿಚರ್ಡ್ ಸರ್‌ರವರು ಕೂಡ ತನ್ನಲ್ಲಿನ ಅನುಭವವನ್ನು ವಿದ್ಯಾರ್ಥಿಗಳಿಗೆ ಧಾರೆ ಎರೆದಿದ್ದಾರೆ ಎಂದು ಹೇಳಿ ಶುಭ ಹಾರೈಸಿದರು.

ವೇದಿಕೆಯಲ್ಲಿ ನಿವೃತ್ತಗೊಳ್ಳಲಿರುವ ಶಿಕ್ಷಕ ರಿಚರ್ಡ್ ವೇಗಸ್‌ರವರ ಪತ್ನಿ ಫೆಲ್ಸಿಟಾ ವೇಗಸ್, ಶಾಲಾ ಉಪನಾಯಕ ಅನುಷ್ ರೈ ಉಪಸ್ಥಿತರಿದ್ದರು. ವಿದ್ಯಾರ್ಥಿಗಳು ಸರ್ವಧರ್ಮ ಪ್ರಾರ್ಥನೆಗೈಯ್ದರು. ದೈಹಿಕ ಶಿಕ್ಷಣ ಶಿಕ್ಷಕ ನರೇಶ್ ಲೋಬೋ ಸ್ವಾಗತಿಸಿ, ಶಿಕ್ಷಕಿ ಅಮಿತ ವಂದಿಸಿದರು. ವಿದ್ಯಾರ್ಥಿಗಳ ಪರವಾಗಿ ಹತ್ತನೇ ತರಗತಿಯ ವಿದ್ಯಾರ್ಥಿನಿ ಲಿಖಿತಾ ಹಾಗೂ ಶಿಕ್ಷಕರ ಪರವಾಗಿ ಶಿಕ್ಷಕ ಕ್ಲೆಮೆಂಟ್ ಪಿಂಟೋರವರು ಅನಿಸಿಕೆ ವ್ಯಕ್ತಪಡಿಸಿ ನಿವೃತ್ತಗೊಳ್ಳಲಿರುವ ರಿಚರ್ಡ್ ವೇಗಸ್‌ರವರಿಗೆ ಶುಭ ಹಾರೈಸಿದರು. ಶಿಕ್ಷಕ ಬೆನೆಟ್ ಮೊಂತೇರೋರವರು ಸನ್ಮಾನಿತರ ಸನ್ಮಾನ ಪತ್ರ ವಾಚಿಸಿದರು. ಶಿಕ್ಷಕಿ ಆಶಾ ರೆಬೆಲ್ಲೋ ಕಾರ್ಯಕ್ರಮ ನಿರೂಪಿಸಿದರು. ಫಿಲೋಮಿನಾ ಕಾಲೇಜಿನ ಪ್ರಾಂಶುಪಾಲ ವಂ|ಡಾ|ಆಂಟನಿ ಪ್ರಕಾಶ್ ಮೊಂತೇರೋ, ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ವಂ|ವಿಜಯ್ ಲೋಬೋ, ಫಿಲೋಮಿನಾ ಪುರುಷರ ವಸತಿನಿಲಯದ ವಾರ್ಡನ್ ವಂ|ಅಶೋಕ್ ರಾಯನ್ ಕ್ರಾಸ್ತಾ, ಮರೀಲ್ ಸೆಕ್ರೇಡ್ ಹಾರ್ಟ್ ಚರ್ಚ್ ಧರ್ಮಗುರು ವಂ|ವಲೇರಿಯನ್ ಫ್ರ್ಯಾಂಕ್, ಬನ್ನೂರು ಸಂತ ಅಂತೋನಿ ಚರ್ಚ್ ಧರ್ಮಗುರು ವಂ|ಪ್ರಶಾಂತ್ ಫೆರ್ನಾಂಡೀಸ್, ಫಿಲೋಮಿನಾ ಪ್ರೌಢಶಾಲೆಯಲ್ಲಿ ಈ ಹಿಂದೆ ಶಿಕ್ಷಕರಾಗಿ ಸೇವೆಗೈಯ್ದು ವರ್ಗಾವಣೆಗೊಂಡಿರುವ ವಂ|ಪೀಟರ್ ಗೊನ್ಸಾಲ್ವಿಸ್, ಫಿಲೋಮಿನಾ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಸಿಸ್ಟರ್ ಲೋರಾ ಪಾಸ್ ಹಾಗೂ ಶಿಕ್ಷಕ ವೃಂದ, ವಿಕ್ಟರ್ ಬಾಲಿಕಾ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ರೋಸ್‌ಲಿನ್ ಲೋಬೋ ಹಾಗೂ ಶಿಕ್ಷಕ ವೃಂದ, ನಿವೃತ್ತ ಹಿರಿಯ ಅಧ್ಯಾಪಕ ವೃಂದ, ಶಾಲೆಯ ಪ್ರಸಕ್ತ ಶಿಕ್ಷಕ ವೃಂದ ಸಹಿತ ಹಲವರು ಆಗಮಿಸಿ ನಿವೃತ್ತ ರಿಚರ್ಡ್ ವೇಗಸ್‌ರವರಿಗೆ ಶುಭ ಕೋರಿದರು.

ಮರಳಿ ಬಾರದೆ ಆ ದಿನಗಳು…

ಒಲ್ಲದ ಮನಸ್ಸಿನಿಂದ ಶಿಕ್ಷಣ ಕ್ಷೇತ್ರಕ್ಕೆ ಕಾಲಿಟ್ಟಿದ್ದೆ. ಈ ಅಗಾಧ ಸಾಗರಕ್ಕೆ ವಿಧಿಯೇ ನನ್ನನ್ನು ನೂಕಿತು. ಆದರೆ ಈ ಕ್ಷೇತ್ರವು ನನಗೆ ಆಳವಾದ ಜ್ಞಾನ, ಅಪಾರವಾದ ಲೋಕಾನುಭವ, ವಿದ್ಯಾರ್ಥಿಗಳ ಬೃಹತ್‌ಗಡಣ, ಉತ್ತಮವಾದ ಜೀವನವನ್ನು ಒದಗಿಸಿದೆ. ಈ ಮಧ್ಯೆ ತಾನು ಸವೆಸಿದ ಹಾದಿಯನ್ನು ರೀಪ್ಲೆ ಮಾಡಿದಾಗ ಮರೆಯಲಾಗದ ಅನೇಕ ಸ್ಥಿರಚಿತ್ರಗಳು ಧುತ್ತೆಂದು ನನ್ನ ಮನಸ್ಸಿನಲ್ಲಿ ಮೂಡಿ ಬರುತ್ತಿದೆ. ಶಾಲಾ ವೃತ್ತಿಜೀವನದಲ್ಲಿನ ಗತವೈಭವವನ್ನು ನೆನೆಯುವಾಗ ಹೃದಯ ತುಂಬಿ ಕಣ್ಣಾಲಿಗಳು ತೇವಗೊಳ್ಳುತ್ತವೆ, ಮರಳಿ ಬಾರದೆ ಆ ದಿನಗಳು ಎಂದು ಹೃದಯ ಹಪಹಪಿಸುತ್ತದೆ ಎಂದು ಹೇಳಿ ನನಗೆ ನನ್ನ ಸೇವಾ ವೃತ್ತಿ ಸಂದರ್ಭದಲ್ಲಿ ಸಹಕರಿಸಿ, ಆಶೀರ್ವದಿಸಿದ ಎಲ್ಲರಿಗೂ ನನ್ನ ಹೃದಯಪೂರ್ವಕ ಕೃತಜ್ಞತೆಗಳೊಂದಿಗೆ ಆತ್ಮತೃಪ್ತಿಯೊಂದಿಗೆ ನಿರ್ಗಮಿಸುತ್ತಿದ್ದೇನೆ. ರಿಚರ್ಡ್ ವೇಗಸ್, ನಿವೃತ್ತಗೊಳ್ಳಲಿರುವ ಶಿಕ್ಷಕರು, ಫಿಲೋಮಿನಾ ಪ್ರೌಢಶಾಲೆ

LEAVE A REPLY

Please enter your comment!
Please enter your name here